ಹಸಿವು ಹಸಿವೆಲ್ಲೆಲ್ಲು ಹಸಿವು ಹಸಿವು
ಎಲ್ಲರನು ಆಡಿಸಿ ಪೀಡಿಸುತಿಹುದು ಹಸಿವು.
ರಾಷ್ಟ್ರನಾಯಕರಿಗೆ ರಾಜ್ಯಗಳಿಕೆಯ ಹಸಿವು
ಸೇನಾಧಿಪತಿಗಳಿಗೆ ಸಮರಕೀರ್ತಿಯ ಹಸಿವು
ವಣಿಕೆರಾಜರಿಗೆಲ್ಲ ಲಾಭಕೊಳ್ಳೆಯ ಹಸಿವು;
-ಅದರಿಂದ ನಮಗೆ ಹಸಿವು!
ಮಲಗಿದ್ದ ರಣಮಾರಿಯೆಚ್ಚತ್ತಳೆಂದೊ:
ನರಮಾಂಸ ನೆಣ ನೆತ್ತರುಣುವವಳ ಹಸಿವು
ತೀರಿಲ್ಲವಿನ್ನೂ;
ತಣಿಸಲವಳನ್ನು,
ಅವಳ ಪೂಜಾರಿಗಳು ಇಕ್ಕುತಿಹರಿಂದು
ಅವಳಿಗೌತಣವ;
ಅದಕಾಗೆ ಮಾಡುತಿಹರೆಲ್ಲ ಕೂಡಿ
ಮಂದಿ ಮಾರಣವ,
ನೆರಹಿ ರಣವ.
ಅವರ ಹಸಿವೆಮ್ಮಹಸಿವೆಲ್ಲಕ್ಕು ನಾವೆ ಬಲಿ ಕಟ್ಟಕಡೆಗೆ!
ಬವರವೇ ಇಳೆ ಬಾಳು, ಬರವೆ ಬಡವರ ಪಾಲು,
ಎಂದಿನಿಂದಿಲ್ಲಿವರೆಗೆ!
*****