ನಾಲ್ಕು ವರ್ಷದ ಕಾಲ, ನಕ್ಕು ನಲಿದಾಡಿದೆವು
ಕೂಡಿ ಕಲಿತೆವು, ಒಡನೆ ಕುಣಿದಾಡುತ
ಕಂಡ ಕನಸುಗಳೇನು! ಆಡಿದಾಟಗಳೇನು!
ಕೊನೆಯುಂಟೆ, ಮೊದಲುಂಟೆ, ಕನಸೆ ಜೀವ!
ಉಗಿಯ ನಿಲ್ದಾಣದಲಿ ನೂರಾರು ಎಡೆಯಿಂದ
ಜನರ ಜಂಗುಳಿ ನೆರೆದು ಚಣಗಳೆರಡು
ಉರುಳೆ ಹಾದಿಯ ಹಿಡಿದು ಸಾಗಿದಂತಿದು ಬಾಳು
ಮತ್ತೆ ಕೂಡುವೆವೆಂಬ ಬಯಕೆ ಬರಡು!
ಕಾಲ ಸಾಗುವುದೆಂಬ ಭ್ರಾಂತಿ ಬಡಿದಿತ್ತಾಗ
ಭೀತಿಯಲಿ ಅಪ್ಪಿದೆವು ಬಯಕೆಗಳನು!
ಕಾಲ ಸಾಗುವುದುಂಟೆ? ಸಾಗುವುದು ನಾವಲ್ತೆ!
ಕಾಲ ಉಳಿಯುವುದಲ್ಲೆ-ನರರೆ ಚರರು!
*****