ಪ್ರಿಯ ಸಖಿ,
ಬಹಳಷ್ಟು ಸಂದರ್ಭಗಳಲ್ಲಿ ಧರ್ಮ-ಶಾಸ್ತ್ರಕ್ಕೆ ಎದುರಾಗಿ ಮೌಲ್ಯ, ಮಾನವೀಯತೆಯ ನಂಬುಗೆಗಳು ಬಂದಾಗ ಯಾವದು ಸರಿ ? ಯಾವುದು ತಪ್ಪು ಎಂದು ಗೊಂದಲಕ್ಕೊಳಗಾಗುತ್ತೇವೆ. ಇಂತಹ ಸಂದರ್ಭದಲ್ಲೇ ಕವಿ ಕುವೆಂಪು ಅವರ ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?’ ಎಂಬ ಕವನದ ಸಾಲುಗಳು ನೆನಪಾಗುತ್ತಿವೆ.
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?
ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು!
ಎನ್ನುತ್ತಾ ಪದ್ಯದ ಕೊನೆಯಲ್ಲಿ
ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ
ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ!
ಎಂದಿದ್ದಾರೆ. ಹೌದಲ್ಲವೇ ಸಖಿ. ನಿಜವಾದ ಪ್ರಾಮಾಣಿಕ ಮನಸ್ಸು ಸಂದರ್ಭಕ್ಕೆ ತಕ್ಕಂತೆ ವಿವೇಚನೆಯಿಂದ ತೆಗೆದುಕೊಳ್ಳುವ ತೀರ್ಮಾನವೇ ಸರಿಯಾದದ್ದು. ಅದು ಬಿಟ್ಟು ಎಂದೋ ಹೇಳಿದ ಧರ್ಮ-ಶಾಸ್ತ್ರಗಳನ್ನೇ ಇಂದಿನ ನಮ್ಮ ಬದಲಾದ ಎಲ್ಲ ಸಂದರ್ಭಗಳಲ್ಲಿಯೂ ಅಳವಡಿಸಿಕೊಳ್ಳಲಾದೀತೇ. ಸದಾ ಕಾಲ ಎಚ್ಚೆತ್ತಿರುವ, ಜಾಗೃತ ಮನಸ್ಸೊಂದು ನಮ್ಮೊಳಗಿದ್ದರೆ ಸರಿ-ತಪ್ಪುಗಳನ್ನು ವಿವೇಚಿಸಿ ತೀರ್ಮಾನ ನೀಡುತ್ತದೆ. ಆಗ ‘ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು’ ಎಂಬ ಮಾತು ಸತ್ಯವಾಗುತ್ತದೆ. ಸಖಿ, ಇದಕ್ಕೆ ಪೂರಕವಾಗಿ ಥ್ಯಾಕರೇ ಎಂಬ ಚಿಂತಕನ ಚಿಂತನೆ ಹೀಗೆ ಸಾಗುತ್ತದೆ ’You will never be sorry for doing your level best, for hearing before judging, for thinking before speaking, for standing by your principles’ ನಿನಗೆ ಸಾಧ್ಯವಾದಷ್ಟು ಒಳಿತನ್ನು ಮಾಡುತ್ತಿದ್ದಾಗ, ತೀರ್ಮಾನ ಕೊಡುವ ಮುನ್ನ ಕೇಳಿ ತಿಳಿದುಕೊಂಡಿದ್ದಾಗ, ಮಾತನಾಡುವ ಮೊದಲು ಆಲೋಚಿಸಿದ್ದಾಗ, ನಿನ್ನ ತತ್ವಗಳಿಗೆ ನೀನು ಬದ್ಧನಾಗಿದ್ದಾಗ ಪಶ್ಚಾತ್ತಾಪ ಪಡುವದೇ ಬೇಕಿಲ್ಲ’ ಎನ್ನುತ್ತಾನೆ.
ಈ ಚಿಂತನೆಗಳನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಂಡಾಗ ನಾವು ಯಾವುದು ಸರಿ, ಯಾವುದು ತಪ್ಪೆಂದು ಗೊಂದಲಕ್ಕೊಳಗಾಗುವುದೂ ಇಲ್ಲ. ನಮ್ಮ ತತ್ವಗಳು ಪ್ರಾಮಾಣಿಕವಾಗಿದ್ದಾಗ ಅವಗಳನ್ನು ನಾವು ಮನಃಪೂರ್ವಕವಾಗಿ ನಂಬಿದ್ದಾಗ, ನಮ್ಮ ನಿರ್ಧಾರಕ್ಕಾಗಿ ಪಶ್ಚಾತ್ತಾಪ ಪಡುವುದೂ ಇಲ್ಲ. ಅಲ್ಲವೇ ಸಖಿ?
*****