ಕವಿಯ ಕಣ್ಣೊಂದು ಪ್ರಿಜಂ
ಜಗಕೆಲ್ಲ ಹಾಕಿದಂತೆ ಮೆಸ್ಮರಿಜಂ
ಹಿಡಿದಂತೆ ವಿಚಿತ್ರ ರಾವುಗನ್ನಡಿ
ಕಪ್ಪು ಬಿಳುಪುಗಳ ಚಿತ್ರಗಳಿಗೆ
ಮೂಡುವವೋ ಕೊಂಬುಬಾಲ
ಕೋರೆ ಹಲ್ಲುಗಳು
ಬಣ್ಣ ಬಣ್ಣ ಮುಖವಾಡಗಳು
ವೇಷಭೂಷಣಗಳು
ಸರಳ ರೇಖೆಯೊಳಗಿಂದ
ಹಾಯುವ ಬಿಳಿಕಿರಣಗಳು
ವಕ್ರೀಭವಿಸಿ ಆಗುವವು
ವರ್ಣ ಕಿರಣಗಳು
ನೆಲದೊಳಗಿನ ನೀರು ಕುಡಿದ ಹಕ್ಕಿ
ಹಾರುವುದು ಮೇಲೆ
ನಂದನಗಳ ಹುಡುಕಿ
ಅಂತರದಲ್ಲೇ ಗೂಡು ಕಟ್ಟಿ
ಮೊಟ್ಟೆಗಳನಿಟ್ಟು
ಕಾವು ಕೊಡುವುದು
ಒಂದೊಂದೇ ಬಣ್ಣಬಣ್ಣದ ಎಳೆಮರಿಗಳು
ಹೊರಬರುವುದ ನೋಡುತ್ತ
ಕೇಳಿ ಅರಿಯದ ಕಂಡು ಅರಿಯದ ವಸ್ತುಗಳು
ಎಂದೂ ಮೂಸಿ ನೋಡದ
ಸವಿನೋಡದ ಹೂವು ಹಣ್ಣುಗಳು
ತೇಲಾಡುವ ರಂಗು ರಂಗಿನ
ಹದಿಹರೆಯದ ಚೆಲುವೆಯರು
ಆಧಾರವಿಲ್ಲದೆ ನಿಂತ
ಕಂಬಗಳು ಬೋದಿಗೆಗಳು
ಅವುಗಳ ಮೇಲೆ ಮಹಲು ಗೋಪುರಗಳು
ಸುಗಂಧವೇ ಬೀಸುವ ತಂಗಾಳಿ
ನಿರಾಕಾರದಾಕೃತಿಗಳ ಒಯ್ಯಾರ ವೈಹಾಳಿ
ಲೋಕದಲ್ಲಿ ಬೆರಗಿನಲಿ ಮೋಡಿ ಓಡಾಡಿ
ಮತ್ತೆ ಕಣ್ಣು ತೆರೆದಾಗ ಒಡೆವುದು ಪ್ರಿಜಂ
ಕಣ್ಣು ಕುಕ್ಕುವ ಕಪ್ಪು ಬಿಳುಪಿನ ಕರಾಳ ಜಗತ್ತು
ಚುಚ್ಚುವ ವಾಸ್ತವ ಮುಳ್ಳುಗಳು
ಹೃದಯ ಹಿಂಡಿ ಕೆಳಗೆ ಬಿಡುವ ಹನಿಹನಿಗಳು
ಗಾಯಗಳಿಂದ ಇಳಿಯುವ ನೆತ್ತರ ಹನಿಗಳು
ಮತ್ತೆ ಅದೇ ಅದೇ ರಿಯಾಲಿಜಂ
*****