ಮೋಹನದಾಸ ಕರಮಚಂದ್ ಗಾಂಧೀ ನೀನೇ
ಭಾರತ ದೇಶದ ತಂದೀ
ಗುಜರಾತಿನ ಪೋರ್ಬಂದರಿನಲಿ ಹುಟ್ಟಿಬಂದಿ
ಜಗದಗಲ ಮುಗಿಲಗಲ ಬೆಳೆದು ವ್ಯಾಪಿಸಿ ನಿಂದಿ
ನಮ್ಮಂತೆ ಸಾಮಾನ್ಯನಾಗಿಯೆ ಹುಟ್ಟಿದಿ
ಜಗಕೆಲ್ಲ ಸನ್ಮಾನ್ಯ ಮಹಾತ್ಮನೆನಿಸಿದಿ
ಬುದ್ಧ ಏಸುವಿನಂತೆ ಪೈಗಂಬರನಂತೆ
ಮಾನವ ಕುಲಕೆಲ್ಲ ಕುಲದೀಪ ನೀನಾದಿ
ಯುಗಕೊಮ್ಮೆ ಮೂಡುವ ಜನಮನದಾದರ್ಶ
ಯುಗದ ಅಚ್ಚರಿ ನೀನು ನವಯುಗದ ಕರ್ತ
ಕೆಳಗೆ ಬಿದ್ದವರನು ದೀನ ದಲಿತರನ್ನು
ತಬ್ಬಿ ಮೇಲೆತ್ತಲು ಬಂದೆಯೊ ತಾತ
ನಿನ್ನ ಪ್ರತಿಮೆಗಳನು ಸರ್ಕಲುಗಳಲಿಟ್ಟು
ನಿನ್ನ ಹೆಸರನು ಬೀದಿ ಬಾಜಾರಗಳಿಗಿಟ್ಟು
ನಿನ್ನ ಚಿತ್ರವ ನೋಟು ನಾಣ್ಯಗಳ ಮೇಲಿಟ್ಟು
ನಿನ್ನನ್ನೆ ಮರೆತೀವೊ ನಾಚಿಕೆ ಬಿಟ್ಟು
ಈಶ್ವರ ಅಲ್ಲಾನು ರಾಮ ರಹೀಮನು
ಒಬ್ಬನೆ ದೇವನು ಎಂದು ನೀನೆಂದರು
ಧರ್ಮಗಳ ಹೆಸರಲ್ಲಿ ಹಿಂಸಾಕರ್ಮಗಳಲ್ಲಿ
ಕಚ್ಚಾಡಿ ಕೊಲ್ಲುವರು ಮತಾಂಧರು
ಹದ್ದು ನರಿಗಳು ತುಂಬಿ ಗುದ್ದಾಡುತೈದಾವೆ
ದೇಶವಾಗಿದೆ ಇಂದು ಕೊಳೆತು ನಾರುವ ಹೊಂಡ
ಶುದ್ಧ ಜೀವನಕೊಂದು ಮಾದರಿಯಾಗಿದ್ದಿ
ಇಂದು ನಮ್ಮನು ನೋಡಿ ಆಗುವಿ ಕೆಂಡ
ಹಣವೆ ಆಳುವುದೀಗ ಸ್ವಾರ್ಥಕ್ಕೆ ಗದ್ದುಗೆ
ರಾಜಕಾರಣ ಸೂಳೆ ಅಟ್ಟಹಾಸ
ನಿನ್ನ ಆದರ್ಶಗಳ ಗಾಳಿಗೆ ತೂರುತ್ತ
ಸಾಮಾನ್ಯ ಜನರಿಗೆ ಪೂರಾ ಮೋಸ
ಏನಂತ ನೆನೆಯಲಿ ಏನೆಂದು ನೆನೆಯಲಿ
ವರುಷಕೊಮ್ಮೆ ನಿನ್ನ ಗಾಂಧಿ ತಾತ
ಕತ್ತಲೆ ತುಂಬಿದ ದೇಶದಲಿ ಬೆಳಕನ್ನು
ಹೇಗೆ ತರುವಿಯೋ ನೋಡೊ ನೀನೆ ತ್ರಾತ ||
*****