ವಿಚಾರಗಳ ಕುರಿಮುಂದೆಯ ಕಾವಲು ನಿಂತ ಕುರುಬನಂತೆ,
ಗುಂಪು ತಪ್ಪಿಸಿ ಹೋಗುವ ಗುರಿಗಳ ನಾಲಗೆಚಾಚಿಕೊಂಡು ಕಾಯುವ
ನಾಯಿಯಂತೆ,
ಮಣ್ಣಿನ ಬಟ್ಟೆಗಳನುಟ್ಟು ಮಣ್ಣಗೊಂಬೆಯಂತೆ ನಿಂತಿರುವ,
ಪ್ರಾಚೀನ ಪಳೆಯುಳಿಕೆಯಂತಿದ್ದರೂ ರಾಕೆಟ್ಟುಗಳ
ಅರ್ವಾಚೀನದೋಟವ ನಿಯಂತ್ರಿಸುವ ನಿಯಾಮಕನಂತೆಯೂ,
ಮೇಲೆ ಹಾರೇನೆಂಬುವರ ಕಾಲಹಿಡಿದು ಜಗ್ಗಿ ಕೆಡವುತ್ತ,
ಸಂಕೀರ್ಣ ಗಾಜುಗೋಡೆಗಳ ಒಂದೇ ದೊಣ್ಣೆಯಿಂದ
ಮುಲಾಜಿಲ್ಲದೆ ಚಚ್ಚಿ ನುಚ್ಚು ನೂರು ಮಾಡುತ್ತ,
ಪಂಡಿತಂಮನ್ಯರ ಬೆಂತರಮಾಡಿ ನೀರೂ ಸಿಗದೆ
ಹಪಾಪೀ ಅಲೆಯುವಂತೆ ಮಾಡಿರುವ,
ವೇಗದೋಟಗಳಿಗೆ ಬ್ರೇಕಿನಂತಿರುವ, ಅಡ್ಡ ಒಡ್ಡರುವ,
ಜ್ವಾಲಾಮುಖಿಯ ಮೇಲೂ ಶೀತಲಶಿಲೆಯಾಗಿ ಕುಳಿತಿರುವ,
ಸುಡುಗಾಡು-ಅರಮನೆಗಳ ಕಟ್ಟೆಕಲ್ಲಿನಂತೆ ಸ್ಥಿರವಾಗಿರುವ
ಗಾಳಿ ಬಿಸಿಲು ಚಳಿಮಳೆಗಳನ್ನುಂಡು ಮೈಮರಗಟ್ಟಿಕೊಂಡಿರುವ
ಎಲವೋ ಪಳವಾನಿಸಾ! ಹಿರಿಯಾ! ಯಜಮಾನಾ!
ನನ್ನೆಲ್ಲ ಪ್ರಗತಿ ವರ್ತುಲಗಳಿಗೆ ನೀನೇ ಕೇಂದ್ರಬಿಂದು ಕಾಣೊ,
ನನ್ನ ಹರಿದಾಟ ಹಸಿರ ಮೇಯುವಿಕೆಗೆ ನೀನೇ ಹಗ್ಗದ ಗೂಟ ಕಾಣೊ
ನನ್ನ ಹಾಯಿಹಡಗಕ್ಕೆ ನೀನೇ ಕೂವೆ ಮರ ಕಾಣೊ,
ನನ್ನ ಶೋಧಿತ ಲೋಹಗಳಿಗೆ ನೀನೇ ಒರೆಗಲ್ಲು ಕಾಣೊ,
ನನ್ನ ಅತಂತ್ರ ಆವಾಂತರಗಳಿಗೆ ನೀನೆ ಊರುಗೋಲು ಕಾಣೋ
*****