ನಿನ್ನ ನೂರಾರು ಹಸ್ತಗಳು ತೂರಿ ನೆಲದೆದೆಯ ತಬ್ಬಿಹವು
ಆಹಾ ಅದೆಷ್ಟು ಆಳವೋ ನಿನ್ನ ಪ್ರೀತಿ
ಎಂದೋ ನೆಲವ ಮುದ್ದಿಸಿತು ಬೀಜ-ನೀನೆದ್ದೆ ಮುದ್ದಿನ ಚೆಲುಮೆ
ಎನಿತೊ ನೋವು ಸುಂಕಗಳ ತೆತ್ತು ಸ್ಥಿರವಾಯಿತು ಅಸ್ಥಿ-ಮಾಂಸ-
ಮಜ್ಜಾಕಾಯ
ದಿನೆ ದಿನೇ ಭದ್ರವಾಯಿತು-ಹಸರಿಸಿತು ನಂಟು
ನಲಿವಿನ ಕೋಟಿ ಪುಳಕಗಳೆನೆ, ಚೆಲುವಿನ ಚಿರನೂತನ ಕೈಚಳಕವೆನೆ
ಮೈತುಂಬ ಎಲೆಎಲೆ ಕಲೆಯ ರೋಮಾಂಚನ
ತಾಯ್ತನದಿ ಹೂತು, ಕನಸು ನನಸಾಗಿ ಕಾತು, ಶಾಶ್ವತಿಯ ಸೇತು,
ಅನಂತ ರೂಪನ ರಸಪೂರಣ ಆಯಿತು ಗರ್ಭಧಾರಣ
ಸತ್ಫಲಗಳಿಂದ ಕೃತಕೃತ್ಯವಾಗಲು ಜೀವಮಾನ
ನಿನ್ನ ಮುತ್ತನುಂಡು ಬೆಳೆದಿದ್ದರೂ ಎಲ್ಲವೂ ಮುತ್ತಲ್ಲ,
ಅಲ್ಲಲ್ಲಿ ಕೆಲವಳಿದು, ಉಳಿದುದರಲ್ಲಿ ಜೊಳ್ಳುಗಳ ಕಳೆದು,
ಅಸಂಖ್ಯಾತವು ಅನೇಕ ಬಾಯಿಗಳ ಸೇರಿ,
ನಿನ್ನ ಬಾಳಗುರಿಯ ಪೂಣ್ಕೆಗಾಗುವುವು ಒಂದೆರಡು ಕಾಣ್ಕೆ
ಅಷ್ಟರಿಂದಲೇ ನೀನು ತೃಪ್ತೆ. ನಿನ್ನ ಬದುಕು ನಿತ್ಯ-ಸತ್ಯದ ರಸಕಾವ್ಯ
*****