ಅವಳ ಮೈಗೆ ಮಣ್ಣ ಬಣ್ಣ, ಮನಕ್ಕೂ ಮಣ್ಣ ಸತ್ವ,
ಅವಳು, ಆಗಾಗ ಹರಿಸುತ್ತಾಳೆ ನಲ್ಮೆಯ ನಗುವನ್ನು,
ಮೈತುಂಬಿಕೊಂಡ ತೊರೆಯನ್ನು.
ಕೆಲವು ದಿನ ಎಲುಬು ಮೈಯಲ್ಲಿ ನರನರ ಬರಲಾದ
ಮರದಂತಿರುತ್ತಾಳೆ, ‘ಎಷ್ಟು ಸೊರಗಿರುವಿಯಲ್ಲೇ ತಾಯಿ’ ಎಂದರೆ
ಅಯ್ಯೋ ಬಿಡಪ್ಪಾ ಇದೇನು ಮಹಾ!
ಮರದೆಲೆ ಚಿಗುರೀತು ಉದುರೀತು,
ಮರ ಅಮರವಲ್ಲವೆ? ಎಂದು ತತ್ವ ಹೇಳುತ್ತಾಳೆ
ತನ್ನುಡಿಗೆಯನ್ನೇ ಉರಿಸಿಕೊಂಡು ಉರಿಯ ಮಣಿಮಾಲೆಯನ್ನು
ಕೊರಳಲ್ಲಲಂಕರಿಸಿಕೊಂಡು ಅಗ್ನಿದೀಕ್ಷೆ ಪಡೆಯುವುದು
ನಿಜವಾಗಿಯೂ ನೋಟಕ್ಕೆ ರುದ್ರ-ಸುಂದರ
ಅದು ಆಕೆಗೆ, ಹಳೆ ವಸ್ತ್ರ ಕಳಚಿ ಹೊಸದು ಪಡೆವ ರೀತಿಯಂತೆ,
ಹಳೆಯದಾದರೂ ಬರುವ ನಾಳಿನ ಬೇರಿಗೆ ಕೊಳೆತು
ಗೊಬ್ಬರವಾಗಿಯೋ
ಉರಿದು ಧೂಪವಾಗಿಯೋ, ಪವಿತ್ರ ಪಾಪವಾಗಿಯೋ
ಆಗಬೇಕೆಂಬ ಯಜ್ಞ ರಹಸ್ಯವು ಆಕೆಯ ನಿತ್ಯನೂತನತೆಯ ಗುಟ್ಟು
*****