ಉರಿಯುವ ಚೆಂಡನು ನೀಲಿನಭದಲ್ಲಿ ಇರಿಸಿದವರು ಯಾರು?
ಹಗಲಿನ ನಾಟಕ ಮುಗಿಸಿ ಕರಿತೆರೆ ಸರಿಸುವವರು ಯಾರು?
ಅಂಧಕಾರದಲಿ ಚಂದ್ರನ ಹಣತೆಯ ಹಚ್ಚುವವರು ಯಾರು?
ಬಾನಿನ ಮೈಯನು ಮುಗಿಲ ವಸ್ತ್ರದಲಿ ಮುಚ್ಚುವವರು ಯಾರು?
ಸಣ್ಣ ಗಿಡದಲು ಬಣ್ಣದ ಹೂಗಳು, ಹಸಿರೆಗೆಂಥ ಹಾರ!
ಹಂಡೆಕುಂಬಳವ ಹೊರವುದು ಬಳ್ಳಿ, ಪ್ರೀತಿಗಿಲ್ಲ ಭಾರ
ಚಳಿಮಳೆ ಬಿಸಿಲಿನ ಸೀರೆಯ ಭೂಮಿ ಉಡುವುದೇನು ಚಂದ!
ನೀಹಾರಿಕೆ ಗ್ರಹತಾರೆಗಳ ಹಿಡಿವುದಾವ ಬಂಧ!
ಪಂಚೇದ್ರಿಯದೊಳು ಸಂಚನು ಸೃಷ್ಟಿಸಿ ನಡೆಸುವವಗೆ ಶರಣು
ಸೃಷ್ಟಿಯ ಸಂತತ ಚಲನೆಗೆ ದಾರಿಯ ಮಾಡಿದವಗೆ ಶರಣು
ಬಾನೊಳು ಬೆಳಕಿನ ದೀಪಾವಳಿಯನು ಹಚ್ಚುವವಗೆ ನಮನ
ವಿಶ್ವವನೇ ಚದುರಂಗದಾಟದಲಿ ಹೂಡಿದವಗೆ ನಮನ.
*****