ಒಬ್ಬಾಕೆ ನನ್ನ ಮನೆಯಂಗಳದಲ್ಲಿ ಬಂದು ನಿಂತಳು
ಹರಕು ಬಟ್ಟೆ ಅವಳ ಮಾನವನ್ನು ಹೇಗೋ ಮುಚ್ಚಿತ್ತು
ಕಾಂತಿವಂತ ಮೈಯನ್ನು ಕಣ್ಣ ಬಾಣಗಳಿಂದ ರಕ್ಷಿಸಲು
ಮುದುಡಿಕೊಂಡು, ಒಡಲನ್ನು ಕೈಯಲ್ಲಿ ಹಿಡಿದುಕೊಂಡು
ತಲೆಗೂದಲಿಗೆ ಧೂಳೆಣ್ಣೆ ಸವರಿ ಕಲ್ಲು ಹೂಮುಡಿದು
ಗಂಡಾಂತರದ ಗಂಟು ತುರಬ ಬಿಗಿದಿದ್ದಳು
ಕಣ್ಣಗವಿಯಿಂದ ಮಿಣುಕು ಬೆಳಕನ್ನು ತೂರುತ್ತ
ಬೇಡುತ್ತಿದ್ದಳು
“ಯಾರಮ್ಮ” ನೀನೆಂದೆ
“ದಿಕ್ಕಿಲ್ಲ ಸ್ವಾಮಿ ಅನ್ನ ಕಾಣದೆಷ್ಟೋ ದಿನವಾದವು
ತುತ್ತನ್ನ ನೀಡಿ ಒಂದಿಷ್ಟಾಸರೆ ಕೊಡಿ”
“ನೋಡಿದರೆ ಕುಲೀನೆಯಾಗಿ ಕಾಣುವಿ ಯಾಕೆ ಹೀಗಾದೆ?”
“ನಾನೂ ಮೆರೆದೆ ಉರಿದೆ ಸ್ವಾಮಿ
ಅರಮನೆ ಸುರಮನೆಗಳ ಹೂಹಾಸಿಗೆಯಲ್ಲಿ
ವಿವಿಧ ಭಂಗಿಗಳಲ್ಲಿ ಕುಣಿದೆ ಬಲ್ಲಿದರ ಬೆಲೆವೆಣ್ಣಾಗಿ,
ದೀನದಲಿತರ ಕೇವಲ ಕನಸಕನ್ನೆಯಾಗಿದ್ದ
ನನ್ನೊಂದು ಕಟಾಕ್ಷಕ್ಕಾಗಿ ಬಾಯಿಬಾಯಿಬಿಡುತ್ತಿದ್ದವರೆಷ್ಟೊ ಮಂದಿ
ಕೆಲವರ ಕನಸಾಗಿ ಹಲವರ ಹಂಬಲವಾಗಿ ಹಾರಾಡುತ್ತಿದ್ದೆ
ಅಯ್ಯೋ ಆ ಗತಕಾಲ ವೈಭವವೆಲ್ಲ ಬಿಡಿ
ನನಗೆ ಶನಿಕಾಲ ಬಂತು
ನಾನು ಕಾಲಿಟ್ಟಲ್ಲೆಲ್ಲಾ ಮಸಣವಾಯಿತು
ನನ್ನ ಮುಟ್ಟಿದವರೆಲ್ಲ ದಟ್ಟ ದರಿದ್ರರಾದರು
ನಾನೊಬ್ಬ ಶಕುನ ಕನ್ನೆಯಾದೆ
ಆದರೂ ಕೆಲವರು ನನ್ನ ಕಂಡು
ನಾಲಗೆ ಚಪ್ಪರಿಸಿ ಚೀಪಿ ಒಗೆಯ ಬೇಕೆನ್ನುತ್ತಾರೆ
ನನ್ನ ಅರೆಮೈಗೆ ಬಾಡಿಗೆ ಬಟ್ಟೆಯುಡಿಸಿ ಮೆರೆಸಬಯಸುತ್ತಾರೆ
ನನ್ನ ಉದರವೋ ಬರಿದು
ನನ್ನ ಮನವರಿತು ಒಲವಿಗೊಲಿದು
ಕೂಡ ಬಲ್ಲ ಕೊಡಬಲ್ಲವರೇ ಇಲ್ಲ
ನೀವಾದರೂ….!” ಎಂದಾಗ
ಮೊದಲು ನಾಲಗೆಯಲೂರಿದ್ದ ನೀರು
ಅಲ್ಲೇ ಇಂಗಿ ಪ್ರೇತ ದರ್ಶನವಾದಂತಾಗಿ ‘ಮುಂದೆ ಹೋಗಿ ಬಾ’
ಎಂದು ಬಾಗಿಲು ಬಡಿದುಕೊಂಡೆ
(೨೨-೮-೭೮)
*****