ಹೇಗೆ ಸುಮ್ಮನಿರಲಿ ತಂದೇ!
ಉಸಿರಾಡದೆ ಉಸಿರದೆ,
ಮಾತಾಡದೆ ಆಡದೆ
ಸಾವಿರಾರು ವರ್ಷಗಳು
ಆಳುತ್ತಾ ಬಂದ ದೇವರುಗಳು
ಕೋಟ್ಯಾವಧಿ ಮಂದಿಗಳ
ಬಡವಾಗಿಸಿರುವುದ ಕಂಡು
ಹೇಗೆ ಸುಮ್ಮನಿರಲಿ ತಂದೆ?
ಈ ಓಣಿ ಗೂಡುಗಳಲ್ಲಿ
ನೆಲಕಚ್ಚಿದೊಡಲುಗಳು,
ಗಂಟಲು ಕಚ್ಚಿದ ಹಲ್ಲುಗಳು,
ಅಳುಕಚ್ಚಿದ ಕಣ್ಣುಗಳು,
ಗಾಳಿಕಚ್ಚಿದ ಆಸೆಗಳು,
ಕನಸಾದ ನಂದನಗಳು,
ಕುನ್ನಿಗಳಾದ ಕಂದಗಳು
ಇವನೆಲ್ಲ ಕಂಡು ಕಂಡು ಹೇಗೆ ಸುಮ್ಮನಿರಲಿ!
ಈ ಓಣಿಗಳಲ್ಲಿ ಸೂರ್ಯಮೂಡುವುದೇ ಇಲ್ಲವೇನೋ
ಹೊಸಗಾಳಿ ಬೀಸುವುದೇ ಇಲ್ಲವೇನೋ!
ಹಳಸುನಾತ ಹೋಗುವುದೇ ಇಲ್ಲವೇನೋ!
ಈ ಜೊಂಡು ನೆಲದಲ್ಲಿ ಬೆಂಕಿ ಉರಿಯುವುದೇ
ಇಲ್ಲವೇನೋ!
ಈ ಬಾಗಿದ ಬಿಲ್ಲುಗಳು ಸೆಟೆದು
ಬಾಣಗಳಾಗುವುದೇ ಇಲ್ಲವೇನೋ!
ಈ ಮೊಂಡು ಮೋಟುಗಳು
ಚಿಗುರುವುದೇ ಇಲ್ಲವೇನೋ!
ಈ ಭಂಡ ಬಂಡೆಗಳು
ಕರಗುವುದೇ ಇಲ್ಲವೇನೋ,
ಆ ಮೋಡ ಸುರಿಯುವುದೇ ಇಲ್ಲವೇನೊ
ಈ ಒರತೆಯಾದರೂ ಚಿಮ್ಮುವುದೇ
ಇಲ್ಲವೇನೋ?
ಇದನ್ನೆಲ್ಲ ಕಂಡು ಹೇಗೆ ಸುಮ್ಮನಿರಲಿ ತಂದೆ
*****