ಅಣ್ಣಾ ಅಣ್ಣಾ ಇಲಿಯಣ್ಣ
ಎಲ್ಲಿದೆ ನಿನ್ನ ಮನೆಯಣ್ಣ?
ಆಹಾ ಪುಟ್ಟ
ಮಣ್ಣೊಳಗಿದೆ ಮನೆ
ಮನೆ ಹೆಸರು ಬಿಲ
ಮಹಾಬಿಲೇಶ್ವರ ನಾನಯ್ಯ
ಬಿಲವೆಂದರೆ ಅದು ಸ್ವರ್ಗ
ಅಂಥಾ ಗೃಹ ಇನ್ನೊಂದಿಲ್ಲ
ಇಳಿದರೆ ಇಳಿದಷ್ಟು ಕೊರೆದರೆ ಕೊರೆದಷ್ಟು
ಮಹಡಿಯ ಕೆಳಗೆ ಮಹಡಿಗಳು
ಕೋಣೆಗಳೊಳಗೆ ಕೋಣೆಗಳು
ಎಡ ಬಲ ದಾಯೇಂ ಬಾಯೇಂ
ಎಲ್ಲಾ ಬಿಲ ಅಹೋಬಿಲ
ಅಹೋಬಿಲ ಇಹೋಬಿಲ
ಯಾವುದೆ ಇಲ್ಲ ಕೋಲಾಹಲ
ಬಿಸಿಲಿಗೆ ತಣ್ಣನೆ ಥಂಡಿಗೆ ಬೆಚ್ಚನೆ
ಏ.ಸೀ. ಗೀಸೀ ತೆಗೆದು ಬಿಸಾಕು
ತಿನ್ನಲು ಕುರುಕುರು ಇದ್ದರೆ ಸಾಕು
ಅಣ್ಣಾ ಅಣ್ಣಾ ಹುಲಿಯಣ್ಣಾ
ಎಲ್ಲಿದೆ ನಿನ್ನೆ ಮನೆಯಣ್ಣ?
ಆಹಾ ಪುಟ್ಟ
ಕಲ್ಲೊಳಗಿದೆ ಮನೆ
ಮನೆ ಹೆಸರು ಗುಹೆ
ಗುಹೆಯೆಂದರೆ ಅದು ಅಮರ್ತ್ಯಲೋಕ
ಬೆಟ್ಟದ ಕಿಬ್ಬಿಗೆ ಬಂಡೆಯ ತಬ್ಬಿಗೆ
ದೇವರೆ ಮಾಡಿದ ಸಹಜ ಮನೆ
ಒಂದೇ ಬಾಗಿಲು ಒಂದೇ ಹಾಲು
ಕಿಟಿಕಿ ಗಿಟಿಕಿಯ ರಗಳೆಯೆ ಇಲ್ಲ
ಕಳ್ಳಕಾಕರ ಭಯವೂ ಇಲ್ಲ
ಬಿಸಿಲು ಮಳೆಗಳು ಬೀಳುತ್ವೆ ಹೊರಗೆ
ಒಳಗಡೆ ಕುಳಿತು ನೋಡ್ತೇವೆ ಹೊರಕ್ಕೆ
ಬೇಕಾದ್ದು ಒಂದಿಷ್ಟು ತಿಂಡಿಯ ವ್ಯವಸ್ಥೆ
ಇನ್ನುಳಿದಂತೆ ಭಾರೀ ನಿದ್ದೆ
ಪುಟ್ಟನೆಂದನು ಅಮ್ಮನಿಗೆ
ನಾನಿನ್ನು ಬಿಲದಲ್ಲಿ
ಅಥವಾ ಗುಹೆಯಲ್ಲಿ
ಒಂದಿನ ಬಿಲದಲ್ಲಿ
ಒಂದಿನ ಗುಹೆಯಲ್ಲಿ
ಮಹಾಬಿಲೇಶ್ವರ ಮಹಾ ಗುಹೇಶ್ವರ
ಎರಡೂ ನಾನೇ ಆಗ್ತೀನಮ್ಮ
ಊಟ ತಿಂಡಿ ಅಲ್ಲಿಗೆ ಬರಲಿ
ಉಳಿದ ವಿಚಾರ ನನಗೇ ಇರಲಿ!
*****