ರಾತ್ರಿಯೆಲ್ಲಾ ಅಂಗಳದಲ್ಲಿ
ಏನು ಚೀರಾಟ ಏನು ಕಿರುಚಾಟ
ಏನೆಂದು ನೋಡಿದರೆ ದೆವ್ವಗಳೆರಡರ
ಮಧ್ಯೆ ಭಯಂಕರ ಹೋರಾಟ
ಬಾವಿ ದೆವ್ವ ಹಣ್ಣನು ತಿಂದಿದೆ
ಅಂತ ಹುಣಸೆಯ ಆರೋಪ
ಹುಣಸೆ ದೆವ್ವ ನೀರನು ಕುಡಿದಿದೆ
ಅಂತ ಬಾವಿಗೆ ಕೋಪ
ಕೇಳಿ ಕೇಳಿ ಸಹಿಸಲಾರದೆ
ಆಲದ ಮರದಿಂದ
ಇಳಿದು ಬಂತು ಆಲದ ದೆವ್ವ
ಇದ್ದವರಲದೇ ಹಿರಿ ದೆವ್ವ
ಏನೆಲೊ ಮೂರ್ಖರೆ ಬುದ್ಧಿಯಿದೆಯಾ?
ಕೂತರೆ ಕೂತುದು ಕೂತವರದೆಯಾ?
ಹಣ್ಣು ನೀರು ಸರ್ವರ ಸೊತ್ತು–
ಹಾಗಂತ ಭಗವದ್ಗೀತೆಯಲಿತ್ತು
ಹೇಳಿ ಕೇಳಿ ಈ ಜನ್ಮ ದೆವ್ವ !
ಮುಂದಿನ ಸಲವಾದ್ರು ಬೇಡವೆ ದಿವ್ಯ?
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಗಳಿಸಿಕೊಳ್ಳಿರೋ ಮೋಕ್ಷ!
ಆಕ್ಷ! ಅಂದಿತು ಹುಣಸೆ ದೆವ್ವ
ಮರವ ಹತ್ತಿ ಮುಗುಂ
ಹಾಕ್ಷ! ಅಂದಿತು ಬಾವಿ ದೆವ್ವ
ಬಾವಿಯೊಳಕ್ಕೆ ಧುಡುಂ!
*****