ಕನಸು
ಕಂಡೆನು ಓಲೆಗೆ ಓಲೆಯನು
ಅಂಧಳ ನಡಸುವ ಕೋಲಿದನು
ಜಾತ್ರೆಗೆ ಕರೆಯುವ ಭ್ರಾತೃವನು
ಕುರುಡಿಗೆ ಕಂಗಳ ತರಿಸುವನು
ಪರಿಶೆಗೆ ನಾನಿದೊ ಹೊರಡುವೆನು
ಬಯಸಿದ ಅಣ್ಣನೆ ದೊರೆತಿಹನು
ವಿಷಯದ ವಿಷಮವ ತಳ್ಳುವೆನು
ಚಂಗನೆ ನೆಗೆಯುತ ಹಾರುವೆನು
ಜೀವದ ಪುರದೊಳು ನುಗ್ಗುವೆನು
ಡುಮುಡುಮು ವಾದ್ಯವ ಕೇಳುವೆನು
ತೇರಿನ ಬಾವುಟಕೇರುವೆನು
ಕದಳೀ ದವನವ ಸೂಡುವೆನು
ಭಾವದ ಶಿಖರವ ಸೇರುವೆನು
ಕಮಲದ ಸಾರವ ಹೀರುವೆನು
ಅಣ್ಣನ ಭವನವ ಕಾಣುವೆನು
ಮಿಂಚಿನ ಆಚೆಗೆ ಕರೆಯುವನು
ಕಾಣದ ಒಗಟೆಯ ಬಿಚ್ಚುವನು
ಏನನೊ ಏನನೊ ತೋರುವನು
ಮಾನಸಪುತ್ರನು ನಮ್ಮಣ್ಣ
ಆಗಸದೇಹಿಯು ನಮ್ಮಣ್ಣ
ಭಾವದ ಸಾಗರ ನಮ್ಮಣ್ಣ
ಕುಸಿದರೆ ಅಣ್ಣನೆ ನಡಸುವನು
ಹಸಿದರೆ ಅಣ್ಣನೆ ಉಣಿಸುವನು
ಧನ್ಯಳು ಜನಕಜೆ ಇನ್ನೇನು!
*****