ಬದುಕೆಂದರೆ… ಹೀಗೇ…
ಬಳ್ಳಾರಿ ಬಿಸಿಲಿನಾ ಹಾಗೇ…
‘ಉಸ್ಸೆಪ್ಪಾ’,,, ಎಂದರೂ,
ಮುಗ್ಳಾಗ ‘ಜಟ ಜಟ’ ಇಳಿದರೂ ಬಿಡದು!
ಝಣ ಝಣ… ಹಲಗೆ ಬಡಿತದ,
ಬಿಸಿಲಿನ, ಬಿಸಿ ಬಿಸಿ ಹವೆಯ ಸಂಪು!
ಮೈಮನ ಹಾವಿನಂಗೆ,
ಮುಲು ಮುಲು ಹರಿದಾಡುವ, ಬೇವ ಹನಿಯ ಕಂಪು!
ನೆಲಕೆ ಕಾಲಿಟ್ಟರೆ, ಕಮ್ಮಾರನ ತಿದಿಪಂಪು!
*
ಬದುಕೆಂದರೆ… ಹೀಗೇ
ಮುಂಗಾರಿನ ಮಳೆಯ ಹಾಗೇ…
ತೊಯ್ದು ತೊಪ್ಪೆಯೆಂದರೂ…
ಗಢ ಗಢ ಛಳಿಯೆಂದರೂ… ಬಿಡದು!
ಬಿರುಗಾಳಿ, ಗುಡುಗು, ಸಿಡಿಲು, ಮಿಂಚಿನಂತೇ…
ಜುಳು ಜುಳು ಹರಿವ ಸಿಟ್ಟೇರ ಹಳ್ಳದಂತೆ!
ಕರ್‍ಮಾಗಳ ಮುಳುಗಿಸಿ, ಧರ್‍ಮಾಗಳ ತೇಲಿಸೋ…
ನಮ್ಮೂರ ‘ಹುಚ್ಚಾಯಿ’, ತೇರನೆಳೆವ ಹರಕೆಯಂತೆ!!
ಬತ್ತಿ ಹೋದ ಕೆರೆ, ಬಾವಿ, ಹಗರಿಯಂತೆ.
*
ಬದುಕೆಂದರೆ… ಹೀಗೇ
ಚಿಕ್ಕ ಮಕ್ಕಳ ಮದುವೆಯಾಟದಂತೇ…
ನಮ್ಮೂರ, ಸಂತೆ ಮೈದಾನದ ವಹಿವಾಟಿನಂತೆ,
ಬೋರೇಗೌಡ, ಬೆಂಗಳೂರಿಗೆ ಬಂದ, ‘ಪಡಿಪಾಟ್ಲಿ’ನಂತೆ!
ಬಾಳೆಲೆ ಹಾಸುಂಡು, ಬೀಸಿ ಒಗೆದಂತೆ,
ಊರ ದನ ಕಾದು, ಊರಗೌಡ ಎನಿಸಿಕೊಂಡಂತೆ,
ನೀರ ಮೇಲಣ ಗುಳ್ಳೆಯಂತೆ!
*
ಬದುಕೆಂದರೆ… ಹೀಗೇ
ಬಡವರೂ ಬಡವರಾಗಿಯೇ ಇರುವುದು!
ಶ್ರೀಮಂತರೂ… ಇನ್ನೂ ‘ಮಜ್ಹಾ’ ಅನುಭವಿಸುವುದು!
ಕೋತಿ ತಿಂದರೂ… ‘ಮೇಕೆ’ ಪೆಟ್ಟು ತಿನ್ನುವಂತೆ,
ಚಾಡಿ ಮಾತಿಗೆ, ಕೋಡು ಮೂಡಿದಂತೆ,
ಸತ್ಯವಂತರೂ ಜೈಲು ಅನುಭವಿಸುವಂತೆ.
*
ಬದುಕೆಂದರೆ… ವಿಷ ವರ್ತುಲ! ಭಯಂಕರ! ‘ಕಟುಗಲರಟ್ಟಿ…’
ಪಾಂಡವರ… ಕೌರವರ… ಜೂಜಾಟದಂತೆ,
ಕಾಡುಕೋಣಗಳ ಗುದ್ದಾಟದಂತೆ!
ಶಕುನಿ, ದುರ್‍ಯೋಧನ, ಕೃಷ್ಣನ ಕುಟಿಲ ತಂತ್ರದಂತೆ,
ನಿತ್ಯ ಸ್ವಯಂವರವಿಲ್ಲಿ, ಟಗರಿನ ಕಾಳಗಿವಿಲ್ಲಿ…
ಅರಗಿನ ಮನೆಯ ವಾಸವಿಲ್ಲಿ, ಬೆನ್ನಿಗೆ ಚೂರಿ ಈರಿತವಿಲ್ಲಿ…
ವಸ್ತ್ರಾಪಹರಣ… ಕೀಚಕನ ಅಟ್ಟಹಾಸವಿಲ್ಲಿ!
ಆಗಿನ ನಿಯತ್ತು, ಈಗಿನವರತ್ತಿರವೆಲ್ಲಿದೆ?!
ಕತ್ತಲಾದರೆ… ಶಸ್ತ್ರವಿಡಿಯುತ್ತಿರಲಿಲ್ಲ! ರಾಜನೀತಿ…
ಈಗ ಕತ್ತಲಾದ ಮೇಲೆ, ಕತ್ತಿ ಇರಿವ ಜನರಿಲ್ಲಿ!
ರಕ್ತ ನೀತಿ…
*
ಬದುಕೆಂದರೆ… ಹೀಗೇ
ಹೀಗೆಂದು ಹೇಳಲು, ಈ ಕಲಿಯುಗದಲಿ,
ಹೇಗೆ ಸಾಧ್ಯವಿಲ್ಲವೋ ಹಾಗೇ…
ನಿತ್ಯ ಚಕ್ರವ್ಯೂಹ, ಕುರುಕ್ಷೇತ್ರವಿಲ್ಲಿ!
ಕೌರವರು, ಪಾಂಡವರೆಂಬಾಗೆರೆಯಿಲ್ಲ!
ಎಲ್ಲರೂ ಮಾಮರಿಲ್ಲಿ… ಮೃತ್ಯುಂಜಯರಿಲ್ಲಿ…
ಮನೆ, ಮನ, ಕಛೇರಿ, ಗುಡಿ, ಚರ್ಚು, ಮಸೀದಿ, ಯೆಲ್ಲ ರಣರಂಗವಿಲ್ಲಿ!
ಬಡವರ ಒಣ ಒಣ ನೆತ್ತರಿಗೆ, ಎಲ್ಲರೂ ಇಲ್ಲಿ ತಿಗಣೆಗಳೇ…!
*
ಬದುಕೆಂದರೆ… ಹೀಗೇ
ಕಾದ ರೊಟ್ಟಿ ಹೆಂಚು! ನಿಗಿ ನಿಗಿ ಉರಿವ ಕಿಚ್ಚು…
ರಾವಣರ ಸಂಚು, ಕೈಕೆ, ಮಂಥರೆ ಸಂಚು…
ಸೀತೆವನವಾಸಕೆ ಅಟ್ಟಿದಾ ಹಾಗೇ…
ಕಲಿಯುಗದಲ್ಲಿ… ರಾಮಾಯಣ, ಮಹಾಭಾರತ ಒಟ್ಟೊಟ್ಟಿಗೆ!
ತಣ್ಣೀರು ಆರಿಸಿ, ಕುಡಿವ ಕಾಲ!
ಬದುಕೆಂದರೆ… ಬಲು ಭಾರ! ಖಾರ!
*****