ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ.
ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು – ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ ಎಂಬುದನ್ನು ನಾ ತಿಳಿದುಕೊಂಡಿಲ್ಲ. ಹೀಗಾಗಿ ನಾ ಹೇಗೆ ಹೇಳಲಿ?’ ಎಂದು ತನ್ನ ಅಳಲನ್ನು ಮಹಾರಾಜನ ಮುಂದೆ ತೋಡಿಕೊಂಡ.
‘ಸಂತಸವೆನ್ನುವುದು ನಮಗಾಗಿ ನಮ್ಮಮ ಸಂಸಾರಕ್ಕಾಗಿ ಮೂರು ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ನಿತ್ಯ ಕಷ್ಟಪಡುವುದರಲ್ಲಿ ಬಲು ಸಂತಸವಿದೆ. ಏನು ಇಲ್ಲದವರು ಗಳಿಸಿ ಉಳಿಸಿ ಮನೆ, ಮಠ, ಹೊಲ ಗದ್ದೆ ತೋಟ ಕಾರು ಜೀಪು ಮಾಡಿದಾಲೇ ಸಂತಸದ ಚಿಲುಮೆ ಚಿಮ್ಮುವುದು…..’ ಎಂದು ಅನುಭವಿಯೊಬ್ಬ ವಿವರಿಸುತ್ತಾ ನಿಂತ.
ಮೊದಲಸಾಲಿನಲ್ಲಿ ಕುಳಿತಿದ್ದ ವೇದಾಂತಿಯೊಬ್ಬ ಎದ್ದುನಿಂತು ಮಹಾರಾಜಾಧಿರಾಜ……. ದಿನ ನಿತ್ಯ ಮೂರು ಹೊತ್ತು ನದಿಯಲ್ಲಿ ಮುಳುಗಿ ನಾನಾ ಪುಷ್ಪಗಳ ಹರಿದು ತಂದು ನಾರು ಮಡಿಯಲಿ ದೇವನಿಗೆ ಪೂಜಿಸಿ ಭಜಿಸಿ ನೇಮ ನಿಯಮ ಪಾಲಿಸಿ ವ್ರತ ಯಜ್ಞಯಾಗಾದಿಗಳ ಮಾಡಿ ಪ್ರಸಾದ, ತೀರ್ಥ, ನೈವೇದ್ಯ ಸ್ವೀಕರಿಸಿದರೆ ಸಂತಸದ ಹೊನಲು ಹರಿಯುವುದು……’ ಎಂದು ವರ್ಣಿಸುತ್ತಾ ನಿಂತ.
ಕವಿಯೊಬ್ಬ ಎದ್ದು ನಿಂತು ‘ಕಾವ್ಯ, ನಾಟಕ, ಕಾದಂಬರಿ, ಹಾಸ್ಯ ಪ್ರಸಂಗಗಳ ರಸವತ್ತಾಗಿ ರಚಿಸಿ, ರಸಿಕ ಶಿಖಾ ಮಣಿಗಳಿಂದ ಹೊಗಳಿಸಿಕೊಳ್ಳುವುದರಿಂದ ಸಂತಸದ ಚಿಲುಮೆ ಚಿಮ್ಮುವುದು! ಚೈತನ್ಯದ ಚಿಲುಮೆ ಹೊಮ್ಮುವುದು! ಸ್ಫೂರ್ತಿಯ ಚಿಲುಮೆ ರಂಗೇರುವುದು…..’ಎಂದು ಕಾವ್ಯಮಯವಾಗಿ ಸಂತಸದಿ ಹೇಳಿದ.
ಅಷ್ಟರಲ್ಲಿ ಅಲ್ಲೇ ಇದ್ದ ಬೀರಬಲ್ಲ ಮಹಾಶಯ ಎದ್ದು ನಿಂತು ಮಹಾರಾಜರಿಗೆ, ಸಭೆಗೆ ವಂದಿಸಿ, ’ಮಹಾಪ್ರಭು…..ಸಂತಸದ ಚಿಲುಮೆ ಹರಸಿ ನಾವ್ಯಾರು ಅಡವಿಗೊಡಬೇಕಾಗಿಲ್ಲ, ಖಾವಿ ಧರಿಸಬೇಕಾಗಿಲ್ಲ. ಗುಡಿಗುಂಡಾರ ಸುತ್ತಿ ಪುಣ್ಯನದಿ ತೀರ್ಥಗಳಲ್ಲಿ ಮುಳಗಬೇಕಾಗಿಲ್ಲ. ಮೂಗು ಹಿಡಿದು ಕಣ್ಣುಮುಚ್ಚಿ ತಪಸ್ಸು ಮಾಡಬೇಕಾಗಿಲ್ಲ! ಪ್ರತಿನಿತ್ಯ ಮನಸ್ಸಿನಲ್ಲಿ ಚಿಂತನಾ ಮಂಥನ ನಡೆಸಬೇಕು. ಸಂತಸದ ಚಿಲುಮೆ ನನ್ನಲ್ಲಿಯೇ ಇದೆ ಎಂಬ ಆತ್ಮವಿಶ್ವಾಸ ಬೇಕು. ತಾಳ್ಮೆ, ಆತ್ಮ ತೃಪ್ತಿ, ದಮೆ, ಕರುಣೆ, ಶಾಂತಿ, ದಾನಧರ್ಮ-ಕ್ಷಮೆ ಇರಬೇಕು! ನಿಸ್ವಾರ್ಥ ಜೆವನದಲ್ಲಿ ತ್ಯಾಗದಲ್ಲಿ ಸಂತಸದ ಚಿಲುಮೆ ಇದೆ. ಕಾಣಬೇಕು… ಅದು ದಿನೇ ದಿನೇ ನಮಗೆ ಗೊತ್ತಾಗುತ್ತಾ ಹೋಗುತ್ತದೆ…’ ಎಂದು ವಿವರಿಸುತ್ತಾ ನಿಂತ.
ಅಲ್ಲಿದ್ದವರೇನು….. ಸ್ವತಃ ಅಕ್ಬರ್ ಮಹಾರಾಜ ಬೀರಬಲ್ಲನ ವಿವರಣೆಗೆ ಸಂತಸ ಉಕ್ಕಿ ಬಂತು. ಎಲ್ಲರೂ ಜೋರಾಗಿ ಕರತಾಡನ ಮಾಡಿ ಸಂತಸ ವ್ಯಕ್ತಪಡಿಸಿದರು.
ಅಲ್ಲಿಗೆ ಅಂದಿನ ಸಭೆಯು ಮುಕ್ತಾಯಗೊಂಡಿತು.
*****