ಪ್ರಿಯ ಸಖಿ,
ಮಗುವಿಗೆ ಏನು ತಿಳಿಯುತ್ತದೆ? ಅದು ನಾವು ಹೇಳಿಕೊಟ್ಟಂತೆ ಕಲಿಯುತ್ತಾ ಹೋಗುತ್ತದೆ. ಅದಕ್ಕೆ ತನ್ನದೇ ಆದ ವ್ಯಕ್ತಿತ್ವವೆಂಬುದಿರುವುದಿಲ್ಲ ಎಂಬುದು ನಮ್ಮ ಸಾಮಾನ್ಯ ಅಭಿಪ್ರಾಯ. ಅದರೆ ಬಹುಸೂಕ್ಷ್ಮವಾಗಿ ಮಗುವೊಂದನ್ನು ಗಮನಿಸಿದರೆ ಈ ನಮ್ಮ ಅಭಿಪ್ರಾಯ ತಪ್ಪೆಂದು ಸಾಬೀತಾಗುತ್ತದೆ.
ಮಕ್ಕಳ ಮನಸ್ಸೊಂದು ಕಪ್ಪು ಹಲಗೆಯಂತೆ. ಇಲ್ಲಿ ನಾವು ಏನನ್ನು ಬೇಕಾದರೂ ಬರೆಯಬಹುದು ಎಂಬುದು ಪಾಶ್ಚಾತ್ಯ ಅಭಿಪ್ರಾಯ. ಆದರೆ ಇತ್ತೀಚೆಗೆ ನಾವೂ ಇದನ್ನೇ ನಂಬುತ್ತೇವೆ. ಭಾರತೀಯ ಸಂಸ್ಕೃತಿಯ ಪ್ರಕಾರ ಪ್ರತಿಯೊಂದು ಮಗುವೂ ಒಂದು ವ್ಯಕ್ತಿ. ಇಲ್ಲಿ ಪ್ರತಿಯೊಬ್ಬನಲ್ಲೂ ಇರುವ ಆತ್ಮವನ್ನು ಗೌರವಿಸಿ ಮಗುವೂ ಒಂದು ವ್ಯಕ್ತಿ ಎಂದು ನಂಬಲಾಗುತ್ತದೆ.
ಮಗುವಿನ ಮನಸ್ಸು ಕಪ್ಪು ಹಲಗೆ, ನಾವೇ ಅದಕ್ಕೆ ಎಲ್ಲವನ್ನೂ ಹೇಳಿಕೊಡುತ್ತೇವೆನ್ನುವುದು ತಪ್ಪಾಗುತ್ತದೆ. ತನಗೆ ಹಸಿವಾದಾಗ ಅಳುವುದನ್ನೂ, ಹೊಸ ಆಟಿಕೆಯೊಂದು ಕೈಗೆ ಸಿಕ್ಕಾಗ ಸಂತಸದಿಂದ ನಗುವುದನ್ನೂ, ತಾಯಿಯನ್ನ ಕಂಡೊಡನೆ ಬೇರೆಯವರ ಕೈಯಿಂದ ಜಿಗಿದು ತಾಯಿಯನ್ನು ಅಪ್ಪುವುದನ್ನು ತನಗೆ ಬೇಕೆಂದ ವಸ್ತು ಸಿಗದಿದ್ದಾಗ ಸಿಟ್ಟುಗೊಳ್ಳುವುದನ್ನೂ ಮಗುವಿಗೆ ಹುಟ್ಟಿದೊಡನೆ ಯಾರು ಕಲಿಸಿದ್ದಾರೆ ?
ನಾವು ಏನನ್ನೇ ಹೊರಗಿನಿಂದ ಕಲಿಸಿದರೂ ಅದನ್ನು ಗ್ರಹಿಸುವ ಶಕ್ತಿ, ತಿಳಿದುಕೊಳ್ಳುವ, ಅರ್ಥೈಸಿಕೊಳ್ಳುವ ಮನಸ್ಸು ಮಗುವಿನಲ್ಲಿ ಹುಟ್ಟಿನಿಂದಲೇ ಇದೆ. ತಾನು ಬೆಳೆಯುತ್ತಾ ತನ್ನ ಸುತ್ತಲಿನ ಪರಿಸರವನ್ನು ಮಗು ತನ್ನ ದೃಷ್ಟಿಕೋನದಂತೆಯೇ ಅರ್ಥೈಸುತ್ತಾ ಹೋಗುತ್ತದೆ. ಪುಟ್ಟ ಮಗುವಿಗೂ ತನ್ನದೇ ಇಷ್ಟಾನಿಷ್ಟಗಳೂ, ನಿಲುವುಗಳು ಇರುವುದನ್ನು ಗಮನಿಸಬಹುದು. ಅದನ್ನು ಗುರುತಿಸುವ ಮನೋಭಾವ ನಮ್ಮಲ್ಲಿ ಮೂಡಬೇಕಷ್ಟೇ.
ಪ್ರತಿಯೊಂದು ಮಗುವಿಗೂ ಹಿರಿಯರಂತೆಯೇ ಎಲ್ಲ ಸನ್ನಿವೇಶಗಳಿಗೂ ಸ್ಪಂದಿಸಿ ಮೂಡುವ ಸಂವೇದನೆಗಳಿವೆ. ಅವುಗಳಿಗೆ ನಾವು ಬೆಲೆಕೊಡಬೇಕು. ಹಾಗೂ ಅವುಗಳನ್ನು ಗೌರವಿಸಬೇಕು. ಅದು ಬಿಟ್ಟು ನಮ್ಮ ಅನಿಸಿಕೆ, ಅಭಿಪ್ರಾಯಗಳನ್ನೆಲ್ಲ ಮಗುವಿನ ಮೇಲೆ ಬಲವಂತವಾಗಿ ಹೇರುವುದರಿಂದ ಮಗುವಿನ ಸೂಕ್ಷ್ಮಸಂವೇದನೆಗಳು ಘಾಸಿಗೊಂಡು, ದೊಡ್ಡದಾದಂತೆಲ್ಲ ಸ್ವತಂತ್ರ ವ್ಯಕ್ತಿತ್ವವಿಲ್ಲದೇ, ಕೀಳರಿಮೆಯಿಂದ, ಮನೋವೇದನೆಯಿಂದ ನರಳುವಂತಾಗುತ್ತದೆ ಎನ್ನುತ್ತಾರೆ ಮಕ್ಕಳ ಮಾನಸಿಕ ತಜ್ಞರು.
ಸಖಿ, ಪ್ರತಿಯೊಂದು ಮಗುವೂ ತನ್ನ ಭಾವನೆಗಳಿಂದ ತನ್ನಂತೆಯೇ ತಾನೇ ವಿಕಸಿಸಿ, ಅರಳಲು, ಪರಿಮಳ ಸೂಸಲು ಬಿಡಬೇಕು. ಅದಕ್ಕೆ ತನ್ನ ಪೂರಕ ಪರಿಸರವನ್ನೇ ಹಿರಿಯರು ಪೂರೈಸಿಕೊಡಬೇಕು. ಮಗುವೂ ಒಂದು ವ್ಯಕ್ತಿ. ಅದು ನಾವು ತುಂಬಿದ ವಿಷಯಗಳನ್ನೇ ಕಕ್ಕುವ ಕಂಪ್ಯೂಟರ್ ಅಲ್ಲ ಎಂಬುವುದನ್ನು ನಾವು ತಿಳಿದಿರಬೇಕು. ಮಗುವಿನ ಮನಸ್ಸೊಂದು ವಿಶಾಲ ವಿಶ್ವವಿದ್ದಂತೆ. ಅದು ತನಗೆ ಬೇಕೆಂದೆಡೆ ಹಾರಿ, ಬೇಕೆನಿಸಿದ್ದನ್ನು ಪಡಯಬಲ್ಲದು. ಮಗುವನ್ನು ನಮ್ಮ ಮಿತಿಯಲ್ಲಿಯಷ್ಟೇ ಅರ್ಧೈಸಿಕೊಂಡು ಅದಕ್ಕೆ ಸಂಕೋಲೆಯನ್ನು ತೊಡಿಸುವುದು ಬೇಡ. ಅಲ್ಲವೇ ಸಖಿ ?
*****