ಮಾಗಿಯ ಕಾಲ. ಹಳ್ಳಿಯೊಳಗಿನ ಜನರೆಲ್ಲ ಹಗಲುಹೊತ್ತನ್ನು ಬಹುಶಃ ಹೊಲದಲ್ಲಿಯೇ ಕಳೆಯುವರು. ದನಗಳು ಸಹ ಅಡವಿಯಲ್ಲಿಯೇ ಉಳಿಯುವವು. ಹಿಂಡುವ ದನಗಳು ಮಾತ್ರ ಸಾಯಂಕಾಲಕ್ಕೆ ಮನೆಗೆ ಮರಳುವವು.
ಮಧ್ಯಾಹ್ನವಾಗಿದ್ದರೂ ಚಳಿ ಹಿಮ್ಮೆಟ್ಟಿದೆ. ಬಿಸಿಲು ಬೆಳದಿಂಗಳಾಗಿರುವಾಗ ಕಟ್ಟಿಹಾಕಿದ ಕರುಗಳನ್ನು ತುಸು ಅಡ್ಡಾಡಿ ಬರಲೆಂದು ಕುಣಿಕೆ ಉಚ್ಚಿ ಬಿಡುವುದುಂಟು. ಹಾಗೆ ಹೊರಬಿದ್ದ ಮೂರು ಆಕಳ ಕರುಗಳು ಅಗಸೆಯ ಬಳಿಯಲ್ಲಿ ಕೂಡಿದವು. ಒಂದು ಕರು ಒಕ್ಕಲಿಗರದು; ಇನ್ನೂಂದು ಉಪಾಧ್ಯರದು; ಮೂರನೇದು ಗೌಳಿಗರದು.
ಮೂರೂ ಕರುಗಳು ಜೊತೆಗೂಡಿ ಅಗಸೆಯಿಂದ ಹೊರಬಿದ್ದವು. ಮುಂದೆ ಬಚ್ಚಲ ಮೋರೆಯ ನೀರು ಹೊರಬಿದ್ದು, ಹುದಿಲುಂಟುಮಾಡಿತ್ತು. ದಾರಿಹಿಡಿದು ಸಾಗುವವರು ಅದನ್ನು ದಾಟಬೇಕಾಗುತ್ತಿತ್ತು. ಎಲ್ಲಿಂದ ಹೇಗೆ ದಾಟಬೇಕು ಎಂದು ಯೋಚಿಸದೆ ಒಕ್ಕಲಿಗರ ಕರು ಬಾಲವನ್ನು ಎತ್ತರಿಸಿ ಟಣ್ಣನೆ ಜಿಗಿದು ಆಚೆಯ ಬದಿಯಲ್ಲಿ ನಿಂತಿತು. ಅದರಂತೆ ಜಿಗಿದು ಹೋಗುವ ಪ್ರಯತ್ನ ಮಾಡಿದರೂ ಉಪಾಧ್ಯರ ಕರುವಿನ ಹಿಂಗಾಲು ಕೆಸರು ತುಳಿದವು. ಇನ್ನುಳಿದದ್ದು ಗೌಳಿಗರ ಕರು. ಅದು ಜಿಗಿದು ಹೋಗುವ ವಿಚಾರವನ್ನೇ ಮಾಡಲಿಲ್ಲ. ಪಚಲ್ ಕಚಲ್ ಎಂದು ಹುದಿಲು ತುಳಿಯುತ್ತ ಅದನ್ನು ದಾಟಿಹೋಗಿ ಮುಂದಿನ ಕರುಗಳನ್ನು ಕೂಡಿಕೊಳ್ಳಲು ಧಾವಿಸಿತು.
ಅಷ್ಟರಲ್ಲಿ ಉಪಾಧ್ಯರ ಕರು ಕೇಳಿತು ಒಕ್ಕಲಿಗರ ಕರುವಿಗೆ – “ಏನೋ- ನೀನು ಕಾಲಿಗೆ ಕೆಸರು ಸೋಂಕದಂತೆ ಆ ಹುದಿಲು ಹರಿಯನ್ನು ಟಣ್ಣನೆ ಜಿಗಿದು ಬಂದೆಯಲ್ಲ ! ಅಷ್ಟೊಂದು ಚಪಲತೆ ನಿನಗೆಲ್ಲಿಂದ ಬಂತು” ಎಂದು ಕೇಳಿತು.
ಒಕ್ಕಲಿಗರ ಕರು ಅಭಿಮಾನದಿಂದ ಹೇಳಿತು – “ನಮ್ಮವ್ವನಿಗಿರುವ ನಾಲ್ಕು ಮೊಲೆಗಳ ಹಾಲನ್ನೆಲ್ಲ ದಿನಾಲು ಎರಡೂ ಹೊತ್ತು ಕುಡಿಯುತ್ತೇನೆ. ಅದರಿಂದ ನನಗೆ ಅಷ್ಟೊಂದು ಕಸುವು ಬಂದಿದೆ.”
“ಏನಂದೀ ? ಅವ್ವನ ಮೊಲೆಯಲ್ಲಿ ಹಾಲಿರುತ್ತವೆಯೇ?” ಎಂದು ಉಪಾಧ್ಯರ ಕರು ಬೆಕ್ಕಸಬಟ್ಟು ಕೇಳಿತು.
ಅವೆರಡೂ ಕರುಗಳು ಮಾತಾಡುವುದನ್ನು ಕೇಳಿ ಇದಾವ ಹೊಸವಿಷಯ ಎಂದು ಕುತುಹಲದಿಂದ ಗೌಳಿಗರ ಕರು ಅವಸರದ ಹೆಜ್ಜೆ ಹಾಕಿ ಕೇಳಿತು – “ಅವ್ವನಿಗೆ ಮೊಲೆ ಇರುವವೇ?”
ತಮ್ಮ ಎಳೆಕರು ಬೆಲೆಯುಳ್ಳ ಬದುಕಾಗಲೆಂದು ಆಕಳನ್ನು ಹಿಂಡಿಕೊಳ್ಳದೆ ಇದ್ದಷ್ಟು ಹಾಲನ್ನು ಒಕ್ಕಲಿಗರು ಹೋರಿಗರುವಿಗೆ ಬಿಟ್ಟುಕೊಡುತ್ತಾರೆ, ಉಪಾಧ್ಯರು ಹಾಲಿನ ಸಲುವಾಗಿ ಅವುಗಳನ್ನು ಕಟ್ಟಿರುವುದರಿಂದ ಅವರು, ಕೆಚ್ಚಲೊಳಗಿನ ಹಾಲನ್ನೆಲ್ಲ ಹಿಂಡಿಕೊಂಡು ಆಮೇಲೆ ಕರುವಿಗೆ ಬಿಡುವರು. ಅದು ಒಣ ಮೊಲೆಗಳನ್ನು ಚೀಪುವದು. ಅಂತೆಯೇ ಅದು ಕೇಳಿತು – “ಅವ್ವನ ಮೊಲೆಯಲ್ಲಿ ಹಾಲಿರುವವೇ” ಎಂದು.
ಇನ್ನು ಗೌಳಿಗರಂತೂ ಹಾಲು ಮಾರುವವರು. ಆಕಳ ದೊಲೆಗಳನ್ನು ಜಗ್ಗಿ ಹಿಂಡಿಕೊಳ್ಳವರಲ್ಲದೆ, ಹಿಂದುಗಡೆ ಸಹ ಕರುವನ್ನು ಬಿಡುವದಿಲ್ಲ. ಅಂತೆಯೇ ಗೌಳಿಗರ ಕರು ಕೇಳುತ್ತದೆ – “ಅವ್ವನಿಗೆ ಮೊಲೆ ಇರುವವೇ” ಎಂದು.
*****