ಹಾಸಿಗೆಯೆ ಹರಸಿರುವ ದುಂಡುಮಲ್ಲಿಗೆಯರಳೆ
ಆ ತುಂಬು ಹೆರಳ ಹೆಣ್ಣೆಲ್ಲಿ?
ಬಿಳಿ ದಿಂಬಿನಂಚಿನಲಿ ಗೆರೆ ಬರೆದ ಕಾಡಿಗೆಯೆ,
ಆ ದೀಪದುರಿಯ ಕಣ್ಣೆಲ್ಲಿ?
ಅತ್ತ ಮಂಚದ ಕೆಳಗೆ ಬಿದ್ದ ಕಾಲುಂಗುರವೆ,
ಆ ನವಿಲನಡೆಯ ಹೆಣ್ಣೆಲ್ಲಿ?
ಬೆಳ್ಳಿ ಬಟ್ಟಲಿನೊಳಗೆ ಬಿಟ್ಟೊಂದು ಹನಿ ಹಾಲೆ,
ನೀ ಕಂಡ ನನ್ನ ಕನಸೆಲ್ಲಿ?
ಎದುರು ಹಾಸಿನಮೇಲೆ ತೆರೆದಿಟ್ಟ ವೀಣೆಯನು
ಮಿಡಿದ ಆ ಮಿಂಚು ಬೆರಳೆಲ್ಲಿ?
ತನ್ನ ಹಾಡಿಗೆ ತಾನೆ ಒಲಿದು ತಲೆದೂಗಿರಲು
ಗೋಡೆಯಲಿ ತೊನೆದ ನೆರಳೆಲ್ಲಿ?
ತೆರೆದ ಪೆಟ್ಟಿಗೆ ಇಹುದು ತೆರೆದಂತೆ ; ಬಾಚಣಿಗೆ
ಕನ್ನಡಿಗೆ ಕಥೆಯ ಹೇಳುವುದು;
ಉರಿಯುತ್ತಲೇ ಇಹುದು ದೇವರೆದುರಿಗೆ ಹಣತೆ;
ಮನೆಯೇನೊ ತುಂಬಿದಂತಿಹುದು.
ಮನೆಯೇನೋ ತುಂಬಿದಂತಿಹುದು; ಸುಳ್ಳು! ಇಲ್ಲ!-
ಸಾಕ್ಷಿಗಳ ನಂಬುವಂತಿಲ್ಲ.
ಈ ನೋಟದೊಳನೋವ ದೇವರೊಬ್ಬನೆ ಬಲ್ಲ!
ಗೌರಿ ಮನೆಯೊಳಗೆ ಇಲ್ಲ! –
ತಾಯಿ ಕರೆದರು ಎಂದು, ಹೋಗಿಬರುವೆನು ಎಂದು,
ಸಂಜೆಗೂ ಮುಂದಾಗಿ ಬರುವೆನೆಂದು
ಬೆಳಗಾಗ ನಡೆದವಳು-ಈಗ ತುಂಬಿದ ಇರುಳು-
ಬಂದಿಲ್ಲ. ಈ ಶಿಕ್ಷೆ ಯಾರಿಗೆಂದು?
*****