ಪ್ರೀತಿಯ ಅಣ್ಣನಿಗೆ ಶರಣು ಶರಣಾರ್ಥಿ,
ಬಯಲಲ್ಲಿ ಬಯಲಾಗಿ, ಕೈಲಾಸ ಸೇರಿ ಸುಖವಾಗಿರೋ ನಿನಗೆ ನಮ್ಮ ಭೂಲೋಕದ ಮಂದಿ ಬದಲಾದ ಕಥೆನಾ ಒಂದೀಟು ಹೇಳಿಕೊಂಬಾನ ಅನ್ನಿಸಿದ್ದರಿಂದ ಈ ಪತ್ರ ಸಾಮಿ.
ನೀನು ಬ್ರಾಂಬ್ರಾಗಿ ಹುಟ್ಟಿದರೂ, ವೈದಿಕ ಧರ್ಮದಾಗಿನ ಮೌಢ್ಯ /ಕಂದಾಚಾರ ಪದ್ಧತಿಗಳ್ನ ಇರೋಧಿಸಿ ವೀರಶೈವ ಧರ್ಮವನ್ನು ಸಂಸ್ಥಾಪಿಸಿದ ವೀರ. ಆದರೆ ನೀನು ನೆಟ್ಚು ನೀರೆರದು ಬೆಳಸಿದ ವೀರಶೈವ ಧರ್ಮವೂ ಲಿಂಗಾಯಿತ ಅಂಬೋ ಜಾತಿಫಲವನ್ನೇ ಬಿಡ್ತಲ್ಲಣ್ಣ! ಅದರಾಗೆ ನೂರೆಂಟು ಪಂಗಡ ಅಂತೀನಿ. ಪಂಚಾಚಾರ್ಯದೋರು, ನೋಣಬರು, ಬಣಜಿಗರು, ಸಾದರು, ಲೆಕ್ಕವಿಲ್ಲದೋರು, ಮರಿಜಾತಿಗಳಾಗೋದ್ವು ದೇವ್ರು, ಅದಾತಲ್ಲ ಇದ್ ಕೇಳು, ನೀವು ಶರಣರು, ಮಾದರ ಚನ್ನಯ್ಯ, ಡೋಹರ ಕಕ್ಕಯ್ಯ, ಮೇದಾರ ಕೇತಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಅಂತ ಕಾಯಕದ ಹೆಸರಿನಾಗೆ ಗುರುತಿಸಿದಿರಿ. ಈಗೇನಾತು ? ಕಾಯಕ ಮರೆಯಾತು, ಜಾತಿ ಮಾತ್ರಾ ಉಳ್ಕಂತು. ನೀನು ಕಾವಿ ತೊಡಲಿಲ್ಲ, ಮಠ ಕಟ್ಟಲಿಲ್ಲ, ಆದರೆ ನಿನ್ನೋರು ಅಂತ ಹೇಳ್ಕಂಬೋ ಮಂದಿ ಕಾವಿ ತೊಟ್ಟರು, ದೆವ್ವದಂತ ಮಠ ಕಟ್ಟಿದರು, ಸ್ವಾಮಿಗಳಾದರು. ಹೆಸರಿನ ಮುಂದಾಗಡೆ ‘ಜಗದ್ಗುರು ’ ಅಂಬೋ ಟೈಟ್ಲುನೂ ಹಚ್ಚಿಕ್ಕಂಡರು.
ಸಂಸ್ಕೃತಕ್ಕಿಂತ ಕನ್ನಡ ಭಾಷೆ ಬೊ ಪಸಂದು ಅಂತ ವಚನಗಳ ಮೂಲಕ ತೋರಿಸಿಕೊಟ್ಟ ಮೊದಲ ಕನ್ನಡಾಭಿಮಾನಿ ನೀನು. ನಿನ್ನ ಹೆಸರೇ ಬಂಡವಾಳ ಮಾಡ್ಕೊಂಡು ಬದುಕ್ತಾ ಇರೋ ಮಠಾಧೀಶರು ಮಾತ್ರ ಪ್ರವಚನಕ್ಕೆ ಕುಂತಾಗ ಸಂಸ್ಕೃತ ಶ್ಲೋಕ ಉದುರಿಸ್ದೆ ಉಸಿರೇ ಎತ್ತೊಲ್ಲ ಅಂತೀನಿ. ಅದೆಲ್ಲಾ ಇರ್ಲಿಒತ್ತಟ್ಗೆ ದೇಹವೇ ದೇವಾಲಯ ಅಂದ ನಿನಗೇ ದೇವಸ್ಥಾನ ಕಟ್ಟಿಸಿ ಕೂರಿಸಿಬಿಟ್ಟವರಪಾ! ಎನಗಿಂತ ಕಿರಿಯರಿಲ್ಲ ಅಂತ ನೀನಂದೆ. ಇವರು ಕಿರೀಟ ಇಟ್ಕೊಂಡು, ಮೈಮಾಗೆ ಮಣಗಟ್ಟಲೆ ಬಂಗಾರ ಹೇರೊಂಡು, ಅಡ್ಡ ಪಲ್ಲಕ್ಕಿ, ಉದ್ದ ಪಲ್ಲಕ್ಕಿನಾಗೆ ಮೆರವಣಿಗೆ ಮಾಡ್ಕೊಂಡು ಮೆರೆಯೋದ್ನ ನೀನ್ ನೋಡಬೇಕಪಾ ಬಸಣ್ಣಾ. ಎನಗಿಂತ ಹಿರಿಯರಿಲ್ಲಯ್ಯ ಅಂತಂದು ಎಲಾ ಸೋಮಿಗಳೂ ಪೈಪೋಟಿಗೆ ನಿಂತಾವೆ.. ವೀರಶೈವ ಧರ್ಮ ಸಂಸ್ಥಾಪಕ ನೀನಲ್ಲ ಅಂತ ಒಂದೋಟು ಮಂದಿ, ನೀನೇ ಅಂತ ಒಂದೊಟು ಮಂದಿ ಕಾವಿಗಳು ಕಿತ್ತಾಹೋದನ್ನ ನೀನ್ ನೋಡಬೇಕಪಾ.. ಬಲುನಗ್ತಿ ಇವರಾಟೆ ಅಲ್ಲಣ್ಣ ವಿಶ್ವವಿದ್ಯಾಲಯದ ಪ್ರೊಪೆಸರ್ ಗಳೂ ನಿನ್ನ ಲೈಪ್ ಸಂಶಯ ಶೋಧನಾ ಅಂಬೋ ನೈಫ್ ನಾಗೆ ಪೀಸ್ ಪೀಸ್ ಮಾಡ್ತಾವರೆ ಕಣಣ್ಣ. ನಿಂದು ಮರ್ಡರ್ ಆಗೇತೆ ಅಂತಂದು ಒಂದು ಗುಂಪು. ಇಲ್ಲ ಸಾಯಿಸೈದು ಅಂತ ಮತ್ತೊಂದು ಗುಂಪು. ವಾದವಿವಾದ ಮಾಡ್ತಾ ಪುಸ್ತಕ ಬರ್ದು ಕಾಸುಮಾಡ್ತಾ ಅವರೆ ಕಾಸು. ನಿನ್ನ ಬೈದು ಬರೆದರಂತೂ ಸಖತ್ ಸಂಪಾದ್ನೆ. ಇದ್ಮಾಂಸರ ಕಣ್ಣೆಲ್ಲಾ ಈಗ ನಿನ್ನ ಮ್ಯಾಗೇ ನೀನು ಕೊಲೆಯಾದೋ ಹೆಂಗೋ, ನಿನ್ನ ತತ್ವಗಳ ಕೊಲೆ ಮಾತ್ರ ಡೈಲಿ ನಡದೈತೆ ಸಿವಾ. ಹೊಲಸು ತಿಂಬುವೆವೋನೆ ಹೊಲೆಯ, ಅಂತ ನೀನ್ ಬೈದೆ. ಈಗಂತೂ ಎಲ್ಲರೂ ಹೊಲಸು (ಲಂಚ) ತಿಂಬೋರೆಯಾ – ಕೊಲುವವನೇ ಮಾದಿಗ, ಅಂದೆ ಮಾದಿಗರನ್ನೇ ಕೊಲ್ತಿದ್ದಾರೆ ಬೆತ್ಲೆ ಮೆರವಣಿಗೆ ಮಾಡ್ತಾ ಅವರೆ ಮುಂದುವರಿದ ಮಂದಿ. ವೀರಶೈವ ಧರ್ಮ ಅಂಬೋ ಧರ್ಮವೇ ವೈದಿಕ ಧರ್ಮದ ಡೂಪ್ಲಿಕೇಟ್ ಆಗೋಗಿದೆ ಅಂದ್ರೆ ನೀನ್ ನಂಬಲ್ಲ ಬಿಡು.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಇದಿರ ಅಳಿಯಲು ಬೇಡ, ಅಯ್ಯಯ್ಯೋ ಎಷ್ಟೊಂದು ಬೇಡಗಳಪ್ಪಾ ಮಾರಾಯ. ಹಂಗಾರೆ ನೀನೆ ಬೇಡ ಅಂತು ಮಂದಿ. ಮಜವಾಗಿ ಬದುಕೋಕೆ ಹೋಟೆರ್ಗೆ ನಿನ್ನ ಮಾತು ಮುಳ್ಳಾಗ್ದೆ , ಹೂವಾದೀತೆ ಸಿವಾ. ೧೨ ನೇ ಶತಮಾನದಾಗೇ ನೀನು ಇಂಟರ್ ಕಾಸ್ಟ್ ಮ್ಯಾರೇಜ್ ಮಾಡಿದ ಮಹನೀಯ. ಅದನ್ನ ನಮ್ಮ ಜನ ಒಪ್ಕಂಡು ಜಾರಿಗೆ ತಂದಿದ್ರೆ ಈವತ್ತು ಜಾತಿನೂ ಇಲ್ಲಿರಲಿಲ್ಲ, ಮೀಸಲಾತಿನೂ ಇರ್ತ ಇರ್ಲಿಲ್ಲ. ಮೊನ್ನೆ ಒಬ್ಬಾಕಿ ನಿನ್ನ ವಚನಗಳ ಅಂಕಿತಾನೇ ತಿದ್ದಿ ಕೀಟ್ಲೆ ಮಾಡಿದ್ದು ಕನಸಾಗೆ ಬಂದು ಹಂಗ್ ಮಾಡು, ಅಂತ ನೀನೇ ಹೇಳಿದಂತ್ಯಲಪಾ ? ದಿಟವಾ ! ? ಅದೇನೆ ಇರವಲ್ಲದ್ಯಾಕೆ ಬಸಣ್ಣಾ, ನಿನಗಂತೂ ಭೂಲೋಕದಾಗೆ ಭರ್ಜರಿ ಡಿಮಾಂಡಪ್ಪಾ .. ಮಠಾಧೀಶರಿಗೂ ನೀನು ಬೇಕು ರಾಜಕಾರಣಿಗಳಿಗೂ ಬೇಕು. ವಿಶ್ವವಿದ್ಯಾಲಯಕ್ಕೆ ನಿನ್ನ ಹೆಸರು ಮಡಗೋ ಇಚಾರಾಗೆ ತಗಾದೆ ಎಬ್ಬಿಸಿ ತಮಾಷೆ ನೋಡ್ತಾರೆ.
ಕಾಯಕವೆ ಕೈಲಾಸ ಅಂತ ನೀನಂದ್ರೆ ಕಾಸಿದ್ರೆ ಕೈಲಾಸ ಅಂತಾರೆ. ದಯೆಯೇ ಧರ್ಮದ ಮೂಲವಯ್ಯ ಅಂತ ನೀನಂದ್ರೆ ದಯಾನಾ ದಫನ್ ಮಾಡಿ ಧರ್ಮನಾ ಜಾತಿ ಮಾಡಿಕೊಂಡು ಕುಂತ್ಕಂಬಿಟ್ಟವರೆ ಕಣಣ್ಣಾ, ನೀನೋ ಸಮಾನತೆಗಾಗಿ ಮಂದಿಗೆಲಾ ಲಿಂಗಾ ಕಟ್ದೆ . ಆದ್ರೀಗ ಇಲ್ಲಿ ಅದೇ ಎಡವಟ್ಟಾಗಿ ಹೋಗ್ಯದೆ. ನಿನ್ನ ಡೂಪ್ಲಿಕೇಟ್‌ನಂಗೆ ಆಟ್ಟ್‌ಮಾಡೋ ಜಗದ್ಗುರು ಒಬಾತ ಜಾತಿಗೊಬ್ಬನ್ನ ಹಿಡ್ದು, ಲಿಂಗಕಟ್ಟಿ ಮರಿ ಜಗದ್ಗುರುವನ್ನಾಗಿ ಮಾಡ್ತಾ ಹೊಂಟ್ರೆ ಜಾತಿ ಇನ್ನೆಲ್ಲಿ ಹೋದಾತಪಾ ನನ್ನ ತಂದಿ ? ಇದ್ ಕೇಳಿಲ್ಲಿ ಒಬ್ಬ ಸ್ವಾಮಿ ಯಲಕ್ಷನ್ ಪಬ್ಲಿಸಿಟಿಗೆ ನಿತ್ಯಂಡ್ರೆ ಇನ್ನೊಬ್ಬ ಇಂಥೋನೇ ಎಂ.ಎಲ್.ಎ. ಆಗ್ಲಿ ಓಟು ಹಾಕ್ತಲೆ ಅಂತ ಆಲ್ಡರ್ ಕೊಡ್ತಾನೆ. ಮತ್ತೊಬ್ಬ ರಾಜಕಾರಣಿಗಳ ಭ್ರಷ್ಟಾಚಾರ ಅತಿ ಆಗೋತು ನಾವೇ ಯಲಕ್ಷನ್ನಿಗೆ ನಿತ್ಯಂತೀವಿ ಅಂತೂ ಬೆದರಿಸ್ತಾನೆ ಬಸಣ್ಣಾ ಅಂತೀನಿ. ಸರ್ವಸಂಗ ಪರಿತ್ಯಾಗಿಗಳು ಅಂತಂದು ಅನ್ನೋ ಈ ಸೋಮಿಗಳು ಕಾಯಕ ಮಾಡ್ದೆ ಕಾಣಿಕೆ ವಸೂಲು ಮಾಡ್ತ ಬಡಬಗ್ಗರ ಜಮೀನ್ ಎತ್ತಿಹಾಕ್ತ ಹಂದಿಯಂಗೆ ಮೈ ಬೆಳಸ್ಕಂಡವೆ ಇವಕ್ಕೆ ನಡಿಯೋಕೆ ಕಾಲಾಗೆ ಸತುವೇ ಇಲ್ಲ.. ಕಂಟೆಸ್ಸಾ ಸಾರೇ ಬೇಕು. ಒಬ್ಬ ಫಾರಿನ್ ಸಾಮಿ ಮತ್ತೊಬ್ಬ ಇಲಿಕಾಪ್ಟರ್ ಸಾಮಿ ಇನ್ನೊಬ್ಯಾತ ಕಂಪೀಟರ್ ಸಾಮಿ. ಇವರ್ಗೆಲಾ ಏರ್ ಕಂಡೀಷನ್ನು ಮಿಷನ್ ಮಡಗಿರೋ ಬೆಡ್ ರೂಂ, ಓನಿಡಾ ಟಿವಿ ! ಏನೇನ್ ನೋಡ್ತಾರೋ, ಏನೇನ್ ಮಾಡ್ತಾರೊ ಸಿವನೇ ಬಲ್ಲ. ಮಠದ ತುಂಬಾ ತನ್ನ ಅಣ್ಣ ತಮ್ಮಂದೀರ್ನ ಅಕ್ಕನ ಮಕ್ಕಳ್ನಾ ಇಟ್ಕಂಡು ನೌಕರಿಕೊಟ್ಟು ಸಾಕಿ ಸಲಹೊ ಸಂಸಾರಿ ಸಾಮಿಗೋಳು ಅವರೆ ಕಣಣ್ಣ – ವಿದ್ಯಾದಾನ ಮಾಡ್ತೀವಿ ಅಂತ ಡೆಂಟಲು, ಇಂಜಿನೀಯರಿಂಗ್, ಮೆಡಿಕಲು ಕಾಲೇಜುಗಳ್ನ ಸರ್ಕಾರದ ಮಂತ್ರಿಗಳ ಬಾಲವಸ್ದು ಗಿಟ್ಟಿಸಿ ಲಕ್ಷಗಟ್ಟಲೆ ಡೊನೇಷನ್ ವಸೂಲಿಮಾಡಿ ದಾನದ ಹೆಸರಿನಾಗೆ ವಿದ್ಯೆ ಯಾಪಾರ ಮಾಡಾ ಅವ್ರೆ.. ಸರಳವಾಗಿ ಬದುಕಿ ಸರಳವಾಗಿ ಲಗ್ನ ಆಗಿ ಸರಳವಾಗಿ ಸಂಸಾರಮಾಡಿ ಅಂತಂದು ಉಪದೇಸ ಮಾಡೋ ಇವ್ರು ಮಾತ್ರ ಬೃಹತ್ ಏರ್ ಕಂಡೀಷನ್ ಬಂಗ್ಲೇನೇ ಮಠ ಅಂತ ಕರಿತಾ ಬರಿ ಕಾರ್ನಾಗೇ ಅಡ್ಡಾಡ್ತಾವೆ. ಒಬ್ಬಂಟಿ ಸಾಮಿಗೆ ಯಾಕಪಾ ಆಪಾಟಿ ಬಂಗ್ಲೆ? ಪರ್ಣಕುಟೀರ ಸಾಲ್ದಾ…? ನೂರಾರು ಎಕರೆ ಜಮೀನು ಬೀಳ್‌ಬಿದ್ದದೆ. ಅದ್ನ ನಮ್ಮಂತ ದರಿದ್ರದೋರ್ಗೆ ಯಾಕೆ ಗುಡ್ಲು ಹಾಕ್ಕಂಬಾಕೆ ಹಂಚುಬಾರ್ದು? ಬರಿ ದಲಿತರ ಕೇರಿನಾಗೆ ಪಾದಯಾತ್ರೆ ಮಾಡಿಬಂದು ಜಳಕಮಾಡಿದ್ರಾಗೋತೆ ? ಅದೋಗ್ಲತ್ತ ಮಠದ ಕಸದಾಗೆ ನೂರಾರು ತೊಲಿ ಬೆಳ್ಳಿ ಬಂಗಾರ ಬಿದ್ದವೆ. ಅದನ್ನೆಲಾ ನಮ್ಮ ಬಡದೇಸಕ್ಕಾನ ಕೊಡಬಾರ್ದಾ ನನ್ನಪಾ ಇವುಗೋಳು. ಪಾಪಿ ಸತ್ತು ಪರಾಧೀನ ಅಂಬಂಗೆ ಮಠದಾಗೆ ಸೇರಿಕೊಂಡಿರೋ ಹೆಗ್ಗಣಗಳು ಅಬ್ಬೆಪಾರಿಗಳು, ಅನುಭವಿಸ್ತಾ ಮಠಕ್ಕೆ ‘ಹೆಡ್’ ಆಗಿ ಕುತ್ಕಂಡು ಮಠಾಧೀಶನ್ನೇ ಮೂಲೆಗೆ ತಳ್ಯವೆ ಅಂತೀನಿ. ಹಸಿವು ಅಂದ್ರೇನು, ಅಂತ್ಲೆ ತಿಳಿದ, ಬಿಸಿಲಿಗೆ ಮೈ ಒಡ್ಡಿ ನಯಾಪೈಸೆ ಕೂಡ ದುಡಿಯೋದು ತಿಳೀದ ಇವರೆಲಾ ಕ್ರಾಂತಿ ಬ್ಯಾರೆ ಮಾಡೋಕೆ ಹೊಂಟರಪಾ ಬಸಣ್ಣ. ಇವರಿಂದ ಕ್ರಾಂತಿಯಾಗೋದು ಮಠದ ಮೂಲೆನಾಗಿರೋ ಒನಕೆ ಚಿಗರೋದು ಒಂದೆಯಾ ಬುಡತ್ತ. ಇದೆಲಾ ಕೇಳಿ ನಿನ್ನ ಮನಸ್ಗೆ ಭಾಳ ತ್ರಾಸಾತೇನಪಾ. ನಿನ್ನ ಹೆಸರಿನ ಜಯಂತಿ ಮಾಡ್ಸಿ ನೂರಾರು ಜೋಡಿ ಎತ್ತುಗಳ್ನ ಕಟ್ಟಿ ಮೆರವಣಿಗೆ ಮಾಡ್ಸಿ ವಚನ ಪದುಗಳ್ನ ಹುಡ್ಗೇರ್ತಾವ ಹಾಡ್ಸಿ ಹುಗ್ಗಿಮಾಡ್ಸಿ ಉಂಡುಬಿಟ್ರಾತು ನೋಡಪ್ಪಾ ಬಸಂಜಯಂತಿ. ನೀನೋ ದಿಟಕ್ಕೂ ವಿಶ್ವಮಾನವ ಸಮಾಜ ಸುಧಾಕರ ಅಲ್ಲಲ್ಲ, ಸುಧಾರಕ. ನಿನ್ನನ್ನ ಲಿಂಗಾಯತರೂ ನೆಟ್ಟಗೆ ಅರ್ಥ ಮಾಡಕಂಬಿಲ್ಲ. ಬ್ರಾಂಬ್ರೂ ಅಷ್ಟೆಯಾ. ಇದ್ಯಾಕೆ ಹಿಂಗಂದೆ ಅಂತಿಯಾ ಇಲ್ ಕೇಳು, ಬೇಡ ವಾಲ್ಮೀಕಿನಾ ಬೆಸ್ತ ವ್ಯಾಸನ್ನ ಕ್ಸತ್ರಿಯಾ ವಿಸ್ವಾಮಿತ್ರನ್ನ ಇಂಥೋರ್ನೆಲಾ ಒಪ್ಪಿ ಅಪ್ಪಿಕಂಡು ಔದಾರ್ಯ ತೋರಿದ ಹಾರವಯ್ಯಗಳು ಮಾನವೀಯ ಗುಣಗಳ ಸಾಕಾರರೂಪನಾದ ನಿನ್ನನ್ನ ಇಂವಾ ನಮ್ಮವ, ಇಂವಾ ನಮ್ಮವಾ ಅಂತ ಒಂದಪನಾರ ಹೇಳ್ಕಂದು ಹೆಮ್ಮೆಪಡ್ಲಿಲ್ಲ ನೋಡು-ಇದೆಂತ ಇಚಿತ್ರ ! ನಿನ್ನೋರು ಅಂತ ನೀನಂದ್ಯಂದೋರಿಂದ್ಲೆ ನಿನ್ಗೆ ಭಾಳ ಅನ್ಯಾಯವಾಗೇತಪಾ ಬಸಣ್ಣಾ. ನನ್ನ ಮಾತ್ನಿಂದ ನಿನ್ನ ಮನಸ್ಸಿಗೆ ನೋವಾಗಿದ್ರೆ ಕ್ಷಮಿಸಿಬಿಡು ನನ್ನಪಾ. ಇದೆಲ್ಲಾ ಮನ್ಸಿಗೆ ಹಚ್ಕಬ್ಯಾಡ ಒಂದಪ ಭೂಲೋಕಕ್ಕೆ ಟೂರ್ ಹಾಕ್ಕಂಬಾ.. ಮತ್ತೇನಾರ ಈ ಜನರುನ್ನ ಜಗದ್ಗುರುಗೋಳ್ನ ರಿಪೇರಿ ಮಾಡೋಕಾದೀತೇನೋ ಟ್ರೈಮಾಡು ಅಂಬೋದಷ್ಟೆ ನನ್ನ ಕಳಕಳಿ ಅದೇ ನನ್ನ ಪರಾರ್‌ತನೆ ಕಣಣ್ಣ.
ಶರಣು
ನಿನ್ನ ಅಭಿಮಾನಿ
*****