ಅಪ್ಪ ಹೊರಗಡೆ ಹೋದಾಗ
ಕೋಟು ಬೂಟು ಹಾಕ್ಕೊಂಡು
ಅಪ್ಪನ ಕಪ್ಪನೆ ಕನ್ನಡಕ
ಕಣ್ಣಿಗೆ ಸರಿಯಾಗ್ ಇಟ್ಕೊಂಡು
ನಾನೇ ಅಪ್ಪ ಆಗ್ತೀನಿ
ದಪ್ಪನೆ ದನೀಲಿ ಕೂಗ್ತೀನಿ
ಅಣ್ಣ ಅಕ್ಕ ಎಲ್ಲರಿಗೂ
ಸಖತ್ತು ರೋಪು ಹಾಕ್ತೀನಿ!
ಅಣ್ಣನ್ ಕರೆದು ಕೇಳ್ತೀನಿ:
“ಯಾಕೋ ಸ್ಕೂಲಿಗೆ ಹೋಗ್ಲಿಲ್ಲ?
ತಮ್ಮನ್ ಬಯ್ತೀಯಂತಲ್ಲೋ
ಪೆದ್ದ, ನಾಚಿಕೆ ಆಗೊಲ್ವ?
ನಿನ್ನಲ್ಲಿರೋ ಚೆಂಡನ್ನ
ಬ್ಯಾಟು ಬಳಪ ಗೋಲೀನ
ತೆಪ್ಪಗೆ ಅವ್ನಿಗೆ ಕೊಟ್ಟು ಬಿಡು
ಇಲ್ಲವೆ, ತಿನ್ತೀ ಒದೆಯನ್ನ.”
ಅಕ್ಕನ್ ಕರೆದು ಕೇಳ್ತೀನಿ:
“ಎಲ್ಲಿದ್ದಾನೇ ನಿನ್ ತಮ್ಮ?
ಅಂಥಾ ಮುದ್ದಿನ ಹುಡುಗನ್ನ
ಓದಿಸಿ ದಣಿಸೋದೇನಮ್ಮ,
ಚಿಕ್ಕವನಾದ್ರೂ ಏನ್ ಬುದ್ದಿ
ಅವನ್ಯಾಕ್ ಪಾಠ ಓದ್ಬೇಕು?
ಪಾಠ ಬೇಡ ಅವನನ್ನು
ಆಟಕ್ ಕರ್‍ಕೊಂಡು ಹೋಗ್ಬೇಕು.”
ಅಮ್ಮನ್ ಕರೆದು ಕೇಳ್ತೀನಿ:
“ತಿಂಡಿ ತುಂಬಿದ ಡಬ್ಬಾನ
ಗೂಡಿನ ಒಳಗಡೆ ಮುಚ್ಚಿಟ್ಟು
ಯಾಕೇ ಬೀಗ ಹಾಕ್ತೀಯ?
ತಿಂಡಿ ಇರೋದು ಚಿಕ್ ಮಕ್ಳು
ತಿನ್ನೋದಕ್ಕೇ ಅಲ್ವೇನೇ?
ಮಗೂಗೆ ಎಲ್ಲಾ ಕೊಟ್ಟುಬಿಡೆ
ನಾವ್ ತಿಂದಿದ್ದು ಸಾಲ್ದೇನೇ?”
ಅಜ್ಜೀನ್ ಕರೆದು ಕೇಳ್ತೀನಿ:
“ಯಾಕೇ ಮಗೂನ ಬಯ್ತೀಯ?
ಉಸ್ಮಾನ್ ಜೊತೆಗೆ ಆಡಿದರೆ
ಯಾತಕ್ ಸಿಡಿ ಸಿಡಿ ಮಾಡ್ತೀಯ?
ಬೇರೆ ಜಾತಿ ಆದ್ರೇನು
ಅವನೂ ಮನುಷ್ಯ ಅಲ್ವೇನೆ?
ಜಾತಿ ಮತದ ಭೇದ ಮಾಡೋದ್
ಯಾರೇ ಆದ್ರೂ ಸರಿಯೇನೇ?”
ಅಕ್ಕನ ಪಾಠ ತಪ್ಪತ್ತೆ
ಅಣ್ಣಂಗ್ ಲಾತ ಬೀಳತ್ತೆ!
ಅವನ ಆಟದ ಸಾಮಾನು
ಎಲ್ಲಾ ನಂಗೇ ಸಿಕ್ಕತ್ತೆ!
ಎಲ್ಲಾ ತಿಂಡಿ ಬಾಚ್ಕೊಂಡು
ಅಟ್ಟದ ಮೇಲೆ ಇಟ್ಕೊಂಡು
ಖರಮ್ ಖುರಮ್ ತಿಂತೀನಿ
ಟೀಪೂ ಬಿರ್ಜು ಕರ್‍ಕೊಂಡು!
*****