ಈ ಮಣ್ಣ ಗಡಿಗೆಯೊಳಗೆ ಅಮೃತ ಚಿಂತನ
ಆ ಚಿನ್ನದ ಕುಂಭದೊಳಗೆ ಅಮೇಧ್ಯ ವೇದನ
ಈ ತಿಪ್ಪೆಯೊಳಗಾಡಿ ಬಂತು ರನ್ನ ಮಣಿ
ಆ ಬಿಳಿಮಹಲಿನ ಹೂಹಾಸಿಗೆಯೊಳು
ಉರುಳಾಡಿ ದಣಿಯಿತು ಕಗ್ಗಲ್ಲ ಹರಳು
ಈ ಸೆರೆಗುಡಿದ, ಸೆರಗ ಹಿಡಿದ,
ಭಂಗಿ ಸೇದಿ, ಮಾಂಸ ಭುಂಜಿಸಿದ
ದೇಹದೊಳಗೆ ಹಣ್ಣು-ಕಮಲ ಪತ್ರಬಿಂದು
ಆ ತೀರ್ಥ ಕುಡಿದು ಪ್ರಸಾದಮಾತ್ರವ ತಿಂದು
ಬ್ರಹ್ಮಚರ್ಯವ ನಡೆದು
ಧರ್ಮಧೂಪವಾಸನೆ ಸೇವಿಸಿದ
ರೂಪದೊಳಗೆ ಅತ್ತಿ ಹಣ್ಣು
ಇಗೊ ಬಿಸಿಲಿಗೆಲ್ಲೋ ಮಾಯ ಇಬ್ಬನಿ
ಈ ಚಿಪ್ಪಿನೂಳಗೊಂದಾಣಿಮುತ್ತು
ಈ ಕರಟದೊಳಗೊಳ್ಳೆ ಎಳೆನೀರು
ಆ ಒಪ್ಪವಾದ ಭರಣಿಯಲಿ ಹುಳಿತ ಕಾಳು
ಆ ಬೆಳ್ಳಿ ಬಟ್ಟಲಲಿ
ದೇವರ ತೊಳೆದ ಮುಸುರೆ ನೀರು
ಈ ಸಪ್ಪೆ ಮೊಗದ ಕೆಳಗಡೆ
ಅಖಂಡಾನುಕಂಪದಾನಂದ
ಆ ಸಿಹಿನಗೆಯ ಹಿಂದೆ
ಮಸೆವ ಚೂಪಾದ ಹಲ್ಲು
ಈ ಹಣ್ಣಿನೊಳಗೆ ಭವಿತವ್ಯದ ಬೀಜ
ಆ ಹೂವಿನೊಳಗೆ ಹುಳಹರಿದಾಟ
ಈ ಮುಖವೊಂದು
ಆ ಮುಖವೊಂದು
*****