ಚಿತ್ರದುರ್ಗ ಅಂದರೆ ಜನತೆಯ ಕಂಗಳ ಮುಂದೆ ಮೂಡಿ ಬರುವ ವ್ಯಕ್ತಿಗಳು ಗಂಡುಗಲಿ ಮದಕರಿನಾಯಕ ಮತ್ತು ವೀರವನಿತೆ ಒನಕೆ ಓಬವ್ವ. ಸುಮಾರು ೧೩ ಮಂದಿ ಪಾಳೆಗಾರರು ದುರ್ಗವನ್ನಾಳಿದರೂ ನಾಡಿನ ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿದವರು ಮಾತ್ರ ಇಬ್ಬರೆ. ದುರ್ಗದ ಏಳು ಸುತ್ತಿನ ಕೋಟೆಯನ್ನು ನೋಡಲು ಬಂದವರು ಒನಕೆ ಕಿಂಡಿ ನೋಡದೆ ಹೋಗುವುದೇ ಇಲ್ಲವೆಂದರೆ ಅತಿಶಯೋಕ್ತಿಯಾಗದು. ಮೇಲುದುರ್ಗದಲ್ಲಿ ಒನಕೆ ಕಿಂಡಿಯು ಪಶ್ಚಿಮದ ಕಡೆ ತಗ್ಗಿನಲ್ಲಿದ್ದು, ನಯನಮನೋಹರ ತಾಣವಾಗಿದೆ. ತಣ್ಣೀರು ದೋಣಿಯನ್ನು ದಾಟಿದ ನಂತರ ಬೃಹತ್ ಬಂಡೆಕಲುಗಳ ಚಾವಣಿ ದಾಟಿ ಮುಂದೆ ಸಾಗಿದರೆ ಒಂದಷ್ಟು ಮೆಟ್ಟಲುಗಳು ಎದುರಾಗುತ್ತದೆ. ಪಕ್ಕದಲ್ಲೇ ಓಬವ್ವ ಮನೆಯೆಂದು ಗುರುತಿಸಲಾಗಿರುವ ಕಲ್ಲಿನ ಮನೆ, ಹಲವು ಗಜಗಳ ದೂರದಲ್ಲಿ ಬಂಡೆಗಳಡಿಯ ಕಳ್ಳಗಂಡಿ ಆಸಕ್ತರನ್ನು ರೋಮಾಂಚನ ಗೊಳಿಸುತ್ತದೆ. ಮಳೆಗಾಲದಲ್ಲಿ ನೀರು ಹರಿವುದರಿಂದ ಪ್ರವಾಸಿಗರು ಈ ತಂಪುದಾಣದಲ್ಲೇ ಕೂತು ಇತಿಹಾಸದ ಬಗ್ಗೆ ಕನಸುತಾ ಕನವರಿಸುತಾ ತಂದ ಬುತ್ತಿಯ ಗಂಟುಗಳನ್ನು ಬಿಚ್ಚುವುದುಂಟು. ಓಬವ್ವನ ಒನಕೆ ಕಿಂಡಿ ನೋಡಿದ ನಂತರ ಮತ್ತೇನಿದೆ? ಎಂದು ಬಹುತೇಕ ಪ್ರವಾಸಿಗರು ಬಂದ ದಾರಿ ಹಿಡಿವುದೇ ಹೆಚ್ಚು. ಇಂದಿಗೂ ಪ್ರವಾಸಿಗರನ್ನು ಓಬವ್ವಸೆಳೆವ ಪರಿ ಇಂತದ್ದು.
ಇತಿಹಾಸದಲ್ಲಿ ಇದ್ದಳೋ ಇಲ್ಲವೋ, ಆದರೆ ಈಕೆಯ ಬಗ್ಗೆ ಹಾಡು, ಹಸೆ, ಲಾವಣಿ, ಜಾನಪದ ಗೀತೆಗಳಿವೆ. ಇದೊಂದು ಕಾಲ್ಪನಿಕ ಘಟನೆ. ಸಾಕಷ್ಟು ಸ್ಪಷ್ಟ ಪುರಾವೆಗಳಿಲ್ಲವೆಂದು ಇತಿಹಾಸ ಸಂಶೋಧಕರು ಎಷ್ಟೇ ತುತ್ತೂರಿ ಊದಿದರೂ ದುರ್ಗದವರಿಗೆ ಅವರ ಸಂಶೋಧನೆ ಬಗೆಗೇ ಅನುಮಾನ. ಓಬವ್ವ ಬಗೆಗೆ ಇನ್ನಿಲ್ಲದ ಅಭಿಮಾನ, ಓಬವ್ವಳ ವಂಶಸ್ಥರೆಂದು ದುರ್ಗದ ರುದ್ರೇಶ್ ಪೂಜಾರ್ (ಮಾಜಿ ನಗರಸಭಾ ಸದಸ್ಯರು) ಹೆಮ್ಮೆಯಿಂದ ಬೀಗುತ್ತಿದ್ದರು. ಈಗವರು ದಿವಂಗತರು. ಅಂತೆಯೇ ಮೈಸೂರು ವಾಸಿ ಪ್ರೊ. ಎ.ಡಿ. ಕೃಷ್ಣಯ್ಯ ಸಹ ಈ ರೀತಿಯ ಬೀಗುವುದುಂಟು. ಅದೇನೆ ಆಕೆಯ ವಂಶಸ್ಥರ ಬಗ್ಗೆ ಈವರೆಗೆ ತಲೆ ಕೆಡಿಸಿಕೊಂಡವರಿಲ್ಲ ಓಬವ್ವ ಕೋಟೆಯನ್ನು ರಕ್ಷಿಸಿದ ತಾಯಿ, ಅಷ್ಟೇ ಅಲ್ಪ ದುರ್ಗದವರ ಧೈರ್ಯ, ಸಾಹಸ, ಅಭಿಮಾನ, ಸ್ವಾಭಿಮಾನದ ಸಂಕೇತವೆಂಬುದರಲ್ಲಿ ಎರಡು ಮಾತಿಲ್ಲ.
ಪ್ರೊ.ಎ.ಡಿ. ಕೃಷ್ಣಯ್ಯನವರು ‘ಭಾರತದ ಧೀಮಂತ ಮಹಿಳೆ ಒನಕೆ ಓಬವ್ವ ಎಂದು ಆಕೆಯ ಇತಿಹಾಸ ಸಾರುವ ಪುಟ್ಟ ಪುಸ್ತಕ ಒಂದನ್ನು ಬಹು ಹಿಂದೆಯೇ ಹೊರ ತಂದಿದ್ದಾರೆ. ನಮ್ಮಂತಹ ಬರಹಗಾರರಿಗೆ ಇದೇ ಚಾರಿತ್ರಿಕ ದಾಖಲೆ, ನಾನು ‘ಗಂಡುಗಲಿ ಮದಕರಿ ನಾಯಕ’ ಕಾದಂಬರಿ ಬರೆದಾಗ ಆ ಕಿರು ಪುಸ್ತಕದಲ್ಲಿನ ವಿವರಗಳನ್ನು ಕೃತಜ್ಞತೆಯಿಂದ ಬಳಸಿಕೊಂಡಿದ್ದೇನೆ. ಪ್ರೊ. ಕೃಷ್ಣಯ್ಯ ಸಹ ಹಿಂದೆ ನಡೆದ ಎಂದು ಹೇಳಲಾಗುವ ಘಟನೆಯನ್ನು ತುಲನಾತ್ಮಕವಾಗಿ ವಿವೇಚಿಸದೆ ನಾವು ನೀವೆಲ್ಲಾ ಪ್ರೈಮರಿ ತರಗತಿಯಲ್ಲಿ ಓದಿದ ಓಬವ್ವೆಯ ಪಾಠವನ್ನೇ ಬಳಸಿಕೊಂಡಿದ್ದಾರೆ. ‘ನಾಗರಹಾವು’ ಚಿತ್ರದಲ್ಲಿ ಅಂತೆಯೇ ಚಿತ್ರಿಸಲಾಗಿದೆ. ಓಬವ್ವ ನೂರಾರು ತಲೆಗಳನ್ನು ಒಡೆದದ್ದು ಇತಿಹಾಸವೇ ? ಸ್ಪಷ್ಟ ಪುರಾವೆಗಳಿಲ್ಲವೆಂದು ನಮ್ಮಲ್ಲಿ ಅನುಮಾನಿಸುವ ತಜ್ಞರಿದ್ದಾರೆ. ಅನುಮಾನಿಸುವವರಿಗೆ ತಾಳ ಹಾಕುವಂತೆಯೇ ಜನಜನಿತವಾದ ಆ ಕಥೆಯ ಸಂಕ್ಷಿಪ್ತ ರೂಪ ಹೀಗಿದೆ.
ಓಬವ್ವ ತನ್ನ ಗಂಡ ಮದ್ದಹನುಮಪ್ಪನಿಗೆ ಊಟಕ್ಕಿಟ್ಟು, ಕುಡಿಯಲು ನೀರಿಲ್ಲದಿರುವುದನ್ನು ಗಮನಿಸಿ, ನೀರು ತರಲು ಹೋಗುವಳು. ಆಗ ಕಳ್ಳ ಗಂಡಿಯ ಬಳಿ ಶತ್ರುಗಳ ಸದ್ದು ಕೇಳಿಬರುವುದು. ತಟ್ಟನೆ ಮನೆಗೆ ಹಿಂದಿರುಗಿದ ಓಬವ್ವ ನೆಮ್ಮದಿಯಿಂದ ಊಟ ಮಾಡುತ್ತಿರುವ ಗಂಡನಿಗೆ ವಿಷಯ ತಿಳಿಸಿದರೆ ಊಟ ಮಾಡದೆ ಮಧ್ಯದಲ್ಲೇ ಎದ್ದುಬಿಡುತ್ತಾನೆ. ತನ್ನ ಸತಿಧರ್ಮಕ್ಕೆಲ್ಲಿ ಊನವಾಗುತ್ತದೋ ಎಂದಳುಕಿದ ಆಕೆ, ತಾನೇ ಒನಕೆ ಎತ್ತಿಕೊಂಡು ಹೋಗಿ ಶತ್ರುಗಳ ಸಂಹಾರ ಮಾಡುತ್ತಾಳೆ, ನಂತರ ಎದ್ದು ಬಂದ ಹನುಮಪ್ಪ ರಣದುರ್ಗಿ ಅವತಾರ ತಾಳಿರುವ ಆಕೆಯನ್ನು ಹೆಣವಾಗುತ್ತಿರುವ ಶತ್ರುಗಳನ್ನು ನೋಡಿ ಕಹಳೆ ಊದುತ್ತಾನೆ. ಸೇನೆ ಬರುತ್ತದೆ. ಓಬವ್ವ ಪ್ರಾಣಾರ್ಪಣೆ ಮಾಡುತ್ತಾಳೆ ಇತ್ಯಾದಿ, ಇತ್ಯಾದಿ.
ಹೀಗೇ ಘಟನೆ ನಡೆದಿರಲು ಸಾಧ್ಯವೇ ?
ಇತಿಹಾಸ ಯಾರೂ ನೋಡಿದ್ದಲ್ಲ, ಕೇಳಿದ್ದು.. ಹೀಗೆ ನಡೆದಿರಬಹುದೆಂದು ಪಟ್ಟು ಹಿಡಿದರೆ ಹಲವು ಪ್ರಶ್ನೆಗಳು ಏಳುತ್ತವೆ. ಶತ್ರುಗಳು ಕೋಟೆಗೆ ಲಗ್ಗೆ ಇಟ್ಟಾಗ ಗಂಡನಿಗೆ ವಿಷಯ ತಿಳಿಸದೆ ಸತಿ ಧರ್ಮವನ್ನು ಮೆರೆವುದು ಎಷ್ಟು ಸರಿ ? ಕುಡಿಯಲು ನೀರು ಇಲ್ಲದೆ ಊಟಕ್ಕಿಟ್ಟಳೆ ? ಸತಿ ಧರ್ಮಕ್ಕಿಂತಲೂ ಮಣ್ಣಿನ ಋಣ ಹೆಚ್ಚಲ್ಲವೇ ? ಕೋಟೆಗಿಂತ ಗಂಡನ ಊಟ ಹೆಚ್ಚಾಯಿತೆ ? ಕೋಟೆಯ ರಕ್ಷಣೆ ಮುಖ್ಯವೋ, ಊಟವೇ ಮುಖ್ಯವೋ ? ಇದೆಲ್ಲಾ ಒತ್ತಟ್ಟಿಗಿರಲಿ, ಓಬವ್ವ ನೂರಾರು ಜನಗಳ ತಲೆಯೊಡೆದು ಉರುಳಿಸುವಾಗ ಸಾಯುವವರ ನರಳಾಟ, ಚೀರಾಟ, ಆಕ್ರಂದನ ಹಲವು ಗಜಗಳಷ್ಟೇ (ಪ್ರೋ. ಕೃಷ್ಣಯ್ಯನವರು ತಮ್ಮ ಪುಸ್ತಕದಲ್ಲಿ ಗುರುತಿಸಿರುವ ಓಬವ್ವೆ ಮನೆಯೆಂಬ ಭಾವಚಿತ್ರದ ಪ್ರಕಾರ) ಮನೆಯಲ್ಲಿ ಊಟಕ್ಕೆ ಕೂತ ಹನುಮಪ್ಪನಿಗೆ ಕೇಳಿಸಲಿಲ್ಲವೇ ? ಆತನಿಗೇನು ಕಿವುಡೆ ? ಇದನ್ನು ಕಡೆಗಾಣಿಸಿದರೂ ಮತ್ತೊಂದು ಪ್ರಶ್ನೆ ಕೆಣಕುತ್ತದೆ. ನೂರಾರು ಶತ್ರುಗಳ ತಲೆಯೊಡೆಯುವವರೆಗೂ ಹನುಮಪ್ಪ ಊಟ ಮಾಡುತ್ತಲೇ ಇದ್ದನೆ ? ಇಂತಹ ಅನುಮಾನಗಳು ಕಾಡುವಾಗ ಸಂದುಹೋದ ಘಟನೆಯ ಬಗ್ಗೆಯೇ ಸಂಶಯ ಮೂಡಿಬಿಡುತ್ತದೆ. ಈ ಅನುಮಾನಗಳನ್ನು ನಾನು ಕೃಷ್ಣಯ್ಯನವರಿಗೆ ೧೯೮೧ರಲ್ಲೇ ಕೇಳಿದ್ದುಂಟು. ನಾನೇಕೆ ಹೀಗೆಲ್ಲಾ ಕೇಳಿದೆ, ಅವರೇಕೆ ನನ್ನ ಬಳಿ ಬಂದಿದ್ದರು ಎಂಬುದನ್ನು ಹೇಳ ಹೊರಟರೆ ಅದು ಮತ್ತೊಂದು ಲೇಖನವಾದೀತು. ಆ ಮಾತು ಇರಲಿ. ಪ್ರೊ. ಕೃಷ್ಣಯ್ಯ ಕೂಡ ಇಂತಹ ಪ್ರಶ್ನೆಗಳ ಬಗ್ಗೆ ಅಸಹಾಯಕರೆ, ಅವರಿಗೆ ತೋಚಿದ್ದನ್ನು ಬರೆದಿದ್ದಾರೆ. ಸಿಕ್ಕಷ್ಟು ಐತಿಹಾಸಿಕ ಸಂಗತಿಗಳನ್ನು ದಾಖಲಿಸಿ ಉಪಕರಿಸಿದ್ದಾರೆನ್ನಿ.
ಆದರೆ ಈ ಬಗ್ಗೆ ಎಲ್ಲಾ ಯೋಚಿಸಿ ತಲೆ ಕೆಡಿಸಿಕೊಂಡ ನಾನು ೧೯೮೧ರಲ್ಲೇ ಬರೆದ ‘ಗಂಡುಗಲಿ ಮದಕರಿ ನಾಯಕ’ ಐತಿಹಾಸಿಕ ಕಾದಂಬರಿಯಲ್ಲಿ ಮೇಲ್ಕಂಡ ಪ್ರಕರಣವನ್ನು ತಾರ್ಕಿಕವಾಗಿ ಚಿಂತಿಸಿ ಬೇರೆಯದೇ ರೂಪ ನೀಡಿದ್ದೇನೆ. ಆಕೆಯ ಪಾತ್ರವನ್ನು ಕಾದಂಬರಿಯಲ್ಲಿ ಮೊದಲಿನಿಂದಲೂ ಬೆಳೆಸಿದ್ದೇನೆ. ನಾಯಕನಿಗಿರುವಷ್ಟೇ ಪ್ರಾಶಸ್ತ್ಯ ಓಬವ್ವಗೂ ಇದೆ. ಅದರ ಸಂಕ್ಷಿಪ್ತ ರೂಪ ಹೀಗಿದೆ.
ಓಬವ್ವ ಅಡುಗೆ ಮಾಡಿಟ್ಟ ಕೋಟೆ ಕಾವಲಿಗೆ ಹೋದ ಗಂಡನ ಬರುವಿಕೆಗಾಗಿ ಕಾದಿರುತ್ತಾಳೆ. ಯುದ್ಧದ ದಿನಗಳದು. ಯಾವಾಗ ಬರುವನೋ ನಿರ್ದಿಷ್ಟವಾಗಿ ಹೇಳುವಂತಿಲ್ಲ. ಬೇಸತ್ತ ಆಕೆ ಪಕ್ಕದ ಮನೆಯಿಂದ ತಂದ ಒನಕೆಯನ್ನು ಕೊಟ್ಟು ಬರಲು ಒನಕೆ ಹಿಡಿದು ಸಾಗುತ್ತಾಳೆ. ಕಳ್ಳಗಂಡಿ ಬಳಿ ಸದ್ದು, ಶತ್ರು ನುಸುಳಿ ಬರುವ ಹಿಂಡನ್ನು ಕಂಡು ವೀರಗಚ್ಚೆ ಹಾಕಿ ನಿಂತು ಸದೆ ಬಡಿದು ಹೆಣಗಳ ಬಣವ ಹೊಟ್ಟತ್ತಾಳೆ. ಈ ಸಂಹಾರ ಸಂದರ್ಭದಲ್ಲೆ ಬಂದ ಹನುಮಪ್ಪ ನಿಬ್ಬೆರಗಾಗಿ ಗಾಬರಿಗೊಂಡು ಕಹಳೆ ಊದುತ್ತಾನೆ. ಸೇನೆ ಬರುತ್ತದೆ. ಅಷ್ಟರಲ್ಲಿ ಶತ್ರು ಸೈನಿಕನಿಗೆ ಓಬವ್ವ ಬಲಿಯಾಗುತ್ತಾಳೆ. ಅ೦ದಿನ ಯುದ್ಧದಲ್ಲಿ ಆಕೆಯ ಸಾಹಸದಿಂದಾಗಿ ದುರ್ಗಕ್ಕೆ ಜಯವಾಗುತ್ತದೆ ಇತ್ಯಾದಿ, ಇತ್ಯಾದಿ.
ನಾನು ಚಿತ್ರಿಸಿರುವ ರೀತಿಯ ಬಗ್ಗೆ ಈವರೆಗೆ ಇತಿಹಾಸ ತಜ್ಞರಾಗಲಿ, ದುರ್ಗದವರಾಗಲಿ, ಓದುಗರಾಗಲಿ ಅಪಸ್ವರವೆತ್ತಲಿಲ್ಲ. ಓಬವ್ವ ನೂರು ಜನರ ತಲೆಯೊಡೆದಳೋ, ಮೂರೇ ಜನರ ತಲೆಯೊಡೆದಳೋ, ಅದು ಮುಖ್ಯವಲ್ಲ, ಆಕೆ ತೋರಿದ ಸಮಯಪ್ರಜ್ಞೆ , ದಿಟ್ಟತನ ರಾಜನ ಮೇಲಿನ ಅಭಿಮಾನ, ಗೌರವ, ಕೋಟೆಯ ಮೇಲೆ ಆಕೆಗಿದ್ದ ಪ್ರೀತಿಯ ದ್ಯೋತಕವಲ್ಲವೆ. ಓಬವ್ವ ನಾಯಕರ ಹೆಣ್ಣೆಂದು ಬಹುಕಾಲದವರೆಗೂ ನಂಬಿದ್ದುಂಟು. ಓಬವ್ವ ಚಲವಾದಿಗರ ಹೆಣ್ಣುಮಗಳು. ತವರೂರು ಗುಡೇಕೋಟೆ.
ಇಲ್ಲಿ ಮತ್ತೊಂದು ಹೇಳಬೇಕಿದೆ. ಓಬವ್ವ ಹೋರಾಟದಲ್ಲಿ ಸಾವನ್ನಪ್ಪಲಿಲ್ಲ… ಆ ದುರ್ಘಟನೆಯ ನಂತರ ಬುದ್ಧಿ ಭ್ರಮಣೆಯಾಗಿ ದುರ್ಗದಲ್ಲಿ ಅಲೆಯುತ್ತಿದ್ದಳೆಂದೇ ಕೆಲವು ಇತಿಹಾಸಕಾರರು ಅಭಿಪ್ರಾಯಪಡುವುದುಂಟು. ನಾನು ಕಾದಂಬರಿ ಬರೆದ ವರ್ಷದ ನಂತರ ಮದಕರಿ ನಾಯಕನನ್ನೇ ವಸ್ತುವನ್ನಾಗಿಟ್ಟುಕೊಂಡು ‘ದುರ್ಗಾಸ್ತಮಾನ’ ರಚಿಸಿದ ಹಿರಿಯ ಸಾಹಿತಿ ತ.ರಾ.ಸು. ನನ್ನಂತೆಯೇ ಓಬವ್ವೆಯ ಪ್ರಕರಣವನ್ನು ಚಿತ್ರಿಸಿದ್ದಾರೆ. ಗಂಡನಿಗೆ ಊಟಕ್ಕಿಟ್ಟು ನೀರು ತರಲು ಆಕೆ ಹೋಗುವುದಿಲ್ಲ, ಅಡುಗೆ ಮಾಡಿಟ್ಟು ಮಗುವನ್ನು ಮಲಗಿಸಿ ಗಂಡ ಬರುವುದರೊಳಗೆ ನೀರು ತರೋಣವೆಂದು ಹೋಗುತಾಳೆ. ಕಳ್ಳ ಗಂಡಿಯ ಬಳಿ ಶತ್ರುಗಳ ಸದ್ದು ಕೇಳಿ ಮನೆಗೆ ಹಿಂದಿರುಗಿದ ಆಕೆ ಒನಕೆ ಹಿಡಿದು ಬಂದು ಶತ್ರುಗಳ ಸದೆಬಡಿಯುತ್ತಾಳೆ.
ಚಿತ್ರದುರ್ಗದ ಚರಿತ್ರೆಯಲ್ಲಿ ನಡೆದುಹೋಗಿದೆ ಎಂದು ಬಣ್ಣಿಸಲಾಗುವ ಸದರಿ ಪ್ರಕರಣವನ್ನು ಅನುಮಾನಿಸುವುದಕ್ಕಿಂತ ಅಭಿಮಾನಿಸುವುದು ಹೆಚ್ಚು ಔಚಿತ್ಯವೆನಿಸುತ್ತದೆ.
*****