ಪ್ರಸ್ತಾವನೆ
ನಮ್ಮ ಆಮಂತ್ರಣದ ಮೇರೆಗೆ ಮೈಸೂರ ಪ್ರಾಚ್ಯ ಸಂಶೋಧನ ಇಲಾಖೆಯ ಡಾಯರೆಕ್ಟರರಾದ ಡಾ|| ಎಮ್. ಎಚ್. ಕೃಷ್ಣ ಎಂ. ಎ. ಡಿ. ಲಿಟ್. (ಲಂಡನ್) ಅವರು`ಕರ್ನಾಟಕದ ಪೂರ್ವ ಚರಿತ್ರೆ’ ಎಂಬ ವಿಷಯವಾಗಿ ಸಂಸ್ಥೆಯ ವಾರ್ಷಿಕ ಸಂಶೋಧನೋಪನ್ಯಾಸ ಮಾಲೆಯಲ್ಲಿ ೧೯೪೩ ನೆಯ ಇಸ್ವಿಯಲ್ಲಿ ಭಾಷಣ ಮಾಡಿದರು. ಅವರು ಆಗ ಕೊಟ್ಟ ಮೂರೂ ಉಪನ್ಯಾಸಗಳನ್ನು ಈ ಪುಸ್ತಿಕೆಯಲ್ಲಿ ಪ್ರಕಟಿಸಿದೆ.
ಮೊದಲನೆಯ ವ್ಯಾಖ್ಯಾನದಲ್ಲಿ ದಖ್ಖನ ಕರ್ನಾಬಕದ ಭೌಗೋಲಿಕ ರಚನೆ, ಭಾರತ ಜನಾಂಗಗಳು ಎಂಬ ವಿಷಯಗಳು ಬಂದಿವೆ.
ಎರಡನೆಯ ಉಪನ್ಯಾಸದಲ್ಲಿ ಭಾರತದ ಭಾಷೆ, ಜನಾಂಗಗಳ ಸಂಬಂಧ. ಶಿಲಾಯುಗ-ಲೋಹಯುಗ ಮುಂತಾದವುಗಳ ಕಾಲನಿರ್ದೇಶ, ಕರ್ನಾಟಕದ ಪೂರ್ವ ಚರಿತ್ರೆಯ ನಿವೇಶನ ಇತ್ಯಾದಿ ವಿಚಾರಿಸಿದ್ದಾರೆ.
ಮೂರನೆಯ ವ್ಯಾಖ್ಯಾನದಲ್ಲಿ ವ್ಯಾಖ್ಯಾತರು ಸ್ವತಃ ನಡೆಸಿದ ಚಂದ್ರವಳ್ಳಿಯ ಭೂಶೋಧನೆಯನ್ನು ಕುರಿತು ವಿವರಿಸಿದ್ದಾರೆ. ಅವರು ಹೇಳಬೇಕಾದ ಸಂಗತಿಗಳನ್ನು ಸರಳಶೈಲಿಯಲ್ಲಿ ಇಲ್ಲಿ ಇಟ್ಟುದರಿಂದ ಪ್ರತ್ಯೇಕವಾಗಿ ಅವುಗಳ ವಿಷಯವಾಗಿ ಬರೆಯುವ ಕಾರಣವಿಲ್ಲ.
ಪ್ರಾಚ್ಯ ಸಂಶೋಧನೆಯಲ್ಲಿ ಕನ್ನಡದಲ್ಲಿ ಬರೆದ ಗ್ರಂಥಗಳೇ ಅಪರೂಪ. ಅದರಲ್ಲಿಯೂ ಪ್ರಾಗೈತಿಹಾಸಿಕ ನಿವೇಶನಗಳ ಉತ್ಖನನಗಳಿಂದ ಬೆಳಕಿಗೆ ಬಂದ ವಿಷಯಗಳನ್ನು ತಿಳಕೊಳ್ಳಲು ಸಾಧನಗಳೂ ಇಲ್ಲ. ಈ ಸಂದರ್ಭದಲ್ಲಿ ಡಾ. ಕೃಷ್ಣ ಅವರ ಉಪನ್ಯಾಸಗಳು ಕರ್ನಾಟಕದ ಪೂರ್ವಚರಿತ್ರೆಯನ್ನು ತಿಳಿದುಕೊಳ್ಳಲು ಬಹಳ ಉಪಕಾರಕವಾಗುವವು. ಅವುಗಳ ಜೊತೆಗೆ ಮುಂಬಯಿ, ಮದ್ರಾಸ, ಹೈದರಾಬಾದ ರಾಜ್ಯಗಳ ಕರ್ನಾಟಕ ಭಾಗಗಳ ಭೂಪರಿಶೋಧನೆಯಿಂದ ತಿಳಿದ ವಿಷಯಗಳನ್ನು ಶೇಖರಿಸಿ ಇಡಿಯ ಕರ್ನಾಟಕದ ಪ್ರಾಕ್ ಚರಿತ್ರೆಯನ್ನು ಗೊತ್ತು ಮಾಡಿಕೊಳ್ಳುವದು ಹೆಚ್ಚು ಉಪಯುಕ್ತವಾಗುವದು.
ಕನ್ನಡ ರಿಸರ್ಚ ಇನ್ಸಿಟ್ಯೂಟ
ಧಾರವಾಡ
೩-೧-೧೯೫೩
ಆರ್.ಎಸ್.ಪಂಚಮುಖಿ
ಡಾಯರೆಕ್ಟರ ಆಫ್ ಕನ್ನಡ ರಿಸರ್ಚ
ಸೂಚನೆ – ಈ ಉಪನ್ಯಾಸಗಳು ಅಚ್ಚಾಗುವ ಪೂರ್ವದಲ್ಲಿಯೇ ಡಾ. ಕೃಷ್ಣ ಅವರು ಅಕಾಲಿಕವಾಗಿ ದಿವಂಗತರಾದರೆಂಬುದನ್ನು ತಿಳಿಸಲು ವಿಷಾದವೆನಿಸುತ್ತದೆ.
ಕರ್ಣಾಟಕದ ಜನತೆಯ ಪೂರ್ವಚರಿತ್ರೆ
ಭೂಗೋಳದ ರಚನೆ:- ರ್‍ಯಾಟ್ಜೆಲ್ ಎಂಬ ಮಹನೀಯನು ಮನುಷ್ಯನ ಚರಿತ್ರೆಯು ಆಕಾಶದಲ್ಲಿ ಹುಟ್ಟಿ ಭೂಮಿಗೆ ಇಳಿಯಬೇಕಾಗಿದೆಯೆಂದು ಹೇಳಿದ್ದಾನೆ. ಕರ್ಣಾಟಕದ ಜನರ ಪೂರ್ವ ಚರಿತ್ರೆಯನ್ನು ಬರೆಯುವಾಗ ಲೋಕದಲ್ಲಿರುವ ಮನುಷ್ಯ ಕುಲಗಳ (Races of Man) ಚರಿತ್ರೆಯ ಕೆಲವು ಅಂಶಗಳನ್ನು ನಾವು ತಿಳಿದಿರಬೇಕು. ಈ ವಿಷಯಗಳನ್ನು ತಿಳಿಸುವುದು ಮನುಷ್ಯ ಶಾಸ್ತ್ರವೆಂದು (Anthropology) ಪಾಶ್ಚಾತ್ಯರಲ್ಲಿ ಪ್ರಸಿದ್ದವಾಗಿದೆ. ಮನುಷ್ಯನ ಪ್ರಾಚೀನತೆಯನ್ನು ಅರಿಯ ಬೇಕಾದರೆ ನಾವು ವಾಸಿಸುವ ಭೂಭಾಗದ ಸೃಷ್ಟಿ ವಿಚಾರವನ್ನು ನಾವುಗಳು ಕಲಿಯಬೇಕು. ಈ ಕಾರಣಗಳಿಂದ ಈ ಉಪನ್ಯಾಸದಲ್ಲಿ ಕರ್ಣಾಟಕದ ರಚನೆಯ ವಿಚಾರದಲ್ಲಿ ಒಂದೆರಡು ವಿಷಯಗಳನ್ನೂ ತರುವಾಯ ಮನುಷ್ಯ ಕುಲಗಳ ಉತ್ಪತ್ತಿಯ ವಿಚಾರದಲ್ಲಿ ಅವಶ್ಯಕವಾದ ನಾಲ್ಕು ಮಾತುಗಳನ್ನೂ ಹೇಳಿ, ತರುವಾಯ ಕರ್ಣಾಟಕದ ಜನತೆಯ ಪೂರ್ವ ಚರಿತ್ರೆಯನ್ನು ವಿಮರ್ಶಿಸಬೇಕಾಗಿದೆ.
ಅಂತರಿಕ್ಷದಲ್ಲಿ ತೇಲಾಡುವ ಅನೇಕ ಗೋಳಗಳಲ್ಲಿ ಸಣ್ಣದಾದ ಮತ್ತು ನಿರಂತರವೂ ಉರಿಯುತ್ತಿರುವ ಒಂದು ಗೋಳವು ನಮಗೆ ಸೂರ್ಯನಾಗಿ ಪರಿಣಮಿಸಿರುವುದೆಂದೂ, ಈ ಸೂರ್ಯನ ಸುತ್ತಲೂ ಸುತ್ತುತ್ತಿರುವ ಗ್ರಹಗಳಲ್ಲಿ ನಮಗೆ ವಾಸಸ್ಥಾನವಾಗಿರುವ ಭೂಗೋಳವು ಒಂದೆಂದೂ ಖಗೋಳ ಶಾಸ್ತ್ರಜ್ಞರು ನಿರ್ಧರಿಸಿದ್ದಾರೆ. ಈ ಭೂಮಿಯು ಮೊದಲು ಬರಿಯ ವಾಯುಮಂಡಳವಾಗಿತ್ತೆಂದೂ, ಅನೇಕ ಕಾಲದ ಮೇಲೆ ಈ ವಾಯುವಿನಲ್ಲಿ ತೇಲಾಡುತ್ತಿದ ಜಲಬಿಂದುಗಳು ಒಟ್ಟುಗೂಡಿ ಮಧ್ಯಭಾಗದಲ್ಲಿ ಜಲಗೋಳವು ಹುಟ್ಟಿತೆಂದೂ, ಈ ಜಲಗೋಳದ ಒಳ ಭಾಗದಲ್ಲಿ ಕೇಂದ್ರದ ಸುತ್ತಲೂ ಪರಮಾಣುಗಳು ಒಟ್ಟುಗೂಡಿ ಘನರೂಪದ ಗೋಳವು ಹುಟ್ಟಿತೆಂದೂ ತಿಳಿಯಬಂದಿದೆ. ಒಳಗೆ ಘನಗೋಳ, ಅದರ ಸುತ್ತ ಜಲ ಗೋಳ, ಅದರ ಹೊರಭಾಗದಲ್ಲಿ ವಾಯುಗೋಳ, ಹೀಗೆ ಮೂರು ಭಾಗವುಳ್ಳ ಈ ಭೂಗೋಳವು ಸೂರ್ಯನ ಸುತ್ತ ಒಂದಾವರ್ತಿ ಮುನ್ನೂರರವತ್ತೈದೂ ಕಾಲು ದಿವಸಗಳಲ್ಲಿ ಸುತ್ತುತ್ತದೆಂದೂ, ಇಪ್ಪತ್ತು ನಾಲ್ಕು ಗಂಟೆಗೊಂದಾವರ್ತಿ ತನ್ನ ಅಕ್ಷದ ಮೇಲೆ ತಾನೇ ಬುಗರಿಯಂತೆ ತಿರುಗುತ್ತಲೂ, ಸೂರ್ಯನು ಪ್ರಯಾಣ ಮಾಡುವ ದಿಕ್ಕಿಗೆ ತಾನು ಕೂಡ ಪ್ರಯಾಣ ಮಾಡುತ್ತಲೂ ಇರುತ್ತದೆ. ಹೀಗಿರುವಲ್ಲಿ ಈಗ್ಗೆ ಅನೇಕ ಕೋಟಿ ವರುಷಗಳ ಹಿಂದೆ ಭೂಮಿಯ ಘನಗೋಳದ ಒಂದು ಕಡೆಯಲ್ಲಿ ಭಾರವಾದ ಮತ್ತು ಲೋಹಾದಿಗಳಿ೦ದ ಯುಕ್ತವಾದ ಅತಿ ಘನ ಭಾಗವೊಂದು ಕೇಂದ್ರದಿಂದ ಸಡಲಿ ಘನಗೋಳವನ್ನು ಹರಿದು, ಜಲಗೋಳ, ವಾಯುಗೋಳಗಳನ್ನು ದೂರಿ ಭೂಮಿಯು ತನ್ನ ಅಕ್ಷಾಂಶದ ಮೇಲೆ ತಾನೇ ಸುತ್ತುವ ವೇಗದಿಂದ ಹೊರಕ್ಕೆ ಒಗೆಯಲ್ಪಟ್ಟಿತು. ಇದು ಸುಮಾರು ಭೂಮಿಯಲ್ಲಿ ಐವತ್ತರಲ್ಲೊಂದು ಪಾಲಷ್ಟಿತ್ತು. ಹೊರಕ್ಕೆ ಚಿಮ್ಮಿದ ಈ ಘನಭಾಗವು ಚದ್ರಮಂಡಲವಾಗಿ ಪರಿಣಮಿಸಿ ಭೂಮಿಯ ಸುತ್ತ ಬಳಸುತ್ತಿದೆ. ಹೀಗೆ ಚಂದ್ರಬಿಂಬವು ಭೂಮಿಯ ಬಸುರಿನಿಂದ ಹುಟ್ಟಿದುದರಿಂದ ಅದನ್ನು ಭೂಮಿಯ ಮಗನೆಂದು ಕೆಲವರೂ, ಜಲಗೋಳದ ಮೂಲಕ ಹಾರಿಬಂದುದರಿಂದ ಸಮುದ್ರದ ಕುಮಾರನೆಂದು ಕೆಲವರೂ ಹೇಳುವ ವಾಡಿಕೆಯುಂಟ.
ಲಿಮುರಿಯ:- ಭೂಮಿಯ ಉದರದಿಂದ ಚಂದ್ರನು ಜಿಗಿದ ಭಾಗವು ಡೊಗರುಬಿದ್ದು ದೊಡ್ಡ ಹಳ್ಳವಾಯಿತು. ಜಲಗೋಳದ ನೀರು ಹರಿದುಬಂದು ಈ ಹಳ್ಳಕ್ಕೆ ತುಂಬಿಕೊಂಡಿತು. ಈ ದೊಡ್ಡ ಹಳ್ಳವೇ ಈಗಿನ ಪೆಸಿಫಿಕ್ ಸಾಗರ. ಪೆಸಿಫಿಕ್ ಸಾಗರದ ಕಡೆಯಿಂದ ಚ೦ದ್ರನು ಜಿಗಿಯಲಾಗಿ ಅದಕ್ಕೆ ಬದಲು ಭೂಮಿಯ ಹಿಂಭಾಗದಲ್ಲಿ ಈಗಿನ ಹಿಂದೂಸಾಗರ ಆಫ್ರಿಕಗಳು ಇರುವ ಕಡೆಗಳಲ್ಲಿ ಭೂಗೋಳವು ಉಬ್ಬಿ ನೀರಿನಿಂದ ಮೇಲಕ್ಕೆ ಎದ್ದಿತು. ಪೆಸಿಫಿಕ್ ಸಾಗರಕ್ಕೆ ನೀರು ಹರಿದು ಹೋದುದರಿಂದ ಈ ಉಬ್ಬಿದ ಭೂ ಭಾಗವು ಮತ್ತಷ್ಟು ವಿಸ್ತಾರವಾಗಿ ಈಗಿನ ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ ಮತ್ತು ಭಾರತದ ದಖನ್ ಪ್ರಾಂತ್ಯ ಇವುಗಳನ್ನು ಒಳಗೊಂಡ ಒಂದು ದೊಡ್ಡ ಭೂಖಂಡವಾಯಿತು. ಈ ಖಂಡಕ್ಕೆ ಭೂಗರ್ಭಶಾಸ್ತ್ರಜ್ಞರು ಲಿಮುರಿಯ ಎಂಬ ಹೆಸರನ್ನಿಟ್ಟಿದ್ದಾರೆ. ಇದರ ಮೇಲೆ ಬಹು ಕಾಲಾನಂತರ ಅಳಲಿಗೂ ಕಪಿಗೂ ಮಧ್ಯರೂಪವುಳ್ಳ ಲೀಮರ್ ಎಂಬ ಶಾಖಾಮೃಗಗಳು ಹೇರಳವಾಗಿ ಜೀವಿಸುತ್ತಿದುವಂತೆ. ಅನೇಕ ಕೋಟಿ ವರ್ಷಗಳ ನಂತರ ಈ ಲಿಮುರಿಯ ಖಂಡದ ಮಧ್ಯಭಾಗವು ಹಳ್ಳ ಬಿದ್ದು ತಗ್ಗಿ ಹೋಯಿತು. ಈ ತಗ್ಗಿನೊಳಕ್ಕೆ ಮತ್ತೆ ಜಲಗೋಳದ ನೀರು ಬಂದು ಸೇರಿ ಈಗಿನ ಹಿಂದೂ ಮಹಾಸಾಗರ ವಾಯಿತು. ಲಿಮುರಿಯದ ತುದಿಗಳು ಮಾತ್ರ ಪೂರ್ವಕ್ಕೆ ಆಸ್ಟ್ರೇಲಿಯವಾಗಿಯೂ, `ಪಶ್ಚಿಮಕ್ಕೆ ಆಫ್ರಿಕವಾಗಿಯೂ, ಉತ್ತರಕ್ಕೆ ನಮ್ಮ ಕರ್ಣಾಟಕ್ಕೆ ಆಶ್ರಯ ಸ್ಥಾನವಾಗಿರುವ ದಖನ್ ದಿಣ್ಣೆಯಾಗಿಯೂ ಪರಿಣಮಿಸಿದುವು.
ಭಾರತದ ಭೂಭಾಗಗಳು:- ಭೂಲಕ್ಷಣವನ್ನು ಅನುಸರಿಸಿ ನಮ್ಮ ಭಾರತವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಅತ್ಯಂತ ಪ್ರಾಚೀನವಾದುದು ದಕ್ಷಿಣದ ದಿಣ್ಣೆ, ಇದರ ತರುವಾಯ ಹುಟ್ಟಿದುದು ಹಿಮಾಚಲದಿಂದಲೂ, ಮಧ್ಯ ಏಷ್ಯದ ದಿಣ್ಣೆಯಿಂದಲೂ ಕೂಡಿದ ಪರ್ವತ ಪ್ರಾಂತ್ಯ, ಕಟ್ಟ ಕಡೆಯಲ್ಲಿ ಹುಟ್ಟಿದ ಕಿರಿಯ ಕೂಸುಗಳು ಉತ್ತರ ದೇಶದ ಬಯಲು ಮತ್ತು ದ್ರಾವಿಡದ ಬಯಲು. ಇವುಗಳಲ್ಲಿ ನಮಗೆ ಪ್ರಕೃತವಾದ ದಖನ್ನಿನ ವಿವರಣೆಯನ್ನು ಮುಂದೆ ವಿಮರ್ಶಿಸುತ್ತೇನೆ.
ಹಿಮಾಚಲದ ರಚನೆ:- ದಖನ್ನಿನ ದಿಣ್ಣೆಗಳೊಡನೆ ಹೋಲಿಸಿದರೆ ಹಿಮಾಚಲ ಪ್ರಾಂತ್ಯವು ವಯಸ್ಸಿನಲ್ಲಿ ಕಿರಿಯದು. ಲಿಮುರಿಯದ ಮಧ್ಯಭಾಗವು ಸಮುದ್ರದೊಳಗೆ ಮುಳುಗಿ ಅದರ ಉತ್ತರ ಮೂಲೆಯು ದಖನ್ನಿನ ರೂಪದಲ್ಲಿ ಹಿಂದೂಸಾಗರದ ಒಂದು ದೊಡ್ಡ ದ್ವೀಪವಾಗಿ ಕಾಣಬರುತ್ತಿದ್ದ ಕಾಲದಲ್ಲಿ ಅದರ ಉತ್ತರಕ್ಕೆ ಮಹಾಸಾಗರವು ಹರಡಿಕೊಂಡಿತ್ತೇ ಹೊರತು ಆ ಕಡೆಗೆ ಭೂ ಪ್ರದೇಶವೇ ಇರಲಿಲ್ಲ. ಹೀಗೆ ಅನೇಕ ಕಾಲವಾದಮೇಲೆ ಮಧ್ಯ ಏಷ್ಯದ ದಿಣ್ಣೆಯು ಸಮುದ್ರದಿಂದ ಮೇಲಕ್ಕೆ ತಲೆ ಎತ್ತಿತು. ಆಗ ಟಿಬೆಟ್, ಪಾಮಿರ್, ತುರ್ಕಿಸ್ಥಾನ್ ಮೊದಲಾದ ಭಾಗಗಳು ನೀರಿನಿಂದ ಹೊರಗೆ ಕಾಣಬಂದುವು. ಹೀಗೆ ಉತ್ತರದ ಧರಣಿಯ ಉದ್ದರಣವು ನಡೆಯುತ್ತಿದ್ದ ಕಾಲದಲ್ಲಿ ಯಾವುದೋ ಕಾರಣದಿಂದ ಭೂಗರ್ಭದ ಘನಗೋಳವು ಸಂಕುಚಿತವಾಗಿ ಮಡಿಕೆಗಳು ಎದ್ದವು. ಈ ಮಡಿಕೆಗಳು ಅಮೇರಿಕದಲ್ಲಿ ಉತ್ತರದಿಂದ ದಕ್ಷಿಣಕ್ಕೆ ರಾಕೀಸ್, ಆಂಡೀಸ್ ಪರ್ವತ ಶ್ರೇಣಿಗಳಾಗಿಯೂ, ಪೂರ್ವಾರ್ಧಗೋಳದಲ್ಲಿ ಯೂರೋಪಿನ ಪಿರನೀಸ್ ಮತ್ತು ಆಲ್ಪ್ಸ್, ಆಫ್ರಿಕದ ಅಟ್ಲಾಸ್, ಪಶ್ಚಿಮ ಏಷ್ಯದ ಟಾರಸ್, ಪಾಂಟಿಕ್, ಕಾಕಸಸ್, ಪೂರ್ವ ಏಷ್ಯದ ಯಾಬ್ಲೊನಾಯ್, ಸ್ಟಾನೋವಾಯ್ ಮತ್ತು ಮಧ್ಯ ಏಷ್ಯದ ಆಲ್ಟಾಯ್, ಹಿಂದೂ ಕುಷ್ ಮತ್ತು ಹಿಮಾಚಲ ಪರ್ವತಗಳಾಗಿಯೂ ಎದ್ದು ನಿಂತುವು. ಈ ಮಡಿಕೆಗಳು ಉಭಯ ಪಕ್ಷದಲ್ಲಿಯೂ ಭಾರದ ಮಧ್ಯೆ ಸಿಲುಕಿ ಮೇಲು ಮೇಲಕ್ಕೆ ಏಳುತ್ತಬಂದವು. ಹಿಮಾಚಲವು ಪ್ರತಿ ವರ್ಷಕ್ಕೆ ಹಲವು ಅಡಿಗಳು ಈಗಲೂ ಮೇಲಕ್ಕೆ ಏಳುತ್ತಿದೆಯೆಂದು ಶಾಸ್ತ್ರಜ್ಞರು ಊಹಿಸುತ್ತಾರೆ. ಈ ಪ್ರಾಂತ್ಯವು ಸಮುದ್ರದ ಕೆಳಗೆ ಇದ್ದಾಗ ಇದರ ಮೇಲೆ ತೆವಳುತ್ತಿದ್ದ ಜಲಚರಗಳು ಸುಣ್ಣದಿಂದ ಕಟ್ಟಿದ ಲಕ್ಷೋಪಲಕ್ಷವಾದ ಗೂಡುಗಳನ್ನು ಹಿಮಾಚಲದಲ್ಲಿ ಹುಟ್ಟಿದ ನದಿಗಳು ಉರುಳಿಸಿ ನುಣ್ಣಗೆ ಮಾಡಿ ತಗ್ಗು ಭೂಮಿಗೆ ತಂದು ತಳ್ಳುತ್ತಿವೆ. ಇವುಗಳೇ ಹಿಂದುಗಳಲ್ಲಿ ಪೂಜೆಗೆ ಉಪಯುಕ್ತವಾದ ಸಾಲಿಗ್ರಾಮಗಳು.
ಉತ್ತರ ಭಾರತದ ಸೃಷ್ಟಿ:- ದಖನ್ನಿನ ದಿಣ್ಣೆಯ ಲಕ್ಷಾಂತರ ವರ್ಷಗಳ ವರೆಗೆ ಎದುರುಬದುರಿಗೆ ನಿಂತಿರುವ ಕಾಲದಲ್ಲಿ ಇವುಗಳ ನಡುವೆ ಹಿಂದೂ ಮಹಾಸಾಗರಕ್ಕೆ ಉತ್ತರಭಾಗವಾದ ಸಮುದ್ರವೊ೦ದು ಹರಡಿಕೊಂಡಿತ್ತು. ಈ ಸಾಗರದಲ್ಲಿ ಬಿಸಿಲಿನಿಂದ ಎಬ್ಬಿಸಲ್ಪಟ್ಟ ಹವೆಯು ಮೇಘರೂಪದಲ್ಲಿ ಹಿಮಾಚಲಕ್ಕೆ ಬಡಿದು ಸಾವಿರಾರು ಗಿರಿನಿರ್ಝರಗಳಾಗಿ ಪ್ರವಹಿಸಿ ಹಿಮಾಚಲದ ದಿಣ್ಣೆಯನ್ನು ಕರಗಿಸುತ್ತ ಬಂತು. ಈ ಹೊಳೆಗಳಿಂದ ಒಯ್ಯಲ್ಪಟ್ಟ ಮಣ್ಣು ಸಮುದ್ರದೊಳಕ್ಕೆ ಬಿದ್ದು ನೀರನ್ನು ಹಿಮ್ಮೆಟ್ಟಿಸುತ್ತ ಬರಲು ಕಾಲಕ್ರಮದಲ್ಲಿ ಉತ್ತರ ದೇಶದ ಬಯಲು ಸೃಷ್ಟಿಯಾಯಿತು. ದಖನ್ನಿನ ಉತ್ತರಭಾಗವಾದ ಮಾಳವದ ದಿಣ್ಣೆಯಿಂದಲೂ ಮಣ್ಣು ಕೊಚ್ಚಿ ಬಂದಿತು. ಈ ಉತ್ತರ ದಕ್ಷಿಣದ ಭೂಶಿರಗಳು ಈಗಿನ ದೆಹಲಿ ಪ್ರಾಂತ್ಯದಲ್ಲಿ ಒಟ್ಟುಗೂಡಿ ಪಶ್ಚಿಮಕ್ಕೆ ಸಿಂಧೂ ತೀರ ಪ್ರಾಂತ್ಯವಾಗಿಯೂ ಪೂರ್ವಕ್ಕೆ ಗಂಗಾತೀರ ಪ್ರಾಂತ್ಯವಾಗಿ ಬೆಳೆಯುತ್ತ ಬಂದುವು. ಹೀಗೆ ಲಕ್ಷಾಂತರ ವರ್ಷಗಳು ನಡೆಯಲು ಗಂಗಾ, ಸಿಂಧೂ ಪಾತ್ರಗಳನ್ನು ಒಳಗೊಂಡ ಈಗಿನ ಉತ್ತರ ದೇಶದ ಬಯಲು ಸೃಷ್ಟಿಯಾಯಿತು. ಈ ಬಯಲಿನಲ್ಲಿ ಶಿಲಾಭಾಗವೇ ಕಾಣಬರುವದಿಲ್ಲ. ಎಲ್ಲವೂ ಜಲೋಧೃತವಾದ ಹಾಕುಮಣ್ಣು. ಈ ಮಣ್ಣಿನ ಆಳವು ಬಹಳ ಕಡಮೆಯಾಗಿರುವೆಡೆಯಲ್ಲಿ ಆರು ನೂರು ಅಡಿಗಳಷ್ಟಾದರೂ ಇರುವುದು. ಇದರ ಮಧ್ಯದಲ್ಲಿ ಹಿಮಾಚಲದಲ್ಲಿ ಕರಗಿದ ಹಿಮದಿಂದಲೂ ಮಾಳವದಲ್ಲಿ ಬಿದ್ದ ಮಳೆಯಿಂದಲೂ ಹೊರಟ ನೀರು ನೂರಾರು ನದಿಗಳ ರೂಪದಲ್ಲಿ ಹರಿಹರಿದು ಸಮತಟಗಳ ಮಧ್ಯದಲ್ಲಿ ಮೆಲ್ಲಗೆ ಪ್ರವಹಿಸುತ್ತ ಪೂರ್ವ ಪಶ್ಚಿಮ ಸಮುದ್ರಗಳಿಗೆ ಹೋಗಿ ಸೇರುತ್ತವೆ. ನೆಲದ ಒಳಭಾಗದಲ್ಲಿ ಎಲ್ಲೆಲ್ಲಿಯೂ ನೀರು ಜಿನುಗುತ್ತದೆ. ಈ ದೊಡ್ಡ ಬಯಲಿನಲ್ಲಿ ನೀರೂ ಮಣ್ಣೂ ಹೇರಳವಾಗಿರುವುದರಿಂದ ಸಸ್ಯಗಳೂ, ಪ್ರಾಣಿಗಳೂ, ಜನ ಕುಲಗಳೂ ನಿಬಿಡವಾಗಿ ವಾಸಿಸುತ್ತವೆ.
ದಕ್ಷಿಣದ ತೀರಗಳು:- ದಖನ್ ದಿಣ್ಣೆಯಲ್ಲಿ ಬಿದ್ದ ಮಳೆಯು ಮಣ್ಣಿನ ಕಣಗಳನ್ನು ಒಯ್ಯುತ್ತ ಪೂರ್ವ ಪಶ್ಚಿಮದ ತೀರ ಪ್ರದೇಶಗಳನ್ನು ಕಟ್ಟಿತು. ಇವುಗಳ ಗುಣಲಕ್ಷಣಗಳು ಗಂಗಾತೀರದಂತೆಯೇ ಇವೆ. ಆದರೆ ಪಶ್ಚಿಮ ತೀರದಲ್ಲಿ ಮಣ್ಣನ್ನು ಒಯ್ಯುವ ನದಿಗಳಿಗೂ ನಿರಂತರ ಮಾರುತಗಳಿಂದ ಬಡಿದು ಎಬ್ಬಿಸಲ್ಪಟ್ಟ ಸಮುದ್ರಕ್ಕೂ ಘೋರ ಯುದ್ಧವು ಆರಂಭವಾಯಿತು. ಸ್ವಲ್ಪ ದೂರದ ಮಟ್ಟಿಗೆ ನದಿಗಳಿಗೆ ಜಯವಾಗಿ ಸಮುದ್ರವು ಹಿಂದಕ್ಕೆ ತಳ್ಳಲ್ಪಟ್ಟು ಕುಮಾರೀ ಮೂಲೆಯಿಂದ ಕಾಠೇವಾಡದ ವರೆಗೂ ಹಬ್ಬಿರುವ ಕೊಂಕಣಪ್ರಾಂತವು ಹುಟ್ಟಿತು. ಈ ಶಿಶುವಿನ ಬೆಳವಣಿಗೆಯು ಬಲು ನಿಧಾನವಾಯ್ತು. ಪೂರ್ವ ತೀರದಲ್ಲಾದರೋ ರಾಕ್ಷಸಬಲವುಳ್ಳ ನೈರುತ್ಯ ಮಾರುತದ ಹೊಡೆತವಿಲ್ಲದಿರುವುದರಿಂದ ತಮಿಳು ಮತ್ತು ತೆಲಗು ದೇಶದ ತೀರ ಪ್ರದೇಶಗಳು ಹುಟ್ಟಿಕೊಂಡು ಕ್ರಮೇಣ ವೃದ್ಧಿಯಾದುವು.
ವಿಂಧ್ಯಾದ್ರಿಯ ರಚನೆ:- ಹಿಮಾಚಲದ ದಕ್ಷಿಣಕ್ಕಿರುವ ಭಾರತದ ಕೆಳಗಡೆ ಬುಡದಲ್ಲಿ ಭೂಮಿಯ ಘನಗೋಳಕ್ಕೆ ಸಹಜವಾದ ಕಲ್ಲುಬಂಡೆಗಳ ಪದರವೊಂದು ಹರಡಿಕೊಂಡಿದೆ. ಘನಗೋಳವು ಸಂಕುಚಿತವಾದ ಕಾಲದಲ್ಲಿ ಈ ಬಂಡೆಯ ಪದರವು ಮೂರು ಭಾಗವಾಗಿ ಒಡೆದು ಅವುಗಳಲ್ಲಿ ಮಧ್ಯ ಭಾಗವು ಉತ್ತರ ದೇಶದ ಬಯಲಿನ ಬುಡದಲ್ಲಿ ಸಾವಿರಾರು ಗಜಗಳ ಕೆಳಗೆ ಸಿಕ್ಕಿ ಹೋಗಿದೆ. ಅದರ ಮೇಲೆ ಮಣ್ಣು ಬಿದ್ದು ಎರಡು ಮೂರು ಮೈಲಿಗಳ ದಪ್ಪವಾಗಿ ಉದ್ದಕ್ಕೂ ಹರಡಿ ಸಿಂಧೂ ಗಂಗಾ ನದಿಗಳ ಬಯಲಾಗಿದೆ ಈ ಉತ್ತರದ ಬಂಡೆಯ ಪದರವು ದಖನ್ನಿನ ಬಂಡೆಯಿಂದ ಓಡೆದು ಪ್ರತ್ಯೇಕಿಸಿದಾಗ ಹುಟ್ಟಿದ ಬಿರುಕುಗಳೇ ನರ್ಮದಾ, ತಪತಿ ನದಿಗಳ ಪಾತ್ರಗಳಾಗಿಯೂ, ಈ ಪದರಗಳ ಸಂಘಟನದಿಂದ ಚಿಮ್ಮಿ ಎಬ್ಬಿಸಲ್ಪಟ್ಟ ಮಡಿಕೆಗಳೇ ವಿಂಧ್ಯ ಮತ್ತು ಸಾತ್ಪುರ ಪರ್ವತಗಳಾಗಿಯೂ ಪರಿಣಮಿಸಿವೆ.
ದಖನ್ ದಿಣ್ಣೆ:- ಈ ವಿಂಧ್ಯಾದ್ರಿಗೆ ದಕ್ಷಿಣದಲ್ಲಿ ತ್ರಿಕೋಣಾಕಾರವಾಗಿ ಹರಡಿಕೊಂಡಿರುವ ದಖನ್ ಅಥವಾ ದಕ್ಷಿಣದ ದಿಣ್ಣೆ ಸಹ್ಯಗಿರಿ ಮತ್ತು ಮಹೇಂದ್ರ ಗಿರಿಗಳ ನಡುವೆ ಉಬ್ಬೆದ್ದು ನೀಲಗಿರಿಯ ವರೆಗೂ ವ್ಯಾಪಿಸಿದೆ. ಸಹ್ಯಗಿರಿಯ ಪರ್ವತಶ್ರೇಣಿಯು ನೀಲಗಿರಿ ಯಿಂದ ದಕ್ಷಿಣ ವ್ಯಾಪಿಸಿ ಮಲಯ ಪರ್ವತದ ಮೂಲಕವಾಗಿ ಕನ್ಯಾಕುಮಾರಿ ಭೂಶಿರದ ಮೇರೆಗೂ ಚಾಚಿಕೊಂಡಿದೆ. ಹೀಗೆ ನಮ್ಮ ಕರ್ಣಾಟಕಕ್ಕೆ ಆಧಾರಸ್ಥಾನವಾದ ದಖನ್ ದಿಣ್ಣೆಯ ಬಂಡೆಯ ಬುಡವು ಈ ಭೂಮಿಯ ಘನಗೋಳದ ಬ೦ಡೆಗಳ ಪದರಗಳಲ್ಲಿ ಅತ್ಯಂತ ಪ್ರಾಚೀನಭಾಗವಾಗಿದಯೆಂದು ಭೂಗರ್ಭಶಾಸ್ತ್ರಜ್ಞರು ಸಿದ್ದಾ೦ತ ಮಾಡಿದ್ದಾರೆ. ಕೋಟ್ಯಂತರ ವರ್ಷಗಳ ಕೆಳಗೆ ಈಗಿನ ದಖನ್ನಿನ ಮೇಲೆ ಸುಮಾರು ಆರೇಳು ಮೈಲಿಗಳ ಎತ್ತರ ಹಸಿಮಣ್ಣು ಪದರಪದರವಾಗಿ ಬಿದ್ದಿತಂತೆ. ಈ ಮಣ್ಣು ಬಿಸಿಲಿನಿಂದಲೂ, ಗಾಳಿ ಯಿಂದಲೂ ಕೆದರಿ, ಮಳೆಯಿಂದ ಕೊಚ್ಚಿ ಕರಗಿಹೋಯಿತು. ಕಡೆಗೆ ಈ ದಿಣ್ಣೆಯ ಪೂರ್ವ ಭಾಗದಲ್ಲಿ ಮತ್ತು ಆಗ್ನೇಯ ಭಾಗದಲ್ಲಿ ಬುಡದಲ್ಲಿದ್ದ ಕಲ್ಲಿನ ಬಂಡೆಗಳು ಕೂಡ ಕ್ಷಾಮ ಪೀಡಿತರ ಬೆನ್ನು ಮೂಳೆಗಳಂತೆ ಕಾಣಹತ್ತಿವೆ. ಈ ದಿಣ್ಣೆಯ ಪಶ್ಚಿಮ ಮತ್ತು ಉತ್ತರಭಾಗಗಳಲ್ಲಿ ಬಹುಕಾಲದ ಕೆಳಗೆ ಅಗ್ನಿ ಪರ್ವತಗಳ ಸಾಲು ವಿಶೇಷವಾಗಿದ್ದಂತೆ ತೋರುತ್ತದೆ. ಈ ಅಗ್ನಿ ಪರ್ವತಗಳ ಮುಖಗಳಿಂದ ಉಗಿದುಬಂದ ಕಲ್ಲಿನ ನೀರು ಬುಡದ ಬಂಡೆಯ ಮೇಲೆ ಪದರ ಪದರವಾಗಿ ನಿಂತು ಕ್ರಮೇಣ ಘನೀಭೂತವಾಗಿ ಈಗಿನ ಸಹ್ಯ ಪರ್ವತಗಳ ರೂಪವನ್ನು ಪಡೆಯಿತು. ಇದರಿಂದಲೇ ಈ ದಖನ್ ದಿಣ್ಣೆಯ ಉತ್ತರಭಾಗದಲ್ಲಿಯ ಬೆಟ್ಟಗಳು ಒಂದರ ಮೇಲೊಂದು ಪೇರಿಸಿದ ಪರ್ವತಗಳಂತೆ ಕಾಣಬರುತ್ತದೆ. ಈ ಪದರ ಕಲ್ಲಿನ ಪರ್ವತಗಳ ಮೇಲೆ ಹಳೆಯ ನೀರು ಬಿದ್ದ ಹಾಗೆಲ್ಲಾ, ಬಿಸಿಲು ಬಡಿದಹಾಗೆಲ್ಲಾ ಅವು ಕರಗಿ ಹುಡಿಮಣ್ಣಾಗಿ ಪಶ್ಚಿಮ ಮತ್ತು ಉತ್ತರ ದಖನ್ನಿನ ಬಂಡೆಯ ಮೇಲೆ ಹರಡಿಕೊಂಡುವು. ಹೀಗೆ ಅಗ್ನಿ ಪರ್ವತಗಳ ಮೂಲಕ ಹುಟ್ಟಿದ ಭೂಮಿಯೇ ದಖನ್ನಿನ ಕರೀ ಭೂಮಿ.
ಕರುನಾಡು, ಕರೀನಾಡು:- ಮೇಲೆ ಹೇಳಿದಂತೆ ಸೃಷ್ಟಿಯಾದ ದಖನ್ ದಿಣ್ಣೆಯು ಸುತ್ತಮುತ್ತಲಿನ ಪ್ರದೇಶಗಳಿಗಿಂತ ದಕ್ಷಿಣದಲ್ಲಿ ಸುಮಾರು ಮೂರು ಸಾವಿರ ಅಡಿ ಎತ್ತರವೂ ಉತ್ತರದಲ್ಲಿ ಸುಮಾರು ಒಂದು ಸಾವಿರ ಅಡಿ ಎತ್ತರವೂ ಎದ್ದು ನಿಂತಿದೆ. ಸುತ್ತಮುತ್ತಲಿನ ತಮಿಳರೇ ಮೊದಲಾದ ಜನರು ಈ ಪ್ರದೇಶವನ್ನು `ಕರುನಾಡು’ ಅ೦ದರೆ ಎತ್ತರವಾದ ನಾಡು ಅಥವಾ ದಿಣ್ಣೆಯ ನಾಡೆಂದು ಕರೆದರು. ಇದರಿಂದ ನಮ್ಮ ನಾಡಿಗೂ ಇದರ ಭಾಷೆಗೂ ಕನ್ನಡವೆಂಬ ಹೆಸರು ಬಂದಿತೆಂದು ಊಹಿಸಲ್ಪಟ್ಟಿದೆ. ಇದರ ಉತ್ತರ ಮತ್ತು ಪಶ್ಚಿಮದಲ್ಲಿ ಬಹುಭಾಗವು ಮೇಲೆ ಹೇಳಿದಂತೆ ಕರಿಯ ಮಣ್ಣಿನಿಂದ ತುಂಬಿರುವುದರಿಂದ ಇದಕ್ಕೆ `ಕಾರ್ ನಾಡ್’ ಅಥವಾ `ಕರೀನಾಡೆಂ’ದು ಹೇಳುವುದೂ ನ್ಯಾಯವಾಗಿದೆ. ಈ `ಕರ್’, `ನಾಡ್’ ಎಂಬ ಪದಗಳ ಸಂಯೋಗದಿಂದ ಕನ್ನಡವೆಂಬ ಪದವು ಹುಟ್ಟಿತೆಂದು ಮತ್ತೆ ಕೆಲವರು ವಿದ್ವಾಂಸರು ಊಹಿಸುತ್ತಾರೆ. ಈ ನಮ್ಮ ಕನ್ನಡ ದೇಶವನ್ನೊಳಗೊಂಡಿರುವ ದಕ್ಷಿಣದ ದಿಣ್ಣೆಯು ಭೂಮಿಯ ಅತ್ಯಂತ ಪ್ರಾಚೀನ ಭಾಗಗಳಲ್ಲೊಂದೆಂದೂ ಮೇಲೆ ಹೇಳಿದೆ. ಇಂತಹ ಪ್ರಾಚೀನ ಭೂಭಾಗಕ್ಕೂ ಮನುಷ್ಯರ ಉತ್ಪತ್ತಿಗೂ, ಪ್ರಾಚೀನ ನರಕುಲಗಳಿಗೂ ಯಾವ ಬಗೆಯಾದ ಸಂಬಂಧವು ಇತ್ತೆಂಬುದನ್ನು ಈಗ ವಿವರಿಸಬೇಕಾಗಿದೆ.
ನರರೂಪದ ಉತ್ಪತ್ತಿ:- ಭೂಮಿಯ ಘನಗೋಳದ ಮೇಲ್ಬಾಗದಲ್ಲಿ ಒಂದರ ಮೇಲೊಂದಾಗಿ ಕೂಡುತ್ತ ಬ೦ದ ಮಣ್ಣಿನ ಪದರಗಳಲ್ಲಿ ಈಗ್ಗೆ ಸುಮಾರು ಹತ್ತರಿಂದ ಐದು ಲಕ್ಷ ವರ್ಷಗಳ ಕೆಳಗೆ ಪ್ಲೆಯೋಸೀನ್ (Pleocene) ಪದರವೂ, ಸುಮಾರು ಐದರಿಂದ ಎರಡು ಲಕ್ಷ ವರ್ಷಗಳ ಕೆಳಗೆ ಪ್ಲೈಸ್ಟೋಸೀನ್ (Pleistocene) ಪದರವೂ ಹುಟ್ಟಿದವು. ಕ್ರಿಮಿಕೀಟಾದಿ ರೂಪದಿಂದ ಚತುಷ್ಪಾದಗಳೂ, ಚತುಷ್ಪಾದಗಳಿಂದ ಪ್ಲೇಯೋಸೀನ್ ಯುಗದಲ್ಲಿ ಅಳಿಲು, ಕಪಿ ಮೊದಲಾದ ರೂಪಗಳೂ, ಪ್ಲೈಸ್ಟೋಸೀನ್ ಯುಗದಲ್ಲಿ ಬಾಲವಿಲ್ಲದ ಕಪಿಗಳ೦ತಿದ್ದ ವಾನರರೂಪಗಳೂ ಹುಟ್ಟಿ ಪ್ರಪಂಚದ ಅನೇಕ ಭಾಗಗಳಲ್ಲಿ ಗುಂಪುಗುಂಪಾಗಿ ಹರಡಿಕೊಂಡವು. ಈ ವಾನರ ವಂಶಗಳಲ್ಲಿ ಈಗ ಗೋರಿಲ್ಲ ಮತ್ತು ಚೆಂಪಾನ್ಜಿಗಳು ಆಫ್ರಿಕದಲ್ಲೂ, ಔರಾಂಗ್-ಊಟಾನ್ ಬೋರ್ನಿಯೋದಲ್ಲೂ, ಗಿಬ್ಬನ್ ಕುಲವು ಮಲಯ ಪರ್ಯಾಯ ದ್ವೀಪದಲ್ಲೂ ಬದುಕಿವೆ. ಆದರೆ ಪ್ಲೇಯೋಸೀನ್ ಯುಗದಲ್ಲಿ ಭೂಲೋಕದ ಅನೇಕ ಭಾಗಗಳಲ್ಲಿ ಬದುಕಿದ್ದ ಕಪಿಕುಲಗಳು ಮತ್ತು ವಾನರಕುಲಗಳು ಈಗ ಅದೃಶ್ಯವಾಗಿವೆ. ಆ ಯುಗದಲ್ಲಿ ಸೃಷ್ಟಿಯಾದ ಮತ್ತು ಈಚೆಗೆ ಮಳೆಯ ಮಣ್ಣಿನಿಂದ ಕೊಚ್ಚಿ ಹೊರಬಿದ್ದಿರುವ ಫೆಸ್ಟೋಸೀನ್ ಪದರವು ಭಾರತದಲ್ಲಿ ಹಿಮಾಲಯ ಪರ್ವತದ ದಕ್ಷಿಣಕ್ಕಿರುವ ಶಿವಾಲಿಕ್ ಪರ್ವತಗಳಲ್ಲಿ ಕಾಣಬರುತ್ತದೆ. ಆ ಸನ್ನಿವೇಶದಲ್ಲಿ ಪ್ಲೇಸ್ಟೋಸೀನ್ ಯುಗದಲ್ಲಿ ಬದುಕಿದ್ದ ಮತ್ತು ಈಗ ಅದೃಶ್ಯವಾಗಿರುವ ಅನೇಕ ವಾನರಕುಲಗಳು ಶಿವಾಲಿಕ್ ಬೆಟ್ಟಗಳಲ್ಲಿ ಬದುಕಿದ್ದುವೆಂದೂ, ಇವುಗಳಲ್ಲಿ ಶಿವಪಿಥೆಕಸ್, ಪೇಲಿಯೋಪಿಥೆಕಸ್ ಮತ್ತು ಡ್ರೆಯೊಪಿಥೆಕಸ್ ಎಂಬ ಮೂರು ಕುಲಗಳನ್ನಾದರೂ ವಿಂಗಡಿಸಬಹುದೆಂದೂ ತಿಳಿಯಬಂದಿದೆ. ಈ ಮೂರು ಕುಲಗಳಲ್ಲೂ ಶಿವಪಿಥೆಕಸ್ ಎಂಬ ಜಾತಿಯು ಇತರ ವಾನರ ಕುಲಗಳಿಗಿಂತಲೂ ಅನೇಕ ವಿಷಯಗಳಲ್ಲಿ ಮನುಷ್ಯರನ್ನು ಹೆಚ್ಚಾಗಿ ಹೋಲುತ್ತಿದ್ದಿತೆಂದು ಊಹಿಸಲ್ಪಟ್ಟಿದೆ. ಇದರಿಂದಲೇ ಮುಂದೆ ಮನುಷ್ಯ ಕುಲಗಳು ಹುಟ್ಟಿಕೊಂಡಿರಬಹುದೆಂದು ಊಹಿಸಿದರೆ ಏನೂ ಅಸಮಂಜಸವಲ್ಲ. ಆದರೆ ವಾನರರೂಪಗಳು ಭಾರತದಲ್ಲಿ ಸಿಕ್ಕಿದ್ದರೂ ವಾನರ ರೂಪಗಳಿಂದ ಉತ್ಪನ್ನವಾದ ವಿಕೃತರೂಪವುಳ್ಳ ಕುರೂಪವಾದ ಕುನರ ವಂಶಗಳು ಭಾರತದಲ್ಲಿ ಯಾವಾಗಲಾದರೂ ಬದುಕಿದ್ದುವೇ ಎಂಬ ವಿಷಯವು ಸರಿಯಾಗಿ ವಿಮರ್ಶಿತವಾಗಿಲ್ಲ. ಈ ವಿಮರ್ಶೆಯನ್ನು ನಡೆಸುವುದಕ್ಕೆ ಸಾಕಾದಷ್ಟು ಅವಕಾಶವು ಇರುವಂತೆ ತೋರುತ್ತದೆ. ಏಕೆಂದರೆ ಪುರಾಣ ಪ್ರಸಿದ್ದವಾಗಿ ಭಾರತದಲ್ಲಿ ಅನೂಚಾನವಾಗಿ ವಾಸಮಾಡಿ ಕೊಂಡು ಬಂದಿರುವ ಪ್ರಜಾವರ್ಗಗಳಲ್ಲಿ `ವಾನರ’ ಕುಲಗಳು ಪ್ರಸಿದ್ಧವಾಗಿವೆ. ಈ ಪುರಾಣ ಪ್ರಸಿದ್ಧರಾದ ವಾನರರಿಗೆ ಬಾಲವು ಇದ್ದಿತೆಂಬ ಉಕ್ತಿಯು ಕವಿಗಳ ಉತ್ಪ್ರೇಕ್ಷೆಯಿಂದ ಹುಟ್ಟಿದುದಾದರೂ ಮುಂಚಾಚಿದ `ಹನು’ ಅಥವಾ ಮುಸಡಿ ಯುಳ್ಳ, ಗವಿಗಳಲ್ಲಿ ವಾಸಮಾಡುವ ಶಿಲೆಗಳನ್ನೂ ವೃಕ್ಷಗಳನ್ನೂ ಆಯುಧಗಳಾಗಿವುಳ್ಳ ಗಂಡಹೆಂಡಿರೆಂಬ ನೀತಿಯನ್ನೂ ಸಂಸಾರವೆಂಬ ಮರ್ಯಾದೆಯನ್ನೂ ಅರಿಯದ ಪ್ರಾಚೀನ ನಿವಾಸಿಗಳ ಕುಲಗಳು ಅಲ್ಲಲ್ಲೇ ವಾಸವಾಗಿದ್ದುವೆಂಬ ಪ್ರತೀತಿಯು ಶಾಸ್ತ್ರೀಯವಾದ ವಿಷಯಾನ್ವೇಷಣಕ್ಕೆ ಅವಕಾಶವನ್ನು ಕೊಡುತ್ತದೆ. ಅದರಲ್ಲೂ ಈ ಕುನರರ ಕುಲಗಳು ನಮ್ಮ ದಖನ್ ಪ್ರಾಂತದ ಮಧ್ಯಭಾಗದಲ್ಲಿ ಕನ್ನಡ ನಾಡಿಗೆ ಕೇಂದ್ರವಾಗಿರತಕ್ಕ ಕಿಷ್ಕಿಂಧಾನಗರದ ಸುತ್ತಲೂ ರಾಮಾಯಣದ ಕಾಲದಲ್ಲಿ ವಾಸಿಸುತ್ತಿದ್ದುವೆಂದು ಹೇಳಿರುವುದನ್ನು ನೋಡಿದರೆ ಈ ವಿಷಯವನ್ನು ಆ ಮೂಲಾಗ್ರವಾಗಿ ನೋಡಿಯೇ ಬಿಡಬೇಕೆಂಬ ಕುತೂಹಲವು ಶಾಸ್ತ್ರಜ್ಞರಲ್ಲಿ ಹುಟ್ಟುತ್ತದೆ. ಈ ಕಿಷ್ಕಿಂಧೆಯ ಬೆಟ್ಟದ ಸಾಲುಗಳ ಸುತ್ತ ಮುತ್ತಿನಲ್ಲಿ ಸ್ವಾಭಾವಿಕವಾದ ಗವಿಗಳು ಅನೇಕವಾಗಿವೆ. ಈ ಗವಿಗಳಲ್ಲಿ ಹಲಕೆಲವನ್ನು ವಾಲಿಯ ಗವಿ, ಸುಗ್ರೀವನ ಗವಿ, ಹನುಮಂತನ ಗವಿ ಎಂಬುದಾಗಿ ಈಗಲೂ ತೋರಿಸುತ್ತಾರೆ. ಇನ್ನೂ ಅನೇಕ ಗವಿಗಳಲ್ಲಿ, ಚಿರತೆಗಳೋ, ಕರಡಿಗಳೋ ಸೇರಿಕೊಂಡು ಮನುಷ್ಯರು ಪ್ರವೇಶ ಮಾಡುವುದೇ ಕಷ್ಟವಾಗಿದೆ. ಇಂತಹ ಗವಿಗಳ ನೆಲದೊಳಗಿನ ಮಣ್ಣಿನ ಪದರಗಳನ್ನೂ, ಬಾಗಿಲಬಳಿಯ ಮಣ್ಣನ್ನೂ ಶಾಸ್ತ್ರೀಯವಾಗಿ ಅಗೆದು ಪರೀಕ್ಷಿಸಿದರೆ ಇದರ ಪ್ರಾಚೀನ ನಿವಾಸಿಗಳ ಎಲುಬುಗಳು ದೊರೆಯಬಹುದೆಂದು ಊಹಿಸಲು ಅವಕಾಶವಿದೆ. ಸ್ಪೇನ ದೇಶದ ಉತ್ತರದಲ್ಲಿಯ ಪಿರನೀಸ್ ಪರ್ವತಗಳಲ್ಲಿ ಫ್ರಾನ್ಸ್ ದೇಶದ ಡಾರ್ಡ್‌ಗಾನ್ ಪ್ರಾಂತದ ಪರ್ವತಗಳ ಗುಹೆಗಳನ್ನೂ ಶಾಸ್ತ್ರಜ್ಞರು ಪರೀಕ್ಷಿಸಿ ನೋಡಿದಾಗ ಪ್ರಾಚೀನ ಕುನರ (sub-human) ವಂಶಗಳ ಅಸ್ಥಿಗಳು ಸಿಕ್ಕು ಮನುಷ್ಯಯರ ಪೂರ್ವಚರಿತ್ರೆಗೆ ಅನೇಕ ಹೊಸ ವಿಷಯಗಳು ದೊರೆತವು. ಹಾಗೆ ಭಾರತದಲ್ಲಿ ಶಾಸ್ತ್ರೀಯ ಸಂಶೋಧನೆ ನಡೆಸುವುದಕ್ಕೆ ಕರ್ಣಾಟಕದ ಗವಿಗಳೂ, ವಿಂಧ್ಯಾದ್ರಿಯ ಗವಿಗಳೂ ಬಹಳ ಉಪಯುಕ್ತವಾಗಿವೆ. ಈ ಶೋಧನೆಯು ನಡೆದ ಮೇಲೆಯೇ ಕರ್ಣಾಟಕಕ್ಕೂ, ಮನುಷ್ಯನ ಉತ್ಪತ್ತಿಗೂ, ವಾನರ ಕುನರ ವಂಶಗಳಿಗೂ ಇರುವ ಸಂಬಂಧವು ವ್ಯಕ್ತವಾದೀತು.
ಕರ್ಣಾಟಕದ ಬುಡಕಟ್ಟುಗಳು: ನಮಗೆ ಚೆನ್ನಾಗಿ ತಿಳಿದುಬಂದಿರುವ ಪೂರ್ವ ಚರಿತ್ರೆಯಲ್ಲಿ ಭರತಖಂಡದ ಮೊತ್ತಮೊದಲಿನ ನಿವಾಸಿಗಳು ಆದಿ ಆಸ್ಟ್ರೇಲಿಯಕವೆಂಬ ಬುಡಕಟ್ಟಿಗೆ ಸೇರಿರಬೇಕೆಂದು ಊಹಿಸಲ್ಪಟ್ಟಿದೆ. ಇವರು ಸ್ವಲ್ಪ ಕುಳ್ಳಾಗಿ ತೆಳ್ಳಗೆ ಸಣ್ಣ ಮೂಳೆಯುಳ್ಳ ಕಪ್ಪು ಬಣ್ಣದ ಜನರು. ಇವರ ತಲೆಬುರುಡೆಯು ಬಹಳ ಉದ್ದವಾಗಿಯೂ, ತಗ್ಗಾಗಿಯೂ, ಇವರ ಮುಖವು ಉದ್ದವಾಗಿಯೂ ಮೇಲ್ತುಟಿಯೊಡನೆ ಕೂಡಿದ ಮೂತಿಯು ಮುಂಚಾಚಿದುದಾಗಿಯೂ, ಹುಬ್ಬುಗಳು ಮುಂದಾಗಿ, ಕಣ್ಣುಗಳು ಹಳ್ಳಗಳೊಳಗೆ ಬಿರುನೋಟದಿಂದ ಕೂಡಿದವುಗಳಾಗಿಯೂ, ಮೈಯೂ ಮುಖವೂ ಸ್ವಲ್ಪವಾಗಿ ಕೂದಲುಳ್ಳವುಗಳಾಗಿಯೂ, ತಲೆಯ ಕೂದಲು ಗುಂಗುರಾಗಿಯೂ ತಕ್ಕಮಟ್ಟಿಗೆ ಉದ್ದವಾಗಿಯೂ ಇದ್ದವೆಂದು ಕಾಣಬರುತ್ತದೆ. ಇವರಲ್ಲಿ ವಯಸ್ಸು ಬಂದ ಪುರುಷರ ಎತ್ತರವು ಸರಾಸರಿ ಐದಡಿ ಎರಡು ಅಥವಾ ಮೂರಂಗುಲ ಉದ್ದವಾಗಿಯೂ, ಚರ್ಮವು ಸ್ವಲ್ಪ ಕಪ್ಪು- ಛಾಯೆಯುಳ್ಳದಾಗಿಯೂ ಇತ್ತು. ಇವರಲ್ಲಿ ಜೀವನವು ಹೆಚ್ಚಾಗಿ ಬೇಟೆಯಿಂದ ನಡೆಯುತ್ತಿದ್ದುದರಿಂದ ಇವರನ್ನು ನಿಷಾದರೆಂದು ಕರೆಯುವ ವಾಡಿಕೆ ಇದೆ. ಈ ಗುಂಪಿಗೆ ಸಿಂಹಳದೀಪದ ವೇಡರೂ, ಕೃಷ್ಣಾ ತೀರದ ಚಂಚುಗಳೂ, ಮಧ್ಯದೇಶದ ಗೋ೦ಡರೂ, ಕನ್ನಡ ನಾಡಿನಲ್ಲಿ ಬಿಳಿಗಿರಿ ರಂಗನ ಬೆಟ್ಟದ ಸೋಲಿಗರೂ, ಗೋಪಾಲಸ್ವಾಮಿ ಮೊದಲಾದ ಬೆಟ್ಟಗಳ ಕಾಡು ಕುರುಬರೂ ಸೇರಿದ್ದಾರೆ. ಇವರು ಸುಮಾರು ಮೂವತ್ತು ಸಾವಿರ ವರುಷಗಳ ಹಿಂದೆಯೇ ಈ ದೇಶಗಳಲ್ಲಿ ನೆಲಸಿದ್ದಿರಬಹುದೆಂದು ಊಹಿಸಲು ಕಾರಣವಿದೆ.
ನಿಗ್ರೋ ಕುಲಗಳು:- ಈಗ್ಗೆ ಹತ್ತು, ಇಪ್ಪತ್ತು ಸಾವಿರ ವರ್ಷಗಳ ಕೆಳಗೆ ಆಫ್ರಿಕದ ನಿಗ್ರೋ ಬುಡಕಟ್ಟಿನ `ಬುಷ್ ಮೆನ್’ ಕುಲಕ್ಕೆ ಸಂಬಂಧಪಟ್ಟ ಕುಳ್ಳ ನಿಗ್ರೋ ಜನರು ತಮ್ಮ ಮಾತೃ ಸ್ಥಾನವನ್ನು ಬಿಟ್ಟು ದೋಣಿಗಳಲ್ಲಿ ಕುಳಿತು, ಏಷ್ಯಾ ಖಂಡದ ದಕ್ಷಿಣ ತೀರವನ್ನೇ ಆಶ್ರಯಿಸಿ ಪ್ರಯಾಣ ಮಾಡುತ್ತಾ ಪಾರ್ಶಿಸ್ಥಾನದಲ್ಲಿ ಕೆಲವು ಕಾಲವಿದ್ದು, ಮಲಯಾಳ, ಮನ್ನಾರ್ ಖಾರಿಯ ಉಭಯ ತೀರಗಳು, ಅಂದಮಾನ್ ದ್ವೀಪಗಳು, ಮಲಯ ಪದ್ಯಾಯ ದ್ವೀಪ ಇವುಗಳಲ್ಲಿ ಸಣ್ಣ ಗುಂಪುಗಳಾಗಿ ನೆಲಸಿದರು. ಇವರಿಗೆ ‘ನೀಗ್ರಿಟೊ’ ಕುಲದವರೆಂದು ಹೆಸರು. ನಮ್ಮ ಕನ್ನಡ ನಾಡಿನಲ್ಲಿ ಈ ಕುಲಗಳಿಗೆ ಸಂಬಂಧಪಟ್ಟ ಲಕ್ಷಣಗಳಾವವೂ ಕಾಣುವುದಿಲ್ಲ. ಆದರೆ ಮತ್ತೆ ಕೆಲವು ಕಾಲದ ಮೇಲೆ ಅದೇ ನಿಗ್ರೋ ಕುಲಕ್ಕೆ ಸೇರಿದ `ಫೆಸಿಫಿಕ್’ ಅಥವಾ `ಮೆಲನೇಷಿಯನ್’ ಶಾಖೆಗೆ ಸೇರಿದ ಗುಂಪುಗಳು ಆಗ್ನೇಯದಿಂದ ಭಾರತಕ್ಕೆ ಬಂದು ಆಸ್ಸಾಮಿನ ‘ನಾಗ’ರಲ್ಲಿಯೂ, ಬಿಹಾರಿಗೆ ದಕ್ಷಿಣದಲ್ಲಿರುವ ಕಾಡು ಜನರಲ್ಲಿಯೂ, ಮಲೆಯಾಳದ ಆನೆಮಲೆ ಬೆಟ್ಟಗಳಲ್ಲಿರುವ ‘ಪಣಿಯನ್’ `ಕಾಡರ್’ ಎಂಬ ಜನರಲ್ಲಿಯೂ ಮಿಶ್ರಿತವಾದಂತೆ ಕಾಣಬರುತ್ತದೆ. ಈ ಜನರ ರಕ್ತ ಸಂಬಂಧವು ಕೆದರಿದ ಗುಂಗುರು ಕೂದಲನ್ನೂ ಬಹಳ ಕಪ್ಪಾದ ಚರ್ಮದ ಬಣ್ಣವನ್ನೂ, ಕಣ್ಣಿನ ನರಗಳಲ್ಲಿ ಹಳದಿಯ ಬಣ್ಣವನ್ನೂ, ಚಪ್ಪಟೆ ಮೂಗನ್ನೂ, ದಪ್ಪ ತುಟಿಯನ್ನೂ, ಮುಂಚಾಚಿದ ಮೂತಿಯನ್ನೂ ಉಳ್ಳ ಕಾಡು ಕುರುಬರಲ್ಲಿ ಕಾಣಬರುತ್ತದೆ. ಆದ್ದರಿಂದ ನಿಗ್ರೋಕುಲದ ಸೋ೦ಕು ಕನ್ನಡಿಗರಿಗೆ ಸ್ವಲ್ಪ ಮಾತ್ರ ಸೋಕಿಹೋಯಿತೆಂದು ಊಹಿಸಬೇಕಾಗಿದೆ.
ಮೂಲ ಹಿಂದಿಕರು:- ಭಾರತದ ನಿವಾಸಿಗಳಲ್ಲಿ ನೂರಕ್ಕೆ ತೊಂಭದ ರಷ್ಟು ಜನರು ಆರ್ಯರಿಗೆ ಸಂಬಂಧಪಟ್ಟ ಹಿಂದೂ ಯೂರೋಪಿಕ ವಂಶಗಳಲ್ಲಿ ಮೂರು ಗುಂಪುಗಳಿಗೆ ಸೇರಿದ್ದಾರೆ. ಇವುಗಳಲ್ಲಿ ಅತ್ಯಂತ ಪ್ರಾಚೀನವಾದುದು ಮೂಲ ಹಿಂದಿಕ ಕುಲ, ಈ ಕುಲವನ್ನು ಸರ್ ಹರ್ಬರ್ಟ್ ರಿಸ್ಲಿ ಎಂಬ ವಿದ್ವಾಂಸರು ದ್ರಾವಿಡ ಕುಲವೆಂದು ಕರೆದು ಜನರ ಎಣಿಕೆಯಲ್ಲಿ ತಪ್ಪು ತಿಳಿವಳಿಕೆಗೆ ಅವಕಾಶವನ್ನು ಕೊಟ್ಟಿದ್ದರು. ಈಚಿನ ವಿಮರ್ಶೆಯಿಂದ ಈ ಮೂಲ ಹಿಂದಿಕರು ಆರ್ಯರ ಬುಡಕಟ್ಟಿಗೆ ಸಂಬಂಧಿಸಿದವರೆಂದೂ, ಸುಮಾರು ಎಂಟು ಹತ್ತು ಸಾವಿರ ವರ್ಷಗಳ ಕೆಳಗೆ ಬೆಲೂಚಿಸ್ಥಾನದ ಮೂಲಕ ಈ ದೇಶಕ್ಕೆ ಬಂದು ಇಲ್ಲಿಯ ಎಲ್ಲಾ ಭಾಗಗಳಲ್ಲೂ ಹರಡಿಕೊಂಡು ನೆಲಸಿದರೆಂದೂ ತಿಳಿಯಬಂದಿದೆ. ಇವರ ಆಕಾರವು ಸುಮಾರು ಐದು ಅಡಿ ಐದು ಅಂಗುಲ ಎತ್ತರವುಳ್ಳುದಾಗಿಯೂ ಸ್ವಲ್ಪ ತೆಳ್ಳನೆಯ ಸಣ್ಣ ಮೂಳೆಗಳುಳ್ಳದ್ದಾಗಿಯೂ ಇತ್ತು. ಇವರ ತಲೆಯೂ, ಮುಖವೂ ಸ್ಪಲ್ಪ ಉದ್ದ, ಹಣೆಯು ಎತ್ತರ, ಗದ್ದವು ಹಿಂದು, ಮೂಗು ಎತ್ತರವಾಗಿ ಅಗಲಕ್ಕಿಂತಲೂ ಉದ್ದ ಹೆಚ್ಚಾಗಿತ್ತು. ಇವರ ಬಣ್ಣವು ಎಣ್ಣೆಗೆಂಪು ಅಥವಾ ಹೊಂಬಣ್ಣ, ಇವರ ಕೂದಲು ಉದ್ದವಾಗಿಯೂ, ಮೃದುವಾಗಿಯೂ ಬಳುಕಿನಿಂದ ಕೂಡಿದುದಾಗಿಯೂ ಇತ್ತು. ಇವರ ಮುಖದ ಮೇಲೆಯೂ, ಎದೆಯ ಮೇಲೆಯೂ ವಿಶೇಷವಿಲ್ಲದೆ ಸ್ವಲ್ಪ ಮಟ್ಟಿಗೆ ಕೂದಲು ಬೆಳೆಯುತ್ತಿತ್ತು ಇವರ ಕಣ್ಣುಗಳೂ ಕೂದಲೂ ಕಪ್ಪುಬಣ್ಣದವು. ಈ ಮೂಲ ಹಿಂದಿಕರು ಭಾರತದ ಮೇಲೆಲ್ಲಾ ಹರಡಿ ಎಲ್ಲಾ ಪ್ರಾಂತ್ಯಗಳಲ್ಲಿಯೂ ಈಗಿನ ಭಾರತೀಯರಿಗೆ ಮೂಲಪುರುಷರಾದರು. ಹೆಚ್ಚು ಮಿಶ್ರಣವಾಗದೆ ಈಗಲೂ ಇವರು ಮಲೆಯಾಳ, ತಮಿಳು, ತೆಲಗು ದೇಶಗಳಲ್ಲಿಯೂ, ಬಿಹಾರ ಮತ್ತು ಹಿಂದೀ ರಾಷ್ಟ್ರಗಳಲ್ಲಿಯೂ ಶುದ್ಧ ರೂಪದಲ್ಲಿ ಕಾಣಬರುವರು. ಜನಸಂಖ್ಯೆಯಲ್ಲಿ ಇವರ ವಂಶಿಕರೇ ಮಿಕ್ಕ ಎಲ್ಲ ಕುಲಗಳಿಗಿಂತಲೂ ಹೆಚ್ಚಾಗಿ ಇರುವಂತೆ ಕಾಣಬರುತ್ತದೆ.
ಪಶ್ಚಿಮ ಹಿಂದಿಕರು:- ಮೂಲ ಹಿಂದಿಕರು ನೆಲಸಿದ ಒಂದೆರಡು ಸಾವಿರ ವರ್ಷಗಳ ತರುವಾಯ ಮಧ್ಯ ಏಷ್ಯದ ಕಡೆಯಿಂದಲೇ ಬಂದ ಆರ್ಯರಿಗೆ ಸಂಬಂಧಪಟ್ಟ ಇನ್ನೊ೦ದು ಕುಲದ ಗುಂಪುಗಳು ಪಶ್ಚಿಮದಿಂದ ಬಂದು ಸಿಂಧೂ ದೇಶವನ್ನೂ, ಗುಜರಾತ್, ಮಹಾರಾಷ್ಟ್ರ, ಕರ್ಣಾಟಕ ಪ್ರಾಂತ್ಯಗಳನ್ನೂ ಅಲ್ಲಿಂದ ಪೂರ್ವಕ್ಕೆ ಮುಂದರಿದು ಓಡ್ರದೇಶ ಬಂಗಾಳಗಳನ್ನೂ ಆಕ್ರಮಿಸಿದರು. ಇವರು ಎತ್ತರದಲ್ಲಿಯೂ, ಬಣ್ಣದಲ್ಲಿಯೂ, ಮೂಲ ಹಿಂದಿಕರಂತೆಯೇ ಇದ್ದರೂ ಕೆಲವು ಸಣ್ಣ ವಿಚಾರಗಳಲ್ಲಿ ಅವರಿಂದ ಬೇರೆಯಾಗಿದ್ದರು. ಇವರ ತಲೆ ಬುರುಡೆಯೂ, ಮುಖವೂ ಗುಂಡು, ಮೂಗು ಎತ್ತರ, ಅಗಲ ಕಡಿಮೆ, ಎದೆಯ ಆಳವೂ, ಮೆಯ್ ಅಡ್ಡಗಲವೂ ದೊಡ್ಡದು. ಮೆಯ್ಯ ಮೇಲೆ ಕೂದಲು ಹೆಚ್ಚು. ಈ ದುಂಡು ತಲೆಯ ಪಶ್ಚಿಮ ಇಂಡಿಕರು ಗುಜರಾತಿನಲ್ಲಿ ಮಿಶ್ರಣವಿಲ್ಲದೆ ಶುದ್ಧ ರೂಪದಲ್ಲಿಯೇ ಕಾಣ ಬರುತ್ತಾರೆ. ಆದರೆ ಮಹಾರಾಷ್ಟ್ರ ಮತ್ತು ಕರ್ಣಾಟಕದಲ್ಲಿ ಇವರು `ಮೂಲ ಇಂಡಿಕ’ ರೊಡನೆ ಬೆರತು ಹೋಗಿರುವರು. ಕನ್ನಡಿಗರ ಜನಸಂಖ್ಯೆಯಲ್ಲಿ ಹೆಚ್ಚು ಭಾಗ ಈ ಎರಡು ಗುಂಪುಗಳ ಬೆರಕೆಯಿಂದಲೆ ಆಗಿದೆಯೆಂದು ಶಾಸ್ತ್ರಜ್ಞರು ಊಹಿಸುತ್ತಾರೆ.
ಉತ್ತರ ಇಂಡಿಕರು:- ಪಶ್ಚಿಮ ಇಂಡಿಕರು ಬಂದ ಒಂದೆರಡು ಸಾವಿರ ವರ್ಷಗಳ ಕೆಳಗೆ ಆರ್ಯರ ಬುಡಕಟ್ಟಿಗೆ ಸಂಬಂಧಪಟ್ಟ ಮತ್ತೊಂದು ಗುಂಪಿನ ಜನರು ಮಧ್ಯ ಏಷ್ಯದ ಕಡೆಯಿಂದಲೇ ಹೊರಟು ವಾಯವ್ಯದ ಕಣಿವೆಗಳಲ್ಲಿ ದೂರಿ ಭಾರತದ ವಾಯವ್ಯ ಭಾಗಗಳಾದ ಕಾಶ್ಮೀರ, ಪಂಜಾಬ, ರಾಜಪುಟಾಣಗಳಲ್ಲಿ ನೆಲಸಿದರು, ಇವರು ರೂಪದಲ್ಲಿ ಬಹುಮಟ್ಟಿಗೆ ಮೆಡಿಟರೇನಿಯನ್ ಕಡಲಿನ ತೀರ ಪ್ರದೇಶದ ನಿವಾಸಿಗಳನ್ನು ಹೋಲುತ್ತಿದ್ದರು. ಇವರ ಆಕಾರವು ಎತ್ತರ, ಬಣ್ಣವು ಕೆಂಪೂ ಬಿಳಪೂ ಮಿಶ್ರವಾದ ಬಿಳಿಯ ಗೋದಿಯ ವರ್ಣ. ಇವರ ತಲೆಬುರುಡೆಯು ಉದ್ದ, ಮೂಗು ಎತ್ತರ, ಅದರ ಅಡ್ಡಗಲ ಕಡಮೆ, ಕಣ್ಣುಗಳೂ ಕೂದಲೂ ಕಪ್ಪು, ತಲೆಯ ಕೂದಲು ಮೃದುವಾಗಿಯೂ, ನೀಳವಾಗಿಯೂ, ಬಳುಕಿನಿಂದ ಕೂಡಿದುದಾಗಿಯೂ ಇತ್ತು. ಇವರ ಹಣೆಯು ವಿಶಾಲವಾಗಿ ಸ್ಪಲ್ಪ ಹಿಂದಕ್ಕೆ ಬಗ್ಗಿತ್ತು. ಗದ್ದವು ಸ್ವಲ್ಪ ಮುಂಚಾಚಿತ್ತು. ಈ ಉತ್ತರ ಹಿಂದಿಕರು ವೇದಗಳ ಆರ್ಯರು ಬರುವದಕ್ಕೂ, ಸಿಂಧೂ ಸಂಸ್ಕೃತಿಯು ಬೆಳೆಯುವದಕ್ಕೂ ಹಿಂದೆಯೇ ಈಗಿನ ಪಂಜಾಬ್, ಸಿ೦ಧಿನ ಉತ್ತರ ಪಾರ್ಶ್ವ ಮೊದಲಾದ ಕಡೆಗಳಲ್ಲಿ ನೆಲಸಿದ್ದರು. ವೇದಗಳ ಆರ್ಯರೂ ಸಹ ಇದೇ ಗುಂಪಿನವರಾಗಿದ್ದಿರಬೇಕು. ಈ ಜನರು ಆರ್ಯರ ನಾಗರಿಕತೆಯನ್ನು ವೃದ್ಧಿ ಪಡಿಸಿಕೊಂಡು ಕ್ರಮೇಣ ಗುಂಪುಗುಂಪಾಗಿ ಹೊರಟು ಭಾರತದಲ್ಲೆಲ್ಲಾ ಆರ್ಯರ ನಾಗರಿಕತೆಯನ್ನು ಹರಡುತ್ತಾ ಅಲ್ಲಲ್ಲಿ ಹೋಗಿ ನೆಲಸಿದರು. ಇವರ ವಲಸೆಯು ಸ್ನೇಹ ರೂಪದಲ್ಲಿ ನಡೆಯಿತು. ಇವರಲ್ಲಿ ಬ್ರಾಹ್ಮಣರು ವಿದ್ಯೆಯನ್ನೂ, ಕ್ಷತ್ರಿಯರು ರಾಜಕಾರ್ಯ ಶೌರ್ಯವನ್ನೂ, ವೈಶ್ಯರು ವ್ಯಾಪಾರ ಕುಶಲವಿದ್ಯೆಗಳನ್ನೂ, ಇತರರು ತಮತಮಗೆ ಸಂಬಂಧಪಟ್ಟ ಕೌಶಲ್ಯ ಗಳನ್ನು ಒಯ್ಯುತ್ತ ಪಶ್ಚಿಮ ಹಿಂದಿಕ ಮತ್ತು ಮೂಲ ಹಿಂದಿಕ ಕುಲಗಳು ನೆಲಸಿದ್ದ ಭಾಗಗಳಿಗೆ ಹೋಗಿ ಅವರ ಮಧ್ಯೆ ಸೇರಿಹೋದರು. ಕರ್ಣಾಟಕದ ಉತ್ತಮ ವರ್ಣಗಳಲ್ಲಿ ಸ್ವಲ್ಪ ಮಟ್ಟಿಗೆ ಈ ಜನರ ರಕ್ತವು ಹರಿಯುತ್ತಿದೆಯೆಂದೂ, ಕನ್ನಡಿಗರಲ್ಲಿ ಕೆಲವು ಜಾತಿಗಳು ಹೆಚ್ಚು ಕಡಿಮೆ ಈ ಕುಲಕ್ಕೆ ಸೇರಿದ್ದುವೆಂದೂ, ನೀಲಗಿರಿಯಲ್ಲಿ ಪೂರ್ವದಿಂದಲೂ ನೆಲಸಿಬಂದಿರುವ ತೊದವರೂ ಸಹ ಇದೇ ಗುಂಪಿಗೆ ಸೇರಿದವರೆಂದೂ ಶಾಸ್ತ್ರಜ್ಞರು ಹೇಳುತ್ತಾರೆ.
ಕರ್ಣಾಟಕರ ವಂಶ:- ಮೇಲೆ ಹೇಳಿರುವ ರೀತಿಯಲ್ಲಿ ಭಾರತದಲ್ಲಿರುವ ಎಲ್ಲಾ ಬುಡಕಟ್ಟುಗಳೂ ಕರ್ಣಾಟಕದಲ್ಲಿವೆಯೆಂದೂ ಆದರೆ ಕನ್ನಡಿಗರು ಹೆಚ್ಚಾಗಿ ಮೂಲ ಹಿಂದಿಕ, ಪಶ್ಚಿಮ ಹಿಂದಿಕ, ಮತ್ತು ಉತ್ತರ ಹಿಂದಿಕ ಕುಲಗಳ ಮಿಶ್ರಣದಿಂದ ಹುಟ್ಟಿದವರೆಂದು ಶಾಸ್ತ್ರಜ್ಞರು ಊಹಿಸಿರುವರು. ಈ ವಿಷಯದಲ್ಲಿ ನನಗೆ ತೋರುವ ಒಂದಂಶವನ್ನು ಹೇಳಲೇಬೇಕಾಗಿದೆ. ಮಿಶ್ರಿತ ವಂಶಗಳಲ್ಲಿ ವ್ಯತ್ಯಸ್ತ ರೂಪಗಳೂ, ಹೆಚ್ಚಾದ ವ್ಯತ್ಯಾಸಗಳೂ ಕಾಣಬರಬೇಕೆಂದು ಮೆಂಡಲ್ ಎಂಬ ಶಾಸ್ತ್ರಜ್ಞರು ಹೇಳಿದ್ದಾರೆ. ಈ ವ್ಯತ್ಯಾಸಗಳನ್ನು ಸೂಕ್ಷ್ಮವಾದ ಆಯುಧಗಳಿಂದ ಹಿಡಿದು ಕನ್ನಡಿಗರು ಭಿನ್ನ ವಂಶಗಳ ಮಿಶ್ರಣದಿಂದ ಹುಟ್ಟಿದವರೇ ಅಥವಾ ಹೆಚ್ಚಾಗಿ ಒಂದೇ ವಂಶಕ್ಕೆ ಸೇರಿದವರೇ ಎಂಬ ವಿಷಯವನ್ನು ಮುಂದೆ ವಿಮರ್ಶಿಸಬೇಕಾಗಿದೆ. ಆದರೆ ನನ್ನ ಅನುಭವದಲ್ಲಿ ಎರಡನೆಯ ಸಿದ್ದಾಂತವೂ ಸಾಧ್ಯವೆಂದು ತೋರುತ್ತದೆ. ಏಕೆಂದರೆ ಕನ್ನಡಿಗರ ರೂಪವನ್ನು ಸಾಮಾನ್ಯವಾಗಿ ಹೀಗೆಂದು ವರ್ಣಿಸಬಹುದು.
ಎತ್ತರ ಸರಾಸರಿ ಗಂಡಸು ೫’ ೬”
ಎತ್ತರ ಸರಾಸರಿ ಹೆಂಗಸು ೫’ ೨”
ತಲೆಬುರುಡೆಯೂ ಮುಖವೂ ಹೆಚ್ಚು ಉದ್ದವೂ ಅಲ್ಲ, ಹೆಚ್ಚು ಗುಂಡೂ ಅಲ್ಲ ಅಂದರೆ `ಸಿಫಾಲಿಕ್’ ಇಂಡೆಕ್ಸ ಸುಮಾರು ೭೯, ೮೦, ಬಣ್ಣವು ಕಂದಿದ ಗೋದಿಯ ಬಣ್ಣ. ಪ್ರಾಯಶಃ ಎಲ್ಲ ವಿಷಯಗಳಲ್ಲಿಯೂ ಮೂಲ ಹಿಂದಿಕರಿಗೂ, ಪಶ್ಚಿಮ ಹಿಂದಿಕರಿಗೂ ಮಧ್ಯಸ್ತವಾದ ರೂಪ, ಈ ರೂಪವು ಎರಡು ಕುಲಗಳ ಮಿಶ್ರಣದಿಂದ ಆಯಿತೆಂಬುದು ಒಂದು ಪಕ್ಷವಾದರೆ ಇನ್ನೊ೦ದು ಊಹೆಯನ್ನು ಮಾಡ ಬಹುದಾಗಿದೆ. ಏನೆಂದರೆ ಭಾರತದಲ್ಲಿರುವ ಮೂಲ ಹಿಂದಿಕ, ಪಶ್ಚಿಮ ಹಿಂದಿಕ ಮತ್ತು ಉತ್ತರ ಹಿಂದಿಕ ಕುಲಗಳು ಆದಿಯಲ್ಲಿ ಒಂದೇ ಕುಲದಿಂದ ಹೊರಟವಾಗಿಯೂ, ಸನ್ನಿವೇಶ, ದೇಶ, ಆಹಾರ ಮೊದಲಾದುವುಗಳ ಗುಣದಿಂದ ಇವುಗಳು ಸ್ವಲ್ಪ ವ್ಯತ್ಯಸ್ತವಾಗಿ ಈಚೆಗೆ ಕಾಣಬರುವುದಾಗಿಯ ಏಕೆ ಇರಬಾರದು? ಇವು ಮೂರಕ್ಕೂ ಮೂಲವಾದ ಕುಲವು ಈಗೂ ಶುದ್ಧವಾದ ರೀತಿಯಲ್ಲಿ ಕನ್ನಡ ದೇಶ ಮೊದಲುಗೊಂಡು ಮಧ್ಯಪ್ರಾಂತ್ಯದ ಮೂಲಕ ಈಗಿನ ಹಿಂದೀ ಪ್ರಾಂತ್ಯದ ವರೆಗೂ ಹಬ್ಬಿಕೊಂಡಿದೆ. ಇದೇ ಮೂಲ ಹಿಂದಿಕ ಕುಲವಾಗಿ ಕನ್ನಡಿಗರೇ ಇದರ ಮೂಲ ರೂಪವಾಗಿ ಇರುವರೆಂದು ಏಕೆ ನಿರ್ಧರಿಸಬಾರದು? ಈ ಸಿದ್ಧಾಂತವನ್ನು ಒಪ್ಪಿದರೆ ಕನ್ನಡಿಗರು ಸುಮಾರು ಶೇಕಡ ೯೯ ರಷ್ಟು ಆರ್ಯ ಅಥವಾ ಹಿಂದೂ ಐರೋಪ್ಯ ಬುಡಕಟ್ಟಿಗೆ ಸೇರಿದವರೆಂದೂ, ಅದರ ಶಾಖೆಯಾದ ಮೂಲ ಭಾರತ ರೂಪವನ್ನು ಬಹುಮಟ್ಟಿಗೆ ಶುದ್ದವಾಗಿ ಉಳಿಸಿಕೊಂಡು ಬಂದಿರುವರೆಂದೂ ನಾವು ಹೇಳಬಹುದಾಗಿದೆ.
*****
ಮುಂದುವರೆಯುವುದು