೧.೧ ೧ನೇ ಉಪನ್ಯಾಸ
ಮೈಸೂರು ಡಿಸ್ಟ್ರಿಕ್ಟಿನಲ್ಲಿ ತಲಕಾಡೆಂಬ ಒಂದು ಪುಣ್ಯಸ್ಥಳವಿದೆ. ಅದು ಕಾವೇರಿತೀರವಾಗಿದೆ. ತಿರಮಕೂಡಲಲ್ಲಿ ಕಪಿಲಾ ಕಾವೇರಿ ಸಂಗಮವಾಗಿ ಅಖಂಡ ಕಾವೇರಿಯು ತಲಕಾಡಿಗೆ ಹರಿದುಹೋಗುವುದು. ಈ ನದೀತೀರದಲ್ಲಿ ನೀರಿನ ಅಲೆಯಿಂದ ಮರಳು ಬಂದುಬಿದ್ದು ಅದು ಗಾಳಿಯಿಂದ ತೂರಿಕೊಂಡುಬಂದು ಹಲವು ಮೈಲಿಗಳವರೆಗೂ ಮರಳೇ ಮುಚ್ಚಿಕೊಂಡುಹೋಗಿದೆ. ಒಂದೊಂದು ಕಡೆ ಆ ಮರಳು ದೊಡ್ಡ ಬೆಟ್ಟದ ಹಾಗೆ ರಾಸಿಯಾಗಿ ಅಲ್ಲಲ್ಲಿ ಬಿದ್ದಿದೆ. ಇದೆಲ್ಲಾ ಗಜಾರಣ್ಯಕ್ಷೇತ್ರವೆಂದು ಹೆಸರುಗೊಂಡಿರುವುದಾಗಿ ಸ್ಥಳ ಪುರಾಣವಿದೆ. ಈ ಪ್ರದೇಶ ದಲ್ಲಿ ಅನೇಕ ದೇವಸ್ಥಾನಗಳಿದ್ದವಂತೆ. ಅದೆಲ್ಲಾ ಮರಳಿನಲ್ಲಿ ಮುಚ್ಚಿ ಹೋಗಿರುವುದಾಗಿ ತಿಳಿಯಬರುವುದು. ಕೆಲವು ಮಾಸ ತಿಥಿ ವಾರ ನಕ್ಷತ್ರ ಮೊದಲಾದ ಸಂಯೋಗ ಸಂಭವಿಸಿದಾಗ ಅಲ್ಲಿರುವ ಪ್ರಸಿದ್ದ ವಾದ ವೈದ್ಧೇಶ್ವರ, ಮರಳೇಶ್ವರ, ಪಾತಾಳೇಶ್ವರ, ಗೋಕರ್ಣೇಶ್ವರ, ಮಲ್ಲಿಕಾರ್ಜುನೇಶ್ವರ ಎಂಬ ಐದು ಲಿಂಗಗಳನ್ನು ದರ್ಶನಮಾಡಿದರೆ ಬಹಳ ಪುಣ್ಯ ಉಂಟೆಂದು ಹೇಳುತ್ತಾರೆ. ಇಂಥಾ ಸಂಯೋಗವು ೩ ವರುಷಕ್ಕೆ, ೫ ವರುಷಕ್ಕೆ, ೧೨ ವರುಷಕ್ಕೆ ಒಂದೊಂದು ಸಾರಿ ಹೀಗೆ ಬಿಟ್ಟು ಬಿಟ್ಟು ಬರುವುದು. ಜನರು ಅಪಾರವಾಗಿ ಜಾತ್ರೆಗೆ ನೆರೆಯುವರು. ಮುವತ್ತು ನಲವತ್ತು ಸಾವಿರ ಜನದವರೆಗೂ ಸೇರುವುದು. ಈ ದೊಡ್ಡ ಜಾತ್ರೆಗೆ ಪಂಚಲಿಂಗದರ್ಶನವೆಂದು ಹೇಳುವರು. ಈ ಪುಣ್ಯಕ್ಷೇತ್ರದಲ್ಲಿ ಒಂದು ಐತಿಹ್ಯ ಉಂಟು. ಇಲ್ಲಿ ಅನೇಕ ಶಿವ ದೇವಾಲಯಗಳು ಇದ್ದು ಅವುಗಳೆಲ್ಲಾ ಮರಳು ಮುಚ್ಚಿ ಹೋಗಿವೆಯೆಂದು ಹೇಳುತ್ತಾರೆ. ಪೂರ್‍ವದಲ್ಲಿ ಒಬ್ಬ ವ್ಯಾಪಾರಿಯು ಒಂದು ಸೇರು ಕಡಲೆಯನ್ನು ತಂದು ಆ ಪ್ರದೇಶದಲ್ಲಿ ಶಿವದೇವಾಲಯಗಳ ದೇವರ ಮುಂದೆ ಒಂದು ದೇವರಿಗೆ ಒಂದು ಕಡಲೆಯಂತೆ ಇಟ್ಟು ನಿವೇದನ ಮಾಡುತ್ತಾ ಹೋದನಂತೆ. ಕೊನೆಯಲ್ಲಿ ಮಲ್ಲಿಕಾರ್ಜುನೇಶ್ವರನ ಗುಡಿಯ ಬಳಿಗೆ ಬರುವಾಗ ಒಂದು ಕಡಲೆ ಸಾಲದೆಹೋಯಿತಂತೆ, ಆ ದೇವರು ಮುನಿಸಿಕೊಂಡು ನದಿಯ ಆಚೆಹೋಗಿ ವಿಜಾಪುರವೆಂಬ ಊರಲ್ಲಿ ಕೂತುಕೊ೦ಡಿತಂತೆ. ಆ ಹೇರಿನಲ್ಲಿ ಎಷ್ಟು ಕಡಲೇಕಾಳು ಇತ್ತೊ ಅಷ್ಟು ಲಿಂಗಗಳು ಅಲ್ಲಿ ಪ್ರತಿಷ್ಟೆಯಾಗಿದ್ದು ಈಗ ಅದೆಲ್ಲಾ ಮರಳಲ್ಲಿ ಮುಚ್ಚಿಹೋಗಿದೆ ಎಂದು ಹೇಳುತ್ತಾರೆ.
ಈ ಸ್ಥಳೀಯವಾದ ಒಂದು ಐತಿಹ್ಯವನ್ನು ಈ ನಮ್ಮ ಭರತಖಂಡವೆಂಬ ಮಹಾರಾಜ್ಯಕ್ಕೆ ಹೋಲಿಸಿ ಚರಿತ್ರೆ ಎಂಬ ದುರ್ಬನ್ ಅಥವಾ ನಾಳಕಾಯಂತ್ರದಿಂದ ಶೋಧಿಸಿ ನೋಡಿದರೆ, ಇಲ್ಲಿ ಆಳಿದ ದೊರೆಗಳಿಗೆ ಹೆಸರಿಗೊಂದು ಕಡಲೇಕಾಳನ್ನು ನಜರಾಗಿ ಹಾಕುತ್ತಾ ಬಂದಾಗ್ಯೂ ಅಂಥಾ ಕಡಲೆ ಹೇರು ಅನೇಕವಾಗಬಹುದು. ಅಷ್ಟೊಂದು ಜನ ರಾಜರು ಇಲ್ಲಿ ಆಳಿದರು. ಈ ರಾಜರುಗಳಲ್ಲಿ ಕೆಲವರು ದೊಡ್ಡದಾಗಿ ಸೀಮೆಯನ್ನು ಕಟ್ಟಿ ಚಕ್ರಾಧೀಶ್ವರರೆನ್ನಿಸಿಕೊಂಡರು. ಇನ್ನು ಕೆಲವರು ಚಿಕ್ಕ ಚಿಕ್ಕ ರಾಜ್ಯಗಳನ್ನು ಆಳುತಾ ಸ್ವತಂತ್ರರಾಗಿದ್ದರು. ಮತ್ತು ಅವರು ಒಂದೊಂದು ವೇಳೆ ಅಲ್ಲಲ್ಲಿ ಚಕ್ರಾಧೀಶ್ವರರೆನ್ನಿಸಿಕೊಂಡಿದ್ದವರಿಗೆ ವಶವರ್ತಿಗಳಾಗಿ ಆಳಿಕೊಂಡಿದ್ದರು. ಇಂಥಾ ಚಿಕ್ಕ ರಾಜಾಧಿಪತಿಗಳಲ್ಲಿ ಹಲವರಿಗೆ ಈಚೆಗೆ ಪಾಳಯಗಾರರೆಂದು ಹೆಸರು ಬಂದಿದೆ. ಇಂಥಾ ಪಾಳಯಗಾರರ ಸಂಸ್ಥೆಯನ್ನು ಕುರಿತು ಕನ್ನಡಭಾಷೆಯಲ್ಲಿ ಉಪನ್ಯಾಸ ಮಾಡಬೇಕೆಂದು ಮೈಸೂರು ಯೂನಿವರ್ಸಿಟಿ ಎಂಬ ವಿದ್ಯಾ ನಿಲಯದವರು ನನ್ನನ್ನು ನೇಮಕಮಾಡಿದ ಕಾರಣ, ಈ ವಿಷಯದಲ್ಲಿ ನನಗೆ ತಿಳಿದ ಕೆಲವು ಸಂಗತಿಯನ್ನು ತಮಗೆ ಅರಿಕೆ ಮಾಡಿಕೊಳ್ಳುತ್ತೇನೆ, ಸಾವಾಧಾನಚಿತ್ತದಿಂದ ಲಾಲಿಸಬೇಕು.
*****