ಹರೆ ಬಂದಿದೆ ನಮ್ಮೂರ ಕೆರೆಗೆ
ಸುತ್ತ ಮುತ್ತ ಬೆಟ್ಟದ
ಮಣ್ಣುತಿಂದು ನೀರು ಕುಡಿದು
ಕೊಬ್ಬಿದ್ದಕ್ಕೇನೋ
ಚಲ್ಲಾಟಕ್ಕೇನೋ ಸರಿ
ಮೊನ್ನೆ ಮೊನ್ನೆ ಒಂದು ಹುಡುಗನ್ನ
ಹಾರ ತಗೊಂಡು ನುಂಗಿ
ನೀರು ಕುಡಿದು
ಇಂಬಾಗಿ ಸುತ್ತ ಮುತ್ತಿನ
ಹಸಿರು ತಲೆದಿಂಬಿಗೆ ತಲೆಯಿಟ್ಟು
ತಿಳಿ ನೀಲಿ ಸೀರೆಹೊದ್ದು
ಸಾವಿರಾರು ಕೊಪ್ಪೆ ಮೀನು
ಹುಳ ಹುಪ್ಪಡಿಗಳ ಮಹಾತಾಯಿಯಾಗಿ
ಮಲಗಿದೆ.
ಮುದ್ದಿನ ಮಕ್ಕಳು
ಗಣಪತಿ, ಕಾಳಿಮಾತಾ ವಿಗ್ರಹಗಳು
ತಾಬೂತ್ ಮಂಟಪಗಳು
ಆಗಾಗ ಬಂದು ಎಬ್ಬಿಸುತ್ತವೆ.
ಹೊಟ್ಟೆ ಎದೆಯಾಳಕ್ಕೆಲ್ಲಾ
ಅವರನ್ನು ಹೂತುಕೊಂಡು
ಇನ್ನೂ ಇನ್ನೂ ಉಬ್ಬುಬ್ಬಿ
ಮುಸುಕೆಳೆಯುವಾಗ….
ನಮ್ಮೂರ ಕೆರೆಯ
ತುಂಬಿದ ಹರೆ ನೋಡಿ
ರಾಜಕೀಯದವುಗಳು ಚಡಪಡಿಸುತ್ತವೆ.
ಬೋಟಿಂಗ್ ವ್ಯವಸ್ಥೆಮಾಡಿ
ಕ್ಲಬ್ ಹೌಸ್ ಹೊಕ್ಕು ಗುಂಡು ಹಾಕಲು
ಮೈ ಕೊಳೆ ತೊಳೆದುಕೊಳ್ಳುವ ಲಾರಿಗಳು –
ಕೆರೆಯಲ್ಲೇ ಹೇತು
ಕುಂಡಿ ತೊಳೆದುಕೊಳ್ಳುವ
ಜೋಪಡಿ ಪಟ್ಟಿಸಾಲು ಜನಗಳು –
ಎಲ್ಲವೂ ಆಕ್ರಮಿಸಿ ಮುಗಿದೇ ಹೋಗಿತ್ತು.
ಎದೆಯೊಳಕ್ಕೆ ನೋವು ನಾಟಿತ್ತು
ಮೈಮರೆತ ಹರೆಯದ
ಕೆರೆ ಎಚ್ಚರಾದಾಗ
ನೋವು ಹತಾಶೆ ಶೋಷಣೆ
ಈಗ: ಈಗೀಗ ರೊಚ್ಚುಕಿಚ್ಚು
ಕೆರೆಗೆ.
ಅಂತೆಯೇ ಏನೋ
ಬಹಳ ದಿವಸದ ಮೇಲೆ
ಇಂದು ನೋಡಿದಾಗ
ತನ್ನ ತಾ ಸುಟ್ಟುಕೊಂಡು
ಆತ್ಮಹತ್ಯ ಮಾಡಿಕೊಂಡ ಪಳೆಯುಳಿಕೆಗಳ
ಬತ್ತಿದ ನೆಲ ನೋಡಿ
ಗಂಟಲು ತುಂಬಿ
ಕೈಮುಗಿದು ಈಗಷ್ಟೇ
ಮರಳುತ್ತಿದ್ದೇನೆ ಗುಂಡಿಗೆಯ
ರಕ್ತದೊತ್ತಡ ಪರೀಕ್ಷಿಸಿಕೊಳ್ಳಲು.
*****