ಎಲ್ಲರಿಗೂ ಒಂದೊಂದು ಚಾಳಿ
ಇರುವುದಿಲ್ಲವೆ, ಹೇಳಿ.
ಹಳೆ ಆಲದ ಮರದಿಂದ ತಲೆಕೆಳಗಾಗಿ ತೂಗುವ ಬೇತಾಳನಿಗೆ
ವಿಕ್ರಮಾದಿತ್ಯನ ಹೆಗಲಮೇಲೆ ಸವಾರಿ ಮಾಡುತ್ತ
ಅಮವಾಸ್ಯೆಯ ರಾತ್ರಿಗಳಲ್ಲಿ
ಸುಮ್ಮನೇ ಅವನ ಮೌನಮುರಿಯುವ ಕಥಾವಳಿ.
ಪ್ರಶ್ನೆಗಳನ್ನು ಹಾಕುತ್ತಲೇ ಸಂದೇಹಗಳನ್ನು ಎತ್ತುತ್ತಲೇ
ಸ್ವಸ್ಥರಿಗೆ ಸದಾ ತೊಂದರೆಕೊಟ್ಟ ಸಾಕ್ರೆಟೀಸನಿಗೆ
ಮರಣಶಯ್ಯೆಯಲ್ಲೂ ನೆನಪು
ಯಾವ ದೈವಕ್ಕೊ ತಾನು ಹರಕೆಹೊತ್ತ ಕೋಳಿ.
ದೇಶಭ್ರಷ್ಟನಾಗಿ ತನ್ನ ತ್ರಿಲೋಕಗಳನ್ನು ತಾನೆ ಸೃಷ್ಟಿಸಿಕೊಂಡು
ಎಂದೋ ಕಂಡು ಮತ್ತೆ ಕಾಣದ ಹುಡುಗಿ ಸ್ವರ್ಗದಲ್ಲಿ
ಕೈಹಿಡಿದು ನಡೆಸುತ್ತಿರುವಾಗಲೂ ಡಾಂಟೆಗೆ
ತನ್ನ ದೇಶದ ಬಗ್ಗೆ ಮರುಕಳಿಸುವ ಕಳಕಳಿ.
ಒಂಟಿ ಮರಗಳಿಂದಲೂ, ಕೊಳಗಳಿಂದಲೂ, ಕೊತ್ತಳಗಳಿಂದಲೂ
ತನ್ನ ಸ್ವಂತ ಪ್ರತೀಕಗಳನ್ನು ಆವಾಹಿಸುವಾಗ ಯೇಟ್ಸನಿಗೆ
ರೈಲು ನಿಲ್ದಾಣದಲ್ಲಿ ಹೀಗೆ
ಮಾಡ್‌ಗಾನ್ ಹಿಂದೆಸೆದು ನಿಂತ ನಿಲುವಳಿ.
ಮತ್ತೆ ಈ ಅರಬೀಸಮುದ್ರ ಮತ್ತು ಪಶ್ಚಿಮಘಟ್ಟಗಳ ನಡುವೆ
ಅ-ರಾಜಕೀಯವಾಗಿ ಬೆಳೆದಿದ್ದ ನಮಗೆ
೧೯೫೬ರಿಂದೀಚೆಗೆ
ಕಾಸರಗೋಡು ಕರ್ನಾಟಕ ಪ್ರಾಂತೀಕರಣ ಚಳುವಳಿ.
ಎಲ್ಲರಿಗೂ ಅವರವರ ಚಾಳಿ
ಇರುವುದಿಲ್ಲವೆ, ಹೇಳಿ.
*****