ಮನ ನಿರ್ಮಳವ ಮಾಡಿದೆನೆಂದು,
ತನುವ ಕರಗಿಸಿ, ಮನವ ಬಳಲಿಸಿ,
ಕಳವಳಿಸಿ, ಕಣ್ಣು ಕಾಣದೆ
ಅಂಧಕರಂತೆ ಮುಂದು ಗಾಣದೆ,
ಸಂದೇಹದಲ್ಲಿ ಮುಳುಗಿರುವ ಮನುಜರಿರಾ.
ನೀವು ಕೇಳೀರೋ, ಹೇಳಿಹೆನು.
ಆ ಮನವ ನಿರ್ಮಳವ ಮಾಡಿ,
ಆ ಘನವ ಕಾಂಬುವದಕ್ಕೆ
ಆ ಮನ ಎಂತಾಗಬೇಕೆಂದರೆ,
ಗಾಳಿ ಬೀಸದ ಜಲದಂತೆ,
ಮೋಡವಿಲ್ಲದ ಸೂರ್ಯನಂತೆ,
ಬೆಳಗಿದ ದರ್ಪಣದಂತೆ,
ಮನ ನಿರ್ಮಳವಾದಲ್ಲದೆ,
ಆ ಮಹಾಘನವ ಕಾಣಬಾರದೆಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ