ಆಮೆ ಏಡಿಯಂತಲ್ಲ
ಅದು ಸರೋವರದ ನಡುಗಡ್ಡೆಯಂತೆ ಪ್ರಶಾಂತವಾಗಿರುತ್ತದೆ.
ಏಡಿಯೋ
ಕೆಟ್ಟದಾಗಿ ಕಟ್ಟಿದ ಗಂಟಿನಂತೆ ಅಸ್ವಸ್ಥವಾಗಿರುತ್ತದೆ.
ಆಮೆ ಆನೆಯಂತಲ್ಲ
ಅದು ಬೇಕೆಂದಾಗ ಕೈಕಾಲುತಲೆಗಳನ್ನು ಒಳಗಿಟ್ಟುಕೊಳ್ಳುತ್ತದೆ.
ಆನೆಯೋ
ಭಾರವಾದ ಸೊಂಡಿಲನ್ನು ಕೂಡ ತೂಗಿಕೊಂಡೇ ನಡೆಯಬೇಕಾಗುತ್ತದೆ.
ಆಮೆ ಮೊಲದಂತಲ್ಲ
ಅದು ಮೆಲ್ಲಮೆಲ್ಲಗೆ ನಡೆದುಕೊಂಡಾದರೂ ತನ್ನ ಗುರಿಯನ್ನು ತಲಪುತ್ತದೆ.
ಮೊಲವೋ
ಅರ್ಧಹಾದಿಯಲ್ಲಿ ನಿದ್ದೆಹೋಗಿ ವಾಪಸು ಮರಳುತ್ತದೆ.
ಆಮೆ ಮನುಷ್ಯನಂತಲ್ಲ
ಅದು ಇಡೀ ಜಗತ್ತನ್ನೆ ಬೆನ್ನಮೇಲೆ ಹೊತ್ತು ನಿಲ್ಲುತ್ತದೆ.
ಮನುಷ್ಯನೋ
ಭೂಮಿಗೆ ಭಾರವಾಗಿ ಸಂಚರಿಸುತ್ತಿರುವುದು ನಮಗೆಲ್ಲಾ ಗೊತ್ತೇ ಇದೆ.
ಆದರೆ ಮಾತ್ರ ಎಲ್ಲಾದರೂ
ಅದು ಮಗುಚಿ ಬಿತ್ತೆಂದರೆ ಅದರ ಅವಸ್ಥೆ ಯಾರಿಗೂ ಬೇಡ.
ಇಡೀ ಜಗತ್ತೇ
ಅದನ್ನು ನೋಡಿ ನಗುವುದು, ಹೊಟ್ಟೆಯನ್ನು ತಡವುವುದು.
*****