ತೋಡುಗಳಿಂದ ಹೊಳೆಗೆ ಹೊಳೆಯಿಂದ ನದಿಗೆ
ಹೋಗುವೆನು. ಹಲವು ಭೂಖಂಡಗಳ ನದಿಗಳಲ್ಲಿ
ಈಜಾಡುವೆನು. ಹಲವು ನದಿಗಳ ನೀರು
ಕುಡಿಯುವೆನು. ಏಳು ಸಮುದ್ರಗಳನ್ನು
ಹೊಗುವೆನು. ತಿಮಿಂಗಿಲಗಳನ್ನು ನುಂಗುವೆನು.
ನನ್ನ ಮೈಕಾಂತಿಗೆ ನಕ್ಷತ್ರಗಳು
ಅಸೂಯೆಗೊಳ್ಳುವುದಿದೆ. ಮುಳುಗಿದ ಹಡಗುಗಳಿಂದ
ನಾನೊಂದು ತಂತಿ ವಾದ್ಯವನ್ನು ಮಾಡಿ
ನುಡಿಸುವುದಿದೆ.
ಎಲ್ಲ ಸಾಧನೆಗಳನ್ನೂ ತಿರಸ್ಕರಿಸುತ್ತಲೇ ಬಂದವನು
ನಾನು. ನೀರಿನಿಂದ ನೆಲಕ್ಕೆ ನೆಲದಿಂದ
ಮರಕ್ಕೆ. ಏರುವವನಿಗೇತರ ಮಿತಿ?
ತಿರುಗಿ ನೋಡದ ಗತಿಗೆ ಹೊಸ ಹೊಸ
ಕ್ಷಿತಿಜಗಳು ಕಾಣಿಸುತ್ತಲೇ ಇರುವುವು.
ರೆಕ್ಕೆಗಳು ಬರುವುದಿದೆ ನನಗೆ-ದೊಡ್ಡ ದೊಡ್ಡ
ರೆಕ್ಕೆಗಳು. ಆಕಾಶದಲ್ಲಿ ಹಾರುತ್ತ
ಇಡೀ ಲೋಕವನ್ನೇ ನಾನು ಕತ್ತಲೆಯಲ್ಲಿ
ಕೆಡಹುವುದಿದೆ.
*****