‘ಈ ಬಾರಿ ನಮ್ಮದು ಇನ್ನೂ ದೊಡ್ಡ ಸಾಹಸವಾಗಬೇಕು ಸರ್.’ ಮಂಚ ನನ್ನ ಮನೆಯ ಮಹಡಿಯ ಅಧ್ಯಯನ ಕೊಠಡಿಯಲ್ಲಿ ನನ್ನೆದುರು ಕುಳಿತು ಮಾತಾಡುತ್ತಿದ್ದ.
ಅವನಿಗೆ ತುಂಬಾ ಖುಷಿಯಾಗಿತ್ತು.
ಮಂಡೆಕೋಲು ಬಾಂಜಾರದಲ್ಲಿ ನಾವು ನಡೆಸಿದ ಸಾಹಸವನ್ನು ಅವನು ಪತ್ರಿಕೆಗಳಿಗೆ ತಿಳಿಸಿದ್ದ. ಸ್ಥಳೀಯ ಪತ್ರಿಕೆಗಳಲ್ಲಿ ಚಿತ್ರ ಸಹಿತ ಲೇಖನ ಪ್ರಕಟಿಸಿದ್ದ. ಅರ್ಥಶಾಸ್ತ್ರದ ಮೇಸ್ಟ್ರು ಗುಹೆ ನುಗ್ಗಿದ್ದಕ್ಕಿಂತಲೂ ಬದುಕಿ ಬಂದದ್ದೇ ಹೆಚ್ಚು ಸುದ್ದಿಯಾಗಿತ್ತು. ಕೆಲವರಿಗೆ ವಿಷಾದವೂ! ‘ನಿನ್ನ ಪೆರ್ಗುಡೆ ಮಾಟೆಯಲ್ಲಿ ನಾನು ಸಿಕ್ಕಿ ಹಾಕಿಕೊಂಡು ಹೊರ ಬಂದದ್ದೇ ಸಾಕು. ಇನ್ನೆಲ್ಲಿ ನನ್ನ ಜೀವ ತೆಗೀಬೇಕೂಂತಿದ್ದೀಯಾ?
‘ಸುಮ್ಮನಿರಿ ಸರ್ ನೀವು. ಹಾಗೇನೂ ಆಗುತ್ತಿರಲಿಲ್ಲ. ನಿಮ್ಮ ಶ್ವಾಸ ಕಟ್ಟುತ್ತಿದ್ದರೆ ಮಾಯಿಲಪ್ಪ ನಿಮ್ಮನ್ನು ಹಿಂದಕ್ಕೆ ಎಳೀತಿದ್ದ. ಗುಹೆಗೆ ನುಗ್ಗಿದಲ್ಲಿಂದಲೇ ನೀವು ಮೇಲಕ್ಕೆ ಬರಬಹುದಿತ್ತು. ನಾವು ಗಡಿನಾಡು ಮಂಡೆಕೋಲಿನವರು ಸರ್. ನಮ್ಮನ್ನೇನು ಕೈಲಾಗದ ಚಕ್ಕಾಗಳೆಂದು ಅಂದ್ಕೋಬೇಡಿ.’
ನಾಸ್ತಿಕರಿಗೆ ಹೆದರುವ ಭೂತ
ನನಗೆ ಮಂಚನ ಮೇಲೊಂದು ಮಮತೆ ಬೆಳೆದು ಹೋಗಿತ್ತು. ಮಂಡೆಕೋಲಿನ ಮೇಲೂ. ಅಲ್ಲಿ ನಾನು ತುಂಬು ನಿರೀಕ್ಷೆ ಇರಿಸಿದ್ದ ಸುಂದರ ಕೇನಾಜೆಯಿದ್ದ. ಸಣ್ಣ ಪುಟ್ಟ ವಿಷಯಕ್ಕೂ ಫೋನ್ ಮಾಡಿ ಕಾಡುತ್ತಿದ್ದ ಮಧುರಾ ಇದ್ದಳು. ಯಾವಾಗ ಹೋದರೂ ಊಟ ಹಾಕುವ ತ್ಯಾಂಪಣ್ಣ ಗೌಡರ ಮನೆಯಿತ್ತು. ನಮ್ಮ ಪ್ರಾಚಾರ್ಯರಾಗಿದ್ದ ಬಾಲಚಂದ್ರ ಗೌಡರು ಹೇಳುತ್ತಿದ್ದ ಅನೇಕ ಭಯಾನಕ ಕತೆಗಳಿದ್ದವು. ತುಂಬು ಸ್ಟೈಲಿಷ್ ಜಂಟಲ್‌ಮನ್ ಮಾವಜಿ ಮುದ್ದಪ್ಪ ಇದ್ದರು. ಪಾಂಡುರಂಗ, ಶಶಿ, ಸುರೇಶ, ಮಾಯಿಲಪ್ಪ, ಅನಂತ……..ಎಲ್ಲಕ್ಕಿಂತ ಮಿಗಿಲಾಗಿ ಎಲ್ಲಾ ಪುಸ್ತಕಗಳನ್ನು ಕೊಂಡು ಓದಿ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದ ಗುಡ್ಡಪ್ಪ ಮಾಸ್ತರರಿದ್ದರು. ನನ್ನ ಬೈಗಳನ್ನು ತಿಂದೂ ತುಂಬಾ ಕೂಲಾಗಿ ರಿಯಾಕ್ಟ್ ಮಾಡುತ್ತಿದ್ದ ಮಂಚನ ಯಾವುದೇ ಐಡಿಯಾವನ್ನು ತಳ್ಳಿಹಾಕಲು ನನ್ನಿಂದ ಸುಲಭವಾಗಿ ಸಾಧ್ಯವಿರಲಿಲ್ಲ.
‘ಈ ಬಾರಿ ನಾವು ಹೋಗುವುದು ಕೌಡಿಕಾನಕ್ಕೆ’ ೮೯೮ನನ್ನ ಹುಬ್ಬುಗಳು ಮೇಲೇರಿದವು.
ಬಹಳ ದಿನಗಳಿಂದ ಅವನು ಕೌಡಿಕಾನದ ಭಯಾನಕ ಅರಣ್ಯದ ಬಗೆಗಿನ ದಂತಕತೆಗಳನ್ನು ನನಗೆ ಹೇಳುತ್ತಿದ್ದ. ಕೆಲವನ್ನು ನಾನು ಎಳವೆಯಲ್ಲೇ ಕೇಳಿದ್ದೆ.
‘ಅಲ್ಲಿಗೆ ಹೋದವರು ಇಲ್ಲಿಯವರೆಗೆ ವಾಪಾಸು ಬಂದುದಿಲ್ಲ.’
‘ಅಲ್ಲಿ ಹಾದಿ ತಪ್ಪಿಸುವ ಬಳ್ಳಿಗಳಿವೆ. ಅವನ್ನು ಮುಟ್ಟಿದವರು ಅರಣ್ಯದಲ್ಲಿ ಅಲೆದೂ ಅಲೆದೂ ನಿಗೂಢವಾಗಿ ಕಣ್ಮರೆಯಾಗಿ ಹೋಗುತ್ತಾರೆ.’
‘ಅಲ್ಲಿಗೆ ಹಾದಿತಪ್ಪಿ ಹೋದ ದನಕರುಗಳು ಮತ್ತೆಲ್ಲೂ ಕಾಣಸಿಕ್ಕಿಲ್ಲ.’
ಇಂಥಾ ಕಾಡಿಗೆ ನಾವು ಹೋಗಬೇಕೇಕೆ?
‘ಏಕೆಂದರೆ ಸರ್ ಅವೆಲ್ಲಾ ಮೂಢನಂಬಿಕೆಗಳೆಂದು ಸಾಬೀತು ಪಡಿಸಲಿಕ್ಕೆ. ಆದರೆ ಸರ್ ನಮ್ಮೂರಿಂದ ಯಾರೂ ಹೊರಡುತ್ತಿಲ್ಲ. ನಮಗೆ ದಾರಿ ಗೊತ್ತಿಲ್ಲ. ಗೊತ್ತಿರುತ್ತಿದ್ದರೂ ಅಲ್ಲಿ ಹೋಗಿ ಸಾಯಲು ಮನಸ್ಸಿಲ್ಲ ಅಂತಾರೆ.’
‘ಅಲ್ಲಿಗೆ ಹೋಗಿ ಸತ್ತವರು ಎಷ್ಟು ಮಂದಿ ಮಂಚ?’
‘ಖಚಿತವಾಗಿ ಗೊತ್ತಿಲ್ಲ ಸರ್. ಒಬ್ಬರು ಪೂಜೆ ಭಟ್ಟರು ಅಲ್ಲಿನ ರಕ್ತೇಶ್ವರಿಗೆ ತಂಬಿಲ ಕೊಡಲು ಹೋದವರು ಮತ್ತೆ ಬರಲಿಲ್ಲವಂತೆ. ಮಂತ್ರವೇತ್ತ ಬ್ರಾಹ್ಮಣನಿಗೇ ಆ ಗತಿಯಾದರೆ ತುಂಡು, ಗುಂಡು ಹೊಡೆಯುವ ಶೂದ್ರರಾದ ನಮ್ಮ ಕತೆಯೇನು ಎಂದು ಎಲ್ಲರೂ ಹೆದರುತ್ತಿದ್ದಾರೆ.’
‘ಅಲ್ಲಿ ಯಾವುದಾದರೂ ಕಳ್ಳಭಟ್ಟಿಯ ಅಥವಾ ಮರಗಳ್ಳರ ಗ್ಯಾಂಗು ಇದೆಯಾ ಮಂಚ?’
‘ಅವೆಲ್ಲಾ ನನಗೆ ಹೇಗೆ ಗೊತ್ತಾಗಬೇಕು? ನೀವು ಬಂದರೆ ಹೋಗಿ ನೋಡಬಹುದು ಸರ್.’
ನನಗೆ ರೇಗಿ ಹೋಯಿತು.
‘ಎಂಥಾ ಬೋದಾಳ ಮಾರಾಯ ನೀನು? ನಾನು ನೀನು ಇಬ್ರೇ ಆ ಭಯಾನಕ ಕಾಡಿಗೆ ಹೋದ್ರೆ ಏನಾಗುತ್ತೆ ಯೋಚಿಸಿದ್ದೀಯಾ? ಕಳ್ಳ ಭಟ್ಟಿಯವರದೋ, ಮರಗಳ್ಳರದೋ ಗುಂಡಿಗೆ ಬಲಿಯಾಗಿ ಬಿಡ್ತೇವೆ. ತಲೆಕೆಟ್ಟಿದೆಯೇನಯಯ್ಯ ನಿನ್ಗೆ?’
ಮಂಚ ಎಂದಿನ ಕೂಲ್ ಸ್ವರದಲ್ಲಿ ಉತ್ತರಿಸಿದ.
‘ನೀವು ಬರುವುದಾದರೆ ಇಪ್ಪತ್ತು ಜನ ಹೊರಡುತ್ತಾರೆ ಸರ್.’
‘ನಾನು ಬಂದ್ರೆ ಪರಿಸ್ಥಿತಿ ಬದಲಾಗುತ್ತಾ? ಏನಯ್ಯ, ಅವ್ರಿಗೂ ತಲೆ ಕೆಟ್ಟಿದೆಯಾ?’
ಹಾಗಲ್ಲ ಸರ್, ನೀವು ನಾಸ್ತಿಕರೂಂತ ಎಲ್ರೂ ಭಾವಿಸಿದ್ದಾರೆ. ನಾಸ್ತಿಕರನ್ನು ಕಂಡ್ರೆ ಭೂತ, ಪ್ರೇತಗಳು ಹೆದ್ರಿಕೊಳ್ಳುತ್ತವಂತೆ. ಅದ್ಕೇ ನೀವಿದ್ರೆ ಎಲ್ರಿಗೂ ಧೈರ್ಯ ಸರ್!’
ನನಗೆ ನಗು ಬಂತು.
ದೇವರು, ದಿಂಡರು, ಭೂತ, ಅಷ್ಟಮಂಗಲ ಜಾತಕ, ಪಂಚಾಂಗ ಎಂದೆಲ್ಲಾ ಹೇಳಿ ಜನರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಜೀವಿಸುವ ಪುರೋಹಿತರುಗಳು ಆರ್ಥಿಕ ಅಭಿವೃದ್ಧಿಗೆ ಹೇಗೆ ಅಡ್ಡಿಯಾಗಿದ್ದಾರೆ ಎಂಬುದನ್ನು ಭಾರತದ ಬಡತನದ ಬಗ್ಗೆ ಪಾಠ ಮಾಡುವಾಗ ನಾನು ಹೇಳಲೇಬೇಕಿತ್ತು.
ಅದಕ್ಕೆ ನಾನು ಪುರೋಹಿತ ವರ್ಗಕ್ಕೆ ನಾಸ್ತಿಕನಾಗಿದ್ದೆ. ಜಾತಿ, ದೇವರು ಧರ್ಮದ ಹೆಸರಲ್ಲಿ ರಾಜಕೀಯ ಮಾಡುವವರಿಗೆ ಕಮ್ಯುನಿಸ್ಟನೂ ಆಗಿದ್ದೆ!
‘ನಾನು ಬರ್ತೀನಿ. ನಿನ್ನ ಊರವ್ರಿಗೆ ಹೇಳು. ಅವರೂ ನನ್ನಂತಹ ನಾಸ್ತಿಕರಾಗಿ ಬಿಡಲಿ. ಮತ್ತೆ ಭೂತ, ಪ್ರೇತ, ರಣ, ಪಿಶಾಚಿಗಳಿಗೆ ಹೆದರಬೇಕಾದ ಅಗತ್ಯವಿರುವುದಿಲ್ಲ.’ ಮಂಚನಿಗೆ ನಾನೇನೆಂಬುದು ಖಚಿತವಾಗಿ ಗೊತ್ತಿತ್ತು.
ಒಂದು ಲೇಖನದಲ್ಲಿ ಅವನು ನಮ್ಮ ಗುರುಗಳು ಕತೆ ಬರಿಯೋದು ಶೋಷಣಾ ರಹಿತ ಸರ್ವ ಸಮಾನತೆಯ ಸಾಮಾಜಿಕ ವ್ಯವಸ್ಥೆಯ ಸೃಷ್ಟಿಗಾಗಿ ಎಂದು ಬರೆದಿದ್ದ.
ನೀನು ಒಬ್ಬನಾದರೂ ನನ್ನನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಿ ಮಂಚ ಎಂದು ಅವನ ಬೆನ್ನು ತಟ್ಟಿದ್ದೆ.
‘ಸರಿ ಸರ್ ಹಾಗಾದರೆ. ನಾನು ದಿನ ನಿಗದಿ ಮಾಡಿ ಮತ್ತೆ ನಿಮ್ಮನ್ನು ಕಾಣ್ತೀನಿ’
ಕಾಣುವ ದೇವರು
ಒಂದು ವಾರ ಕಳೆದಿರಲಿಕ್ಕಿಲ್ಲ. ಮಂಚ ಶಶಿಧರನೊಡನೆ ಮನೆಗೆ ಬಂದ.
‘ನಮಗೆ ಯಾರಿಗೂ ದಾರಿ ಗೊತ್ತಿಲ್ಲ ಸರ್. ಕೊನೆಗೆ ನಾವು ಕೌಡಿಕಾನ ರಕ್ತೇಶ್ವರಿಗೆ ತಂಬಿಲ ನೀಡಲು ಹೋಗುವ ತಂಡದೊಡನೆ ಹೋಗುವುದೆಂದು ತೀಮಾರ್ನಿಸಿದ್ದೇವೆ. ಅವ್ರು ಹತ್ತು ಮಂದಿ, ನಾವು ಸುಮಾರು ಇಪ್ಪತೈದು. ನಾಳೆ ಬೆಳಿಗ್ಗೆ ಆರು ಗಂಟೆಗೆ ಅಡೂರಿ ನಿಂದ ಪಯಣ.’
ದಕ್ಷಿಣ ಕನ್ನಡದಲ್ಲಿ ದೇವತಾರಾಧನೆಗಿಂತಲೂ ಭೂತಾರಾಧನೆಗೆ ಹೆಚ್ಚು ಮಹತ್ವ. ದೇವರಿಗೆ ನೀಡುವ ತಿನಿಸು ನೈವೇದ್ಯವಾದರೆ ಭೂತಗಳಿಗೆ ನೀಡುವುದು ತಂಬಿಲ. ಒಂದು ವೈದಿಕ. ಇನ್ನೊಂದು ಅವೈದಿಕ. ಕೌಡಿಕಾನದಲ್ಲಿ ರಕ್ತೇಶ್ವರಿ ಭೂತ ವಾಸ ಮಾಡುತ್ತಾಳೆ. ಅಡೂರು ದೇವಾಲಯದಲ್ಲಿ ಅವಳದೊಂದು ಪುಟ್ಟ ಕೋಣೆಯಿದೆ. ಅಲ್ಲಿ ಅವಳಿಗೆ ದಿನಾ ಆರೋಗಣೆಯಿದೆ. ಅವಳ ಮೂಲಸ್ಥಾನವಾದ ಕೌಡಿಕಾನ ಅರಣ್ಯದಲ್ಲಿ ವರ್ಷಕ್ಕೊಮ್ಮೆ ತಂಬಿಲ. ಅದಕ್ಕೆ ಅರ್ಚಕರು, ಭೂತದ ಪಾತ್ರಿ ಮತ್ತು ಭೂತಕ್ಕೆ ಸಂಬಂಧಿಸಿದ ಏಳೆಂಟು ಮಂದಿ ಮಾತ್ರ ಹೋಗುವುದು. ಬೇರಾರಿಗೂ ಅವಕಾಶವಿಲ್ಲ.
‘ಅಂದ ಮೇಲೆ ನಮ್ಮ ತಂಡದ ಇಪ್ಪತೈದು ಮಂದಿಯನ್ನು ಅವರು ಕರಕೊಂಡು ಹೋಗಲು ಒಪ್ಪುತ್ತಾರೆಯೆ ? ಇಷ್ಟಾಗಿ ನೀವೆಲ್ಲಾ ನಾಸ್ತಿಕನೆಂದೂ, ಕಮ್ಯುನಿಸ್ಟನೆಂದೂ ನನ್ನ ಮೇಲೆ ಅಪಾರ ಮೂಢನಂಬಿಕೆ ಇರಿಸಿದವರು. ನನ್ನನ್ನು ಅವರು ಸಹಿಸಲು ಸಾಧ್ಯವೇ ಇಲ್ಲ.’
‘ತಂಬಿಲ ತಂಡದ ಮುಖ್ಯಸ್ಥರು ಜಗನ್ನಾಥ ಮತ್ತು ಸತ್ಯನಾರಾಯಣ ನಿಮ್ಮ ಹಳೇ ಶಿಷ್ಯರು ಸರ್. ನಿಮ್ಮ ಮೇಲೆ ಅವರಿಗೆ ಅಪಾರ ಪ್ರೀತಿ.’
‘ಗುರುಗಳ ಮೇಲಣ ಪ್ರೀತಿಗಿಂತ ದೇವರ ಮೇಲಣ ಭಕ್ತಿ ದೊಡ್ಡದಲ್ವೇನಯಯ್ಯ?’
‘ಸುಮ್ಮನೆ ನನ್ನ ಕೆಣಕಬೇಡಿ ಸರ್. ಗುರುಗಳೇ ಕಣ್ಣಿಗೆ ಕಾಣುವ ದೇವರು ಎಂದು ಜಗನಾನಥ ಹೇಳಿದ್ರು!’
ನಾನು ಮರುಮಾತಾಡದೆ ಅವನೊಡನೆ ಹೊರಟೆ. ಆ ರಾತ್ರಿ ನಾನು ತ್ಯಾಂಪಣ್ಣ ಗೌಡರ ಮನೆಯಲ್ಲಿ ಉಳಕೊಂಡೆ. ನನನ ಪುಸ್ತಕಗಳನ್ನು ಕೊಂಡು ಓದುವ ಗುಡ್ಡಪ್ಪ ಮಾಸ್ತರರು ಅವರ ಖಾಸಾ ತಮ್ಮ.
ರಾತ್ರಿ ತುಂಬಾ ಹೊತ್ತು ಗುಡ್ಡಪ್ಪ ಮಾಸ್ತರರು ಪುಸ್ತಕಗಳ ಬಗ್ಗೆ ನನ್ನೊಡನೆ ಮಾತಲ್ಲಿ ಕಳೆದರು.
ಬೆಳಿಗ್ಗೆ ಐದಕ್ಕೆ ಸರಿಯಾಗಿ ಎದ್ದು ಸ್ನಾನ ಮುಗಿಸಿ, ಎರಡು ಇಡ್ಲಿ ಹೊಟ್ಟೆಗೆ ಸೇರಿಸಿ ಎರಡು ಜೀಪುಗಳಲ್ಲಿ ನಾವು ಅಡೂರಿಗೆ ಪಯಣಿಸಿದೆವು. ಮಂಡೆಕೋಲಿನಿಂದ ಅಲ್ಲಿಗೆ ನಾಲ್ಕು ಕಿ.ಮೀ. ದೂರ. ಭಯಾನಕ ಏರಿಳಿತ ಮತ್ತು ತಿರುವುಗಳ ರಸ್ತೆಯಲ್ಲಿ ಸಾಗುವುದೇ ದೊಡ್ಡ ಯಮ ಸಾಹಸ!
ಅಡೂರು ದೇವಾಲಯದಿಂದ ತಂಬಿಲ ತಂಡ ಹೊರಟಾಗ ಗಂಟೆ ಎಂಟು. ತ್ಯಾಂಪಣ್ಣ ಗೌಡರ ಎರಡು ಇಡ್ಲಿ ಪಾತಾಳಗರಡಿಗೂ ಸಿಗದ ಹಾಗೆ ಎಂದೋ ಕರಗಿ ಹೋಗಿತ್ತು. ಏನಾದರೂ ತಿಂದು ಹೋರಡೋಣವೆಂದರೆ ಮಂಚ ಅಡ್ಡಿ ಪಡಿಸಿದ.
‘ಕೌಡಿಕಾನಕ್ಕೆ ಹೋಗುವವರು ಸ್ನಾನ ಮಾಡಿ, ಏನನ್ನೂ ಸೇವಿಸದೆ ಹೋಗಬೇಕು ಸರ್. ನೀವೇನಾದ್ರೂ ತಿಂದಿರೋ, ನಿಮ್ಮನ್ನು ವಾಪಾಸ್ ಕಾಂತಮಂಗಲಕ್ಕೇ ಕಳಿಸಿಬಿಡ್ತಾರೆ.’
ಪುಣ್ಯಕ್ಕೆ ನಾನು ಮತ್ತು ಗುಡ್ಡಪ್ಪ ಮಾಸ್ತರರು ಎರಡೆರಡು ಇಡ್ಲಿ ಕತ್ತರಿಸಿಯೇ ಬಂದದ್ದು ಮಂಚನಿಗೆ ಗೊತ್ತಿರಲಿಲ್ಲ.
‘ಆದ್ರೆ ಮಂಚಾ, ಆ ಕಾಡಿನಲ್ಲಿ ನಮ್ಮ ಹೊಟ್ಟೆಗೇನು ಸಿಗುತ್ತೊ?’
‘ತಂಬಿಲ ತಂಡದವರು ಅವಲಕ್ಕಿ, ಬೆಲ್ಲ, ಎಳನೀರು, ಬಾಳೆಹಣ್ಣು ಹೊತ್ತ್ಯೊತಾರೆ ತಂಬಿಲಕ್ಕೆ. ಅವೆಲ್ಲಾ ನಮಗೇ ಅಲ್ವಾ ಸರ್?’
ನಾನು ಮಾತಾಡಲಿಲ್ಲ. 90/140ರ ಬಿ.ಪಿ.ಯವನು ನಾನು. ಹಸಿವೆ ಆರಂಭವಾಯಿತೆಂದರೆ ಮತ್ತೆ ಕೈಕಾಲು ನಡುಕ, ತಲೆ ಸುತ್ತು. ಕಂಡದ್ದೆಲ್ಲಾ ತಿನ್ನಬೇಕೆಂಬ ಬ್ಯುಲೀಮಿಯಾ! ಈಗಲೇ ಹೊಟ್ಟೆ ತಾಳ ಹಾಕುತ್ತಿದೆ. ಇನ್ನು ಹತ್ತು ಕಿ. ಮೀ. ನಡೆದು ರಕ್ತೇಶ್ವರಿಗೆ ತಂಬಿಲ ನೀಡುವ ವರೆಗೆ ನನ್ನ ಹೊಟ್ಟೆ ತಡಕೊಳ್ಳುತ್ತಾ?
ನಮ್ಮ ತಂಡದ ಯುವಕರು ಯಾರೂ ಹೊಟ್ಟೆಯ ಬಗ್ಗೆ ತಲೆಕೆಡಿಸಿಕೊಂಡದ್ದು ಕಾಣಲಿಲ್ಲ. ನನಗಿಂತ ಹಿರಿಯರಾದ ಗುಡ್ಡಪ್ಪ ಮಾಸ್ತರರೂ ಹೊಟ್ಟೆಯನ್ನು ಮರೆತಂತಿದ್ದರು. ನನಗೆ ಬೇರಾವ ದಾರಿಯೂ ಕಾಣಲಿಲ್ಲ.
ಅಡೂರು ದೇವಾಲಯದಲ್ಲಿ ಬಲಿಪೂಜೆಯಾಗಿ ತಂಬಿಲ ತಂಡದೊಡನೆ ನಾವು ಕೌಡಿಕಾನಕ್ಕೆ ನಡೆಯತೊಡಗಿದವು. ತಂಬಿಲ ತಂಡದ ಹತ್ತು ಮಂದಿಯೊಡನೆ ನಾವು ಇಪ್ಪತೈದು. ನಮ್ಮ ತಂಡಕ್ಕೆ ಅನ್ವೇಷಣಾ ಬಳಗ ಎಂದು ನಾನು ಮಾಡಿದ್ದ ಅನಧಿಕೃತ ನಾಮಕರಣವನ್ನು ತಕರಾರಿಲ್ಲದೆ ಎಲ್ಲರೂ ಒಪ್ಪಿಕೊಂಡಿದ್ದರು.
‘ಇಷ್ಟು ಜನ ತಂಬಿಲಕ್ಕೆ ಹೋಗಬಾರದು ಸರ್. ಹನ್ನೆರಡಕ್ಕಿಂತ ಹೆಚ್ಚು ನಾವು ಹೋದದ್ದೇ ಇಲ್ಲ. ಗುರುಗಳೇ ಕೇಳಿದ ಮೇಲೆ ಇಲ್ಲವೆಂದರೆ ಆ ರಕ್ತೇಶ್ವರಿ ಮೆಚ್ತಾಳಾ ಸರ್?’
ತಂಬಿಲ ತಂಡದ ಮುಖ್ಯಸ್ಥ ನನ್ನ ಶಿಷ್ಯ ಜಗನ್ನಾಥ ನನ್ನನ್ನೇ ಪ್ರಶ್ನಿಸಿದ.ನಾನು ಉತ್ತರಿಸಲಿಲ್ಲ..
ಅವನು ವಿದ್ಯಾರ್ಥಿಯಾಗಿದ್ದ ಮೂರು ವರ್ಷಗಳಲ್ಲಿ ತರಗತಿಯಲ್ಲಿ ನಾನು ಕೇಳಿದ್ದ ಒಂದೇ ಒಂದು ಪ್ರಶ್ನೆಗೂ ಉತ್ತರಿಸಿರಲಿಲ್ಲ. ಮುಯ್ಯಿಗೆ ಮುಯ್ಯಿ!
ಅಡೂರು ದೇವಾಲಯದಿಂದ ಬಳ್ಳಿಕಾನದ ವರೆಗೆ ರಸ್ತೆಯಿದೆ. ಆ ಮೂರು ಕಿ.ಮೀ. ಕ್ರಮಿಸಿ, ರಸ್ತೆ ಬಿಟ್ಟು ಒಳಹಾದಿ ಹಿಡಿದಾಗ ಧುತ್ತೆಂದು ಎದುರಾಯಿತು ಕಡಿದಾದ ಬಳ್ಳಿಕಾನ ಗುಡ್ಡ. ಅದನ್ನು ಹತ್ತುವಾಗ ಎಂತಹ ಯುವಕರೂ ಉಸ್ಸಪ್ಪಾ ಎನ್ನಬೇಕು. ನಮ್ಮ ತಂಡದ ಚಿರತರುಣ 56ರ ಹರೆಯದ ಹೈಬೀಪಿ ಕುಖ್ಯಾತಿಯ ಗುಡ್ಡಪ್ಪ ಮಾಸ್ತರರು ಅರ್ಧಗುಡ್ಡ ಹತ್ತಿದವರು ವಿಪರೀತ ದಣಿವಿನಿಂದ ನೆಲದಲ್ಲೇ ಮಲಗಿಬಿಟ್ಟರು. ಬಳ್ಳಿಕಾನದ ಗುಡ್ಡದ ಮೇಲಿರುವ ಕೌಡಿಕಾನ ರಕ್ತೇಶ್ವರಿಯ ಅರ್ಚಕರ ಮನೆಗೆ ಏರಲಾಗದ ಗುಡ್ಡಪ್ಪ ಗೌಡರನ್ನು ಆ ಗುಡ್ಡದ ಕೆಳಗಿರುವ ಏಕೈಕ ಮನೆಗೆ ಹೇಗೋ ಸಾಗಿಸಿದೆವು. ರಕ್ತೇಶ್ವರಿ ತಂಬಿಲ ನೋಡುವ ಯೋಗ ನನಗಿಲ್ಲ ಎಂದು ಗುಡ್ಡಪ್ಪ ಮಾಸ್ತರರು ಹಲುಬಿದರು.
ಬಳ್ಳಿಕಾನದಲ್ಲಿ ಮಂತ್ರವಾದಿ ಗುಳಿಗನ ಕಲ್ಲು ಇದೆ. ರಕ್ತೇಶ್ವರಿಗೆ ತಂಬಿಲ ನೀಡುವ ಮೊದಲು ಅವನಿಗೆ ತಂಬಿಲ ಕೊಟ್ಟರೇನೇ ಕೌಡಿಕಾನಕ್ಕೆ ಹೋದವರು ದಾರಿ ತಪ್ಪದೆ ಬರಲು ಸಾಧ್ಯ. ಗುಳಿಗನ ತಂಬಿಲ ಮುಗಿಸಿ ಸುಮಾರು ಒಂದೂವರೆ ಕಿಲೋಮೀಟರ್ ನಡೆದು ಮುಖ್ಯ ದಾರಿಯಿಂದ ಬಲಕ್ಕೆ ನೂರು ಮೀಟರ್ ಇಳಿದಾಗ ಆನೆಗುಂಡಿ ಸಿಕ್ಕಿತು. ಸುಮಾರು ಇಪ್ಪತ್ತು ಮೀಟರ್ ಆಳ ಮತ್ತು ಹದಿನೈದು ಮೀಟರ್ ಅಗಲದ ಆ ಗುಂಡಿಯಲ್ಲಿ ಹನಿ ನೀರಿರಲಿಲ್ಲ. ಅದರೊಳಗಿನಿಂದ ಎದ್ದು ಬಂದಿದ್ದ ಎರಡು ಬೃಹದಾಕಾರದ ಈಚಲ ಮರಗಳು ಗಗನವನ್ನು ಚುಂಬಿಸುತ್ತಿದ್ದವು. ಒಂದು ಕಾಲದಲ್ಲಿ ಆನೆಗಳ ಓಡಾಟದ ಈ ಸ್ಥಳದಲ್ಲಿ ಈಗ ಆನೆಗಳಿಲ್ಲ.
ನೂರು ಮೀಟರು ಇಳಿದವರು ಒಂದೂವರೆ ಕಿ.ಮೀ. ಕಡಿದಾದ ಗುಡ್ಡ ಪ್ರದೇಶವನ್ನು ಹತ್ತಿದ ಮೇಲೆ ಸಮತಟ್ಟು ಪ್ರದೇಶ ಸಿಕ್ಕಿತು. ಅಲ್ಲಿತ್ತು ಪಾಂಡವರ ಗಡಿಕಲ್ಲು. ಅದು ಮಂಡೆಕೋಲು ಅಡೂರು ಗ್ರಾಮಗಳ ಅನಧಿಕೃತ ಗಡಿಯೂ ಹೌದು. ಅಡೂರು ದೇವರ ಪುರಾಣವು ಶಬರ ಶಂಕರ ವಿಲಾಸದ ವರೆಗೆ ಚಾಚಿಕೊಳ್ಳುವುದರಿಂದ ಗಡಿಯನ್ನು ಈಗಲೂ ಪಾಂಡವರ ಹೆಸರಲ್ಲೇ ಗುರುತಿಸುತ್ತಾರೆ.
ಇದು ಭಯಾನಕ ಕೌಡಿಕಾನ
ಪಾಂಡವರ ಗಡಿಕಲ್ಲು ದಾಟಿ ಅರ್ಧ ಕಿ.ಮೀ. ಸಾಗಿದ ಮೇಲೆ ಕಡಿದಾದ ಇಳಿಜಾರು ಪ್ರದೇಶ ಸಿಕ್ಕಿತು. ಅಲ್ಲಿಂದ ಆರಂಭವಾಗುತ್ತದೆ ಭಯಾನಕ ಕೌಡಿಕಾನ ಅರಣ್ಯ ಪ್ರದೇಶ. ಅಲ್ಲಿ ನಡೆದದ್ದೇ ಹಾದಿ. ಅಕ್ಕ ಪಕ್ಕ ಏನಿದೆಯೆಂದು ಕಾಣಲಾಗದಂತೆ ಹಬ್ಬಿರುವ ಪೊದೆಗಳು, ಗಿಡಗಳು, ಬಳ್ಳಿಗಳು ಮತ್ತು ಸೂರ್ಯರಶ್ಮಿ ನೆಲ ಸೋಂಕದಂತೆ ಎತ್ತರಕ್ಕೆ ಬೆಳೆದ ಬೃಹದಾಕಾರದ ವಿವಿಧ ವರ್ಗಕ್ಕೆ ಸೇರಿದ ವೃಕಗಳು. ಪ್ರಪಾತದಂತಹ ಹಾದಿಯಲ್ಲಿ ಕಾಲು ಜಾರಿದರೆ ನಮ್ಮ ಬಾಯಿಯಿಂದ ಹೊರಡುವುದು ಅಕರಶಃ ಅರಣ್ಯರೋದನವಾಗಿ ಬಿಡುತ್ತದೆ.
ಇದು ಮಾನವ ಸಂಚಾರವಿಲ್ಲದ ಕಾಡು ಎಂಬ ನಮ್ಮ ನಂಬಿಕೆ ಸುಳ್ಳಾದದ್ದು ಬೃಹದಾಕಾರದ ಮರದ ಬುಡಗಳಲ್ಲಿನ ಕಳ್ಳಭಟ್ಟಿ ಸರಾಯಿ ಉತ್ಪಾದನಾ ಘಟಕಗಳನ್ನು ಕಂಡು. ಎಲ್ಲಾ ಮರದ ಬುಡಗಳಲ್ಲಿ ನಾಲ್ಕೋ ಐದೋ ಸರಾಯಿ ಕ್ಯಾನುಗಳು. ಇಲ್ಲಿ ಉತ್ಪಾದನೆಯಾಗುವ ಕಳ್ಳ ಭಟ್ಟಿಗೆ ಪಾನ ನಿಷೇಧವಿರುವ ಕೇರಳದಲ್ಲಿ ಫಲಭರಿತ ಮಾರುಕಟ್ಟೆಯಿದೆ. ಕೌಡಿಕಾನಕ್ಕೆ ಯಾವ ಅಬಕಾರೀ ಪೋಲೀಸನೂ ಬರಲಾರ. ಅದು ಯಾವ ರಾಜ್ಯಕ್ಕೆ ಸೇರಿದ ಕಾಡು ಎಂಬ ಬಗ್ಗೆ ಪೋಲೀಸರಲ್ಲೇ ಸಹಮತ ಇಲ್ಲ.
ಮಂಚ ನನ್ನ ಮುಖವನ್ನು ನೋಡಿದ.
‘ಇಲ್ಲಿಗೆ ಒಬ್ಬರೋ, ಇಬ್ಬರೋ ಬಂದರೆ ವಾಪಸ್ಸು ಹೋಗಲು ಸಾಧ್ಯವೇ ಇಲ್ಲ ಮಂಚ.’
ಮಾಯಿಲಪ್ಪ ಚಟಾಕಿ ಹಾರಿಸಿದ.
‘ತಂಬಿಲ ಮುಗಿದು ಬಿಡಲಿ ಸರ್. ಬರುವಾಗ ತೀರ್ಥ ಸೇವಿಸಿಯೇ ಹೋಗೋಣ. ಕೈಕಾಲು ಮೈ ನೋವು ಯಾವುದೂ ಇರಲ್ಲ.’
ವ್ಯವಸ್ಥಿತ ಕಳ್ಳಭಟ್ಟಿ ದಂಧೆ ನಡೆಯುತ್ತಿರುವ ಕೌಡಿಕಾನದಲ್ಲಿನ ಬೃಹತ್ ವೃಕಗಳು ಇನ್ನೂ ಕೊಡಲಿ ಕಾಣದೆ ಹಾಯಾಗಿವೆ. ಅವಕ್ಕೆ ಭೌಗೋಳಿಕ ಶ್ರೀರಕ್ಷೆ ಇದೆ. ಅವಿರುವುದು ಆಳ ಪ್ರಪಾತದಲ್ಲಿ. ಅವನ್ನು ಮರ ಕಟುಕರು ಕಡಿದು ಹಾಕಿದರೂ ವಾಹನ ಎಂದೆಂದಿಗೂ ಇಳಿಯಲು ಸಾಧ್ಯವಾಗದಿರುವುದರಿಂದ ಒಂದೂವರೆ ಕಿ ಮೀ ಎತ್ತರಕ್ಕೆ ತರುವುದಾದರೂ ಹೇಗೆ? ಆದರೂ ಮನಸ್ಸಿದ್ದಲ್ಲಿ ಮಾರ್ಗ ಇರುತ್ತದೆ!
ಜಗನ್ನಾಥ ಕೌಡಿಕಾನದ ಭಯಾನಕತೆಗೆ ಮೆತ್ತಿಕೊಂಡಿರುವ ರಕ್ತಸಿಕ್ತತೆಯ ಕೆಲವು ಕತೆಗಳನ್ನು ಹೇಳಿದ. ದುರ್ಗಮವಾದ ಕೌಡಿಕಾನ ಅರಣ್ಯ ಅಪರಾಧಿಗಳ ಅಡಗುದಾಣವೂ ಹೌದು. ಕೇರಳದಲ್ಲಿ ರಾಜಕೀಯ ವೈಷಮ್ಮ ಬಹುತೇಕವಾಗಿ ಪರ್ಯಾವಸಾನವಾಗುವುದು ಕೊಲೆಯಲ್ಲಿ. ಕೊಲೆ ನಡೆಸಿದವರು ನ್ಯಾಯದ ಕೈಗಳಿಂದ ಬಚಾವಾಗಲು ಕೌಡಿಕಾನಕ್ಕೆ ಬರುತ್ತಾರೆ. ಅದು ಗೊತ್ತಿದ್ದರೂ ಪೋಲೀಸು ಇಲಾಖೆ ಇಲ್ಲಿಗೆ ಬರುವುದಿಲ್ಲ. ಅರಣ್ಯ ಇಲಾಖೆಯೂ ರಾಜಕೀಯ ಪಕ್ಷ ಬೆಂಬಲಿತ ಅಪರಾಧಿಗಳು ಕಳ್ಳ ಭಟ್ಟಿಯ ವಿಜ್ಞಾನಿಗಳೊಡನೆ ಸೇರಿಕೊಂಡು ಕೌಡಿಕಾನವನ್ನು ಗುಪ್ತ ಅಡಗುದಾಣವನ್ನಾಗಿ ಮಾಡಿಕೊಂಡ ಮೇಲೆ ಇಲ್ಲಿಗೆ ಬಂದವರು ದಾರಿ ತಪ್ಪದಿರಲು ಸಾಧ್ಯವೆ?
ಕಳ್ಳಭಟ್ಟಿ ಸ್ಥಾವರಗಳನ್ನು ನಿರ್ಲಿಪ್ತತೆಯಿಂದ ಹಾದು ಮತ್ತೆ ಅರ್ಧ ಕಿ. ಮೀ. ದೂರ ಇಳಿಯುತ್ತಾ ಹೋದ ಮೇಲೆ ಸಣ್ಣ ತೊರೆಯೊಂದಕ್ಕೆ ಅಡ್ಡಲಾಗಿ ಹಾಕಿದ ಕಲ್ಲಿನ ರಕ್ತೇಶ್ವರಿ ಪಾಲ ಸಿಕ್ಕಿತು. ಅದು ಅರ್ಜುನ ಹಾಕಿದ ಕಲ್ಲು ಅದನ್ನು ಚಪ್ಪಲಿ ಹಾಕಿ ತುಳಿಯ ಬಾರದು ಎಂದ ಜಗನ್ನಾಥ. ಇದು ರಕ್ತೇಶ್ವರಿಯ ಮೂಲಸ್ಥಾನದ ಹೆಬ್ಬಾಗಿಲು. ಆ ಪಾಲಕ್ಕೆ ಪೂಜೆ ಸಲ್ಲಿಸುವುದು ತಂಬಿಲ ಕ್ರಿಯೆಯ ಒಂದು ವಿಧಿ.
ರಕ್ತೇಶ್ವರಿ ಪಾಲದ ಬಳಿಕಿನದು ತುಂಬಾ ದುರ್ಗಮವಾದ ಕಾಡು. ಕಿರಾತಾರ್ಜುನೀಯ ಪ್ರಸಂಗ ಇಲ್ಲೇ ನಡೆದದ್ದು ಎಂದು ಜನ ನಂಬುತ್ತಾರೆ. ಈ ದಟ್ಟಾರಣ್ಯದಲ್ಲಿ ಅರ್ಜುನ ಶಿವಾನುಗ್ರಹಕ್ಕಾಗಿ ತಪಸ್ಸು ಮಾಡಿದ. ಶಿವ ಶಬರನಾಗಿ ಅರ್ಜುನನ ಸತ್ತ್ವ ಪರೀಕೆಗೊಂದು ನಾಟಕ ಹೂಡಿದ. ಹಂದಿಯ ರೂಪದಲ್ಲಿ ಈ ಕಾಡಿನಲ್ಲಿ ಸಂಚರಿಸುತ್ತಿದ್ದ ಮೂಕದಾನವನ ಮೇಲೆ ಇಬ್ಬರೂ ಏಕಕಾಲದಲ್ಲಿ ಶರ ಪ್ರಯೋಗ ಮಾಡಿದರು. ಸತ್ತು ಬಿದ್ದ ಹಂದಿಯ ಸ್ವಾಮ್ಯಕ್ಕಾಗಿ ಕಿರಾತ ಶಂಕರನೊಡನೆ ಅರ್ಜುನ ಕಾದಾಟ ಮಾಡಿ ಸೋತವನು ತೊರೆಯಲ್ಲಿ ಮಿಂದು ಮಳಲ ಲಿಂಗವ ಮಾಡಿ ಪುಷ್ಪಾರ್ಚನೆಗೈದ. ಆ ಪುಷ್ಪಗಳೆಲ್ಲಾ ಶಬರನ ತಲೆಯಲ್ಲಿ ಕಂಗೊಳಿಸುವುದನ್ನು ಕಂಡು ನಿಜವರಿತ ಪಾರ್ಥ ಶಂಕರನಿಗೆ ಶರಣಾದ.
ಶಬರ ಶಂಕರನ ಈ ವಿಲಾಸಕ್ಕೆ ಶಬರಿಯಾಗಿ ಸಹಕರಿಸಿದ್ದ ಪಾರ್ವತಿಗೆ ಕೌಡಿಕಾನದ ಪ್ರಕೃತಿಯ ನಿಗೂಢ ರಮ್ಯತೆ ಬೆಳ್ಳಿ ಬೆಟ್ಟಕ್ಕಿಂತಲೂ ಇಷ್ಟವಾಯಿತು. ಅವಳು ಕೌಡಿಕಾನದಲ್ಲಿ ಶಂಕರನೊಡನೆ ವಿಹರಿಸುವಾಗ ಯಾರಿಂದಲೂ ಅಡ್ಡಿಯುಂಟಾಗಬಾರದೆಂದು ರಕ್ತೇಶ್ವರಿ ಯನ್ನು ಕಾವಲಿಗೆ ನಿಲ್ಲಿಸಿದಳು. ಬೆಳ್ಳಿ ಬೆಟ್ಟದ ಏಕತಾನತೆ ಬೇಸರ ಉಂಟು ಮಾಡಿದಾಗ ಪಾರ್ವತಿ ಶಂಕರನೊಡನೆ ಇಲ್ಲಿಗೆ ವಿಹಾರಕ್ಕೆ ಬರುತ್ತಾಳೆ. ಬೃಹದಾಕಾರದ ವೃಕಗಳ ಟೊಂಗೆಗಳಿಗೆ ಬೆಳ್ಳಿಯ ಹಗ್ಗಗಳಿಂದ ಚಿನ್ನದ ತೊಟ್ಟಿಲು ಕಟ್ಟಿ ಪತಿಯೊಡನೆ ಜೋಕಾಲಿಯಾಡುತ್ತಾಳೆ. ಇಲ್ಲಿನ ವನಸಿರಿಯ, ನಿಗೂಢತೆಯ, ವೈಶಿಷ್ಟ್ಯದ ಉಳಿವಿಗಾಗಿ ಸದಾಕಾಲ ರಕ್ತೇಶ್ವರಿ ಇಲ್ಲಿಯೇ ಇರಬೇಕೆಂದು ಆದೇಶಿಸಿದ್ದಾಳೆ.
ರಕ್ತೇಶ್ವರಿ ಪಾಲ ಕಳೆದು ಸುಮಾರು ಒಂದು ಕಿ.ಮೀ. ಮುಂದಕ್ಕೆ ಹೋದಾಗ ಯಕ್ಷಗಾನದಲ್ಲಿ ದೇವಿಯ ಪಾತ್ರಧಾರಿಗಳು ಧರಿಸುವಂತಹ ಕಿರೀಟದ ಆಕೃತಿಯ ರಕ್ತೇಶ್ವರಿ ಮುಡಿಯೆಂಬ ಬಂಡೆ ಕಾಣಸಿಕ್ಕಿತು. ಹದಿನೆಂಟು ಇಪ್ಪತ್ತು ಅಡಿ ಉದ್ದದ ರಕ್ತೇಶ್ವರಿ ಮುಡಿಗೆ ಪೂಜೆ ಸಲ್ಲಿಸಿ ಮತ್ತೂ ಒಂದು ಕಿ.ಮೀ. ಜೌಗು ಪ್ರದೇಶದಲ್ಲಿ ನಡೆದಾಗ ರಕ್ತೇಶ್ವರಿ ಪಾದವೆಂಬ ಬೃಹತ್ ಬಂಡೆ ಗೋಚರಿಸಿತು. ತಂಬಿಲ ನೀಡಬೇಕಾದದ್ದು ಅದೇ ಬಂಡೆಗೆ. ರಕ್ತೇಶ್ವರಿ ಪಾದ ಮೂಲದಲ್ಲಿ ಪುಟ್ಟದೊಂದು ತೊರೆ ಹುಟ್ಟಿ ಹರಿಯುತ್ತದೆ. ನಿಬಿಡ ಅರಣ್ಯದಿಂದಾಗಿ ಮಟ ಮಧ್ಯಾಹ್ನ ಒಂದು ಗಂಟೆಯ ಹೊತ್ತಲ್ಲೂ ಅಲ್ಲಿ ಕತ್ತಲೆಯಿತ್ತು. ನಾವು ರಕ್ತೇಶ್ವರಿ ಪಾದದ ಮುಂದುಗಡೆಯ ಬಂಡೆಗಳಲ್ಲಿ ವಿಶ್ರಮಿಸತೊಡಗಿದವು.
ಈವರೆಗೆ ಮರೆತು ಹೋಗಿದ್ದ ನನ್ನ ಹಸಿವು ಈಗ ಬುಸುಗುಟ್ಟ ತೊಡಗಿತು. ತ್ಯಾಂಪಣ್ಣ ಗೌಡರ ಮನೆಯಲ್ಲಿ ನಾನು ಹನ್ನೆರಡಾದರೂ ಇಡ್ಲಿ ತಿನ್ನಬೇಕಿತ್ತು. ಹಸಿವಿನಿಂದ ನಡುಗುತ್ತಿರುವ ನನ್ನ ಕೈಕಾಲುಗಳನ್ನು ನೋಡಿ ಸುಂದರ ಕೇನಾಜೆ ಪಿಸುಗುಟ್ಟಿದ. ‘ಆ ಮರಗಳ ಬುಡದಲ್ಲಿನ ಕ್ಯಾನುಗಳಿಂದ ಸ್ವಲ್ಪವಾದರೂ ತೀರ್ಥ ತೆಗೆದುಕೊಳ್ಳಬಹುದಿತ್ತು ಸರ್’
ತಂಬಿಲ ತಂಡದ ಅರ್ಚಕರು ರಕ್ತೇಶ್ವರಿಗೆ ವೈದಿಕ ವಿಧಾನದಲ್ಲಿ ಪೂಜೆ ಸಲ್ಲಿಸಿದರು. ಅವಲಕ್ಕಿ, ಎಳನೀರು, ಹೊದ್ಲು, ಬಾಳೆಹಣ್ಣು ಅರ್ಪಿಸಿ ಗಟ್ಟಿಯಾಗಿ ಒಂದಷ್ಟು ಮಂತ್ರ ಹೇಳಿ ರಕ್ತೇಶ್ವರಿಯನ್ನು ಸಂಪ್ರೀತರನ್ನಾಗಿ ಮಾಡಿದರು. ಅದಾಗಿ ತಂಬಿಲ ತಂಡ ಸುಶ್ರಾವ್ಯ ವಾಗಿ ಭಜನೆ ಹಾಡಿತು. ನಾವು ದನಿಗೂಡಿಸಿದೆವು. ಸೂರ್ಯನ ಬೆಳಕು ಒಂದಿನಿತೂ ಬೀಳದ ಆ ಭಯಾನಕ ಕಾಡಿನಲ್ಲಿ ಮಂತ್ರ ಮೊಳಗುವಾಗ, ಭಜನೆ ಕೇಳುವಾಗ ಅನಿರ್ವಚನೀಯ ಅನುಭಾವ ಅನುಭವವಾಗುತ್ತದೆ. ಪುರಂದರದಾಸರ, ಕನಕದಾಸರ ಅನೇಕ ಕೀರ್ತನೆಗಳು ನನಗೆ ಕಂಠಪಾಠವಾಗಿದ್ದವು. ಒಂದು ಕೀರ್ತನೆ ಹಾಡಿದೆ. ಎಲ್ಲರಿಗೂ ವಿಸ್ಮಯವಾಯಿತು. ನಾಸ್ತಿಕ ಮೇಸ್ಟ್ರು ಭಜನೆ ಮಾಡುತ್ತಿದ್ದಾರೆ.
ಅರ್ಧಗಂಟೆ ಕಳೆದ ಮೇಲೆ ನಾವು ಅವಲಕ್ಕಿಗೆ ಬೆಲ್ಲ ಬೆರೆಸಿ ತಿಂದೆವು. ತೊರೆಯ ಕೊರೆಯುವ ತಣ್ಣನೆಯ ನೀರಲ್ಲಿ ಶರಬತ್ತು ತಯಾರಿಸಿ ಕುಡಿದೆವು.
ಶಿವಪ್ರಸಾದ, ಶಶಿಧರ ನನ್ನ ಬಳಿ ಬಂದವ ‘ರಕ್ತೇಶ್ವರಿ ತುಂಬಾ ಶಕ್ತಿವಂತಳು ಸರ್. ಇಲ್ಲದಿದ್ದರೆ ನೀವು ಭಜನೆ ಮಾಡಲು ಸಾಧ್ಯವೇ ಇರಲಿಲ್ಲ’ ಎಂದರು.
‘ಹಾಗೇನಿಲ್ಲ. ಪ್ರಕೃತಿಯೇ ದೇವರು. ನಾನು ಪ್ರಕೃತಿಯ ಆರಾಧನೆ ಮಾಡುವವ. ನೀವು ಮಾಡುವ ಆಚರಣೆಗಳು ತೋರಿಕೆಯವು ಮಾತ್ರ. ನಿಸರ್ಗ ಪ್ರೀತಿ ಇರುವವ ಮಾತ್ರ ನಿಜವಾದ ಭಕ್ತನಾಗಬಲ್ಲ. ಭಕ್ತಿ ಪ್ರೀತಿಯ ಇನ್ನೊಂದು ಮುಖ ಅಷ್ಟೇ. ಇಲ್ಲಿನ ನಿಗೂಢತೆ ಹೀಗೆಯೇ ಉಳಿಯಬೇಕು. ಆದರೆ ನಿಗೂಢ ಐತಿಹ್ಯಗಳ ಪ್ರಯೋಜನ ಕಳ್ಳಭಟ್ಟಿಯವರಿಗೆ ಸಿಗಬಾರದು. ಅದಕ್ಕೇನು ಮಾಡುತ್ತೀರಿ?’ ಅವರಲ್ಲಿ ಯಾರಲ್ಲೂ ಈ ಪ್ರಶ್ನೆಗೆ ಉತ್ತರವಿರಲಿಲ್ಲ.
ಇಳಿಯುವುದೇ ಕಷ್ಟ.
ಹೊಟ್ಟೆ ಸೇರಿದ ಬೆಲ್ಲ ಅವಲಕ್ಕಿ, ಕಾಲು ರಟ್ಟೆಗಳಿಗೆ ಬಲ ತಂದುಕೊಟ್ಟ ಮೇಲೆ ನಿಧಾನವಾಗಿ ಮೇಲೆದ್ದೆವು. ಹೋದ ದಾರಿಯಲ್ಲೇ ಮರಳಿ ಬರುವುದೆಂದರೆ ಅದು ತುಂಬಾ ಬೋರು. ಆಗ ಏರಿದಲ್ಲೆಲ್ಲಾ ಈಗ ಇಳಿಯುವುದು. ಚಾರಣದ ವೈಶಿಷ್ಟ್ಯವೇ ಅದು. ಏರುವುದು ಸುಲಭದ ಇಳಿಯುವುದು ತುಂಬಾ ಕಷ್ಟ. ಇಳಿಯುವಾಗ ಕಾಲು ನಡುಗುತ್ತದೆ. ನನ್ನ ಜತೆಯಲ್ಲೇ ಇದ್ದ ಕೇನಾಜೆಯಲ್ಲೆಂದೆ ‘ ಚಾರಣದಲ್ಲಿ ಇಳಿಯುವುದು ಕಷ್ಟ. ಜೀವನದಲ್ಲಿ ಏರುವುದು ಕಷ್ಟ.’ ಲೇಖಕನೆಂದು ಅದಾಗಲೇ ಕುಗ್ರಾಮ ಮಂಡೆಕೋಲಿನಲ್ಲಿ ಜಗತ್‌ಪ್ರಸಿದ್ಧಿ ಪಡೆದಿದ್ದ ಕೇನಾಜೆ ಹೌದೆಂದು ತಕರಾರಿಲ್ಲದೆ ಒಪ್ಪಿಕೊಂಡ.
ನಾವು ಬಳ್ಳಿ ಕಾನಕ್ಕೆ ಮುಟ್ಟುವಾಗ ಸಂಜೆ ನಾಲ್ಕು. ಭರ್ಜರಿ ಮತ್ತು ಭೂರಿ ಭೋಜನದಿಂದ ಸುಧಾರಿಸಿಕೊಂಡಿದ್ದ ಗುಡ್ಡಪ್ಪ ಮಾಸ್ತರರು ಅಪರಾಧೀ ಪ್ರಜೆಯಿಂದ ನಮ್ಮನ್ನು ಎದುರುಗೊಂಡರು. ಬಳ್ಳಿಕಾನದಲ್ಲಿ ಹಪ್ಪಳ ಶರಬತ್ತಿನ ಸಮಾರಾಧನೆ. ಅದು ಮುಗಿಸಿ ನಾವು ಅಡೂರುವರೆಗೆ ನಡೆದು ಜೀಪಲ್ಲಿ ಮಂಡೆಕೋಲಿಗೆ ಬಂದಿಳಿದಾಗ ಸೂರ್ಯ ಅಸ್ತಂಗತನಾಗುವುದರಲ್ಲಿದ್ದ. ತ್ಯಾಂಪಣ್ಣ ಗೌಡರ ಮನೆಯಂಗಳದಲ್ಲಿ ಪಾರ್ಕ್ ಮಾಡಿದ್ದ ನನ್ನ ಅತಿ ನಂಬುಗೆಯ ವೆಸ್ಪಾ ರಥವೇರುವ ಮುನ್ನ ತ್ಯಾಂಪಣ್ಣ ಗೌಡರಲ್ಲೆಂದೆ, ‘ಈ ಬಾರಿ ನಿಮ್ಮ ತಮ್ಮ ಬಂದರು. ಮುಂದಿನ ಬಾರಿ ನಿಮ್ಮನ್ನೇ ಕರಕೊಂಡು ಹೋಗುವುದು. ರಕ್ತೇಶ್ವರಿ ಪಾದದಾಚೆ ಯಾರೂ ಹೋಗಬಾರದಂತೆ, ಈಗ ನಮಗೆ ದಾರಿ ಗೊತ್ತಾಗಿದೆ. ರಕ್ತೇಶ್ವರಿ ಪಾದದಾಚೆ ಏನಿದೆಯೆಂದು ನೋಡಿಯೇ ಬಿಡೋಣ.’
ತ್ಯಾಂಪಣ್ಣ ಗೌಡರ ಮುಖದಲ್ಲಿ ಭೀತಿ ಪಸರಿಸುತ್ತಿರುವುದನುನ ಗಮನಿಸಿ ನಸುನಕ್ಕು ನಾನು ಕಾಂತಮಂಗಲದತ್ತ ನನ್ನ ರಥವನ್ನು ಓಡಿಸಿದೆ.
ಶಕ್ತಿ ಆರಾಧನೆಯ ಸಂಕೇತವಾಗಿರುವ ಕೌಡಿಕಾನ ಸೂಕ್ಮ ಜೀವಿ ಸಂಕುಲಗಳ ತವರು. ಅಂತಹ ವೈಶಿಷ್ಟ್ಯ ಪೂರ್ಣ ಮತ್ತು ಪಾರಿಸರಿಕ ಮಹತ್ವದ ಅಮೂಲ್ಯ ಕಾಡು ಭಾರತದಲ್ಲಿ ಕೇವಲ ಏಳು ಕಡೆಗಳಲ್ಲಿವೆ. ನಿತ್ಯ ಹರಿದ್ವರ್ಣದ ಕೌಡಿಕಾನದ ಕಾಡು ಪರಿಸರ ಸಮತೋಲನದಲ್ಲಿ ಅತ್ಯಂತ ಮಹತ್ತ್ವದ ಪಾತ್ರ ವಹಿಸುತ್ತಿದೆ. ನಾನು ಗಮನಿಸಿದಂತೆ ಇದು ಕರ್ನಾಟಕಕ್ಕೆ ಸೇರಿದ ಪ್ರದೇಶ. ಸುಮಾರು ಐವತ್ತು ಏಕರೆಗಳ ಪ್ರದೇಶದಲ್ಲಿ ವ್ಯಾಪಿಸಿ ಕೊಂಡಿರುವ ಕೌಡಿಕಾನದ ನಿಗೂಢ ಅರಣ್ಯವನ್ನು ಕರ್ನಾಟಕ ಸರ್ಕಾರ ರಕ್ಷಿಸಿ ವಿಶ್ವ ತಾಪಮಾನ ಏರಿಕೆಯನ್ನು ತಡೆಗಟ್ಟುವಲ್ಲಿ ಅಳಿಲ ಸೇವೆಯನ್ನಾದರೂ ಮಾಡಬೇಕಿದೆ. ಇಲ್ಲದಿದ್ದರೆ ಅನೇಕ ನೈಸರ್ಗಿಕ ವಿಸ್ಮಯಗಳನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡಿರುವ ಕೌಡಿಕಾನ ಮುಂದೊಂದು ದಿನ ಕೇವಲ ಇತಿಹಾಸವಾಗುವ ಅಪಾಯವೂ ಇದೆ.
****