ಸುಳ್ಯ ರೋಟರಿ ಕ್ಲಬ್‌ನ ಮಾಜಿ ಅಧ್ಯಕ ಕುಂಡಡ್ಕ ತಿಮ್ಮಪ್ಪಗೌಡರು ಸದಾ ಏನನ್ನಾದರೂ ಹೊಸತನ್ನು ಮಾಡಿ ತೋರಿಸಬೇಕೆಂಬ ಹಪಹಪಿಯ ಅರುವತ್ತೈದರ ಮಾಜಿ ನವಯುವಕ. ಒಮ್ಮೆ ತಲೆಯೊಳಗೆ ಒಂದು ಗುಂಗೀ ಹುಳ ಹೊಕ್ಕರೆ ಮತ್ತೆ ಅವರು ಸುಮ್ಮನಿರುವವರಲ್ಲ.
ಪರಿಸರಕ್ಕಾಗಿ ರಸ್ತೆ ಓಟ
2005-06ರಲ್ಲಿ ನಾನು ರೋಟರಿ ಅಧ್ಯಕನಾಗಿದ್ದಾಗ ಹಸಿರು ಮತ್ತು ಸ್ವಚ್ಢತಾ ಆಂದೋಲನ [clean and green campaign] ರೋಟರಿ ಜಿಲ್ಲೆ 3180ರ ವಿಶಿಷ್ಟ ಕಾರ್ಯಕ್ರಮವಾಗಿತ್ತು. ಅದಕ್ಕೆ ಸವಣೂರು ಸೀತರಾಮ ರೈಗಳನ್ನು ಚೇರ್‌ಮನ್ನಾಗಿ ರೋಟರಿ ಗವರ್ನರ್ ಮೈಸೂರಿನ ಲಕ್ಷ್ಮೀನಾರಾಯಣ್ ನಿಯುಕ್ತಿಗೊಳಿಸಿದ್ದರು. ವಿದ್ಯಾರಶ್ಮಿ ವಿದ್ಯಾ ಸಂಸ್ಥೆಯ A to Z ಜವಾಬ್ದಾರಿ ಹೊತ್ತಿದ್ದ, ಮೂರು ವಿದ್ಯಾಸಂಸ್ಥೆಗಳಲ್ಲಿ ಗೌರವ ನಿರ್ದೇಶಕ ರಾಗಿದ್ದ, ಸಹಕಾರಿ ರಂಗದ ಧುರೀಣರಾಗಿದ್ದ ಸೀತಣ್ಣನಿಗೆ ತುರಿಸಲೂ ಪುರುಸತ್ತಿಲ್ಲ. ಆದರೆ ಪಾಲಿಗೆ ಬಂದದ್ದನ್ನು ನಿರಾಕರಿಸುವುದು ಅವರ ಜಾಯಮಾನವಲ್ಲ. ‘ಹೊಸತನ್ನು ಏನು ಬೇಕಾದರೂ ಮಾಡಿ. ಈ ಕಾರ್ಯಕ್ರಮದಲ್ಲಿ ನಮಗೆ ಪ್ರಥಮ ಸ್ಥಾನ ದಕ್ಕಬೇಕು’ ಎಂದು ನಾನು ಅಧಿಕಾರ ಸ್ವೀಕರಿಸಿದಂದೇ ಕಿವಿಯಲ್ಲಿ ಪಿಸುಗುಟ್ಟಿದ್ದರು.
ಆ ವರ್ಷ ಹಸಿರು ಉಳಿಸಲೆಂದು ಒಂದು ಬೈಸಿಕಲ್ಲು ಜಾಥಾ, ನಾಲ್ಕು ಜಲಪಾತ ಚಾರಣ, ಮತ್ತು ಸಂಪಾಜೆಯಿಂದ ಮಡಿಕೇರಿ ವರೆಗೆ ಪರ್ವತ ಶಿಖರಾಗ್ರ ನಡಿಗೆ ಸಂಘಟಿಸಿ
ತಿಮ್ಮಪ್ಪಣ್ಣ ಬರಿಯ ಓಟಗಾರನಲ್ಲದ ಸಂಘಟಕನೂ.
ಜಲಲ ಜಲಲ ಜಲಧಾರೆಕೃತಿ ಪ್ರಕಟಿಸಿದ ಸಾಹಸಕ್ಕೆ ರೋಟರಿಯ ಜಿಲ್ಲಾ ಪ್ರಥಮ ಪ್ರಶಸ್ತಿ ಸುಳ್ಯ ಕ್ಲಬ್ಬಿಗೆ ಬಂತು. ಚಾಮರಾಜ ನಗರ, ಮೈಸೂರು, ಕೊಡಗು, ದ.ಕ., ಶಿವಮೊಗ್ಗ, ಚಿಕ್ಕಮಗಳೂರು, ಹಾಸನಗಳ ರೋಟರಿ ಕ್ಲಬ್ಬುಗಳೊಡನೆ ಪೈಪೋಟಿ ನಡೆಸಿ ಸುಳ್ಯವೆಂಬ ಹಳ್ಳಿಯ ಕ್ಲಬ್ಬು ಮೊದಲ ಸ್ಥಾನಕ್ಕೇರಿದ್ದು ಸೀತಣ್ಣನ ಸಂತಸಕ್ಕೇ ಕಾರಣವಾದರೆ ತಿಮ್ಮಪ್ಪಣ್ಣನಿಗೆ ಹೊಸ ಸಾಹಸಕ್ಕೆ ಪ್ರೇರಣೆ ನೀಡಿತ್ತು. ವಿಶ್ವಮಟ್ಟದ ಹಿರಿಯರ ಓಟದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದ ಅವರಿಗೆ ಪ್ರತಿದಿನ ಬೆಳಿಗ್ಗೆ ಸುಮಾರು ಹದಿನೈದು ಕಿ. ಮೀ. ಜಾಗಿಂಗು ಮಾಡುವ ಹವ್ಯಾಸವೂ ಇತ್ತು.
‘ನೀವು ಗುಡ್ಡ ಹತ್ತಿ ಇಳಿದದ್ದೇನು ಮಹಾ! ಅದಕ್ಕಿಂತ ದೊಡ್ಡ ಸಾಹಸ ಮಾಡ ಹೊರಟಿದ್ದೇನೆ. ಇಲ್ಲಿಂದ ಮಂಗಳೂರಿಗೆ ಓಡುವುದು. ಸಾಧ್ಯವಾದರೆ ನನ್ನೊಡನೆ ಓಡಿ.’
ನಾನು ದಂಗಾಗಿ ತಿಮ್ಮಪ್ಪಣ್ಣನನ್ನು ನೋಡಿದೆ. ಅರುವತ್ತೈದರ ಈ ಮಾಜಿ ಯುವಕ ಒಂದೇ ದಿನದಲ್ಲಿ ಎಂಭತ್ತೈದು ಕಿಲೋ ಮೀಟರು ಓಡುವುದಾ!
‘ಓಡೇ ಓಡ್ತೀನಿ. ಆದರೆ ಅದಕ್ಕೆ ಸ್ಪಾನ್ಸರ್ ಮಾಡೋರು ಬೇಕು. ಒಂದು ವ್ಯಾನು, ಒಂದು ಅಂಬ್ಯುಲೆನ್ಸು ಜತೆಗಿರಬೇಕು. ಒಂದಷ್ಟು ಜನ ರಿಲೇಯಲ್ಲಾದರೂ ಓಡಬೇಕು. ಹಾಗಾದರೂ ಬನ್ನಿ. ಆಯಾಸವಾದಾಗ ನೀವು ವ್ಯಾನಲ್ಲೇ ಬಂದರೆ ಸಾಕು.’
ತಿಮ್ಮಪ್ಪಣ್ಣ ನನಗಿಂತ ಪ್ರಾಯದಲ್ಲಿ ದೊಡ್ಡವರು. ಅವರೆದುರು ನಾನು ನಿಜಕ್ಕೂ ಸಣ್ಣವನಾಗುತ್ತಿದ್ದೇನೆ !
‘ನಾನು ಬೇರೆಯೇ ಯೋಚನೆ ಮಾಡುತ್ತಿದ್ದೇನೆ ತಿಮ್ಮಪ್ಪಣ್ಣ. ಅದು ಕೈಗೂಡುತ್ತದೆ ಎಂದಾದರೆ ಮಾತ್ರ ನಾನದನ್ನು ಬಹಿರಂಗಪಡಿಸುವುದು. ‘
ತಿಮ್ಮಪ್ಪಣ್ಣ ತುಂಬಾ ಒತ್ತಾಯಿಸಿದರು. ಕೂಸು ಹುಟ್ಟುವ ಮೊದಲು ಕುಲಾವಿ ಹೊಲಿಸಲು ನಾನು ಸಿದ್ಧನಿರಲಿಲ್ಲ.
ಆಗಿನ ರೋಟರಿ ಅಧ್ಯಕ ಡಾ. ಪ್ರಕಾಶ್‌ಗೆ ತಿಮ್ಮಪ್ಪಣ್ಣನ ಯೋಜನೆ ಖುಷಿಯಾಯಿತು. ಅವರ ಯೋಜನೆ ಕಾರ್ಯರೂಪಕ್ಕೆ ಬರಲು ಒಂದು ಸಮಿತಿ ಸಿದ್ಧವಾಯಿತು. ಆದರೆ ಸುಳ್ಯದಿಂದ ಮಂಗಳೂರಿಗೆ ಓಡುವುದಕ್ಕೆ ಕಾರಣ ಬೇಕಲ್ಲಾ?
‘ಕಾರಣ ಇದೆ. ಇದು ಪರಿಸರ ಸಂರಕಣೆಗಾಗಿ ರಸ್ತೆ ಓಟ.’
ಇದಕ್ಕೆ ನೆರವು ನೀಡುವವರು ಯಾರು?
‘ಕರ್ನಾಟಕ ರಾ್ಯ ಮಾಲಿನ್ಯ ನಿಯಂತ್ರಣ ಮಂಡಳಿ. ದ.ಕ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತು, ಸುಳ್ಯಪುತ್ತೂರು ಬಂಟವಾಳ-ಮಂಗಳೂರುಗಳ ರೋಟರಿ ಕ್ಲಬ್ಬುಗಳು. ಅದಕ್ಕೆ ಪತ್ರವ್ಯವಹಾರ ನಡೆದಿದೆ.’
ಎಲ್ಲವೂ ಸಿದ್ಧಗೊಂಡು 2007ರ ನವೆಂಬರ 1ರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಸುಳ್ಯದಿಂದ ಓಟ ಪ್ರಾರಂಭಿಸುವುದು ; ಸುಳ್ಯದ ರೋಟರಿಯವರು ರಿಲೇ ಮಾದರಿಯಲ್ಲಿ ಪುತ್ತೂರುವರೆಗೆ, ಅಲ್ಲಿ ನ ರೋಟರಿಯವರು ಹಾಗೆ ಬಂಟವಾಳದವರೆಗೆ, ಅಲ್ಲಿನವರು ಮಂಗಳೂರುವರೆಗೆ ಓಡುವುದು ಎಂದು ನಿಶ್ಚಯವಾಯಿತು.
ತಿಮ್ಮಪ್ಪಣ್ಣ ಗುತ್ತಿನಾಯನ ಗತ್ತಿನಲ್ಲಿ ಪ್ರಶೆನ ಎಸೆದರುತ ‘ನೀವೇನು ಮಾಡುತ್ತೀರಿ?’
ನಾನು ಅವರನ್ನು ಕಲ್ಪನೆಯಲ್ಲೇ ಇರಲು ಬಿಟ್ಟೆ.
‘ನಾಳೆ ನೋಡಿ ತಿಮ್ಮಪ್ಪಣ್ಣ’
ತಿಮ್ಮಪ್ಪಣ್ಣ ನಕ್ಕರು.
ಅವರಿಗೆ ಖಚಿತವಾಗಿ ಗೊತ್ತಿತ್ತು ಇವನಿಂದ ಮಂಗಳೂರುವರೆಗೆ ಓಡಲು ಸಾಧ್ಯವಿಲ್ಲವೆಂದು.
ಕನ್ನಡಕ್ಕಾಗಿ ಬೈಸಿಕಲ್ಲು ಜಾಥಾ
ನವೆಂಬರ ಒಂದರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಸರಿಯಾಗಿ ನಾವು 14 ಬೈಸಿಕಲ್ಲು ಗಳಲ್ಲಿ ಓಟದ ಆರಂಭ ಸ್ಥಳಕ್ಕೆ ಬಂದೆವು, ನನ್ನೊಡನೆ ಹದಿಮೂರು ಮಂದಿ ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು. ಅದು ಚೆನ್ನಕೇಶವ ದೇವಾಲಯದ ಮುಂಭಾಗ. ಸುಪ್ರಭಾತಕ್ಕೆ ಮೊದಲೇ ನಾವು ಸುಳ್ಯ ಬಿಟ್ಟರೇನೇ ಬೆಳಗ್ಗಿನ ತಿಂಡಿಗೆ ಮೂವತ್ತೈದು ಕಿ.ಮೀ. ದೂರದ ಪುತ್ತೂರಿಗೆ ಮುಟ್ಟಲು ಸಾಧ್ಯ.
ಅಲ್ಲಿ ಅಂಬ್ಯುಲೆನ್ಸ್ ಮತ್ತು 2 ವ್ಯಾನು ಸಿದ್ಧಗೊಂಡಿತ್ತು. ವ್ಯಾನು ರಿಲೇ ಓಟಗಾರರಿಗೆ. ಅಂಬ್ಯುಲೆನ್ಸ್ ಅರುವತ್ತೈದರ ಮಾಜಿ ತರುಣ ತಿಮ್ಮಪ್ಪಣ್ಣನಿಗೆಂದು ಯಾರೋ ಜೋಕು ಹಾರಿಸಿದರು. ವಾಹನಗಳ ಎರಡೂ ಬದಿಗಳಲ್ಲಿ ಪರಿಸರ ಸಂರಕಣೆಗೆ ಓಟ ಎಂಬ ಬ್ಯಾನರು ಗಳು ಇಳಿಬಿದ್ದಿದ್ದವು, ತಿಮ್ಮಪ್ಪಣ್ಣನ ಸುಂದರ ಮುಖಾರವಿಂದದ ಚಿತ್ರದೊಡನೆ. ನಮ್ಮ ಹದಿನಾಲ್ಕು ಬೈಸಿಕಲ್ಲುಗಳ ಹಣೆಯಲ್ಲಿ ಕನ್ನಡದ ಉಳಿವಿಗಾಗಿ ಬೈಸಿಕಲ್ಲು ಜಾಥಾ ಎಂಬ ಬರೆಹವಿತ್ತು. ಅಂದು ಹೇಳಿ ಕೇಳಿ ನವೆಂಬರ ಒಂದು!
ಸುಳ್ಯದ ತಹಶೀಲ್ದಾರ್ ಸುಂದರ ಭಟ್ಟರು ಹಸಿರು ನಿಶಾನೆ ತೋರಿಸಿ ಓಟಕ್ಕೆ ಚಾಲನೆ ನೀಡಿದರು. ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಜಿ. ಗೋಪಾಲಕೃಷ್ಣ ಬೈಸಿಕಲ್ಲು ಜಾಥಾಕ್ಕೆ ಚಾಲನೆ ನೀಡಿದರು. ಅದಕ್ಕೆ ಮುನ್ನ ರೊಟೇರಿಯನ್ ಪುರೋಹಿತ ನಾಗರಾಜ ಭಟ್ಟರೊಡನೆ ನಾನು ಉಪನಿಷತ್ತಿನ ಶಾಂತಿ ಮಂತ್ರವೊಂದನ್ನು ಗಟ್ಟಿಯಾಗಿ ಹೇಳಿದೆ. ಜಾಥಾ ಹೊರಟಿತು. ಸುಬ್ರಹ್ಮಣ್ಯ ಕಾಲೇಜಿನ ಪೀಡಿ ತುಕಾರಾಮ ಏನೆಕಲ್ಲು ಬಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದ.
‘ಪಾಪ ಪುರೋಹಿತ ನಾಗರಾಜ ಭಟ್ಟರು ಇನ್ನು ಕೆಲಸ ಕಳಕೊಂಡ ಹಾಗೆಯೇ!’
ರೋಟರಿ ಅಧ್ಯಕ ಪ್ರಕಾಶ್ ‘ಬೈಸಿಕಲ್ಲು ಜಾಥಾ ಒಂದು ಸರ್‌ಪ್ರೈಜು ಈವೆಂಟು. ಆದ್ರೆ ಸರ್, ಈ ಚಾಕೋಲೇಟು ಹೀರೋಗಳು ಎಂಭತ್ತೈದು ಕಿ.ಮೀ. ಬೈಸಿಕಲ್ಲು ತುಳಿಯೋದುಂಟಾ? ಅವರೇನೋ ಪಡ್ಡೆ ಹುಡುಗ್ರು. ಹೈ ಬೀಪಿಯ ನಿಮ್ಮಮಿಂದ ಸಾಧ್ಯವಾಲ’ ಎಂದು ಕೇಳಿದರು.
‘ಯೋಚನೆ ಯಾಕೆ ಪ್ರಕಾಶ್? ಅಂಬ್ಯುಲೆನ್ಸ್ ಇದೆ, ವ್ಯಾನಿದೆ. ರೋಟರಿಯ ಡಾಕ್ಟರು ಸುಧಾಕರ್ ಇದ್ದಾರೆ. 65ರ ತಿಮ್ಮಪ್ಪಣ್ಣ 85 ಕಿ.ಮೀ. ಓಡೋದಾದರೆ 54ರ ನಾನು ಅಷ್ಟು ದೂರ ಬೈಸಿಕಲಲ್ಲಿ ಹೋಗಲಾರೆನೆ?’
ಚುಮು ಚುಮು ಬೆಳಕಲ್ಲಿ ಒಂದಷ್ಟು ಮಂದಿ ತಿಮ್ಮಪ್ಪಣ್ಣನನ್ನು ಮುಂದಿಟ್ಟುಕೊಂಡು ಓಡಿದರು. ತಾರಾನಾಥ, ಧನಂಜಯ, ಗಣೇಶ, ಜಯಪ್ರಸಾದ, ಅಡ್ಡನಪಾರೆ, ಪೆರ್ಲಂಪಾಡಿ, ದೊಡ್ಡಣ್ಣ, ಎ.ಸಿ. ವಸಂತ, ಯೇನೇಕಲ್ಲು, ಸುಜಿತ, ಶ್ರುತಿರಿಲೇ ಓಟಗಾರರಾದರು. ಟ್ರಾಫಿಕ್ಕು ಸಮಸ್ಯೆಯಿಲ್ಲದೆ ನಾವು ಹದಿನಾಲ್ಕು ಮಂದಿ ಎರ್ರಾಬಿರ್ರಿಯಾಗಿ ಬೈಸಿಕಲ್ಲು ತುಳಿದೆವು. ಉಡುಪಿಯಿಂದ ಕವಳೇ ದುರ್ಗದ ವರೆಗೆ ಬೈಸಿಕಲಲ್ಲಿ ಹೋಗಿ ಬಂದವರಲ್ಲಿ ಒಬ್ಬನಾಗಿದ್ದ ಸುದರ್ಶನ ಈಗ ನಮ್ಮ ಕಾಲೇಜಿನ ನಾಯಕನಾಗಿದ್ದವನು ನನ್ನ ಉಪಟಳ ತಾಳಲಾಗದೆ ಅದು ಹೇಗೋ ಹನ್ನೆರಡು ಮಂದಿ ಬಲಿಪಶುಗಳನ್ನು ಜಾಥಾಕ್ಕೆ ಒಪ್ಪಿಸಿ ಕರೆತಂದಿದ್ದ. ಅವರು ಪರಮ ಬೋಳತನದ ಮುಖಮುದ್ರೆಯೊಡನೆ ‘ಮಂಗಳೂರುವರೆಗೆ ಬೈಸಿಕಲ್ಲು ತುಳಿಯಲಾಗದಿದ್ರೆ ಏನ್ಮಾಡೋದು ಸರ್’ ಎಂದು ನನ್ನಲ್ಲಿ ಕೇಳಿದ್ದರು. ‘ ವ್ಯಾನು, ಇನ್ನೊಂದು ಅಂಬ್ಯುಲೆನ್ಸು. ಮೂರಕ್ಕೂ ಕ್ಯಾರಿಯರ್ ಇದೆ. ನೀವು ಒಳಗೆ, ಬೈಸಿಕಲ್ಲು ಮೇಲೆ. ಡೋಂಟ್ ವರಿ ಮಾಡ್ಕೋಬೇಡಿ’ ಎಂದೆ.
ಡೋಂಟ್ ವರಿ ಮಾಡ್ಕೋಬೇಡಿ!
ನನ್ನ ಜೋಕನ್ನು ಅವರು ಅರ್ಥ ಮಾಡಿಕೊಳ್ಳಲಿಲ್ಲ.
ಕೆಲವು ಬಾರಿ ತಿಮ್ಮಪ್ಪಣ್ಣನ ಮುಂದಿನಿಂದ, ಕೆಲವೊಮ್ಮೆ ಹಿಂದಿನಿಂದ ನಾವು ಸಾಗಿದೆವು. ವ್ಯಾನುಗಳಲ್ಲಿ ಶರಬತ್ತು, ಗ್ಲುಕೋಸು, ಮೂಸಂಬಿಗಳಿದ್ದವು. ಬೇಕೆಂದಾಗ ಕೊಡಲು ರೋಟರಿ ಶಾಲಾ ಆಯಾ ಸುಂದರಿ ಇದ್ದಳು. ರಿಲೇ ಓಟದವರ ಉತ್ತರನ ಪೌರುಷಕ್ಕೆ ಬೈತಡ್ಕ ಚಡಾವು ಏರುವಲ್ಲಿಯವರೆಗೆ ಏನೂ ತೊಂದರೆಯಾಗಲಿಲ್ಲ. ಆ ಬಳಿಕ ‘ರಿಲೇ ಓಟ, ವ್ಯಾನು ಸಾಗಾಟ’ ಎಂದು ಗಣೇಶ ಭಟ್ಟರು ಉದ್ಗಾರ ಎತ್ತಿದರೂ ಏನೇನೂ ಪ್ರಯೋಜನವೇನಾಗಲಿಲ್ಲ.
ಕೌಡಿಚ್ಚಾರಿಗೆ ಮುಟ್ಟುವಾಗ ನಮ್ಮ ಬೈಸಿಕಲ್ಲು ತಂಡದ ದಮ್ಮು ಖಾಲಿಯಾಗ ತೊಡಗಿತು. ಹಿಂದಿನ ದಿನ ಕಾಲೇಜು ನೀರೆಯದುರು ಇವರು ಮಂಗಳೂರಿಗೆ ಬೈಸಿಕಲಲ್ಲಿ ಹೋಗುವುದರ ಬಗ್ಗೆ ಎಷ್ಟು ಕೊಚ್ಚಿಕೊಂಡಿದ್ದರೊ ? ಪುಣ್ಯಕ್ಕೆ ಆ ನೀರೆಯರು ಯಾರೂ ನಮ್ಮ ವ್ಯಾನಲ್ಲಿ ಬಂದಿರಲಿಲ್ಲ. ಈಗ ಹಸಿವು ತಡೆಯಲಾಗದೆ ಒಬ್ಬನಂತೂ ‘ಸರ್’ ಎಂದು ದಯನೀಯ ಸ್ವರ ಹೊರಡಿಸಿ ಹೊಟ್ಟೆ ಮುಟ್ಟಿ ತೋರಿಸಿದ.
ಆಗ ನಾವು ಕಾವು ಕೆಳಗಿನ ಪೇಟೆಯಲ್ಲಿದ್ದೆವು. ಓಟದ ತಂಡ, ಅಂಬ್ಯುಲೆನ್ಸು, ವ್ಯಾನುಗಳು ಪರಿಸರ ಸಂರಕಿಸುತ್ತಾ ನಮ್ಮನ್ನು ಹಾದು ಮುಂದಕ್ಕೆ ಹೋದವು. ನಾವು ಪಕ್ಕದಲ್ಲಿದ್ದ ಮುರುಕು ಹೋಟೇಲೊಂದನ್ನು ಹೊಕ್ಕೆವು. ಹೋಟೆಲಿನವನು ‘ಇದು ನೀರು ದೋಸೆ’ ಎಂದು ಕೊಟ್ಟದ್ದನ್ನು ತಕರಾರಿಲ್ಲದೆ ತಿಂದೆವು.’ಇದು ಚಹಾ’ ಎಂದು ಗಾಜಿನ ಲೋಟದಲ್ಲಿ ನೀಡಿದ್ದನ್ನು ದೂಸುರಾ ಮಾತಾಡದೆ ಕುಡಿದೆವು. ಅವನು ಕೇಳಿದಷ್ಟು ಹಣವನ್ನು ತುಟಿ ಮುಚ್ಚಿ ನಾನು ನೀಡಿದೆ. ಕಾಲೇಜು ಮೇಸ್ಟ್ರಿಗೆ ಬೆಳ್ಳಂಬೆಳಗ್ಗೆ ತಿರುಪತಿ ಉಂಡೆ ನಾಮ ತಿಕ್ಕಿದ ಬ್ರಹ್ಮಾನಂದ ಅವನ ಶೇವು ಮಾಡದ ಮುಖದಲ್ಲಿ ಜ್ವಾಜಲ್ಯಮಾನ ವಾಗಿ ಎದ್ದು ಕಾಣುತ್ತಿತ್ತು!
ಪುತ್ತೂರಿನ ಮೂರು ರೋಟರಿ ಕ್ಲಬ್ಬುಗಳು ಬೈಪಾಸ್ ಸರ್ಕಲಲ್ಲಿ ನಮ್ಮನ್ನು ಕಾಯುತ್ತಿದ್ದವು. ರಸ್ತೆ ಓಟದ ಧೀರ ತಿಮ್ಮಪ್ಪಣ್ಣನಿಗೆ ಆರು ಹಾರ ಮೇಲೆ ಮೇಲೆ ಹಾಕಿ ಜೈಕಾರ ಹಾಕಿದವು. ತಿಮ್ಮಪ್ಪಣ್ಣ ಅಪ್ಪಟ್ಟ ವಿದೇಶೀಯರಂತೆ ಹಾರ ಕೊರಳಿಂದ ತೆಗೆಯದೆ ಹೆಮ್ಮೆಯಿಂದ ರಸ್ತೆಯುದ್ದಕ್ಕೆ ಓಡಿದರು.
ಬಣ್ಣಿಸುವುದೆಂತಿದನು ?
ಪುತ್ತೂರಲ್ಲಿ ಭರ್ಜರಿ ತಿಂಡಿ ತಿಂದು, ಜ್ಯೂಸು ಕುಡಿದು ವಿಶ್ರಮಿಸಿ ನಾವು ಮುಂದು ವರಿದೆವು. ಪುತ್ತೂರಿನ ರೊಟೇರಿಯನನರು ಬಿ ಸಿ ರೋಡಿನವರೆಗೆ ಬೈಕುಗಳಲ್ಲಿ ರಿಲೇ ಓಟ ಮಾಡಿದರು. ಪುತ್ತೂರಿನಿಂದ ತಿಮ್ಮಪ್ಪಣ್ಣನ ಓಟ ನಿಧಾನವಾಗುತ್ತಾ ಬಂದು ಅಲ್ಲಲ್ಲಿ ವಿಶ್ರಮಿಸುವುದು ಅನಿವಾರ್ಯವಾಯಿತು. ಒಂದೆಡೆ ವಾಹನಗಳೆಲ್ಲಾ ಮುಂದೆ ಹೋಗಿದ್ದವು. ಇವರು ಒಬ್ಬರೇ ಚಡ್ಡಿ ಬನಿಯನಿನಲ್ಲಿ ಓಡುವುದನ್ನು ಕಂಡವರು ಗಾಬರಿಯಿಂದ ಇವರನ್ನು ನಿಲ್ಲಿಸಿ ‘ಓಡಬೇಡಿ. ನಿಮ್ಮನ್ನು ಯಾರು ಬೆನನಟ್ಟಿ ಬರೋತ್ತಾರೋ ನೋಡುತ್ತೇನೆ’ ಎಂದು ಸಮಾಧನ ಪಡಿಸತೊಡಗಿದರು. ಅವರಿಗಿಂತ ಸಾಕಷ್ಟು ಹಿಂದಿದ್ದ ನಾವು ಬೈಸಿಕಲ್ಲು ಧೀರರು, ಆ ಹಿರಿಯರಿಗೆ ‘ಅವರದು ಪರಿಸರ ಸಂರಕಣೆಯ ಓಟ’ ಎಂದಾಗ ಅವರು ಬೆರಗಿನಿಂದ ‘ಹಾಗಾದರೆ ನಿಮ್ಮದು ಎಂತದ್ದು’ ಎಂದು ಪ್ರಶ್ನಿಸಿದರು. ‘ನಮ್ಮದು ಕನ್ನಡ ಉಳಿಸಿ ಜಾಥಾ’ ಎಂದು ಸುದರ್ಶನನೆಂದಾಗ ಕಕ್ಕಾಬಿಕ್ಕಿ ಯಾಗಿ ನಮ್ಮನ್ನು ನೋಡಿದರು.
ಬಿ.ಸಿ. ರೋಡು ರೋಟರಿ ಕ್ಲಬ್ಬಿನಲ್ಲಿ ನಮಗೆ ಭರ್ಜರಿ ತಿಂಡಿ ಶರಬತ್ತು. ತಿಮ್ಮಪ್ಪಣ್ಣನ ಕಾಲು ಆನೆ ಕಾಲುಗಳಂತಾಗಿ ಐಸ್ ಇಟ್ಟು ಉಪಶಮನ ಮಾಡುವುದು ಅನಿವಾರ್ಯವಾಯಿತು. ಆ ನಟ ಬಿಸಿಲಲ್ಲಿ ತಿಮ್ಮಪ್ಪಣ್ಣ ಅಲ್ಲದೆ ಬೇರಾವ ಅರುವತ್ತೈದರ ಯುವಕನೂ ಹಾಗೆ ಓಡಲಾರ! ಫರಂಗಿಪೇಟೆಗೆ ಮುಟ್ಟುವಾಗ ಗಂಟೆ ಎರಡಾಗಿ ಹೋಯಿತು. ಒಂದೆರಡು ಕಡೆ ತಿಮ್ಮಪ್ಪಣ್ಣ ನನ್ನು ವ್ಯಾನಿನಲ್ಲಿ ಮಲಗಿಸಿ ಸಾಗಿಸುವುದು ಅನಿವಾರ್ಯವಾಯಿತು. ಪುಣ್ಯಕ್ಕೆ ಡಾ. ಸುಧಾಕರ ಭಟ್ಟರು ಆಗಾಗ ಪರೀಕೆ ನಡೆಸಿ ಎಲ್ಲರ ಮುಖದ ಆತಂಕ ದೂರವಾಗುವ ಸಿಹಿ ಸುದ್ದಿ ಯನ್ನೇ ತಿಳಿಸುತ್ತಿದ್ದರು! ಫರಂಗಿ ಪೇಟೆಯಲ್ಲಿ ನಾವು ನಮಗಾಗಿ ಸಿದ್ಧ ಮಾಡಿಟ್ಟಿದ್ದ ಭೋಜನವನ್ನು ಸಖತ್ತಾಗಿ ಕತ್ತರಿಸಿದೆವು. ಪಾಪ, ತಿಮ್ಮಪ್ಪಣ್ಣನಿಗೆ ಶರಬತ್ತು ಬಿಟ್ಟರೆ ಬೇರೇನೂ ಸೇರುತ್ತಿರಲಿಲ್ಲ. ಅವರನ್ನು ಪದೇ ಪದೇ ವ್ಯಾನಲ್ಲಿ ಮಲಗಿಸುವುದು, ಕಾಲಿಗೆ ಐಸು ಇಡುವುದು, ಸುಧಾಕರ ಭಟ್ರು ಪರಿಶೀಲಿಸಿ ಜೀವಕ್ಕೇನೂ ಅಪಾಯವಿಲ್ಲ ಎಂದು ಬಹಿರಂಗ ಪ್ರಕಟಣೆ ಹೊರಡಿಸುವುದು ನಡೆದೇ ಇತ್ತು. ನಮ್ಮ ಬೈಸಿಕಲ್ಲು ತಂಡದ ಒಂದಿಬ್ಬರು ತೀರಾ ಶೋಚನೀಯ ಪರಿಸ್ಥತಿಗೆ ಮುಟ್ಟಿದಾಗ ಅವರ ಬೈಸಿಕಲ್ಲು ಟಾಪನ್ನೇರಿದರೆ ಅವರು ಆರಾಮವಾಗಿ ವ್ಯಾನಲ್ಲಿ ಪವಡಿಸಿ ಕನ್ನಡ ಉಳಿಸಿದರು.
ಅಂತೂ ಇಂತೂ ನಾವು ಪಂಪುವೆಲ್ಲು ಮುಟ್ಟಿದೆವು. ಅಲ್ಲಿ ನಮ್ಮನ್ನು ಹಲವಾರು ಸಂಘ ಸಂಸ್ಥೆಗಳು ಎದುರುಗೊಂಡವು. ಅನೇಕರು ಬಿಳಿ ಚಡ್ಡಿ ಬನೀನು ಹಾಕಿ ಓಟಕ್ಕೆ ಸಿದ್ಧರಾಗಿಯೇ ಬಂದಿದ್ದರು. ಅಲ್ಲಿಂದ ಮುಂದೆ ಓಡುವವರು ಯಾರು, ನಡೆಯುವವರು ಯಾರು, ಅಸಲು ತಿಮ್ಮಪ್ಪಣ್ಣ ಎಂಬ ವ್ಯಕ್ತಿ ಯಾರು ಎಂದು ಗುರುತಿಸಲಾಗದಷ್ಟು ಜನ ದಟ್ಟಣೆಯಾಯಿತು. ಸಂಜೆ ಹೊತ್ತಿನ ಅಸಾಧ್ಯ ಟ್ರಾಫಿಕ್ಕಿನಲ್ಲಿ ಬೈಸಿಕಲ್ಲು ಬಿಡುವುದು ನಮಗೂ ಕಷ್ಟವಾಯಿತು. ಶಬ್ದ ಮತ್ತು ವಾಯು ಮಾಲಿನ್ಯದ ಭೀತಿಗೆ ನ್ನ ಬೈಸಿಕಲ್ಲಿನ ಹಿಂದಿನ ಟಯರು ಮತ್ತು ಟ್ಯೂಬು ಬರ್ಸ್ಟ್ ಆಯಿತು. ಆ ಅಸಾಧ್ಯ ಗದ್ದಲದಲ್ಲಿ ಟಯರು ಸಿಡಿದ ಸದ್ದು ಯಾರಿಗೂ ಕೇಳಿಸದಿದ್ದರೂ ಅದರ ಅನುಭವ ನನಗಾಯಿತು! ನಮ್ಮ ವ್ಯಾನು ನನ್ನ ಬಳಿಯಲ್ಲೇ ಇದ್ದದ್ದು, ಟ್ರಾಫಿಕ್ಕು ಸಿಗನಲ್ಲು ಬಿದ್ದದ್ದು ಕಾಕತಾಳೀಯವಾಗಿ ನನ್ನ ಬೈಸಿಕಲ್ಲು ವ್ಯಾನಿನ ಮೇಲೇರಿ, ಅಲ್ಲಿದ್ದ ಎರಡರಲ್ಲೊಂದು ಬೈಸಿಕಲ್ಲು ಕೆಳಗಿಳಿದು ನನ್ನ ವಾಹನವಾಯಿತು.
ನಾವು ಪುರಭವನ ಮುಟ್ಟುವಾಗ ಸಂಜೆ ಏಳು. ಒಳಗಡೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಅರುವತ್ತೈದರ ಯುವಕ ತಿಮ್ಮಪ್ಪಣ್ಣನ ಮೇಲೆ ಛಾಯಾ ಚಿತ್ರಗಾರರ ಫ್ಲಾಶ್ ಲೈಟಿನ ಮಿಂಚು ಎಡೆ ಬಿಡದೆ ಹೊಡೆಯುತ್ತಿತ್ತು. ಟೀವಿಗಳು ಸಂದರ್ಶನಕ್ಕೆ ತೊಡಗಿದವು. ಅದೆಲ್ಲಾ ಮುಗಿದು ತಿಮ್ಮಪ್ಪಣ್ಣ ಓಡುತ್ತಾ ಪುರಭವನದ ವೇದಿಕೆ ಹತ್ತಿದರು. ಅಡ್ಡನಪಾರೆ ಮತ್ತಿತರರು ವೇದಿಕೆಯಲ್ಲೂ ಜಾಗಿಂಗು ನಡೆಸಿದರು! ವೇದಿಕೆಯಲ್ಲಿದ್ದ ಸಾರಾ ಅಬೂಬಕ್ಕರ್, ಡುಂಡಿರಾಜರಿಗೆ ನನ್ನನ್ನು ಓಟದ ವೇಷದಲ್ಲಿ ಕಂಡು ಇವನಿಗೇನು ಬಂತು ಎಂಬ ಪ್ರಶ್ನೆ ಮೂಡದಿರಲು ಸಾಧ್ಯವಿರಲಿಲ್ಲ.
ಸಾಹಸಿ ತಿಮ್ಮಪ್ಪಣ್ಣನನ್ನು ಕಸಾಪ ಅಧ್ಯಕ ಪ್ರದೀಪ ಕುಮಾರ ಕಲ್ಕೂರ ವೇದಿಕೆ ಯಲ್ಲಿ ಭರ್ಜರಿಯಾಗಿ ಸನ್ಮಾನಿಸಿದರು. ಬಳಿಕ ಹೊರಬಂದು ನಮ್ಮೊಡನೆ ಫೋಟೊಕ್ಕೆ ಪೋಸು ಕೊಟ್ಟರು.
ನಮ್ಮ ಎಲ್ಲಾ ಬೈಸಿಕಲ್ಲುಗಳು ಈಗ ವ್ಯಾನು ಟಾಪನ್ನೇರಿದವು. ಮಂಗಳೂರಿನಿಂದ ಮರಳಿ ಸುಳ್ಯಕ್ಕೆ ಹೊರಟಾಗ
ಪರಿಸರ ಸಂರಕಣೆಗಾಗಿ ಓಡಿದ್ದು ಕನ್ನಡ ಉಳಿಸಲು ಜಾಥಾ ನಡೆಸಿದ್ದು ಎಷ್ಟು ಯಶಸ್ವಿಯಾಯಿತು ಎನ್ನುವ ಉತ್ತರ ಸಿಗದ ಪ್ರಶ್ನೆಯ ಬದಲು ಮುಂದಿನ ಸಾಹಸ ಏನು ಎಂಬ ಪ್ರಶೆನ ನನ್ನೆದುರು ನೂಪುರ ನಾಟ್ಯಧಾರೆ ಹರಿಸುತ್ತಿತ್ತು.
ಬೈಸಿಕಲ್ಲು ಜಾಥಾದಲ್ಲಿ ಭಾಗವಹಿಸಿದವರು
ಸುದರ್ಶನ, ಹೇಮನಾಥ, ವಿದ್ಯರಾಜ, ಸತೀಶ, ಲೋಕೇಶ, ಶಿವಪ್ರಸಾದ, ಕೃಷ್ಣಪ್ರಸಾದ, ಉಮೇಶ, ಕಿರಣ, ಮಹೇಶ, ವೆಂಕಟೇಶ, ಯತಿರಾಜ, ಪ್ರವೀಣ.