ಗುರುವೇ ನಮ್ಮಾಯ ದೇವಾರ್ ಬಂದಾವ ಬನ್ನಿರೂ
ಹರನೇ ನಮ್ಮಾಯ್ ದೇವರಿಗೆ ಶರಣೆನ್ನಿರೋ
ಸ್ವಾಮಿ ನಮ್ಮಾಯ್ ದೇವಾರ್ ಬಂದಾವ ಬನ್ನಿರೋ ||ಪ||
ದೇವರು ಊರಿಗೆ ಬಂದಾವೇ ಅಕ್ಷರ ವರವಾ ತಂದಾವೆ
ಸಾವಿರದಂಥ ನೋವಿರದಂಥ ವಿದ್ಯೆಯ ಅಮೃತ ತಂದಾವೆ ||೧||
ವಿದ್ಯೆಯ ಕಲಿಯಿರಿ ಬುದ್ದಿಯ ಬೆಳೆಸಿರಿ ಅದುವೇ ಸಂಪತ್ತು ಅಂದಾವೆ
ನಿಮ್ಮ ಉದ್ದಾರ ನಿಮ್ಮ್ಮ ಕೈಯಾಗೆ ಎನ್ನುತ ಕತ್ತಲೆ ಕೊಂದಾವೆ ||೨||
ಹೆಬ್ಬಟ್ಟು ಗುರುತು ನರನಿಗೆ ಶಾಪಾ
ಶಾಪವ ಬಿಡಿಸಾಕೆ ಬಂದಾವೆ
ದೇವರ ಲೋಕದ ಒಳಗಡೆ ಪರವೇಶ
ಅಂಥಾವ್ರಿಗಿಲ್ಲಂತ ಸಾರ್ಯಾವೆ ||೩||
ಇಲ್ಲಿಯವರೆಗೆಲ್ಲ ಓದಿದ್ದ ತಲೆಗಳು
ನಮ್ಮನ್ನ ಕಾಲಾಗೆ ತುಳಿದಾವೆ
ಕೆಳಗೆ ಬಿದ್ದವರೆಲ್ಲ ಮ್ಯಾಲೆದ್ದು ನಿಲ್ಲಾಕ
ಆಸರೆ ಒಂದಾ ತಂದಾವೆ ||೪||
ಮಕ್ಕಳು ಭಾಳಾ ದೇಶಕೆ ಭಾರಾ
ಭಾರತ ಮಾತೆಯ ಕೊಂದಾವೆ
ಒಂದೊಂದು ಮನಿಯಾಗೆ ಇಬ್ಬರು ಮಕ್ಕಳು
ಸಾಕೇ ಸಾಕು ಅಂದಾವೆ ||೫||
ಆರೋಗ್ಯ ಜೀವನ ಸ್ವಚ್ಛತೆ ಜೀವನ
ಅದುವೇ ಸ್ವರ್ಗಾ ಅಂದಾವೆ
ಕಾಯಿಲೆಗಳಿಗೆಲ್ಲ ದೇವರ ಗುರಿ ಮಾಡಿ
ಮೂಢರಾಗಬೇಡಿ ಅಂದಾವೆ ||೬||
ಹೆಣ್ಣು ಗಂಡೂ ಒಲವಿನ ಬಾಳಿಗೆ
ಸರಳ ವಿವಾಹವೆ ಸರಿ ನೋಡ್ರಿ
ಅದ್ದೂರಿ ಗದ್ದಲ ವೈಭವದ ಮದುವೆಯ
ಮಾಡುತ ಸಾಲದಿ ಕೊಳಿಬ್ಯಾಡ್ರಿ ||೭||
ಗಂಡೂ ಹೆಣ್ಣೂ ಎರಡೂ ಕಣ್ಣು
ದೇವರ ಲೀಲ್ಯಾಗ ಅಂದಾವೆ
ಹೆಣ್ಣನು ತುಳಿಯುತ ಬದುಕುವ ಗಂಡು
ಗಂಡಲ್ಲ ಭಂಡಾ ಅಂದಾವೆ ||೮||
ಪುರಾಣ ಕತೆಗಳ ಕತೆಯಂತೆ ನೋಡಿರಿ
ನೂರಕ್ಕೆ ನೂರು ನಿಜವಲ್ಲ
ಧರ್ಮದ ಮರ್ಮವ ಸರಿಯಾಗಿ ತಿಳಿಯಿರಿ
ಧರ್ರ್ಮಾಂಧತೆಯಿಂದ ಉಳಿವಿಲ್ಲ ||೯||
ಮಾನವರೆಲ್ಲ ಒಂದೇ ಎನ್ನಿರಿ
ಭೇದವ ಮಾಡೋದು ಮಹಾಪಾಪ
ಮೇಲು ಕೀಳೆನ್ನುತ ಮೆರೆಯುವ ಮೂರ್ಖರಿಗೆ
ದೇವರು ಕೊಡತಾವ ಹಿಡಿಶಾಪ ||೧೦||
ಎಲ್ಲರು ಕೂಡುತ ದುಡಿಯುತ ಹಾಡುತ
ಬಾಳಿರಿ ಎನ್ನುತ ಹರಸ್ಯಾವೆ
ಎಲ್ಲರಿಗಾಗಿಯೆ ಎಲ್ಲರು ಇದುವೇ
ಮಾನವ ಧರ್ಮೆಂದು ಸಾರ್ಯಾವೆ ||೧೧||
******