ತಾಯಂದಿರಿಗೆ

ತಾಯಂದಿರೇ
ಹುಟ್ಟುತ್ತಲೇ ಯಾರೂ
ಕರ್ಣಕುಂಡಲ ಜಟೆ ಗಡ್ಡ ಮೀಸೆಗಳ
ಪಡೆದುಕೊಂಡೇ ಬರುವುದಿಲ್ಲ
ಹುಟ್ಟುತ್ತಲೇ ವೇದಾದಿಗಳು
ಯಾರ ನಾಲಿಗೆಯ ಮೇಲೂ ನರ್ತಿಸುವುದಿಲ್ಲ
ಹುಟ್ಟಿ ಬಂದ ಕುಲ
ಕುಂದು ದೋಷ ವೃತ್ತಿಗಳೆಲ್ಲ
ಶಿಲಾ ಶಾಸನವೇನಲ್ಲ
ಇದನ್ನು ಬರೆದಿಟ್ಟುಕೊಳ್ಳಿ

ಇಂಥ ಕರಿ ಮೋಡಗಳು ನಿಮ್ಮ ಸೂರ್ಯರಿಗೆ
ಬಾಲಾರಿಷ್ಟರಾಗಿ ಬಡಿದುಕೊಂಡಿರಬಹುದು
ಇದರಿಂದ ನಿಮ್ಮ ಕರುಳಕಿಡಿಗಳು
ಇದ್ದಿಲ ಚೂರುಗಳಂತೆ ಭಾಸವಾಗಬಹುದು
ಆದರೆ ತಾಯಂದಿರೆ
ಆ ಬಾಲಾರಿಷ್ಟ ಗ್ರಹ ಬಾಧೆಗಳ
ನಿಮ್ಮ ಚೈತನ್ಯ ಬೆಂಕಿಯಿಂದ ಸುಡಿರಿ
ಭವಿಷ್ಯದ ಆಶಾ ಮಾರುತನಿಂದ ಝಾಡಿಸಿರಿ
ನಿಮ್ಮ ಇದ್ದಿಲ ಚೂರನ್ನೇ ಗಟ್ಟಿ ಮಾಡಿ ಮಾಡಿ
ಸಾಣೆ ಹಿಡಿದು ವಜ್ರ ಮಾಡುವ
ಸಾಣೆಯಂತ್ರ ನಿಮ್ಮ ಕೈಯಲ್ಲೇ ಇದೆ
ನಿಮ್ಮ ಸೊಂಟಕ್ಕಂಟಿದ ಉಪಗ್ರಹಗಳಿಗೆ
ಕಾವು ಕಸುವು ತುಂಬಿ ತುಂಬಿ
ಸ್ವಯಂ ತೇಜೋಮೂರ್ತಿ ಮಾಡುವ
ಮಾಯಾ ದಂಡವೂ ನಿಮ್ಮ ಕೈಯಲ್ಲೇ ಇದೆ
ಇದನ್ನು ನಂಬಿ|
ನಿಮ್ಮ ಮನೆಗೋಡೆಯ ಮೇಲೆ
ಬರೆದಿಟ್ಟು ಬಣ್ಣ ತುಂಬಿ
ಗ್ರಹವು ಸೂರ್ಯನಾಗುವುದನ್ನು
ಹುಳುವು ಸಿಂಹವಾಗುವುದನ್ನು
ಈ ದೇಶ ಕಳ್ಳಕತ್ತಲೆ ಎಂದೂ ಸಹಿಸದು
ಎಲ್ಲ ಕಡೆ ಬೆಳಕಾದರೆ ಬಾವಲಿ ಹೆಗ್ಗಣ
ದರೋಡೆಖೋರ ನಿಶಾಚರರಿಗೆ ಅನುಕೂಲವಾಗದು

ಎಲ್ಲಾದರೂಂದೊಂದು ಕಿಡಿ ಹೊತ್ತಿಕೊಂಡರೆ
ಅಗ್ನಿ ಸತ್ಯ ಮೂಡಿದರೆ
ಕರಿನೆರಳ ಬುಟ್ಟಿ ಬೋರಲು ಹಾಕಿ ಬಿಡುವುದು
ಇಲ್ಲಿಯ ಚರಿತ್ರಾಹೀನ ಚರಿತ್ರೆ

ಸೂರ್ಯನ ಸೃಷ್ಟಿಸುವ
ಸಾಣೆಯಂತ್ರವನ್ನು ಕಸಿದುಕೊಂಡು,
ನಿಮಗೆ ಕೇವಲ ಸೌಟು ಕೊಟ್ಟಿರುವುದು
ಇಂಥ ಚರಿತ್ರಯೇ

ಆದ್ದರಿಂದ ತಾಯಂದಿರೇ
ನಿಮ್ಮ ಕರುಳ ಕುಡಿಗಳಲ್ಲಿ
ಕಿಡಿ ಹೊತ್ತಿಸಿ ಅಗ್ನಿ ಪುಂಜಗಳಾಗಿ ಮಾಡಿ
ಕತ್ತಲೆಯೋಡಿಸುವ ಕಜ್ಜದಲ್ಲಿ ಕೈಗೂಡಿ

೧೨-೬-೮೬
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೆಡ್ಡಾ ಹಾಗೂ ನಮ್ಮ ಕಿರು ಪ್ರಪಂಚ
Next post ಇಂಜೆಕ್ಷನ್ ನೀರಿನಲ್ಲಿ ಸೋಂಕು

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…