ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ. ಐ ಲವ್ ಇಟ್, ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯ ನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ ಈ ಸಂದರ್ಭದಲ್ಲಿ ನಮ್ಮೆಲ್ಲಾ ಸಂವೇದನೆಗಳು ಕನ್ನಡೀಕರಣಗೊಂಡಿರಬೇಕೆ ಹೊರತು ಅನ್ಯಭಾಷಾ ಲಕ್ಷಣದ ಉದ್ಗಾರಕ್ಕೂ ಅವಕಾಶವಿಲ್ಲ.
ಆ ಕಿಟಕೀನ ತೆಗೆಯೋ ಅವಕಾಶವೇ ಬಹಳ ಕಡಿಮೆ. ರಾಮನವಮಿ, ಗಣೇಶೋತ್ಸವ, ತಿರುಪ್ಪಾವೈ, ಕನ್ನಡ ರಾಜ್ಯೋತ್ಸವ ಇತರೆ ಸಾರ್ವಜನಿಕ ಮೈಕಾಸುರರ ಹಾವಳಿಯಿಂದಾಗಿ ಅದನ್ನು ತೆಗೆಯೋದು ಅಪರೂಪ. ಅಪರೂಪಕ್ಕೊಮ್ಮೆ ತನ್ನನ್ನು ಬಿಚ್ಚಿಕೊಂಡು ಅಷ್ಟೋ ಇಷ್ಟೋ ಬಾಹ್ಯ ಸಂಪರ್ಕ ಕಲ್ಪಿಸೋ, ತಂಪುಗಾಳಿಯನ್ನು ಒಳಕ್ಕೆ ನೂಕುವ ಅದನ್ನು ನಾನು ಪ್ರೀತಿಸೋದು ಅಸಹಜವೇನೂ ಅಲ್ಲ. ಜಸ್ಟ್ ಸಿಂಪ್ಲಿ ಐ ಲವ್ ಇಟ್.
ಕಿಟಕಿ ತೆಗೆದೊಡನೆ ಕಣ್ಣಿಗೆ ಪಚ್ಚೆಂದು ಹೊಡೆಯುವುದು :
೧. ರಸ್ತೆ.
೨. ರಸ್ತೆಗಂಟಿಕೊಂಡಿರುವ ವಠಾರ.
೩. ವಠಾರಕ್ಕೆ ಅಂಟಿಕೊಂಡಿರುವ ಪೆಟ್ಟಿಗೆ ಅಂಗಡಿ.
ವಠಾರದಲ್ಲಿ ಒಟ್ಟು ಹದಿನೆಂಟು ಮನೆಗಳಿವೆ. ಬಹುತೇಕ ವಿವಿಧ ಪ್ರಬೇಧಗಳು ಅಂದರೆ ಮಧ್ವ, ಮುರುಕನಾಡು, ಅಯ್ಯಂಗಾರ್, ಅಯ್ಯರ್ ಹೀಗೆ ಅನೇಕ ಪ್ರಬೇಧ ಸೇರಿದ ಬ್ರಾಹ್ಮಣ ಮತಸ್ಥರೆ ಜಾಸ್ತಿ. ನಾನು ಈ ವಠಾರದ ಎದುರಿಗಿನ ಮಾಡಿ ಮೇಲಿನ ಇಪ್ಪತ್ತು ಇಂಟೂ ಹದಿನೈದು ಕೋಣೆ ಹಿಡಿದಿದ್ದೀನಿ. ಹಿಡಿದೊಡನೆಯೆ ನನಗು ಆ ಕಿಟಕಿಗೂ ಲವ್. ಬೇರೇನೂ ಮಾಡಲಾಗದಂತೆ ಸೆಳೆದಿಟ್ಟಿರುವ ಆ ಕಿಟಕಿಯಿಂದ ನೋಡಿದರೆ, ಆ ಹದಿನೆಂಟು ಮನೆಗಳ ಇತಿಹಾಸ ಬರೆಯುವಷ್ಟು ಮಾಹಿತಿಯೇನೊ ದಕ್ಕುತ್ತದೆ. ಆದರೇನು ಮಾಡಲಿ, ನಾನು ಆ ಕಿಟಕಿ ತೆಗೆಯೋಕ್ಕೆ ಹಾವಳಿಮುಕ್ತವಾಗಿ ಇರೋ ಅವಕಾಶವೇ ಬಹಳ ಕಡಿಮೆ. ಹೋಗಲೀಂದ್ರೆ ನನಗೂ ಬಾಹ್ಯ ಪ್ರಪಂಚಕ್ಕೂ ಸಂಪರ್ಕ ಇಲ್ಲವೆ ಇಲ್ಲಾನ್ನಬಹುದು. ಬ್ರಹ್ಮಚಾರಿ ಶತಮರ್ಕಟ. ಮಾತನಾಡಿದರೆ ಎಲ್ಲಿ ಏನಂಟಿಕೊಳ್ಳುತ್ತದೋ ಏನಾಗಿ ಹೋಗುತ್ತದೊ ಎಂಬಂತ ಅಂಜುಕುಳಿ ಸ್ವಭಾವದ ಮಂದಿಯೇ ಹೆಚ್ಚು. ಆದ್ದರಿಂದಲೇ ನಾನು ಮನುಷ್ಯ ಮುಟ್ಟಿದ ಗುಬ್ಬಿ.
ದಿಟ ಗುಬ್ಬಿಯಂತೆಯೆ ನಾನು ಅಂಜಿಕೊಂಡಿದ್ದೇನೆ. ಗಾಬರಿಯಾಗಿದ್ದೇನೆ. ಸಂಪರ್ಕ, ಸಹವಾಸವಾಗಲಿ ಏನೊಂದೂ ಬೇಡವೇ ಬೇಡ ಎಂಬ ನಿರ್ಧಾರ ಬಹಳ ಗಟ್ಟಿಯಾಗಿದೆ. ಆಫೀಸಾಯ್ತು-ರೂಮಾಯ್ತು-ಕಿಟಕಿಯಾಯ್ತು. ಕಿಟಕಿ ಇಲ್ಲದಿದ್ದರೆ ಹಾಸಿಗೆ – ಪುಸ್ತಕಗಳಾಯ್ತು. ಅಪರೂಪಕ್ಕೊಮ್ಮೆ ಕಾಫಿ ತಿಂಡಿ ಮಾಡಿಕೊಳ್ಳಲು ಬೇಸರವಾಗಿ ವಠಾರದ ಹುಡುಗರನ್ನು ಕರೆದು ಫ್ಲಾಸ್ಕು ಕೊಟ್ಟು ಹೋಟೆಲ್ಲಿಗೆ ಅಟ್ಟುತ್ತೇನೆ. ಆ ಹುಡುಗರೂ ಸಹ “ಮಾಮ” ಕೇಳಿದ್ದನ್ನು ಸಲೀಸಾಗಿ ಮಾಡಿಕೊಡುತ್ತವೆ. ಹಾಗೆ ಮಾಡಿ ಕೊಡೋದಕ್ಕೂ ಆ ಹುಡುಗರ ತಾಯ್ತಂದೆಯರ ವಿರೋಧ. “ಆ ರೂಮಿಗೆ ಹೋಗ್ಬೇಡಾಂತ ನಿನಗೆ ಎಷ್ಟು ಸಲ ಹೇಳೋದು?” ಅಂತ ಮಕ್ಕಳನ್ನ ದಂಡಿಸಿದ ವರದೀನ ಹುಡುಗರೇ ಬಹಳ ಪ್ರಾಂಪ್ಟಾಗಿ ತತಾರೆ. ಹಾಳಾಗಿ ಹೋಗಲೀಂತ ಬಾಹ್ಯ ಸಂಪರ್ಕ ಬೇಡಾಂತ ನಾನು ನನ್ನ ರೂಂನಲ್ಲಿರೋ ವಸ್ತುಗಳನ್ನೆ- ನಿರ್ಜೀವ ವಸ್ತುಗಳನ್ನೇ ಪ್ರೀತಿಸಲಾರಂಭಿಸಿದ್ದೇನೆ. ಅದರಲ್ಲೂ ಐ ಪ್ರಿಫರ್ ಜಸ್ಟ್ ದಿ ಬ್ಲಡಿ ವಿಂಡೋ.
ಹಾಗೆ ಹೇಳೋಕ್ಕೋದರೆ ಈ ಗುಬ್ಬೀನ ಮನುಷ್ಯ ಮುಟ್ಟೇ ಇಲ್ಲ. ಮುಟ್ಟೋಕಿದ್ದಾಗಲೇ ಮುದುಡಿ ಹೋದದ್ದು. ಒಮ್ಮೆ ಏನಾಯ್ತೂಂದರೆ , ಆಫೀಸಿನಿಂದ ಹೀಗೆ ಬತಿದ್ದಾಗ ಈ ವಠಾರದಲ್ಲಿ ಅರವತ್ತು ವರ್ಷಗಳಿಂದ ಸಂಸಾರ ಹೂಡಿರೋ ಚೂಡನಾಥಯ್ಯರ್ ನನ್ನನ್ನು ನೋಡಿದೊಡನೆಯೆ ಕೈಬೀಸಿ ಎತ್ತರದ ಧ್ವನಿಯಲ್ಲಿ “ಬಾರಯ್ಯ ಇಲ್ಲಿ..” ಎಂದು ಕೂಗಿದರು. ಕೂಗಿದ ಧಾಟಿಗೆ ನಾನು ದಿಗ್ಭ್ರಮಿಸಿ ಹೋದೆನಾದರೂ ಮರ್ಯಾದೆಯಿಂದ ಅವರ ಬಳಿ ಹೋಗಿ ನಿಂತೆ. ಎಷ್ಟೇ ಆಗಲಿ ವಯೋವೃದ್ಧರು. ಕನ್ನಡದಲ್ಲಿ ಕಥೆಗಳನ್ನು ಒಂದಾನೊಂದು ಕಾಲದಲ್ಲಿ ಬರೆದು ಅಲ್ಲೊಂದು ಇಲ್ಲೊಂದು ಪ್ರಕಟಿಸಿರೋ ಕಥೆಗಾರರು ಬೇರೆ. ನನ್ನನ್ನು ನಖಶೀಖಾಂತ ನೋಡಿದ ಆತ “ನೀನೆಯೋ ಆ ಮಲಯಾಳಿಗಳ ಮನೆ ಮೇಲಿರೋ ರೂಮಿನಲ್ಲಿರೋನು?” ಎಂದು ಕೇಳಿ ನಾನು ಮತ್ತಷ್ಟು ದಿಗ್ಭ್ರಮಿಸಿ ಹೋಗುವಂತೆ ಮಾಡಿದ್ಡರು. ತಮ್ಮ ಜನಿವಾರದಿಂದ ಬೆನ್ನ ತುರಿಕೆಯನ್ನು ಕಡಿಯುತ್ತಾ, ನಾನು ಹೌದೆಂದ್ದಷ್ಟೇ ಹೇಳಿ ಅಲ್ಲಿ ನಿಲ್ಲದೆ ಹೊರಟು ಬಂದೆ. ಬೆನ್ನ ಹಿಂದೆಯೇ “ಈಗಿನ ಕಾಲದ ಹುಡುಗರು . ಹಿರಿಯರೂಂದರೆ ಭಯ ಭಕ್ತೀನ್ನೋದೆ ಇಲ್ಲ. ಒಬ್ಬಂಟಿ, ಕರೆದು ಮಾತಾಡ್ಸೋಣ ಅಂದರೆ ಧಿಮಾಕು” ಎಂದು ಗೊಣಗಿಕೊಂಡ ಟೀಕೆ ಬಂದಿತ್ತು.
ಹೀಗೆ ಇದೆ ರೀತಿ ಒಬ್ಬರ ಕಾಲನ್ನು ಮತ್ತೊಬ್ಬರು ಕಡಿಯುತ್ತಾ ಕುಳಿತಿರೋದೊ ಅಥವ ಯಾರಾದರೂ ಹೆಂಗಸರು ಬಟ್ಟೆ ಒಗೆಯುತ್ತಲೋ, ಆರ ಹಾಕುತ್ತಲೋ ಅಥವ ಯಾವುದಾದ್ರೂ ಮನೆ ಮಾಮಿಗಳು ಸಂಡಿಗೆ ಒಣ ಹಾಕುತ್ತಲೋ, ಇನ್ನಾರದೋ ಮನೆಯಲ್ಲಿ ಸತ್ಯನಾರಾಯಣ ಪೂಜೆ, ಇಲ್ಲವೆ ಮದುವೆ ಮುಂಜಿ ಸಂಭ್ರಮ ಇರುವ ಮಾಮೂಲಿ ದೃಶ್ಯಗಳು ನನ್ನ ಕಿಟಕಿಯಾಚೆ. ದರಿದ್ರ ಎಲ್ಲಾ ಮಾಮೂಲೆ. ಈ ಜಗತ್ತಿನಲ್ಲಿ ಬೇರೇನಾದರೂ ಜರುಗಲು ಸಾಧ್ಯವೆ ಎಂಬ ಉದಾಸೀನದಿಂದಲೂ ನಾನು ಕಿಟಕಿಯನ್ನು ತೆಗೆಯಲು ನಿರಾಕರಿಸಿದ್ದೂ ಉಂಟು.
ನಾನಿರುವ ರೂಮಿನ ಕೇಳಗಡೆ ಮನೆಯಲ್ಲಿರುವಾಕೆ ಒಂದು ದೊಡ್ಡ ಫ್ಯಾಕ್ಟರಿ ಆಸ್ಪತ್ರೆಯಲ್ಲಿ ಡಾಕ್ಟರಾಗಿದ್ದಾರೆ. ಕೇರಳದವರು. ಜೊತೆಯಲ್ಲಿ ಐದು ವರ್ಷದ ಮಗ. ತಾಯಿ-ತಂದೆ ಅಷ್ಟೆ. ಗಂಡ ಇಸ್ರೋದ ವಿಜ್ಞಾನಿ. ಕೊಚ್ಚಿನ್‌ನಲ್ಲಿದ್ದಾರಂತೆ. ವಾರಕ್ಕೊಮ್ಮೆ-ತಿಂಗಳಿಗೊಮ್ಮೆ ಬರುತ್ತಿರುತ್ತಾರಂತೆ. ಆತ ಬಂದಾಗ ಮಾತ್ರ ಆಕೆ ಕಾಣ ಸಿಗುವುದು. ಗಂಡನೊಂದಿಗೆ ಸಿನಿಮಾಕ್ಕೋ ಮತ್ತೊಂದಕ್ಕೋ ಹೋಗುತ್ತಿರುತ್ತಾರೆ. ನಾನು ಅವರನ್ನು ನೋಡಿದೊಡನೆಯೆ ತಲೆ ತಗ್ಗಿಸಿ ಹೊರಟು ಹೋಗುತ್ತಿರುತ್ತೇನೆ. ಎಂದೂ ಅದರ ಬಗೆಗೆ ತಲೆ ಕೆಡಿಸಿಕೊಳ್ಳೋಕ್ಕೆ ಹೋಗಿಲ್ಲ. ಅವರೂ ಅಷ್ಟೆ. ಇದೇ ಬೀದಿಲಿರೋ ನನ್ನ ಸಹೊದ್ಯೋಗಿ ಮಿತ್ರನ ಹೆಂಡತಿಗೂ ಈಕೆಗೂ ಸ್ವಲ್ಪ ಸಂಪರ್ಕ. ಅವರಿಬ್ಬರ ಭೇಟಿಯ ವಿವರಗಳನ್ನು ನನ್ನ ಸಹೊದ್ಯೋಗಿಮಿತ್ರ ಸಂದರ್ಭಾನುಸಾರ ಹೇಳುತ್ತಿರುತ್ತಾನೆ. ಹಾಗೆ ತಿಳಿದು ಬಂದ ವಿವರಗಳೆ ಈಗ ನಾನು ಇಲ್ಲಿ ದಾಖಲಿಸಿರುವುದು. ಸಹೊದ್ಯೋಗಿಮಿತ್ರನ ಹೆಂಡತಿಗೂ ಈಕೆಗೂ ಆಗಾಗ್ಗೆ ಜಗಳವಾದದ್ದೂ ಉಂಟು-ಮನಸ್ತಾಪ ಬೆಳೆದದ್ದೂ ಉಂಟು.
ಈ ಬಾರಿ ಬಹಳ ದಿನಗಳವರೆಗೆ ಕಿಟಕಿಯನ್ನು ಮುಚ್ಚೇ ಇದ್ದೆ. ಒಂದು ದಿನ ಎಲ್ಲವೂ ಶಾಂತವಾಗಿದ್ದಾಗ ಬೆಳ್ಳಂಬೆಳಿಗ್ಗೆ ಚುಮುಚುಮು ಬೆಳಕಿನಲ್ಲಿ ಬಿಸಿ ಬಿಸಿ ಕಾಫಿ ಮಾಡಿ ಕಿಟಕಿ ತೆಗೆದಾಗ ಆಶ್ಚರ್ಯ ಕಾದಿತ್ತು. ಆ ಕತ್ತಲೆಯ ಬೆಳಕಿನಲ್ಲೂ ಸ್ಪಷ್ಟವಿತ್ತು. ಇನ್ನೂ ಬೀದಿ ದೀಪ ಉರಿಯುತ್ತಿತ್ತು. ನಾನಾಕೇನ ಇಲ್ಲಿಯವರೆಗೂ ಕಂಡೇ ಇರಲಿಲ್ಲ. ಆ ಕ್ಷಣ ಯಾರಿರಬಹುದು ಎಂಬ ಕುತೂಹಲ ಹುಟ್ಟಿ ತಕ್ಷಣವೆ ಯಾರಾದರೇನಂತೆ ಎಂಬ ಉದಾಸೀನವೂ ಹುಟ್ಟಿ ಕುತೂಹಲ ಕ್ಷೀಣಿಸಿಹೋಯ್ತು. ಅದರ ಹಿನ್ನೆಲೆಯಲ್ಲಿ ಆಕೆ ಚೂಡನಾಥಯ್ಯರ್‌ರ ಮನೆ ಮುಂದಿನ ಅಂಗೈ ಅಗಲದ ಅಂಗಳವನ್ನು ತೊಳೆದು ರಂಗೋಲಿ ಹಾಕುತ್ತಿದ್ದುದರಿಂದ ಆಕೆ ಚೂಡನಾಥಯ್ಯರ್ ಮನೆಗೆ ಬಂದಿರುವಾಕೆ ಇರಬಹುದೆನ್ನುವ ಅಲ್ಪ ಸಮಾಧಾನಕರ ತೀರ್ಮಾನವೂ ಮೂಡಿಬಂತು.
ಯಾರಿರಬಹುದು?- ಕುತೂಹಲವನ್ನು ಉಪೇಕ್ಷಿಸಿದ ಮಾತ್ರಕ್ಕೆ ಸಾಯುತ್ತದೆಯೆ? ಅಂದು ಸಂಜೆಯೆ ವಠಾರದ ಹುಡುಗರನ್ನ ಹೋಟೆಲ್ಲಿಗೆ ಅಟ್ಟುವ ಮುನ್ನ ಕೇಳಿದೆ:
“ಲೋ, ಚೂಡನಾಥಯ್ಯರ್ ಮನೆಗೆ ಹೊಸದಾಗಿ ಬಂದಿದ್ದಾರಲ್ಲ, ಯಾರೋ ಅದು?”
“ಅಂದರೆ ..?”- ಮುಗ್ಧವಾದ ಪ್ರತಿ ಪ್ರಶ್ನೆ.
“ಹೆಂಗಸು..ಹೊಸದಾಗಿ ಬಂದಿದ್ದಾರಲ್ಲ..”
“ಅವರಾ..ಅವರು ಮನ್ನಿ..”
“ಮನ್ನಿ ಅಂದರೆ?”
“ಮನ್ನಿ ಅಂದರೆ ಮನ್ನಿ. ಅವರು ಆಗಲೆ ಬಂದು ಬಹಳ ದಿನಗಳಾದವು….”
– ಇನ್ನೂ ಹೆಚ್ಚಿಗೆ ತೋಡಿದರೆ ಹುಡುಗನಿಗೆ ಅವನ ತಾಯ್ತಂದೆಯರು ನನ್ನ ವಿರುದ್ಧ ನೀಡಿರುವ ಎಚ್ಚರಿಕೆಯನ್ನ ತೀವ್ರಗೊಳಿಸಿದಂತಾಗುತ್ತದೆ ಎಂದು ನಾನು ಸುಮ್ಮನಾಗಿ ಹುಡುಗನನ್ನು ಹೋಟೆಲ್ಲಿಗೆ ಅಟ್ಟಿದೆ.
ಇನ್ನೊಂದು ದಿನ, ಇನ್ನೂ ಚಿಕ್ಕ ಹುಡುಗನಿಗೆ ಕಾಫಿ ಯಾತ್ರೆಗೆ ಕಳಿಸುವ ಮುನ್ನ ಇನ್ನಷ್ಟು ಮಾಹಿತಿ ಗಿಟ್ಟಿಸಿದ್ದರಲ್ಲಿ- ಆಕೆ ಚೂಡನಾಥಯ್ಯರ್‌ರ ಸೊಸೆ ಎಂದು ತಿಳಿದು ಬಂತು. ಚೂಡನಾಥಯ್ಯರ್‌ರ ಮಗ ವೈದ್ಯನಾಥನ್ ಸಹ ಅಪ್ಪನಷ್ಟಲ್ಲದಿದ್ದರೂ ಸ್ವಲ್ಪ ಅಹಂಕಾರಿಯೇ ಎಂದನ್ನಬಹುದು. ಯಾವುದೋ ಫ್ಯಾಕ್ಟರಿಯಲ್ಲಿ ಅಕೌಂಟೆಂಟ್. ಅವನು ಸ್ಕೂಟರಿನಲ್ಲಿ ಹೋಗುವಾಗ ನಾನು ಎದುರಾದರೆ ಕಡೇಪಕ್ಷ ಮುಗುಳ್ನಗೆಯಾದರೂ ನಗುತ್ತಿದ್ದ. ಆಪ್ಪನಂತೆ ಗಂಟು ಮುಖದವನಲ್ಲ. ನನ್ನ ಅವನ ಸಂಬಂಧ ಆ ಮುಗುಳ್ನಗೆಯ ಮಿತಿಯಾಚೆ ಬೆಳೆಯಲೇ ಇಲ್ಲ.
ಒಂದು ದಿನ ವಠಾರದ ತಲೆ ಬಾಗಿಲಿನಲ್ಲಿ ಆಕೆ ಬೇರೊಬ್ಬ ಹೆಂಗಸಿನೊಂದಿಗೆ ಮಾತನಾಡುತ್ತಿದ್ದುದ್ಡು, ನಾನು ಲಬ್ಬೆಯ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟ್ ಕೊಳ್ಳುತ್ತಿದ್ದಾಗ ಕಾಣಿಸಿತು. ಸ್ವಲ್ಪ ಹತ್ತಿರದಿಂದ ನೋಡುವ ಎಂದು ಹೆಜ್ಜೆ ಹಾಕುತ್ತಿದ್ದಂತೆಯೆ, ನನಗೆ ಹೆಸರು ಗೊತ್ತಿರದ ನಮ್ಮ ಡಾಕ್ಟರ್ ಹೆಂಗಸು ಬರುತ್ತಿದ್ದುದನ್ನ ಗಮನಿಸಿದ ಪೆಟ್ಟಿಗೆ ಅಂಗಡಿ ಮುಂದೆ ಸಿಗರೇಟ್ ಹಚ್ಚಿದ ಪಟಾಲಂನವನೊಬ್ಬ ಇನ್ನೊಬ್ಬನಿಗೆ:
“ನೋಡೊ ಒಳ್ಳೆ ಮಲಯಾಳಿ ಫಿಗರ್ ಬತಾಇದೆ…” ಎಂದು ಹುಸಿ ನಕ್ಕದ್ದನ್ನನುಸರಿಸಿ ಕಿಸಕ್ಕೆಂದು ಪ್ರತಿಕ್ರಿಯಿಸಿದ್ದ ಇನ್ನೊಬ್ಬ “ಮಲಯಾಳಿ ಹೆಂಗಸೆಂದರೆ ಒಳ್ಳೆ ಖುಷಿ ಕೊಡ್ತಾರಂತೆ ಕಣೊ. ಅವರ ರಾಜ್ಯದಲ್ಲಿ ಎಲ್ಲಾ ತಳಕಬಳಕ. ಗಂಡು ಹೆಣ್ಣು ಸಹ, ಐ ಮೀನ್ ಹಾಸಿಗೇಲಿ..” ಎಂದಿದ್ದ. ಈ ಮಾಮೂಲಿ ಪಟಾಲಂಗೆ ಬೇರೇನೂ ಕೆಲಸವಿಲ್ಲ, ಹೋಗಿ ಬರೋನ ಚುಡಾಯಿಸೋದು ಬಿಟ್ಟರೆ.
ನಾನು ವಠಾರದ ತಲೆ ಬಾಗಿಲನ್ನ ಹಾದು ಅವರ ಕಣ್ಣಿಗೆ ಬೀಳದೆ ಅವರ ಸಂಭಾಷಣೆ ಕೇಳುವಂತೆ ಮರೆಯಾಗಿ ನಿಂತೆ. ಮನ್ನಿಯ ಸಂಭಾಷಣೆಯಲ್ಲಿ ಹೆಚ್ಚು ತಮಿಳು- ಅಲ್ಲಲ್ಲಿ ಒಳ್ಳೆ ಪ್ರೌಢಿಮೆಯ ಇಂಗ್ಲೀಷ್ ನುಸುಳುತ್ತಿತ್ತು. ಅದು ದೊಡ್ಡ ಸಂಭಾಷಣೆಯೇನೂ ಅಲ್ಲ. ಹರಕು ಮುರುಕು ತಮಿಳು ನನಗೂ ಗೊತ್ತಿದ್ದರಿಂದ ಸಂಗ್ರಹಿಸಲಾದ ವಿವರಗಳೆಂದರೆ:
ಆಕೆ ಸೊಸೆಯಾಗಿ ಬಂದ ಹೊಸತರಲ್ಲಿ ಮಾವನವರ ಮನೆಯಲ್ಲಿ ಹೆಚ್ಚಾಗಿ ಕನ್ನಡ ಬಳಕೆಯಲ್ಲಿದ್ದನ್ನ, ತತ್‌ಕ್ಷಣ ಆ ಬಳಕೆಗೆ ಒಗ್ಗದೆ ಇರೋದು, ತಾನು ತನ್ನ ತವರಿನಲ್ಲಿ ಮಾಡುತ್ತಿದ್ದ ಅಡಿಗೆಗೆ ಮನೆಯವರು ಒಗ್ಗದೆ ಇರೋದು, ಅವರ ಅಡಿಗೆಯನ್ನ ತಾನು ಎಷ್ಟೇ ಚೆನ್ನಾಗಿ ಮಾಡಿದರೂ ಮನೆಯವರ ಮೂದಲಿಕೆ, ತಾನು ಇಂಗ್ಲೀಷಿನಲ್ಲಿ ಬರೆದ ಕತೇನ ಓದಿ- “ನೀನು ಏನೇ ಬರೆದರೂ ಕನ್ನಡದಲ್ಲಿ ಬರೆ, ಬರದಿದ್ದರೆ ಕಲಿತುಕೋ, ಆ ದರಿದ್ರ ಕೊಂಗಾಟವನ್ನ ಬಿಟ್ಟು ಬಿಡು. ಆಗಲೇ ನಮಗೆ ಹೆಮ್ಮೆ.” ಎಂದು ಅತ್ತೆ, ಮಾವ, ಗಂಡ ಎಲ್ಲರೂ ಛೇಡಿಸಿದ್ದು, ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡಿದ್ದ ಮಾಮಿ- ಮನ್ನಿಯ ಮದ್ರಾಸ್ ವಿಶ್ವವಿದ್ಯಾಲಯದ ಇಂಗ್ಲೀಷ್ ಗರ್ವವನ್ನ ಮುರಿಯೋ ನಿರ್ಧಾರದ ಧಾಟೀಲಿ- “ಹೌದಮ್ಮ ನೀನು ನಿನ್ನ ಗಂಡನ ಮನೆಗೆ ಬಂದ್ಮೇಲೆ ಗಂಡನ ಮನೆಯ ಆಚಾರ ವಿಚಾರಗಳಿಗೆ ಹೊಂದ್ಕೋ ಬೇಕು. ಆಗಲೆ ತವರಿಗೂ ಕೀರ್ತಿ. ನಿನ್ನ ಮಾವ- ಅತ್ತೆ – ಗಂಡ ಹೇಳೋದನ್ನ ಕೇಳು…ಅದೇ ನ್ಯಾಯ…” ಎಂದು ತೀರ್ಪಿತ್ತಿದ್ದರು.
ಅದೇನಾಯ್ತೋ ಏನೋ ಮೊಟ್ಟ ಮೊದಲ ಬಾರಿಗೆ ನನ್ನ ಆತ್ಮೀಯ ಕೋಣೆ ಅಸಹ್ಯವಾಯಿತು. ರಾತ್ರಿ ಮಲಗಿದಾಗ ಕಣ್ಮುಚ್ಚಿದೊಡನೆ ಮನ್ನಿಯ ಮುಖ, ಎಂ.ಎ ಇಂಗ್ಲೀಷ್ ಮನ್ನಿಯ ಮುಖ, ಇಲ್ಲಿಗೆ ಬಂದಾಗ ಎಷ್ಟೊಂದು ಕ್ಯೂಟ್ ಆಗಿದ್ದಳು. ಈಗ ಸಣ್ಣಗೆ ಬಡಕಲು – ಬಡಕಲಾಗಿ… ಇದರೊಂದಿಗೆ ಯಾರ ಮೇಲೋ ದ್ವೇಷ, ಚೂಡನಾಥಯ್ಯರ್ ಮೇಲೆ? ಉಹೂಂ. ಮನ್ನಿ ಅತ್ತೆ- ಗಂಡನ ಮೇಲೆ? ಊಹುಂ. ಹಾಗಾದರೆ ಯಾರ ಮೇಲೆ? ಅರ್ಥವಾಗದ ತಳಮಳ. ಎಷ್ಟೇ ಸೂಕ್ಷ್ಮವಾದರೂ ತಳಮಳದ – ದ್ವೇಷದ ಹಿನ್ನೆಲೆ ಅರ್ಥವಾಗುವ – ಸ್ಫುಟವಾಗುವ ಲಕ್ಷಣ ಕಾಣಲಿಲ್ಲ. ಎಂದೋ ಯಾರೋ ಬಿಟ್ಟಿ ಕೊಟ್ಟಿದ್ದರೆಂದು ತಂದು ಬಿಸಾಕಿದ್ದ ಬಹಳ ದಿನಗಳು ಓದದೆ ಇದ್ದ ಗೋಕಾಕ್ ಸಮಿತಿ ವರದಿಯ ಪೂರ್ಣ ಪಾಠ ಅದಾಗಿತ್ತು. ಅದರಲ್ಲಿ ಮನಸ್ಸನ್ನು ತೊಡಗಿಸಲಿಕ್ಕೇ ಆಗಿರಲಿಲ್ಲ. ಬೇರೆ ಯಾವುದೇ ಪುಸ್ತಕ ಇರಲಿಲ್ಲ. ಬಹಳ ಬೇಗನೆ ಹಾಸಿಗೆ ಹಾಸಿ ಉರುಳಿಕೊಂಡಿದ್ದೆ, ನಿದ್ದೆ ಬಾ ಎಂದರೂ ಎಲ್ಲಿಂದ ಬಂದಾತು?
ಮೆಲ್ಲನೆದ್ದು ಕಿಟಕಿ ತೆಗೆದಾಗ ಮನ್ನಿ ವಠಾರದ ತಲೆ ಬಾಗಿಲ ಜಗಲಿ ಮೇಲೆ ಮೂನಾಲ್ಕು ಪುಡಿ ಹುಡುಗರೊಂದಿಗೆ ಕುಳಿತಿದ್ದುದು ಕಾಣಿಸಿತು. ಕತೆ ಹೇಳುತ್ತಿದ್ದಳೇನೊ. ಹುಡುಗರಿಗೆ ತಮಿಳು ಅರ್ಥವಾಗುತ್ತಿತ್ತೋ ಅಥವ ಹರಕು ಮುರುಕು ಕನ್ನಡದಲ್ಲೇ ಹೇಳುತ್ತಿದ್ದಳೇನೊ. ಒಂದೆರಡು ನಿಮಿಷ ಹಾಗೆ ನೋಡುತ್ತಿದ್ದಾಗ ಆಕೆಯ ಗಂಡ ಬಂದು ಏನನ್ನೋ ಹೇಳುತ್ತಿದ್ದ. ಅವನು ಹಾವಭಾವ ನೋಡಿದರೆ ಸಿಟ್ಟಾಗಿದ್ದನೆಂದು ಕಾಣುತ್ತದೆ. ಆಕೆ ಎದ್ದು ಒಳ ಹೊರಟು ಹೋದಳು. ಪಾಪ ಮನ್ನಿ.
ಮನ್ನಿ, ಎಂಥಾ ಹೆಸರು? ಮುದ್ದಾಗಿ ಕರೆಯುವ ರೀತಿಯೋ ಅದು? ಹಾಗಾದರೆ ನಿಜವಾದ ಹೆಸರೇನೊ? ನಿಜವಾಗಿಯೂ ಒಬ್ಬ ವ್ಯಕ್ತಿಯ ಹೆಸರು ತಿಳಿದು ಕೊಳ್ಳಬೇಕೆನ್ನಿಸಿದ್ದು ಆಗಲೆ!
ಒಂದು ನಿಮಿಷ ಕಿಟಕಿಯಾಚೆ ನೋಡುತ್ತಿದ್ದೆ. ನಿರ್ಜನವಾದ ನಿರ್ಜೀವವಾದ ಬೀದಿ. ಮಂಕು ವಿದ್ಯುತ್ ಬೆಳಕಲ್ಲಿ ಖಾಲಿಖಾಲಿಯಾದ ಆ ಬೀದಿಯನ್ನ ಕಾಣಲಾಗದೆ ಕಿಟಕಿಯನ್ನ ರೋಷದಿಂದ ಪಟ್ಟೆಂದು ಶಬ್ಧ ಬರುವ ಹಾಗೆ ಮುಚ್ಚಿದೆ. ಪ್ರಥಮ ಬಾರಿಗೆ ಆ ಕಿಟಕಿಯ ಬಗೆಗೆ ದ್ವೇಷ ಉಮ್ಮಳಿಸಿಕೊಂಡು ಬಂದಿತ್ತು.
ಮಲಗಿದಾಗ ಕನಸಿನಲ್ಲಿ ತನ್ನ ಸಹೋದ್ಯೋಗಿಮಿತ್ರನ ಹೆಂಡತಿ ಅಬ್ಬರಿಸಿ “ನಿಮ್ಮ ರೂಮು ಕೆಳಗಿದಾಳಲ್ಲ, ಆ ಮಲೆಯಾಳದ ಮಿಟಕಲಾಡಿ, ಆಕೆಗೇನು ಗರ್ವಾರೀ, ಯುಗಾದಿ ಹಬ್ಬ, ಬಂದು ಅರಿಶಿನ ಕುಂಕುಮ ಇಟ್ಟುಕೊಡು ಹೋಗೂಂತ ಕರೆದರೆ ಬರಲೇ ಇಲ್ಲ. ಇನ್ನೊಂದು ದಿನ ಓಣಂ ಹಬ್ಬ- ನಮ್ಮ ಮನೆಗೆ ಊಟಕ್ಕೆ ಬನ್ನೀಂತ ಕರೀತಾಳಲ್ರಿ. ನಾಚಿಕೆ ಇಲ್ಲದೋಳು. ನಾನು ಹೋಗ್ತೀನ…ಹುಡುಗರ ಮೇಲೆ ಅದೆಂತಾ ಮೋಡಿ ಮಾಡಿದ್ದಾಳೊ, ಹೋಗ್ತೀವೀಂತ ಹಠ ಹಿಡಿದರು, ನಾಲ್ಕು ತದುಕಿ ಸುಮ್‌ನಾಗಿಸ್ದೆ. ಎಂಥಾ ಧಿಮಾಕೂ ರೀ ಆಕೇದು…” ಎಂದು ಕೂಗಾಡಿದಳು. ಎಲ್ಲೋ ಇದೆ ಮಾತು ಕೇಳಿದ್ದೆ ಈಗಾಗಲೆ.
ಬೆಳಗಿನ ತನಕ ಅದೇ ರೀತಿಯ ಅಬ್ಬರ. ಕೆಟ್ಟಕೆಟ್ಟದಾಗಿ ನನ್ನ ಕನಸಿನಲ್ಲಿ ನಡೆದೇ ಇತ್ತು. ಬೆಳಿಗ್ಗೆ ಸಂಪೂರ್ಣ ಎಚ್ಚರಾದಾಗ ನಾನು ಉಗಾದಿ ಹಬ್ಬದೂಟಕ್ಕೆ ಸಹೋದ್ಯೋಗಿಮಿತ್ರನ ಮನೆಗೆ ಹೋಗಿದ್ದಾಗ ಆಕೆ ಆಡಿದ್ದ ಮಾತುಗಳೇ ಕನಸಿನಲ್ಲಿ ಬಂದದ್ದೆಂದು ಖಚಿತವಾಗಿತ್ತು. ಇದ್ಯಾಕೆ ಹೀಗೆ ಕನಸಿನಲ್ಲಿ ಪುನರಾವರ್ತನೆಯಾಯಿತೋ ತಿಳಿಯದು. ಎದ್ದು ಹೊರಗಡೆ ಬಾಗಿಲ ಬಳಿ ಬಿದ್ದಿದ್ದ ಪೇಪರ್ ತಂದು ಬಿಡಿಸಿದೆ. ಕನ್ನಡವನ್ನು ಎಲ್ಲ ಹಂತಗಳಲ್ಲೂ ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂಬ ಮುಖ್ಯಮಂತ್ರಿಗಳ ಮಾಮೂಲಿ ಹೇಳಿಕೆ ಶೀರ್ಷಿಕೆಯಾಗಿ ಪ್ರಕಟಗೊಂಡಿದ್ದುದು ನನ್ನ ಕಣ್ಣಿಗೆ ಪ್ರಪ್ರಥಮವಾಗಿ ಬಡಿದು- ಪೇಪರನ್ನ ಓದದೆ ಹಾಗೇ ಬಿಸಾಕಿದೆ.
ಕಿಟಕಿಯ ಮೇಲಿನ ದ್ವೇಷ, ತೀವ್ರವಾಗಿದ್ದರೂ ಚಟ ಸುಮ್ಮನೆ ಬಿಟ್ಟಾತೆ. ಬಹಳ ದಿನಗಳ ನಂತರ ಒಂದು ಬೆಳಿಗ್ಗೆ ತೆಗೆದಾಗ ಮೊದಲು ಗಮನ ಸೆಳೆದದ್ದು ಬೀಗ ತೆಗೆಯದೆ ಬಿಮ್ಮೆಂದು ಇದ್ದ ಲಬ್ಬೆಯ ಪೆಟ್ಟಿಗೆ ಅಂಗಡಿ. ಒಂದು ದಿನವೂ ಮುದುಕ, ಸಮಯಕ್ಕೆ ಸರಿಯಾಗಿ ತೆಗೆವುದು ತಪ್ಪಿಸದಿದ್ದವ ಇಂದೇಕೆ ತೆಗೆಯಲಿಲ್ಲ? ಆರೋಗ್ಯ ಸರಿ ಇಲ್ಲದಿರಬಹುದು ಎಂದು ಸುಮ್ಮನಾದೆ. ಐದಾರು ದಿನಗಳಾದರೂ ತೆಗೆಯಲೇ ಇಲ್ಲ. ಆಮೇಲೊಂದು ದಿನ ಅವನ ಅಂಗಡಿಯ ಬೆಂಚುಗಳನ್ನೆ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ಮಾಮೂಲಿ ಪಟಾಲಂ ಸಿಕ್ಕಿದಾಗ ವಿಚಾರಿಸಿದೆ. ಅವರು ಹೇಳಿದಷ್ಟನ್ನ ಇಲ್ಲಿ ದಾಖಲಿಸುತ್ತಿದ್ದೇನೆ:
“ಆ ಲಬ್ಬೆ ನನ್ಮಗನಿಗೆ ಬಹಳ ಗಾಂಚಾಲಿ ಸಾರ್, ಕನ್ನಡದಲ್ಲಿ ಮಾತೋಡೋಂದರೆ ಬರಾಕಿಲ್ಲ ಅಂತಾನೆ. ಅದಕ್ಕೆ ಯದ್ವಾ ತದ್ವ ದಬಾಯಿಸಿದ್ದಕ್ಕೆ, ಬಂದು ಗಲಾಟೆ ಮಾಡ್ತಾರೇಂತ ಪೊಲೀಸ್ ಕಂಪ್ಲೇಂಟ್ ಮಾಡ್ದಾಂತ ಗೊತ್ತಾಯ್ತು, ಅಷ್ಟೆ , ಅಂಗಡೀನೆಲ್ಲ ಉಡೀಸ್ ಮಾಡ್ಬಿಟ್ವಿ. ಊರಿಗೆ ಓಡಿಹೋದ ಆ ಕಂಜಿವೆಳ್ಳಂ ನನ್ಮಗ…” ಎಂದು ಕೇಕೆ ಹಾಕಿದರು.
ಪೊಲೀಸ್ನೋದು ಒಂದು ವರ್ಶನ್ ಇದೆ: “ಈ ತುಡುಗು ಮುಂಡೇವು ಸಿಗರೇಟು, ಬಾಳೆ ಹಣ್ಣು, ಟೀ ಅದೂ ಇದೂಂತ ಆಗ ಕೊಡ್ತೀವಿ ಈಗ ಕೊಡ್ತೀವೀಂತ ಮುನ್ನೂರ್ ರೂಪಾಯಿ ಸಾಲ ಉಳಿಸಿಕೊಂಡರಂತೆ. ಒಂದು ದಿನ ಜಬರ್ದಸ್ಥ್‌ನಲ್ಲೇ ಕೇಳಿದ್ನಂತೆ. ಇವ್ರೆಲ್ಲ ಸೇರ್ಕೊಂಡು ಮುಂಡೇ ಮಗನೆ ನಮ್ ದೇಶ್ದಲ್ಲಿ ಬಂದು ಕೆರಕೊಂಡು ತಿಂತೀಯಾಂತ ಅಂಗಡೀನೆಲ್ಲ ಲೂಟಿ ಮಾಡವ್ರೆ…”
ನಾನು ಏನನ್ನು ಪ್ರತಿಕ್ರಿಯಿಸಲಿಲ್ಲ. ಇದರ ಹಿನ್ನೆಲೆಗೆ ಈ ಹುಡುಗರಿಗೆ ಪ್ರೋತ್ಸಾಹವಾಗಿ ಚೂಡನಾಥಯ್ಯರ್ ಇದ್ದರೂನ್ನೋದು ನಿಜ. ಯಾಕಂದ್ರೆ ಅವರು ಆ ಹುಡುಗರನ್ನ ಗುಂಪು ಕಟ್ಟಿಕೊಂಡು ಆಗಾಗೆ ಮಾತಾಡುತ್ತಿದ್ದುದನ್ನು ನಾನೇ ನೋಡಿದ್ದೀನಿ.
ಇನ್ನೂ ಒಂದು ದಿನ, ಡಾಕ್ಟರಮ್ಮನೂ ಕೆಲಸಕ್ಕೆ ರಾಜೀನಾಮೆ ಕೊಟ್ಟು ಗಂಡನ್ನ ಹೋಗಿ ಸೇರಿಕೊಂಡರಂತೆ. ಅದಕ್ಕೂ ಚೂಡನಾಥಯ್ಯರ್‌ರವರ ವ್ಯಂಗ್ಯ ಇಲ್ಲದಿಲ್ಲ: “ಪಾಪ ಎಷ್ಟು ದಿನಾಂತ ತಾನೆ ಗಂಡನ್ನ ಬಿಟ್ಟಿತಾಳೆ ಹೇಳಿ..” ಆಕೆ ಬೆಂಗಳೂರು ಬಿಡುವುದಕ್ಕೆ ಚೂಡನಾಥಯ್ಯರ್ ಕಲ್ಪಿಸುವ ಕಾರಣ ಇಷ್ಟು. ಮೇಲ್ನೋಟಕ್ಕೆ ಅದಷ್ಟೆ – ಅದರಷ್ಟೆ ನಿಜ ಅನ್ನಿಸುವುದು ಬೇರೊಂದಿಲ್ಲ. ಒಳಕ್ಕೆ ಇಳಿದರೆ ಆ ಮಲಯಾಳಿ ಹೆಂಗಸು ಎಷ್ಟು ಪಾಡು ಪಟ್ಟಿದ್ದಳೋ….
ನಾನು ಕಿಟಕೀನ ಮತ್ತೆ ಪುನಃ ಬಹಳ ದಿನಗಳು ತೆಗೆಯಲೇ ಇಲ್ಲ. ಅಸಲಿಗೆ ರೂಮೆ ಸೇರುತ್ತಿರಲಿಲ್ಲ. ಬೆಳೆಗ್ಗೆ ಹೋದರೆ ಇನ್ಯಾವಾಗಲೋ ಬಂದು ರೂಮು ಸೇರಿಕೊಳ್ಳುತ್ತಿದ್ದೆ. ಇದ್ದಷ್ಟು ಗಳಿಗೆಯೂ ಆ ರೂಮು ನನ್ನ ಕೊರಳು ಹಿಚುಕುತ್ತಿದ್ದ ಅನುಭವ, ಥೂ ಅಂತ ಉಗೀಬೇಕೂನ್ನಿಸುತ್ತೆ.
ಎಷ್ಟೇ ಅಸಹ್ಯವಾದರೂ ಕಿಟಕೀನ ಇತ್ತೀಚೆಗೆ ತೆಗೆದೇ ಇತೀನಿ. ಅದೂ ಇಲ್ಲದಿದ್ದರೆ ಒಳಗಿನ ಧಗೆಗೆ ಸುಟ್ಟು ಹೋದೇನೋ ಎಂಬ ಭಯ. ಆಗೊಮ್ಮೆ ಈಗೊಮ್ಮೆ ತಂಪು ಗಾಳಿಯಾದರೂ ಬೀಸುತ್ತಿರಲಿ ಅನ್ನೋ ಆಸೆ.
ಆಗೊಮ್ಮೆ ಈಗೊಮ್ಮೆ ಮನ್ನಿ ಕಾಣಿಸ್ತಾ ಇತಾಳೆ. ಆದರೆ ಅವಳು ಹುಡುಗರ ಜೊತೆ ಮಾತಾಡಿದ್ದು ಕಾಣಿಸಲೇ ಇಲ್ಲ. ಆ ಹುಡುಗರೂ ಅಷ್ಟೆ. ಆಕೇನ ನೋಡಿದೊಡನೆ ಓಡಿ ಹೋಗಿ ಕಾಲುಗಳನ್ನ ತಬ್ಬಿಕೊಂಡು ಮನ್ನಿ ಮನ್ನೀಂತ ಲಲ್ಲೆಗರೆಯೋಲ್ಲ. ಇನ್ನೂ ಸಣ್ಣಗಾಗಿದ್ದಾಳೆ. ಆಗಾಗ ತನ್ನ ಮನೇಲಿ ಯಾರೂ ಇಲ್ಲದಾಗ ಹುಚ್ಚು ಹಿಡಿದ ಹಾಗೆ ಕೈಯಲ್ಲಿ ಯಾವುದೋ ಪುಸ್ತಕ ಹಿಡಿದುಕೊಂಡು ಹಾಲ್‌ನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತ ಜೋರಾಗಿ ಒದುತ್ತಾ ಇರುತ್ತಾಳೆ. ಬಹುಶಃ ‘ಲರ್ನ್ ಕನ್ನಡ ಬಯ್ ಯುವರ್ ಸೆಲ್ಫ್’ ಇರಬೇಕು. ಮದ್ರಾಸ್ ಯೂನಿವರ್ಸಿಟಿಯ ಎಂ.ಎ ಇಂಗ್ಲೀಶ್ ಮಾಡಿದ್ದಾಳೇನ್ನೊದರ ಲಕ್ಷಣ ಈಗಂತೂ ಕೊಂಚವೂ ಇಲ್ಲ. ಬಂದ ಹೊಸತರಲ್ಲಿ ಕಪ್ಪಗಿದ್ದರೂ ಎಷ್ಟೊಂದು ಲಕ್ಷಣವಾಗಿದ್ದಳು…
ಒಂದೆರಡು ದಿನ ನಾನು ಊರಲ್ಲಿರಲಿಲ್ಲ. ಪತ್ರಿಕೇಲಿ ಬಂದ ಸುದ್ಧಿಯನ್ನು ನಿರ್ಭಾವುಕನಾಗಿ ಇಲ್ಲಿ ದಾಖಲಿಸುತ್ತಿದ್ದೇನೆ.:
ಮೈಸೂರು, ಏ.೨೪- ಶಂಕರಪುರಂ ಬಡಾವಣೆಯ ವಠಾರವೊಂದರಲ್ಲಿ ಗೃಹಿಣಿಯೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದು ವರ್ಷದ ಹಿಂದೆ ತಾನೆ ಮದುವೆಯಾಗಿದ್ದ ಆಕೆಗೆ ಆಕೆಯ ಅತ್ತೆ, ಮಾವ, ಗಂಡ ವರದಕ್ಷಿಣೆಯ ತಗಾದೆ ತೆಗೆದು ಅವಳನ್ನು ಪ್ರತಿನಿತ್ಯ ಹಿಂಸಿಸಿದ್ದಾರೆಂದು ಕೋಲಾರದಲ್ಲಿರುವ ಆಕೆಯ ತಂದೆ ಹಾಗು ಮದ್ರಾಸಿನ ಕಾಲೇಜೊಂದರಲ್ಲಿ ಅಧ್ಯಾಪಕನಾಗಿರುವ ಆಕೆಯ ಅಣ್ಣ ಆರೋಪಿಸಿದ್ದಾರೆ.
ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ನಾನು ಪುನಃ ಎಂದಿಗೂ ಆ ಕಿಟಕೀನ ತೆಗೀಲೆ ಇಲ್ಲ. ಮನ್ನಿ ಎಂದರೆ ತಮಿಳಿನಲ್ಲಿ ‘ಅತ್ತಿಗೆ’ ಎಂದರ್ಥ ಎಂಬುದನ್ನು ಇತ್ತೀಚೆಗೆ ತಾನೆ ತಿಳಿದುಕೊಂಡೆ. ಹಾಗೆಯೇ ಆಕೆಯ ಹೆಸರನ್ನೂ ಪತ್ರಿಕೆಗಳ ವರದಿಗಳ ಮುಖಾಂತರವೇ ತಿಳಿದುಕೊಂಡದ್ದು. ಬಹಳ ಮುದ್ದಾದ ಅಂದವಾದ ಹೆಸರು- ಇಳಂಗೊಡಿ. ಇಳಂಗೊಡಿ ಎಂದರೆ ಎಳೆಯ ಬಳ್ಳಿಯಂತೆ.
ನಾನು ಕಿಟಕಿ ತೆಗೀಲೆ ಇಲ್ಲ ಅಂತೆ ಹೇಳಿದೆನಲ್ಲವೆ? ಯಾಕೆಂದರೆ ನಾನು ಒಂದಾನೊಮ್ಮೆ ಗಾಢವಾಗಿ ಪ್ರೀತಿಸಿದ್ದ ಆ ರೂಮು ಬಿಟ್ಟು ಬಹಳ ದೂರದಲ್ಲಿ ಬೇರೊಂದು ರೂಮು ಹಿಡಿದಿದ್ದೀನಿ.!
ಈ ರೂಮಲ್ಲಿ ಕಿಟಕಿಗಳೆ ಇಲ್ಲ. ಗವಾಕ್ಷಿಯಂತದೇ ಎಂಥದೋ ಒಂದು ಇದೆ, ಬಹಳ ಎತ್ತರದಲ್ಲಿರೋ ಅದನ್ನು ನಾನು ತೆಗೆಯೋ ಸಂದರ್ಭವೇ ಇಲ್ಲ.
ಈ ರೂಮಂತೂ ನನ್ನ ಕೊರಳನ್ನ ಹಿಚುಕುತ್ತಾ ಇದೆ. ನಾನು ಇಲ್ಲೇ ಸತ್ತೋಗ್ತೀನೇನೋ ಅಂತನ್ನಿಸ್ತಿದೆ.
ಮನ್ನಿ ಆತಹತ್ಯೆಗೆ ಅವರಪ್ಪ ಹೇಳಿದ ಹಾಗೆ ಬರೀ ವರದಕ್ಷಿಣೆ ಬಾಕಿ ಮಾತ್ರ ಕಾರಣವೋ ಅಥವ ಬೇರಿನ್ನೇನಾದರು ಇತ್ತೆ? ನನಗಂತೂ ಸ್ಪಷ್ಟವಾಗಿಲ್ಲ. ಅದರ ಬಗೆಗಿನ ಪ್ರಶ್ನೆಗಳೂ ಈ ರೂಮಿನೊಂದಿಗೆ ಕೂಡಿಕೊಂಡು ಕೊರಳನ್ನು ಹಿಚುಕುತ್ತಲೇ ಇದೆ.
*****
ತುಷಾರ ಮಾಸ ಪತ್ರಿಕೆಯಲ್ಲಿ ಪ್ರಕಟ- ಜೂನ್-೧೯೮೬