ತೋಟಗಾರನು ನೀರನ್ನೆರೆಯುತ
ಸಸಿಯನು ಸಲಹಿದ ಮನವಿಟ್ಟು
ಸಸಿಯು ಸ್ಥಳಾಂತರ ಹೊಂದುತ ಬೆಳೆಯಿತು
ಬೆಳೆಸಿದ ಆತನ ನೆನಪಿಟ್ಟು
ಯಾವ ಯುವುದೋ ನೀರನು ಕುಡಿಯುತ
ಗಿಡವದು ಬೆಳೆಯಿತು ಮರವಾಗಿ
ಮಾಲಿಯು ಕಂಡನು ತನ್ನಯ ಗಿಡವನು
ಪ್ರೇಮದಿ ತಬ್ಬಿದ ಬೆರಗಾಗಿ
ಗುರುತನು ಹಿಡಿಯದೆ ತಡಬಡಿಸುತ್ತ
ವರುಷಗಳನ್ನೆ ಎಣಿಸಿದನು
ಸಸಿ ಇದ್ದಾಗಲೆ ನೀರುಣಿಸಿದ್ದನು
ಬಾರಿ ಬಾರಿಗೂ ನೆನೆಸಿದನು
ಗೊಬ್ಬರವಿಲ್ಲದೆ ನೀರೂ ಸಾಲದೆ
ಬೆಳೆದಿತ್ತಾ ಸಸಿ ಬಾಲ್ಯದಲಿ
ಪೀಚಕೆ ಬೆಳೆದಿಹ ಗಿಡಕ್ಕೆ ಒಲವಿನ
ನೀರನು ಹನಿಸಿದ ತೃಪ್ತಿಯಲಿ
ತನ್ನನು ಮೀರಿಸಿ ಬೆಳೆಯುತ ನಿಂತಿದೆ
ತನ್ನದೆ ಈ ಗಿಡವೆಂಬಾಸೆ
ಮನದಲಿ ಹುಟ್ಟಲು ಆತನ ಹೃದಯವು
ಕುಣಿಯಿತು ಕಣ್ಣದು ಹನಿಸೂಸೆ
ಸಹಸ್ರ ಗಿಡಗಳ ಬೆಳೆಸುವ ಮಾಲಿಗೆ
ಈ ಗಿಡ ನೆನಪನು ತುಂಬಿತ್ತು
ತಾನೇ ಕಟ್ಟಿದ ಆಶೆಯ ಹಂದರ
ಹಬ್ಬುತ ಬಳಿಗೇ ಬಂದಿತ್ತು
***