Home / ಕವನ / ಕವಿತೆ / ಹುಂಬರಾದೆವಲ್ಲೋ

ಹುಂಬರಾದೆವಲ್ಲೋ

ನಂಬಿದ್ರೆ ನಂಬಿ ಬಿಟ್ರೆ ಬಿಡ್ರಿ ಹುಂಬಗುತ್ಗಿ ಮಾತಿದಲ್ಲ
ಹುಂಬರಾದೆವಲ್ಲೋ ನಾವು ಇಷ್ಟೂ ದಿನ ||ಪ||

ತುಂಬಿ ತುಳುಕೋ ದೇಶದೊಳ್ಗೆ ತುಂಬದಂಗೆ ಹೊಟ್ಟೆ ಬಟ್ಟೆ
ದೊಂಬಿ ಮಾಡೋ ಶಕ್ತಿ ಇಲ್ದೆ ಕೊಳಿತಿವೋ ಜನ ||ಅ.ಪ||

ಕಂಡ ಕಂಡ ಗುಂಡು ಕಲ್ಗೆ ದೇವ್ರು ದಿಂಡ್ರು ಅಂದುಕೊಂತ
ಕಂಡು ಕಂಡು ಹಾಳು ಭಾವ್ಯಾಗ ಬಿದ್ದೀವಲ್ಲ
ಉಂಡು ತಿಂದು ಬೊಜ್ಜಾದೋರು ಕಾಲಿಗೆ ಬೀಳ್ರೋ ಅಂತಾ ಅಂದ್ರೆ
ದಿಂಡುಗೆಡ್ಡು ಮಂಡೆ ಬೋಳ್ಸಿಕೊಂಡೇವಲ್ಲ ||೧||

ಖೂನೀ ಮಾಡ್ಸೋ ಕಟುಕರಿಗೆ ಹೆಂಗಸರ್ಯಾನ ಕಳದೋರಿಗೆ
ನೀನೇ ದಣಿ ನಮ್ಮಪ್ಪಂತ ಕಾಲಿಗೆ ಬೀಳ್ತೀವಿ
ತಾನೇ ತಿಂದು ಊರಿನಾಸ್ತಿ ನಾನೇ ನಾನೆಂದ್ಮೆರದೋರ್ನೆಲ್ಲ
ನೀನೇ ಇಂದ್ರ ಚಂದ್ರ ಅಂತ ನಾವೆ ಹೊಗಳ್ತೀವಿ ||೨||

ನಮ್ಮ ಸೇವೆ ಮಾಡೋ ಆಳ್ಗೋಳ್ ಆಫೀಸಿನ್ಯಾಗೆ ದಣಿಗಳಂಗೆ
ಕಮ್ಗೆ ಮೆರ್ದು ದಬಾಯಿಸಿದ್ರೆ ನಾಯ್ಗಳಾಗ್ತೀವಿ
ದಮ್ಮು ಇಲ್ದೆ ಕಾಲಿಗೆ ಬಿದ್ದು ಕೇಳಿದಷ್ಟು ಬೋಳಿಸ್ಕೊಂಡು
ಸುಮ್ಗೆ ಹಲ್ಲಾಗ ನಾಲ್ಗೆ ಮಡ್ಗಿ ಮೂಳ್ಳುಳಾಗ್ತೀವಿ  ||೩||

ನಾನು ಮೇಲಿನ ಜಾತಿಯೋನು ನಾನು ಮೇಲಿಂದುದ್ರಿದೋನು
ನೀವು ಕೀಳು ಅಂದೋರ್ಕಾಲ್ಗೆ ನಾವೆ ಬೀಳ್ತೀವಿ
ಬಾನು ಭೂಮಿ ಗಾಳಿ ಬೆಂಕಿ ಒಂದೇ ಎಂದು ಸಾರುತಿದ್ರು
ಹೀನ ಜಾತಿ ಮೇಲು ಜಾತಿ ಅಂತ ಹೇಳ್ತೀವಿ ||೪||

ತಕ್ಡಿ ಮುರ್ದು ತೌಡು ಕೊಟ್ಟು ಮಹಡಿ ಮಹಡಿ ಕಟ್ಟಿಸ್ತಾರೆ
ಬೆಪ್ಪ ತಕ್ಡಿ ಆದ್ವಿ ನಾವು ದುಡ್ಡು ಹಣ್ಣಾಗಿ
ಬಡ್ಡೀ ಬಡ್ಡೀ ಕೂಡ್ಸಿ ಬರ್ದು ಮನೀ ಹೊಲ ನುಂಗಿ ಕುಂತು
ಬಡ್ಡೀ ಮಕ್ಳೆ ಅಂತ ಒದ್ರೆ ಬಿದ್ವಿ ಮಣ್ಣಾಗಿ ||೫||

ಪುಂಡ ಪೋಕ್ರಿ ಭಂಡರೆಲ್ಲ ಗೂಂಡಾಗದಿಮಿ ಮಾಡಿಕೊಂತ
ದಂಡು ಕಟ್ಟಿ ಕುಡ್ದು ತಿಂದು ದೊಡ್ಡೋರಾಗ್ತಾರೆ
ಗಂಡ ಹೇಣ್ತಿ ರಟ್ಟಿ ಮುರ್ದು ಹಗಲೆಲ್ಲ ದುಡುದ್ರು ಕೂಡ
ತಿಂಡಿಗಿಲ್ದೆ ಬಟ್ಟೆಗಿಲ್ದೆ ಹೆಡ್ಡರಾಗ್ತಾರೆ ||೬||

ತಾರಾತಿಗಡೀ ಮಾಡಿದೋರೆಲ್ಲ ತಾರಸಿ ಮನಿ ಕಟ್ಟಿಸ್ತಾರೆ
ನೇರ ನ್ಯಾಯ ನೀತಿ ಅಂದೋನ್ ಕೋತಿಯಾಗ್ತಾನೆ
ಬಾರಾ ವಿದ್ಯಾ ಭಾನಗೇಡಿ ಒಳಾಗೊಳ್ಗೆ ಮಾಡೋರೆಲ್ಲ
ದೊರಿಗಳಾದ್ರೆ ದುಡ್ಡು ಮನಸ್ಯ ಕತ್ತೆ ಆಗ್ತಾನೆ ||೭||

ಪ್ರಜೆಗಳದೆಲ್ಲ ರಾಜ್ಯಂತಾರೆ ಪ್ರಜೆಗಳಂದ್ರೆ ಯಾರಂತೀರಿ
ಪ್ರಜಾರಾಜ್ಯದಾಗ ರೊಕ್ಕ ಇರೋನೆ ರಾಜಾ
ಮೋಜಿನ್ಯಾಗ ರೊಕ್ಕ ಉಗ್ಗಿ ರೊಕ್ಕ ಬಳಿಯೋ ಆಟದಾಗೆ
ನಿಜವಾಗಿ ಸರ್ಕಾರೆಲ್ಲ ರೊಕ್‌ದೋರ್ ಮಜಾ ||೮||

ಕಾವಿ ಬಟ್ಟೆ ಹಾಕಿ ಸ್ವಾಮಿ ಗುರುವು ಅಂತ ಮೆರೆಯೋವಂಥ
ಸಾವಿರಾರು ಕುಂತು ತಿಂಬೊ ಮೈಗಳ್ರಿಗೆ
ನಾವೆ ಕಾಲೀಗ್ ಬೀಳತೀವಿ ಕಾಣ್ಕೆ ಕೊಟ್ಟು ಮೆರೆಸುತೀವಿ
ಪಾವನಾದೆವಂತ ಮಬ್ಬು ಮುಚ್ಚಿ ಮಳ್ಳಿಗೆ ||೯||

ವೇಷಕೆ ನಾವು ಮಳ್ಳಾಗ್ತೀವಿ ಬಣ್ಣಕ ನಾವು ಬಾಯ್ಬಿಡ್ತೀವಿ
ಐಷಾರಾಮಿ ಹಣವಂತರಿಗೆ ಹೆದರಿಕೊಂತಿವಿ
ಭಾಷೆ ಇಲ್ಲದ ಭಂಡರ ಮುಂದೆ ಬಾಯಿ ತೆಕ್ಕೊಂಡ್ ಬಿದ್ದಿರ್ತೀವಿ
ದೋಷ ನಮದಲ್ಲವೇನ್ರೊ ಎಲ್ಲಿ ಕುಂತಿವಿ ||೧೦||

***.

Tagged:

Leave a Reply

Your email address will not be published. Required fields are marked *

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...