ಝೆನ್ ಹಾಯಿಕುಗಳು

ಬುದ್ಧ
ಬೇರಾಗು
ನನ್ನಲ್ಲಿ
ಸಿದ್ಧಿ
ತೇರಾಗು.

ಝೆನ್‌ಗೆ ಬೇಕೆ?
ತುತ್ತೂರಿ ಪೀಪಿ
ಶಂಖನಾದ, ಖಡ್ಗ?
ನಿಂತಿರುವ ನೋಡಿ
ಮುಗ್ಧ ಹುಡುಗ
ಓದಿ ಝೆನ್ ಅವನ
ಮೊಗದ ತುಂಬಾ!

ನನ್ನ ಹೃದಯ
ವೀಣೆಯ
ಝೆನ್ ತಂತಿಯ
ಝೆನ್ ಝೇಂಕಾರ
ಅದು ನನ್ನ ಸಾಕಾರ.

ಕವಿತೆ ಬರೆದರೆ
ಕವಿತೆ ಚಿಟ್ಟೆ
ಗೂಡ ಬಿಟ್ಟು ಹಾರೀತು
ಪ್ರೀತಿ ತೋರಿದರೆ
ಗೂಡ ಕಟ್ಟೀತು
ಎದೆ ಆಳದಲ್ಲಿ.

ಹಸುರೆಲೆಯ
ಹಸಿರು ವಾಗ್ದಾನದಲಿ
ಉನ್ಮತ್ತ ಇಬ್ಬನಿ
ಬಿಸಿಲು ಮಂಚದಲಿ
ಉಸಿರಾಡುತ್ತಿದೆ
ಅದೆಷ್ಟು ಕ್ಷಣ?

ಎರಡು ಇಬ್ಬನಿ
ಅಳುತ್ತಿವೆ, ಸತ್ತ
ಮೂರನೇಯ ಹನಿಗಾಗಿ,

ನನ್ನೊಳಗೆ
ನಾಧುಮುಕಿ
ನೆಲೆ ಹುಡುಕಿನಿಂತೆ.
ನನ್ನೊಳಗೆ
ನಾ ತೇಲಿ
ದಡ ಸೇರಿ ನಿಂತೆ.

ಇಬ್ಬನಿ ವಿರಮಿಸುತ್ತಿದೆ
ಕಿರಣದ ತೋಳಲ್ಲಿ
ತೋಟದ ಎಲೆಯ
ತುಟ್ಟ ತುದಿಯಲ್ಲಿ,
ಮನೆಗೆ ಸುಣ್ಣ ಬಣ್ಣ
ಮನಕೆ ಹಚ್ಚುವುದೇನು?
ಯಾವ ಬಣ್ಣ, ಯಾವ ಕಣ್ಣ?
ಕೊನೆಗೆ ಸೇರುವುದು
ಯಾವ ಊರು ಅಣ್ಣಾ!

ಉದಯ ವಿಹಾರದಲಿ
ಎರೆಹುಳು ಹುಡುಕುತಿದೆ
ಬಾನ ನಕ್ಷತ್ರ, ದಡದ ಶಂಖ ಚಕ್ರ
ಹಿಂದೆ ಹೆಜ್ಞೆ ಗುರುತನು ಬಿಟ್ಟು
ಮುಟ್ಟುತಿದೆ ಗುರಿಯ ಘಟ್ಟ.

ಹಸಿರು ಗದ್ದೆಗಳು
ಬಸಿರ ಮಾತಿಗೆ
ನಕ್ಷತ್ರದ ಮಿಣುಕು ಮಾತು.
ತೆನೆಯ ಸೊಗದ ನರ್ತನಕ್ಕೆ
ಗೀತ ಹಾಡುತಿದೆ
ಹಕ್ಕಿ ಬಾನಿಗಾತು.

ತೃಪ್ತಿ ಹಿಡಿಯಲ್ಲಿ
ಹೂವು ಮುಡಿಯಲ್ಲಿ
ದೀಪ್ತಿ, ಎಲ್ಲೆಡೆಯಲ್ಲಿ
ಹೃದಯ ಗುಡಿಯಲ್ಲಿ

ಜಗವೊಂದು
ಬರೆಯುವ ಹಲಗೆ
ಬರೆದಿಡು ಪ್ರೇಮ ಪತ್ರ.

ಬೋಳು ರೆಂಬೆಯ ಮೇಲೆ
ನಡುಗುವ ಹಕ್ಕಿ ಜೋಡಿಗೆ
ರೆಕ್ಕೆ ಕಂಬಳಿಯ ಮೋಡಿ
ಹಿಮವು ಬೀಳುತಿದೆ
ಹೃದಯ ಮುದುಡುತಿದೆ
ಶೋಕ ಗೀತೆ ಹಾಡಿ.

ಪೀಚ್, ಪ್ಲಮ್
ಮರಗಳೂ ನಿಂತಿವೆ
ಬೆಟ್ಟದ ತುದಿಯಲ್ಲಿ
ಬಿದ್ದು ಉರುಳುತಿವೆ
ಹಣ್ಣುಗಳು, ಮಣ್ಣಿನಲ್ಲಿ
ಬೆಟ್ಟ ಕೊಚ್ಚುತ್ತಿದೆ
ನನ್ನದೆಂಬ ಜಂಭ! ಅದೆಷ್ಟಡಂಭ!

ಧೈರ್ಯ ಸ್ಥೈರ್ಯದಿ
ಒಣಗಿದ ಮರನಿಂತಿದೆ
ಚಳಿಯ ಒಪ್ಪಿಕೊಂಡು
ಮತ್ತೆ ಚೈತ್ರ ಚಿಗುರು
ಹೂಗಳ, ಅಪ್ಪಿಕೊಂಡು
ಬಂದೇ ಬಂದಾನು ವಸಂತನೆಂದು.

ಅನುಭವದಲ್ಲಿ
ಭಾವ ಒಂದೇ ಏಕೆ?
ಪ್ರಭಾವ, ವಿಭಾವಗಳ ಸಾಲು
ಹುಡುಕಿದರೆ ಸಿಗದಿರುವುದೇ
ಝೆನ್ ಮಾಲು?

ಶೂನ್ಯಗಳ ಸನ್ನೆಯಲಿ
ಕಂಡುಕೋ
ನನ್ನಿಯ ಅರಿವು
ನಡೆಸುವುದು ಮುನ್ನ
ತಿಳಿಸುವುದು ವಿಶ್ವ ಅವಿಚ್ಛಿನ್ನ

ರೆಂಬೆಗಳು ತೂಗುತಿವೆ
ಎಲೆಗಳು, ಮರ್ಮರ ಹಾಡುತಿವೆ
ವೃಕ್ಷನಿಂತು ನಿದ್ರಿಸುತ್ತಿದೆ
ತೋಟದ ಕಟ್ಟೆಯಲ್ಲಿ
ಕುಳಿತು ನಾ ದೃಷ್ಟಿಸಿರುವೆ.

ಮೊಗ್ಗು ಹೂ ಕಾಯಿ
ಹಣ್ಣುಗಳಿರಲು
ಗಿಡವೆಂದು, ಒಂಟಿಯಿಲ್ಲ
ನಾ ನಿಂತಿರುವೆ ಒಂಟಿ
ಬೀದಿ ಕಂಭದಂತೆ.

ಎಲೆಗಳೂ ಪಟಪಟ
ಮಾತನಾಡುತಿವೆ
ನಿಂತು ವೃಕ್ಷ
ಕೇಳಿ ಕೇಳಿ
ತಲೆ ತೂಗುತಿದೆ.

ಕ್ಷಣ ಕ್ಷಣದ ಬಾಳಲ್ಲಿ
ಕಣ ಕಣದ ದೈವ
ಬೇಕೇ? ಒಣ ಒಣದ ತತ್ವ
ಝೆನ್‌ಲಿ ಒಂದಾಗೆ
ಹೊರ ಬಾರದೆ ಸತ್ವ?

ನನಗೆ ಇದೆ ಹೆಸರು
ನನ್ನೊಡನೆ ಹುಟ್ಟಿದ
ಮನಕೆ ಇದೆ ಯಾವ ಹೆಸರು?
ನನಗೆ ಇದೆ ಉಸಿರು
ಮನಕೆ ಇದೆ ಯಾವ ಬಸಿರು?

ಅನಂತದಿಂದ
ಸಿಡಿದಿರುವ, ನಾನೊಂದು
ಜೀವರಕ್ತ ಬಿಂದು
ಬಾಳು ಬೆಳೆಯೆ ಎತ್ತರಕ್ಕೆ
ಬದುಕೊಂದು ಸಿಂಧು.

ಆಗಸ ಭೂಮಿಯ ಒಂದಾಗಿಸಿ
ಝೆನ್ ನೂಲಿನಲಿ ಜಗವ ಹೆಣೆದೆ
ನಾನು, ನನ್ನ ಮನ
ಬಲುದೂರ ಸರಿದು
ಬೇರೆಯಾಗಿಯೆ ನಿಂತೆ.

ಉದುರಿದ ಎಲೆಯೊಂದ
ಎತ್ತಿ, ತುಟಿಗೊತ್ತಿಕೊಂಡೆ
ಗಿಡ ಕಣ್ಣಿಟ್ಟು ನೋಡಿ
ತಲೆ ತೂಗಿ ಹೂವರಿಳಿಸಿತು
ಗಿಡ ತುಂಬ.

ತತ್ತರಿಸುವ ಮನ
ತಥಾಗತನ ಎದುರಲ್ಲಿ
ಕರಗಿ ನೀರಾಗುತ್ತಿರುವ
ಹಿಮಗಡ್ಡೆಯ ಗುಡ್ಡೆ.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾಯಿಕು-ಹಂದರ
Next post ಕೋಶಗ್ರಂಥ ವ್ಯಾಕರಣ ಪ್ರಸಂಗದಿ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…