ಕೋಶಗ್ರಂಥ ವ್ಯಾಕರಣ ಪ್ರಸಂಗದಿ
ವಾದಿಸ್ಯಾಡುವ ದಾಸರ ನಾಯಿ || ಪ ||
ಹೇಸಿ ವಿಷಯ ಗುಣಕೊಳಗಾಗುವ ಕವಿದೋಷಿಕ ಮಾಸ್ಯಾಳರ ನಾಯಿ
ಕಾಸು ಕಾಸಿಗೆ ಕೈಯೊಡ್ಡುವ ಯಾಚಕ ದೋಷಕಿಯರು ಸಾಕುವ ನಾಯಿ
ಆಸಗೆ ಬೀಳುವ ಸನ್ಯಾಸಿ ಫಕೀರರು ಪಾಶಗಾರ ಪಾಪದ ನಾಯಿ
ಕ್ಲೇಶವನರಿಯದೆ ಪಾಶಿಯಲಿದ್ದವ ಕಾಶಿ ಬ್ರಾಹ್ಮಣರ ಮನಿ ನಾಯಿ
ರೋಷಕೆದ್ದು ಕಡದಾಡುವ ಮನುಜರು ದೇಶದೇಶ ತಿರುಗುವ ನಾಯಿ
ವಾಸರಸಿ ವಿಧಿ ಹರಿಯ ಬಳಿಗೆ ಬಂದು ನಾಯಾಗಿ
ಸೂಸ್ಯಾಡಿ ದ್ವಾರಕೆಯ ನೀಗಿ
ಕಾಸಾರ ದಾಂಟಿ ಹನುಮಂತ ಲಂಕೆಗೆ ಹೋಗಿ
ರಕ್ಕಸರು ಕುನ್ನಿಹಾಂಗಾಗಿ
ಲೇಸಾಗಿ ಇಂದ್ರಜಿತು ಕಪಿರಾಶಿಯೊಳಿರಲಾಗಿ
ಆ ಸಮಯದಿ ಹೋದ ಮರೆಯಾಗಿ
ಈಶ ಸಿದ್ದೇಶಗೆ ಭೇದನಿಕ್ಕುವ ಲೇಸಿ ಬಾಗಿಲು ಕಾಯುವ ನಾಯಿ || ೧ ||
ವೇದವಾದದಲಿ ಕುಣಿದಾಡುವ ನರ
ಆದ ಚಲ್ವಾದೇರ ನಾಯಿ
ಪಾದವಿಷ್ಣು ಪದಕ್ಹೊಂದದ ಮನುಜರು
ಮಾದಿಗೇರ ಮೋಹದ ನಾಯಿ
ಸಾಧನದಲಿ ಹದಿನೆಂಟುಪುರಾಣವ
ಓದುವ ವಾಲ್ಮಿಕರ ನಾಯಿ
ಬೋಧಾನಂದದಿ ವೇದಾಂತರಿಯದ
ಸಾಧು ತಾನು ಸೊನಗಾರ ನಾಯಿ
ಶ್ರೀಧರನಾಮವ ನರಿಯದ ವೈಷ್ಣವ
ಈ ಧರೆಯೊಳು ಮ್ಯಾದಾರ ನಾಯಿ
ನಾದ ಬಿಂದು ಕಲೆಯರಿಯದ ಯೋಗಿ
ಹಾದಿಯೊಳಗ ಮಲಗಿದ ನಾಯಿ
ಸಾಧು ಸಂತರಿಗೆ ಸೇರದ ಮನುಜಾ
ಕ್ರೋಧದಿಂದ ಬೊಗಳುವ ನಾಯಿ
ಆತುರದಿ ಸಾರ ತಿಳಿಲಿಲ್ಲಾ
ಯಾತಕ ತೆರಯಿತೀದಿ ಹಲ್ಲಾ
ಪಾತಕಿ ಪಾಮರಾದೆಲ್ಲಾ ನೂತನವು ಕಲೀ ಜನಕೆಲ್ಲಾ
ಈ ತೆರದಲಿ ಭೂತಳದಲಿ ಮೆರೆಯುವ
ಜೋತಾಡುವ ಜೋಗ್ಯಾರ ನಾಯಿ || ೨ ||
ಮಾತ ದಂತಕತಿ ಗೀತ ಭಾಗವತ
ರೀತಿ ಹೇಳುವ ಜಾತಿಗರ ನಾಯಿ
ಕೂಗಿನ ಚರಣಾ ಮುಂದೆ ಆದೆ ಹೊತ್ತು ಶಕುನಾ
ವಳೆಯಕ್ಕಿ ಬೆನಕನ ಮಾತಿಲ್ಹೇಳುವ ಮೆಕ್ಕಿನಾಯಿ
ನೀತಿಯಿಂದ ನಿಜಶಾಸ್ತ್ರವ ಕಲಿತವ
ನೀತಿನಡವ ಆರೇರ ನಾಯಿ
ಕಾದಾಡಿ ಕರ್ಮದಲಿ ಕರ್ಮದಿ ಬಿದ್ದಿ
ಈ ದೇಹಕ ನೀ ಹೊರತಾದಿ
ಆಧಾರವಿಲ್ಲದೆ ಆಲ್ಪರಿದಿ ಬೇಕಾದ ವಿದ್ಯವನು ಮರದಿ
ಶೋಧಿಸಿ ನೋಡೋ ಪರವಾದಿ
ಹೌದೆನಿಸದು ತಿಳಿ ಪರಬುದ್ಧಿ
ಮೇದಿನಿಯೊಳು ಹದಿನೆಂಟು ಜಾತಿ ಜನ
ಮೌಜಿಲಿರುವ ಮುಸಲ್ಮಾನರ ನಾಯಿ || ೩ ||
ಸ್ವರಗಳನರಿಯದೆ ಸರಿಗಮವೆಂಬುವ
ಪರಿಚಾರಕರ ಕೊರವರ ನಾಯಿ
ಬರಿದೆ ಬಯಸಿ ಬಾಯ್ದೆರೆಯುವ ಮಾನವ-
ನರುವಿಲ್ಲದ ಜಾವಲಿನಾಯಿ
ಮರುಳ ಶ್ರೀಮಂತಶೆಟ್ಟಿ ಸಾವುಕಾರರ
ಕುರಿಕಾಯುವ ಕುರುಬರ ನಾಯಿ
ಹರಿಕತಿ ಹೇಳಿ ತಿರುಗಾಡುವ ನರ
ಧರಿಯೊಳಗವ ತಿರಕರನಾಯಿ
ಕರುಣ ಪ್ರಸಾದಕೆ ನಿಲುಕದ ಜಂಗಮ
ಗುರುತರಿಯದ ಗೊರವರ ನಾಯಿ
ಖುರಾನವರಿಯದ ಖಾಜಿ ಖತೀಬಾ
ಮುಲ್ಲಾರೆಲ್ಲಾ ಗೊಲ್ಲರ ನಾಯಿ
ಸರಿಗಟ್ಟಿ ಸರಿಗಟ್ಟಿ ಹಾಡಬೇಡಣ್ಣಾ
ವರಮುಕ್ತಿ ಮಾರ್ಗ ಬೇಡಣ್ಣಾ
ನರಿ ನಾಯಿಜನ್ಮ ಜೋಡಣ್ಣಾ
ಅರಿವಿಡಿದು ನಡಿಯೋ ನೀ ಜಾಣಾ
ನೆರೆದಂಥ ಸಭೆಯೊಳು ನಿನ ಪೌರುಷ ತೋರದಿರು ಮುನ್ನಾ
ಅರಿಯದವರ ಮುಂದ ಅರ್ಥ ಹೇಳಿದರ
ಹೊರಗಾದಿಯೋ ಹೊಲಿಯರ ನಾಯಿ || ೪ ||
ಬಾಯಿಲೆ ಬ್ರಹ್ಮವ ಬೊಗಳಿದರೇನಲೋ
ಬಯಲೊಳಗೆ ಬೊಗಳುವ ನಾಯಿ
ಸಾವಿಗಂಜಿ ಸುಳಿದಾಡುವ ಮಹಿಮರು
ಠಾವನರಿಯಪ ಬೋವೆರ ನಾಯಿ
ಹ್ಯಾವಿಲ್ಲದೆ ಹಗಲೆಲ್ಲಾ ಜಳಕ
ಶಿವಪೂಜಿ ಮಾಡುವ ಸೂಳೆರ ನಾಯಿ
ಭಾವವಿಲ್ಲದೆ ಭಕ್ತನಾದವ
ಹಾವಗಾರ ಸಾಕಿದ ನಾಯಿ
ಕೋವಿದರೆನಿಸುವ ಕವಿಗಳನರಿಯದೆ
ಜಾವಜಾವಕ್ಕೆ ಓಂನಮಃ ಶಿವಾಯೆಂಬುವ ನಾಯಿ
ಕಾಮದ ಭ್ರಮೆಯನು ಕಳಿಯದೆ ತಪಸ್ಸಿಗೆ
ದೇವರ ಹಣತಿಯ ನೆಕ್ಕುವ ನಾಯಿ
ಉಪಾಯದಿಂದ ಕೇಳೋ ತಮ್ಮ
ಈ ನಾಯ್ಗಳ ಸ್ನೇಹ ಬಿಡು ಹಮ್ಮಾ
ಬಹು ಭಾಯ ಚಮತ್ಕಾರದ ಧರ್ಮಾ
ನಿರ್ವಾಹದಿಂದಲಿ ಬಿಡು ಮರ್ಮಾ
ಕಾಪುರುಷರರಿಯರೀ ಮರ್ಮಾ
ಈ ವ್ಯಾಪಾರದ ನೇಮಾ
ದುಷ್ಕರ್ಮದೊಳಾಗದು ಕ್ಷೇಮಾ
ಭೂಪಾರ ಶಿಶುನಾಳ ಸದ್ಗುರುವಿನ ಶೂರ-
ಸಿಪಾಯಿ ಸರದಾರನ ನಾಯಿ ||೫||
*****