ಬುದ್ಧನ ಕಾಡಿನಲ್ಲಿ ಬಿಟ್ಟುಬಂದ ಹಯವೇ
ನೀ ಅರಮನೆಯ ಲಾಯದಲಿ ಏಕೆ ಆದೆ ಲಯವು?
ಹದವರಿಯಲು ಹುಡುಕುತಲಿರುವೆ
ಎಲ್ಲಿಯೂ ನೀ ಕಾಣದೆ ಇರುವೆ.
ಮನ ಲಾಯಕೆ ಬಾ ಹಯವೆ
ಹೃದಯ ಹುಲ್ಲುಗಾವಲ ಮೇಯಲು,
ಕಾಡುತಿದೆ ಭವದ ಭಯವು
ಭವ ಸಾಗರದಲಿ ಹೃದಯ ಲಹರಿ
ಹುಡುಕುತಿದೆ ಬುದ್ಧನ ಬೆಳಕಿನ ಕಣ್ಣು
ಭವಕ್ಕೆ ಬೇಕು ಬುದ್ಧತ್ವದ ಹಣ್ಣು.
ಭೋಧಿ ವೃಕ್ಷದ ಎಲೆ ಎಲೆಯಲ್ಲಿ
ಬುದ್ಧನ ಅಭಯಹಸ್ತ ಸೆಲೆ ಸೆಲೆಯಲ್ಲಿ
ಶಾಖೆ ಶಾಖೆಯಲಿ ಬುದ್ಧನ ತೋಳತೆಕ್ಕೆ
ನೆರಳಲ್ಲಿ ನೆಲೆನಿಂತು ಕರೆಯುತ್ತಿದೆ
ಬುದ್ಧನೆದೆಯ ಪರಮಶಾಂತಿ ಮೆರೆಯುತಿದೆ.
ತೆರದ ಹೆಬ್ಬಾಗಿಲಲಿ ಉರಿಯುತಿದೆ
ಜಗವೆಲ್ಲ ಬೆಳಗುವ ದೀಪ
ಹಯವೆ ಛಂಗನೆ ಹಾರು ಭವದ ಕೂಪ
ಹಚ್ಚಬೇಕು ಜನ್ಮ ಮುಕ್ತಿಗೆ ಧೂಪ
ಎದೆಯಲಿ ಮೊಳಗುತ್ತಿದೆ ಬೌದ್ಧ ಆಲಾಪ.
ನಿಬಿಡವನ ಕಾಡುಗಳಲಿ
ವಕ್ರ ದಾರಿಗಳ ಚಕ್ರ ತಿರುವಿನಲಿ
ನಿಲ್ಲದ ನದಿಯ ಸಾಗರ ಮಿಲನದಲಿ
ತಲ್ಲಣಿಸುತಿದೆ ಎದೆ ಬುದ್ಧತ್ವದ
ಚರಮ ಸೀಮೆಗೆ, ಹಯವೆ! ನಡೆ ಮುಂದೆ.
ಹಯವೆ! ನೀ ಕಂಡಿರುವೆ
ಬುದ್ಧನ ಯಾನ ತಾಣ
ಬುದ್ಧನ ತ್ರಾಣ ಪ್ರಾಣ
ಪಂಚಪ್ರಾಣ ಹೊತ್ತ ನೀ
ಬುದ್ಧನೆದೆಯ ಭ್ರೂಣ.
ಸಿದ್ಧ ಬುದ್ಧನಾಗೆ ಆಗಸದ ರವಿಯಾದ
ಗೆದ್ದಮನದಲಿ ಕಾವ್ಯತುಂಬಿ ಕವಿಯಾದ
ಸರಹದ್ದಿಲ್ಲದೆ ಹಯವೆ ನೀ ಸಾಗೆ
ಬುದ್ಧ, ಜಗಕೆ ತಮವ ಕಳೆದು ಬೆಳಕಾದ.
ಹಯವದನ! ತೋರು ಬುದ್ಧನ ಸದನ
ಬಾಳ ಕದನದಲಿ ಶೋಧನ, ವೇದನ
ತಾಳ್ಮೆಯಲಿ ಮಾಡಿಸು ಬುದ್ಧನ ಸಾಧನ
ಇದು ಆಂತರ್ಯದ ಅನಂತ ನಿವೇದನ.
ಬುದ್ಧನ ವಸಂತ ತಾಣವ ನೀ ಕಂಡಿರುವೆ
ಸಿದ್ಧನ ಬೆಳದಿಂಗಳ ಚೇತನವ ನೀ ಉಂಡಿರುವೆ
ಬುದ್ಧನ ಜೊತೆಯಲ್ಲಿ ಎದ್ದು ಓಡಿದವ ನೀನು
ಸದ್ದು ಗದ್ದಲವಿಲ್ಲದೆ ಅನಂತಕ್ಕೆ ದಾರಿ ತೋರಿರುವೆ
ಬುದ್ಧನ ರಥದ ಮನೋರಥವು ನೀನಾಗಿರುವೆ.
ಹೆಜ್ಞೆ ಹೆಜ್ಞೆಗೆ ಮಂತ್ರ, ಹೆಜ್ಞೆ ಹೆಜ್ಞೆಗೆ
ಬುದ್ಧನ ನಲ್ಮೆ ನುಡಿ, ನಿನ್ನ ಕಿವಿ ತುಂಬಿರಬೇಕು.
ಬುದ್ಧನ ಮಂದಸ್ಮಿತದ ಸರಕು ತುಂಬಿ ಬಾ
ಜಗದ ಖಾಲಿ ಹೃದಯಗಳ ತುಂಬ ಬಾ.
ಸಿದ್ಧರ್ಥ ನಿನ್ನ ಬೆನ್ನೇರಿದಾಗ
ಬಾನೆಲ್ಲಾ ಕಾಂತಿ ಪಥವಾಗಿತ್ತು
ಭೂಮಿ ಕ್ರಾಂತಿ ಪಥದಲ್ಲಿತ್ತು
ಶಾಂತಿ ನಾಂದಿಯಾಗಿತ್ತು
ಭ್ರಾಂತಿ ತುಂಬಿದ ಹೃದಯಕ್ಕೆ
ಹಯದ ಬೆನ್ನೇರಿ ಬಂದಿತ್ತು ಉದಯ.
ಬುವಿ ನಡೆದಿತ್ತು ನಿನ್ನ ಕಾಲೊರಸ ಸದ್ದಿನಲಿ
ಬಾನ ಬೆಳದಿತ್ತು ನಿನ್ನ ತಾಳ ವೇಗಕ್ಕೆ
ಬೆಟ್ಟ ಅದರಿತ್ತು, ’ವೃಕ್ಷ ಕಂಪಿಸಿತ್ತು’
ನದಿ ತುಂಬಿ ಹರಿದಿತ್ತು ಬುದ್ಧತ್ವದಿಂದ.
ಜಗದಲ್ಲಿ ಬಿತ್ತಿದ ನಿನ್ನ ಹೆಜ್ಞೆಯಲಿ
ಬೌದ್ಧಬೀಜವ ಬಿತ್ತಿದೆ, ಮಾನವರ ಎತ್ತಿದೆ
ಅತ್ತು ಸೋಲುವ ಹೃದಯದ ಎತ್ತರಕೆ ಒಯ್ದೆ.
ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ ಎಂಬ ತ್ರಿಗುಳ ಬಂಧಿಯಲಿ
ನಡೆ ಮುಂದೆ ನಡೆ ಮುಂದೆ ವಿಶ್ವ ಕಲ್ಯಾಣಕ್ಕೆ.
******