ರುಕ್ಸಾನಾ, ಯಾಕಿಲ್ಲಿ ಅಳುತ್ತಿರುವಿ
ಮರುಭೂಮಿಯ ಬೇಗೆಗೆ ನಿನ್ನ
ಭಾವನೆಗಳೂ ಉದಯಿಸುತ್ತಿಲ್ಲ
ಇದ್ದ ಬಿದ್ದ ಆಶಾಂಕುರಗಳೂ ಕಮರಿಸಿಕೊಳ್ಳುತ್ತಿರುವಿ.
ಬಂಗಾರ ಪಂಜರವ ಮುದ್ದಿನ ಗಿಳಿಯೇ
ಹೊರಗೊಂದಿಷ್ಟು ಬಾ…
ನೋಡು, ಆಲಿಸು, ಹಾರಾಡು ಕುಣಿದಾಡು
ಆಪಲ್ ತಿಂದು ಮಾಂಸ
ಜಡ ಮಾಡಿಕೊಳ್ಳಬೇಡ
ನಿನಗಾಗಿ ನೂರೆಂಟು ಗಿಡಗಳ
“ಡಯಟ್” ಹಣ್ಣುಗಳಿವೆ
ವ್ಯಾಯಾಮಿಸುತ್ತ ತಿನ್ನು
ಬಂಧನದ ಜಡ ಪ್ರೀತಿಗೆ ಕಾಯಬೇಡ
ಮುಕ್ತ ವಾತಾವರಣದಲ್ಲಿ ಹಾರು
ಆಕಾರವಿಲ್ಲದ ಬುರ್ಕಾದೊಳಗೂ
ನೀನದೆಷ್ಟೋ ಸುಂದರಿ,
ರಸಿಕಳು, ಕನಸುಗಾರ್ತಿ ಹೃದಯ
ಸಾಮ್ರಾಜ್ಞೆಯಾಗಿಯೇ ರೂಪಗೊಂಡವಳು.
ಅಂತೆಯೇ ನೀನು
ಅಂತರಂಗದ ಕಣ್ತೆರೆದು, ಕವಿದ ಮೋಡಸರಿಸಿ
ಆಕಾಶಕ್ಕೇರಿ ಆನಂದ ಬಾಷ್ಪ ಸುರಿಸು.
ನಿನ್ನ ಪ್ರೇಮ ಕೇವಲ
ಅಲೆಯಾಗಿಸದೆ ಸಮುದ್ರವಾಗಿಸು.
*****
ಪುಸ್ತಕ: ಗಾಂಜಾ ಡಾಲಿ