Home / ಕವನ / ಕವಿತೆ / ಮಳಿ ಬಂತು

ಮಳಿ ಬಂತು

ಮಳಿ ಬಂತು ನೋಡು ಮೂಡಲಿನ್ಯಾಗ-
ಮರಡೀಯ ತಲಿಯ ಮ್ಯಾಗ
ಗುಡು ಗುಡುಡು ಎಂದು ಗುಡಗ್ತದ ಕಾಡು ಕರಿಮುಗಿಲು-
ಕೇಳ್ದವರ ಎದೆಗೆ ಭುಗಿಲು
ಗಡಗಡಡ ಎ೦ದು ನಡಗ್ತದ ನಿಂತ ನೆಲದೊಡಲು-
ನೆರೆದವರಿಗೆಲ್ಲ ದಿಗಿಲು
ಇದನೋಡಿ ರವಿಯು ತಾನೋಡಿ ಹೋದನಪ ಚದರಿ
ಬರಲಿಲ್ಲ ಚಿಕ್ಕಿಗಳು ಬೆದರಿ
ಮಳಿಬಂತು ನೋಡು ಮೂಡಲಿನ್ಯಾಗ-
ಮರಡೀಯ ತಲಿಯ ಮ್ಯಾಗ

ಬಾನಿ೦ದ ಬಿದ್ದು ಮೇಲೆದ್ದು ಮಣ್ಣಿನೊಡನಿದ್ದು-
ಹೊರಟೀತು ನೀರು ನೆಲದುದ್ದು
ಹನಿ ಹನಿ ಕೂಡಿ ಹಳ್ಳಾಗಿ ತುಂಬಿ ಹರಿದಾವ ಹೊಳೆಯ ಕಡಿಗಾಗಿ-
ಅಲ್ಲಲ್ಲಿ ನಿಂತು ಮಡುವಾಗಿ
ಹೊಲ ತುಂಬಿ ತುಳಕಿ ಕೆರೆನೀರ ಕುಲುಕಿ ನದಿನೀರನೆಲ್ಲ ಕಲಕಿ-
ಹಾಕೀತು ನೀರು ತಳಕಿ
ಗಿಡಮರ ಬಳ್ಳಿ ಎಲಿಸಾಲು ಕಳ್ಳಿ ನಿಂತಾವ ಜಳಕ ಮಾಡಿ-
ತಣಿದಾವು ನೀರ ನೋಡಿ
ಮಳಿ ಬಂತು ನೋಡು ಮೂಡಲಿನ್ಯಾಗ-
ಮರಡೀಯ ತಲಿಯ ಮ್ಯಾಗ
ದಿಕ್ಕೆಟ್ಟು ಹಾರಿ ಸಿಕ್ಕಲ್ಲೆ ಸೇರಿ ಹುದುಗ್ಯಾವ ಹಕ್ಕಿ ಪಕ್ಕಿ-
ಆಗ್ಯಾವ ಕಕ್ಕ ಬಿಕ್ಕಿ
ಗಿಡದಿಂದ ಗಿಡಕೆ ಹಾರಾಡಿ ನಡಕ ಬದ್ದಾವ ಕೋತಿ ಜೋತು-
ಮಳೆಗೂಡ ಹೆಣಗಿ ಸೋತು
ದನಕರುಗಳೆಲ್ಲ ನಿಂತಾವ ಹುಲ್ಲ ತಿನಲಾರ್ದ ಅಡವಿಯಲ್ಲಿ-
ಬೆಪ್ಪಾಗಿ ಅಲ್ಲಿ ಇಲ್ಲಿ
ದನಕಾವ ಹುಡುಗಹುಡುಗಿಯರು ಮನೆಗೆ ಬಂದಾರ ಓಡಿತೊಯ್ದು-
ಬಿಟಗೊಟ್ಟ ಹುಲ್ಲ ಕೊಯ್ದು
ಮಳಿ ಬಂದಿ ನೋಡು – ಮೂಡಿಲಿನ್ಯಾಗ
ಮರಡೀಯ ತಲಿಯ ಮ್ಯಾಗ

ಬೇಸಿಗೆಯ ಬಿಸಿಲ ಬೇಗೆಯಲಿ ಬಳಲಿ ಬೆಂದಾಳ ಭೂಮಿತಾಯಿ-
ನೀರಡಿಸಿ ಬಿಟ್ಟು ಬಾಯಿ
ಗುಡ್ಡಕ್ಕೆ ತಾಗಿ ಹತ್ತಿದ್ದ ಬ್ಯಾಗಿ ಸುಟ್ಟಂಥ ಮೈಯ ಚಾಚಿ
ಹಲುಬ್ಯಾಳ ಆಂಗಲಾಚಿ
ಬಾಯಾರಿ ಬಾಯ್ಬರದೆ ಬಿದ್ದಲ್ಲೆ ಇದ್ದಽರು ಆಸರಕೆ ದೈವ ಬ೦ತು-
ಮರೆಯಲ್ಲಿ ಇತ್ತು ನಿಂತು
ಆಕಾಶ ತಂದೆ ಎದೆ ಕರಗಿ ಬ೦ದೆ ಮಳೆಯಾಗಿ ನೆಲಕೆ ನಿಂದೆ
ಬರುವಾಗ ಅಮೃತ ತಂದೆ
ಮಳೆ ಬಂತು ನೋಡು ಮೂಡಲಿನ್ಯಾಗ
ಮರಡೀಯ ತಲಿಯಮ್ಯಾಗ
*****

Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...