೧
ನೀಲಗಗನ, ಮೇಘಮಾಲೆ
ಚಲಿಸುತಿರುವುದು
ಹಸುರುಹೊಲದ ಮೇಲೆಹಾಯ್ದು
ಸಾಗುತಿರುವುದು
ತೆಂಕಲಿನಗಾಳಿ ಗೆಲುವ
ಬೀರುತಿರುವುದು
ಶಾಂತಿಸಮರ ಸಾರವನ್ನು
ತೋರುತಿರುವುದು.
೨
ನೀಲಗಗನ, ಮೇಘಮಾಲೆ
ಚಲಿಸುತಿರುವುದು
ಹೊಲದಮೇಲೆ ತ್ವರಿತದಿಂದ
ತೂರುತಿರುವುದು
ಪಡುವಕೆಂಪು ಕಾಂತಿಯನ್ನು
ಬೆಳಗುತಿರುವುದು
ನಿಸರ್ಗನಿಯಮ ನೇಮದಿಂದ
ನಲಿದಾಡುತ್ತಿರುವುದು.
೩
ನೀಲಗಗನ, ಮೇಘಮಾಲೆ
ಚಲಿಸುತಿರುವುದು
ಹಸುರುಹೊಲದ ಮಧುರವನ್ನು
ಹೊರಸೂಸುತಿರುವುದು
ನಿಶೆಯ ಛಾಯೆಸೆರಗು ಭುವಿಯ
ತೀಡುತಿರುವುದು
ನೀಲಗಗನ ಸಾರಚುಕ್ಕಿ
ಮಿನುಗುತಿರುವುದು.
*****









