ಶಿವಶರಣೆ, ಕನ್ನಡಿತಿ, ಓ ಮಹಾದೇವಿಯೇ!
ಆಧ್ಯಾತ್ಮ ಜೀವಿ, ನಿನ್ನತುಲ ವೈರಾಗ್ಯಕೆಣೆ
ಯಾವುದೈ? ವೀರಶೈವರೊಳೆಲ್ಲಿಯೂ ಕಾಣೆ
ಉಡುತಡಿಯ ಮಾರಾಜ ಕೌಶಿಕನನೊಲ್ಲದೆಯೆ,
ಭವಿಯೆ೦ದು ನೀಕರಿಸಿ, ಅಂತಪುರದಿಂದ
ಪರಿದೋಡಿ, ಉಟ್ಟ ಬಟ್ಟೆಯ ಬಿಟ್ಟು, ಕಲ್ಯಾಣ
ದೆಡೆಗೈದಿ, ಅನುಭವದ ಮ೦ಟಪದಿ ಬಸವಣ್ಣ-
ನಿಂದ ಭಕ್ತಿಯ ಕಲಿತು, ಅಲ್ಲಮ ಪ್ರಭುವಿಂದ
ಜ್ಞಾನ ಮಾರ್ಗವನರಿತು, ಮಧುರ ಭಾವವನಾಂತು,
ಶ್ರೀ ಚೆನ್ನಮಲ್ಲಿಕಾರ್ಜುನ ದೇವ ವಿರಹದಲಿ
ಸಂತಪ್ತೆಯಾಗಿ, ಸಿರಿಗನ್ನಡದ ಭಾಷೆಯಲಿ
ವಚನಗಳ ಹಾಡಿದೈ ಕಾವ್ಯ ವಾಣಿಯನೋತು!
ಯೋಗಾಂಗ ತ್ರಿವಿಧಿ-ಸೃಷ್ಟಿಯ ವಚನ ಮೊದಲಾದ
ಗ್ರಂಥವನ್ನು ವಿರಚಿಸಿದೆ; ಕಬ್ಬಿಗಿತಿಯದರಿಂದ
*****
೧೯೪೪








