Home / ಕವನ / ಕವಿತೆ / ಕವನ ಕಾಮಿನಿ

ಕವನ ಕಾಮಿನಿ

ಬಾಲ್ಯ ಕಳೆದೆಯೆಂದು ಲಜ್ಜೆ-
ಯೇನು ಕವನ ಕಾಮಿನಿ?
ಮೊಗವ ತೋರದೆನಗೆ ನೀನು
ಕವಿಸುತಿರುವೆ ಯಾಮಿನಿ

ಮೊದಲು ತೊದಲುನುಡಿಯೊಳಾದ-
ರೇನು ಭಾವವೆರೆದೆ ನೀ
ಸಹಜ ಕಲ್ಪನಾ ವಿಲಾಸ
ಹಾಸವಿತ್ತು ಪಡಿದನಿ

ಆದರೀಗ ನಿನ್ನ ಸುಳಿವು
ವಿರಳವಿರುವುದೀಕಡೆ
ನೆಲಸಲೆಂದು ನನ್ನ ಮನದೊ-
ಳಿಲ್ಲವೇನು ನಿನಗೆಡೆ?

ಎಲೆಯ ಮರೆಯ ಕಾಯಿಯಂತೆ,
ತಳಿರ ಮರೆಯ ಮಲರವೋಲ್
ಮುಗಿಲ ಮರೆಯ ತಿಂಗಳಂತೆ,
ನೀರ ಮರೆಯ ಮೀನವೊಲ್‌-

ತೋರಿಯಡಗಿ, ಕಂಡು ಹುದುಗಿ,
ಕಣ್ಣುಕಟ್ಟನೆಸಗುವೆ
ಕಾರ ಹೊನಲಿನಂತೆ ದಡವ
ಮೀರಿ ಹರಿವುದಿಲ್ಲವೆ?

ನಿನ್ನ ಬಳೆಗಳೆಲುಗುದನಿಯು
ಕಾಲ ಗೆಜ್ಜೆಯಿಂಚರ
ಈಗತೇಳದಿರಲು ಹೇತು-
ವೇನು ಹಿಂದಿನಾ ತೆರ?

ತಿಳಿಯಿತೊಂದು ಬಾರಿ ನಗುವ
ಜೊನ್ನ ಹಾಲ ಹುಣ್ಣಿಮೆ
ತಿರುಗಿ ಬರುವುದೊಂದು ಸಾರಿ
ಕಪ್ಪು ಸುರಿವ ಕಾಳಿಮೆ.

ಇಳಿತ- ಭರತ ಸರಿ ಸಮಾನ
ಪ್ರಕೃತಿ ನಿಯಮವಲ್ಲವೇ?
ಕಪ್ಪು ಕತ್ತಲಳಿದ ಮೇಲೆ
ತೆರೆಯಲೀಗ ಬೆಳಕೆವೆ

ನಕ್ಕು ನಲಿದ ಮುಗ್ಧ ಬಾಲೆ-
ಯೇಕೆ ನಿದ್ದೆಯಿದ್ದೆಯೊ?
ಇದ್ದರೇನು?- ಸದ್ಯ ನೀನು
ಎದ್ದು ಸಿದ್ಧಳಾಗೆಯೊ?

ಎಳಮೆ ದಾಟಿ, ಹಿರಿಮೆಯಾಂತು,
ನೋಟ ಮಿಂಚ ಹರಹು ನೀ
ಒಲಿದು ನಲಿದು ನಕ್ಕು ನಗಿಸಿ
ಬಾರೆ ಕವನ ಕಾಮನಿ!

ಕುಣಿದು ಮಣಿದು, ಮಾಲಿ ತೇಲಿ,
ಹಾರಿ ತೂರಿಯೇರಿ ಬಾ
ಹೊಳೆದು ಬಳೆದು, ಚೆಲುವು ಚೆಲ್ಲಿ,
ಉಕ್ಕಿ ಸೊಕ್ಕಿ ಮಿಕ್ಕಿ ಬಾ

ರಸವಿಶುದ್ಧೆ, ರೀತಿಪೂತೆ,
ಗುಣ ನಿಭೂಷಿತಾಂಗಿಯೆ!
ಧ್ವನ್ಯಲಂಕಾರಯುಕ್ತೆ
ಭಾವ-ವೃತ್ತಿ ಸಂಗಿಯೆ!

ಕಲ್ಪನಾ ಕುರಂಗವೇರಿ,
ಹಾರಿ ಬಾರೆ ಸುಂದರಿ!
ಶುಭ್ರ ಚಂದ್ರಿಕಾ ವಿಲಾಸ
ಲಾಸ್ಯ ಗೈ, ರಸೋದರಿ !

ಸರಸ ಮಧುರ ಸುಧೆಯ ಸ್ನಿಗ್ಧ
ಚು೦ಬನವನು ಬಿಂಬಿಸು
ಸಾಂದ್ರ ಪುಲಕವಾಗಿಸುತ್ತ,
ಸಗ್ಗ ಸೊಗವನೂಡಿಸು
*****
೧೯೪೨

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...