Home / ಕವನ / ಕವಿತೆ / ಎಳೆ ನೇಸರು

ಎಳೆ ನೇಸರು

ಭುವಿಯಲ್ಲಿ ಹಿಮದ ಖುತು ಅರೆಗಣ್ಣ ತೆರದಿತ್ತು
ರವಿ ಮೂಡಿ ಮೇಲ್ಬಂದು ಇರ್ಗಳಿಗೆ ಸ೦ದಿತ್ತು

ಮುಚ್ಚಿದ್ದ ಬೆಳ್ಮಂಜು ತೆರೆಯುಗಿದ ತೆರನಿತ್ತು
ಹೆಚ್ಚಿದ್ದ ಕುಳಿರೊರತೆ ಕಾವಿಂಗೆ ಬಾಗಿತ್ತು

ನೇಸರಿನ ಎಳೆಗದಿರು ಹಿಮ ಮಣಿಯ ಮಾಲೆಯನು
ನೇಯ್ದು, ನಲಿಯುತಲಿತ್ತು ರಿಂಗಣಂಗುಣಿತವನು

ದಿನಕರನ ಸಂಖ್ಯಾತ ಕಿರಣಗಳು ಪೂರ್ವದಿಂ
ಸುಸ್ಪಷ್ಟತೆಯನಾಂತು, ವಿವಿಧ ವಿಧ ವರ್ಣದಿ೦-

ಹರಿತಂದು ಮೋದದಿಂ ತಿರೆವೆಣ್ಣನಪ್ಪುತ್ತ,
ಮೃದು ಚುಂಬನವನಿತ್ತು ಪುಲಕವನ್ನಾಗಿಸುತ.-

ಮಿರುಗಿರೆ, ‘ಸಹಸ್ರಕರ’ ನೆಂಬ ಸಂಕುಚಿತಾಖ್ಯೆ
ಮಿಥ್ಯವಾಗಲಸಂಖ್ಯಕರನೆಂಬ ನವ್ಯಾಖ್ಯೆ-

ಸಮನಿಸಿದ ತೆರನಾಯ್ತು! ಹೂಬಿಸಿಲು ಹೂಗಳಗೆ
ಎಸಳೆವೆಯನಲರಿಸಲು, ಹಿಮಬಿಂದು ಜೇನ್‌ಪನಿಗೆ-

ಬೆರೆದೊಂದು ಗೂಡುತ್ತ, ತುಂಬಿಗಳಿಗಾಹ್ವಾನ-
ವೀಯಲವು ಬ೦ದೊಲಿದು ಮಾಡಿದುವು ಮಧುಪಾನ,

ಸೌಸವದ ತನಿಜೇನನೊಲಿದೀಂಟಿ, ಸೊಕ್ಕೇರಿ,
ಅಳಿಗಳೊಂದೇ ಸರದಿ ಸೂಸಿದುವು ಹಾಡ ಸರಿ.

ಹಕ್ಕಿಗಳ ಕೊರಲುಲಿಯು ಕಟ್ಟೊಡೆದು, ಹೊನಲಾಗಿ,
ಬಾನ ದನಿಯಲೆಯಿ೦ದ ದುಂದುಮಿಸಿತಿ೦ಪಾಗಿ

ಬಯಲಿನೊಂದರೆಯಲ್ಲಿ ನಾನಾಗ ನಿಂದಿರಲು,
ಮೂಡಣದ ಬಾನ್ ಚೆಲುವು ಚೆಲುಮೆಯಲಿ ಚಿಮ್ಮಿರಲು,-

ಬಾಲಾರ್ಕನಿದಿರಾಗಿ ನನ್ನ ಕಣ್ಣೆವೆಗಳನು
ಅರಳಿಸುತ, ಮುಗುಳಿಸುತ, ನನ್ನೆಲ್ಲ ದೇಹವನು-

ಎಳೆಬಿಸಿಲ ಮಳೆಯಿಂದ ತೋಯಿಸುತ, ಸ್ವರ್ಗೀಯ
ಸಂತೋಷ ಸಾಗರದಿ ತೇಲಿಸುತಲಾತ್ಮೀಯ-

ಭಾವವನು ಬೆಳಗಿಸುತ, ಮುಗಿಲೋಳಿಗಳ ಮೇಲೆ
ಇರುವೆನಡಿಗೆಯ ನಡೆದು, ಬರುತಿದ್ದ ಮೇಲ್ಮೇಲೆ!

ಗಿಡ ಬಳ್ಳಿಯೆಲೆಗಳಲಿ ನೆಯ್ದಿರುವ ಜೇಡ ಬಲೆ
ನೂಲಿನೆಳೆಗಳು ಚಿನ್ನ ಸರಿಗೆಯಂತಿಹವು ಸಲೆ.

ಭೂದೇವಿಯುಟ್ಟಿರುವ ಹಸುರುಡಿಗೆಯ೦ತೆಸೆವ
ಎಳೆಗಳವೆ ಮಡಿಗಳಿಗೆ ಹೊ೦ಬಣ್ಣ ರವಿಯೀವ.

ಎತ್ತೆತ್ತಲೂ ತಿರೆಯು ಹೊನ್ನ ಹೊಳೆಯಲಿ ತೇಲಿ.
ತನ್ನತನವನು ಮರೆತು, ಹರಿದು ಸೊಗಗಡಲಿನಲಿ-

ಸಂಗಮ೦ಗೊಂಡಂತೆ ಭಾಸವಾಗುತ್ತಲಿತ್ತು.
ಒಂದಿನಿತು ಚಣ ಕಳೆಯಲೊಪ್ಪವೇ ಬೇರಾಯ್ತು:-

ಸ್ವರ್ಣ ಲೇಪದ ಮೇಲೆ ರಜತ ರಸ ಬೆರೆದಂತೆ.
ಬಿಸಿಲೊಸರು ಕಣ್ಗೂಟವನ್ನೂಡಿಸಿತು ಮುಂತೆ!
*****
೧೯೪೦

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...