ಗವ್ವನೆಯ ಅಮವಾಸೆಯ ಕಗ್ಗತ್ತಲು
ಮಳೆಗಾಲದ ಕವದಿಹೊದ್ದು ಗಡದ್ದಾಗಿ ಮಲಗಿದ್ದು
ಕನಸುಗಳೂ ಒಡೆಯದ ನಿಶ್ಶಬ್ದ ರಾತ್ರಿಗೆ
ಸವಾಲು ಎನ್ನುವಂತೆಯೋ ಏನೋ
ಕತ್ತಲಂಗಳಕೆ ಚಂದ್ರಲೇಪಿತ ಕಮಲೆ ಹುಟ್ಟಬೇಕೆ?
ಎಳೆಗೂಸು ಎಸಳು ಇನ್ನೂ ಹೊಕ್ಕಳಬಳ್ಳಿ ಬಿಡಿಸಿಲ್ಲ
ಕಣ್ಣಲ್ಲೇ ಕಣ್ಣಿಟ್ಟಿದ್ದರೂ ಉಗುರಿಗೆ ಗುಲಾಬಿ ತುಂಬುತ
ಚಂದ್ರವದನೆಯಾಗಿ ಎದೆಯಂಗಳದಿ ಕನಸುಗಳ
ಪುಳಕಿಸುತ ನಿಂತಳಲ್ಲ ತರಳೆ ಸುಷ್ಮಿತೆ
ಏನಿವಳ ಬಿಂಕ ಬಿನ್ನಾಣ ಆಹಾ! ಮದುವಣಗಿತ್ತಿ
ಕತ್ತಲೆಯೊಂದಿಗೆ ಕೂಡಿ ಪ್ರೀತಿಬೆಳೆದದ್ದು
ಏನೆಲ್ಲ ಪಿಸುಗುಟ್ಟಿದ್ದು ಹೇಳಬೇಕೆ? ನಾಚಿದಳು
ಮೃದು ಸ್ಪರ್ಶ ಸುವಾಸನೆ ರೋಮಾಂಚನೆಗೆ
ಕತ್ತಲು ಬೆರಗಾಗಿ ಕಣ್ಣುಬಿಟ್ಟದ್ದು ಹುಡುಕಾಟ
ಅದೇಕೋ ಶ್ವೇತಕಮಲೆ ಬ್ರಹ್ಮನಾಭಿ ಸೇರಿದ್ದು
ಮತ್ತೆ ವಿರಹಕ್ಕೆ ಹಾದಿಯಾಯಿತೆ?
*****
ಪುಸ್ತಕ: ಇರುವಿಕೆ