ಜೋಕುಮಾರ ಹುಟ್ಟಲಿ ಲೋಕವು ಬೆಳೆಯಲಿ
ಆಕಳ ಹಾಲ ಕರೆಯಲಿ| ಹರಿಯಾಗ
ಕಾತೆದ್ದು ಮಸರ ಕಡೆಯಾಲಿ ೧
ಅಡ್ಡಡ್ಡ ಮಳೆಬಡದ, ದೊಡ್ಡ ದೊಡ್ಡ ಕೆರೆ ತುಂಬಿ
ಗುಡ್ಡಗಳೆಲ್ಲ ಹೈನಾಗಿ || ಜೋ || ಗೌಡಽರ
ಸೆಡ್ಡಿಯ ಮ್ಯಾಲೆ ಸಿರಿಬಂದ || ಜೋ || ೨
ಹಾಸ್ಹ್ಯಾಸಿ ಮಳೆಬಡದ, ಬೀಸ್ಬೀಸಿ ಕೆರೆತುಂಬಿ
ಬಾಸಿಂಗದಂಥ ತೆನೆಬಾಗಿ || ಜೋ || ಗೌಡಽರ
ರಾಸಿಯ ಮ್ಯಾಲೆ ಸಿರಿಬಂದ || ಜೋ || ೩
ಕರುಣುಳ್ಳ ಕುಮರಾನ, ಕೆರೆ ನೋಡ ಹೋದಾನ
ಕರದು ಕಾರ್ಗಾಲ ಮಳೆ ಬಂತ || ಜೋ || ಗೌಡಽರು
ಕರೆದು ಹಚ್ಚಡ ಹೊಚ್ಚ್ಯಾರ || ಜೋ || ೪
ಕೆಂಚ ನಮ್ಮ ಕುಮಾರ, ಬೆಂಚೀಯ ನೋಡ ಹೋದ
ಮಿಂಚಾವ ಕಾರ ಮಳೆಬಂದ || ಜೋ || ಗೌಡಽರು
ಕೆಂಪು ಹಚ್ಚಡ ಹೊಚ್ಚ್ಯಾರ || ಜೋ || ೫
ಹುಟ್ಟಿದೇಳು ದಿವಸದಲಿ, ಪಟ್ಟಣವ ತಿರುಗ್ಯಾನ
ದಿಟ್ಣಾದೇವಿ ನಿನ ಮಗನ || ಜೋ || ಕೋಮರಾಗ
ಕೊಟ್ರವ್ವೇಳು ದಿನಗಳ || ಜೋ || ೬
ವುಂಡಿಯ ವಲ್ಲೆ ನಂಜು, ಕೊಂಡು ತಾನುಣಲಿಲ್ಲ
ದಂಡನಾಳವನ ಬಂಕ್ಯಾಗ || ಜೋ || ನಮದೇವಿ
ಹೊಂಬಳಿ ಸರವ ಬಗೆಸಿದಳ || ಜೋ || ೭
ಚಕ್ಕೋಟಿ ರಸಪಲ್ಲೆ, ಇಕ್ಕೊಂಡು ಉಣಲಿಲ್ಲ
ದಿಕ್ಕನಾಳವನ ಬಂಕ್ಯಾಗ || ಜೋ || ನಮದೇವಿ
ಚೊಕ್ಕ ಮುತ್ತಿನ ಸರಬರೆಸಿ || ಜೋ || ೮
ಅರಕೊಂಬ ಅರಿಷಿಣವ, ದರಬಟ್ಲ ಒಳ್ಳೆಣ್ಣೆ
ನರ ನಮ ದೇವಿ ಕುಲಿ ಹೊಕ್ಕ || ಜೋ || ಎರಕೊಂಡ
ತೆರೆಬಂದು ನೀರು ಬಾಗಿಲಕ || ಜೋ || ೯
ಬಾಲ ಹುಟ್ಟಿದನಂತ, ಬನಕ ತೊಟ್ಟಿಲ ಕಟ್ಟಿ,
ಬಾಲಗನ್ನೆರು ನೆರೆಯುತಲಿ | ಜೋ || ಹಾಡಿದರ
ಕೋಲೆನು ಜನಕ ಜಯಜಯವ || ಜೋ || ೧೦
ಕಬ್ಬುಳ್ಳ ತ್ವಾಟ್ದಾಗ ಇಬ್ಬನ್ನಿ ಹಿರದ್ಹಂಗ
ಇಬ್ಬರು ತೂಗಲು ಮಲಗನ || ಜೋ || ನಮದೇವಿ
ಹೆಬ್ಬುಲಿ ಮಗನ ಹಡೆದಾಳ || ಜೋ || ೧೧
ಹಾರೂರ ಕೇರ್ಯಾಗ, ಹಾರಿ ಚಂಡಾಡ್ಯಾನ
ನಾರಿ ನಿನಮಗ ಕೊಮರಯ್ಯ || ಜೋ || ಚೆಂಡಾಡಿ
ಊರ ಭೂಮೆಲ್ಲ ಬೆಳಿಬಂದ || ಜೋ || ೧೨
ಒಕ್ಕಽಲಗೇರ್ಯಾಗ, ಹೊಕ್ಕ ಚೆಂಡಾಡ್ಯಾನ
ಅಕ್ಕನ ಮಗನವ ಕೊಮರಯ್ಯ || ಜೋ || ಆಡಿದರ
ಅಕ್ಕಿ ನಾಡೆಲ್ಲ ಬೆಳಿಬಂದ || ಜೋ || ೧೩
ಹಾಲ್ಬೇಡಿ ಹಲುಬ್ಯಾನ ಕೆನೆಬೇಡಿ ಕುಣಿದಾನ
ಮೊಸರಬೇಡಿ ಕೆಸರ ತುಳಿದಾನ || ಜೋ || ಕೊಮರಾಮ
ಕುಸುರಾದ ಗೆಜ್ಜೆ ಕೆಸರಾಗಿ || ಜೋ || ೧೪
ಸಂದಿಯಾ ಮನೆಯನ್ನ ಗೋಂದಿಯಾ ಮನೆಯನ್ನ
ಗೊಂಜಾಳದನ್ನ ಕೆಸರನ್ನ || ಜೋ || ನಮಕೊಮರ
ಸಂದೀಯ ಹೊಕ್ಕ ನಡುಗೇರಿ || ಜೋ || ೧೫
ಹಾದಿಽಯ ಮನೆಯನ್ನ ಬೀದಿಽಯ ಮನೆಯನ್ನ
ಬಾಜರದನ್ನ ಮೊಸರನ್ನ || ಜೋ || ಕೋಮರಯ್ಯ
ಗೌಳೇರೋಣಿ ಹೊಕ್ಕಾನ || ಜೋ || ೧೬
ಹಳ್ಳಕ ತಾ ಹೋಗಿ ಸಣ್ಣವ್ನ ಇಟ್ಟಾನ
ಕನ್ನುಡಿ ತಗೆದು ಮೊಕನೊಡೊ || ಜೋ || ಕೋಮರಾಮ
ಕಣ್ಣು ಮೂಗಿಲೆ ಕರಚಲುವ || ಜೋ || ೧೭
ಅಳಕೂತ ಬಳಕೂತ, ಬಂದಾಳ ಗುಳಕವ್ವ
ಬಂದು ನಿಂತಾಳ ಅಗಸ್ಯಾಗ || ಜೋ || ಗೌಡಽರು
ತಂದು ಇಳಿಸ್ಯಾರ ಸೆಳಿಮಂಚ || ಜೋ || ೧೮
ಕೊಮಾರ ತಾ ಬರ್ತಾನಂತ, ಕೋಣೀಯ ಸಾರಿಸಿ
ಜಣ ಒಕ್ಕಲಗಿತ್ತಿ ಚದರಿಽಯ || ಜೋ || ಮನಿಯಾಗ
ಒಂದಾರ ಜಾವ ಇರಲಿಲ್ಲ || ಜೋ || ೧೯
ಹೋಗೂತ ಹೊನ್ನೀ ಮುರಿದ, ಬರೂತ ಬನ್ನೀ ಮುರಿದ
ಕಂಡಕಂಡಲ್ಲಿ ಕರಿಬೇವ || ಜೋ || ಮುಡುವಂತ
ಪುಂಡನ್ನ ದೇವಿ ಹಡೆದಾಳ || ಜೋ || ೨೦
ಅಕ್ಕ ಹಡೆದಾಳಂತ, ಏನೊಯ್ದೆ ಬನವಯ್ಯ
ಮುತ್ತಿನ ಚೆಂಡ ಕಾರ್ಮುಗಿಲ || ಜೋ || ಸುರಿಮಳೆಯ
ಅರತಿಲಿ ಒಯ್ದೆ ಹರಳೆಲೆಯ || ಜೋ || ೨೧
ಬೆಣ್ಣಿಽಯ ತಾ ಮುದ್ದಿ, ಕನ್ಯುಳ್ಳ ಕೊಮರಾಗ
ಹೊನ್ನ ಮಾಳಿಗೆ ಮನೆಯವ್ವ || ಜೋ || ಕೆನೆ ಮೊಸರ
ಬಿನ್ನಾಯ ಹೇಳ ಕೊಮರಾಗ || ಜೋ || ೨೨
ಹಾಲ ತಾ ಮಗಿತುಂಬಿ, ಬಾಲ ನಮ್ಮ ಕುವರಾಗ
ಮೇಲ ಮಾಳಿಗೆ ಮನೆಯವ್ವ || ಜೋ || ನೀ ಕೊಟ್ರ
ಮೇಲಾಗಿ ಬೆಳಿಲಿ ನಿಂಭೂಮಿ || ಜೋ || ೨೩
ಅಳೂತಲಿ ಸಿರಿತಾನು, ಬಳಲುತಲಿ ಬಂದಾಳು
ಅಳಕಾದಂಬಲಿ ತಡೆದಾವು || ಜೋ || ನಮಕೊಮರ
ಕಳೆದೇಳು ದಿನಕ ಮರಣವ್ವ || ಜೊ || ೨೪
ಹುಟ್ಟಿದ ಏಳ್ದಿನಕ, ಪಟ್ಟಣವ ತಿರುಗ್ಯಾನ
ದಿಟ್ಣಾದೇವಿ ನಿನ ಮಗ || ಜೋ || ಕೊಮರಾಗ
ಬರೆದಾಳ ಸೆಟವಿ ಏಳ್ದಿನ || ಜೋ || ೨೫
ಪುಂಡಽನ ಪುಂಡಾಟ್ಕ, ಹಿಂಡ ಮಂದಿ ಕೂಡ್ಯಾರ
ಕಂಡಲಿ ಕಲ್ಲೀಗೆ ಬಡಿದಾರ || ಜೋ || ರಾತ್ರ್ಯಾಗ
ಅಗಸರ ಕಲ್ಲಾಗ ತುರಿಕ್ಯಾರ || ಜೋ || ೨೬
ಜಂಗಮ ನಾನಲ್ಲ, ಜೋಗಯ್ಯ ನಾನಲ್ಲ
ತಿಂಗಳಿಗೆ ಬರುವ ತಿರುಕಲ್ಲ || ಜೋ || ತಾಯವ್ವ
ತುಂಬಿ ಮೊರ ಜೋಳ ನೀಡವ್ವ || ಜೋ || ೨೭
ಕಲ್ಗಳಿಗಿ ಕಬ್ಬಿಣದ, ಮೆಟ್ಟ್ಹಚ್ಚಿ ಏರ್ಯಾಳ
ಬಳಕೂತ ಬಳತವ ತಗೆದಾಳ || ಜೋ || ಒಕ್ಕಲಗಿತ್ತಿ
ಬಿಳಿ ಎಳ್ಳ ತುಂಬಿ ನೀಡಾಳ || ಜೋ || ೨೮
ಜಯ ಜಯ ಕೊಮರಾಗ, ಜಯ ಜಯ ಹಾಡಿಽರೆ
ಜಯ ಜಯ ಭೂಮಿ ಬೆಳಸಿಽಗೆ ||ಜೋ|| ಹಡದವ್ವ
ಜಯ ಜಯವಿರಲಿ ಜಗದಾಗ ||ಜೋ || ೨೯
*****

















