ಇಂದು ಹುಣ್ಣಿಮೆಯಿರುಳು ಚೆಂಗುಲಾಬಿಯ ಅರಳು
ಅಳುವ ಮಗುವಿನ ಮೊಗದಿ ಬಂತು ನಲಿವು;
ಬನ ಬಾನು ಮುಗಿಲಿನಲಿ ಚೆಲ್ಲುವರಿದಿದೆ ಹಿಗ್ಗು
ಚಂದ್ರ ರೋಹಿಣಿ ಚಿಕ್ಕೆ ನಕ್ಕ ನಗುವು.
ಬಾನವರ ಊರಿನಲಿ ಇಂದು ಎಂತಹ ಹಬ್ಬ
ಮನೆಮನೆಯ ಹೊಸತಿಲಲಿ ದೀಪಾವಳಿ;
ಅವರ ಸುವಿಶಾಲ ಮನ ಅರಳಿ ಬೆಳಗಿಹ ಬೆಳಕು
ನಮ್ಮ ಜಗಕೂ ಹರಿದು ಬಂತು ಹೊರಳಿ.
ಅವರವರ ಪಾಲಿಗಷ್ಟಷ್ಟು ಬರಬಹುದು
ಕೊಲುವ ಕಲೆ ಸಿದ್ಧಿಸಿದೆ ಬಾಂಬು ನೂರು;
ಚಂದ್ರಲೋಕಕು ಹಾರಿ ದಾಳಿಯಿಕ್ಕುವರೇನೊ
ಚಂದ್ರಮಂಡಲ ಒಡೆದು ಚೂರು ಚೂರು.
ಎನಿತು ಜನ ಕವಿ ಬಳಗ ವರ್ಣಿಸಿಹ ಈ ಬೆಳಕು
ಮಾಯವಾಗಲು ಬಹುದು ಇರುವಂತೆಯೆ;
ಆಗ ಹುಣ್ಣಿಮೆಯಿಲ್ಲ ಜನಕೆ ಹಿಗ್ಗೂ ಇಲ್ಲ
ಜಗದ ಹೃದಯದಿ ಅಂದು ಕಗ್ಗತ್ತಲೆ.
*****

















