ಜೀನಹಂಕನಾದ ಶ್ರೀಮಂತನಿಗೆ ಒಬ್ಬಳೇ ಮಗಳಿದ್ದಳು. ಅವನು ಯುಕ್ತಿಪರಿಯುಕ್ತಿಗಳಿಂದ ಸಾಕಷ್ಟು ಗಳಿಸಿದ್ದನು. ಹಾಗೂ ಜಿಪುಣತನದಿಂದ ಖರ್ಚುಮಾಡಿ ಬೇಕಾದಷ್ಟು ಉಳಿಸಿದ್ದನು. ತಾನು ಸಂಗ್ರಹಿಸಿದ ಆಸ್ತಿಯನ್ನೆಲ್ಲ ಕಾಯ್ದುಕೊಂಡು ಹೋಗಬಲ್ಲ ವರ ಸಿಕ್ಕರೆ, ಅವನನ್ನು ಅಳಿಯತನಕ್ಕೆ ಇಟ್ಟುಕೊಳ್ಳಬೇಕೆಂದು ನಿರ್ಣಯಿಸಿದ್ದನು.
ಅದೆಷ್ಟೋ ಜನ ವರಗಳು ಬಂದು ಬಂದು ಹೋದವು. ಆದರೆ ಶ್ರೀಮಂತ ಮಾವನಿಗೆ ಅವರಾರಲ್ಲಿಯೂ ಅರ್ಹತೆ ಕಂಡುಬರಲಿಲ್ಲ. ಆದರೆ ಬಕ್ಕಣಗಿ ಎಂಬ ಹಳ್ಳಿಯಲ್ಲಿ ಅದೇ ಗೋತ್ರದ ಒಂದು ಮನೆತನವಿತ್ತು. ಅಲ್ಲಿ ಇಬ್ಬರು ಅಣ್ಣತಮ್ಮಂದಿರಿದ್ದರು. ಅವರಿಗಿನ್ನೂ ಮದಿವೆಯಾಗಿರಲಿಲ್ಲ. ಆ ಶ್ರೀಮಂತ ಮನೆತನಕ್ಕೆ ಅಳಿಯನಾಗಿ ನಿಲ್ಲಲು ಅರ್ಹನಾದ ಒಬ್ಬ ವರ ಬೇಕಾಗಿದ್ದಾನೆಂಬ ಸಂಗತಿ ತಿಳಿಯಿತು. ಅವರ ತಂದೆಯು ಮಕ್ಕಳಿಬ್ಬರನ್ನೂ ಕೆರೆದು – “ನೀವಿಬ್ಬರೂ ಹೋಗಿ ನಿಮ್ಮ ನಿಮ್ಮ ಬುದ್ದಿವಂತಿಕೆ ತೋರಿಸಿ, ಇಬ್ಬರಲ್ಲಿ ಒಬ್ಬರು ಅಳಿಯತನಕ್ಕೆ ನಿಂತರೆ ಒಳ್ಳೆಯದಾಗುತ್ತದೆ ಎಂದು ಹೇಳಿದನು.
ತಂದೆಯ ಸೂಚನೆಯಂತೆ ಅವರಿಬ್ಬರೂ ಆ ಶ್ರೀಮಂತನ ಊರಿಗೆ ಹೋಗಿ ಅವನನ್ನು ಭೆಟ್ಟಿಯಾದರು. ಅವನು ಒಬ್ಬೊಬ್ಬರನ್ನು ಪರಭಾರೆ ಕರೆದೊಯ್ದು ಅವರ ಅರ್ಹತೆಯನ್ನು ಪರೀಕ್ಷಿಸತೊಡಗಿದನು.
“ಇದ್ದ ಆಸ್ತಿಯನ್ನು ಉಳಿಸುವುದಕ್ಕೂ ಬೆಳೆಸುವುದಕ್ಕೂ ನೀನಾವ ಬುದ್ಧಿವಂತಿಕೆಯಿಂದ ಸಂಸಾರ ಮಾಡುತ್ತೀ” ಎಂದು ಕೇಳಿದನು.
ಹಿರಿಯವನು ತನ್ನ ಅರ್ಹತೆಯನ್ನು ವಿವರಿಸುತ್ತಾನೆ – “ನನಗೆ ದಿನಕ್ಕೆ ಒಂದು ರೊಟ್ಟಿಯಾದರೆ ಸಾಕು. ಅದನ್ನು ತಿಂದು ತಂಬಿಗೆ ನೀರು ಕುಡಿದು ಒಂದು ದಿನ ಕಳೆಯುತ್ತೇನೆ.” ಆ ಮಾತು ಕೇಳಿ ಶ್ರೀಮಂತನು ಮನಸ್ಸಿನಲ್ಲಿ – ಅಬಬಬಾ ! ಅಂದುಕೊಂಡು – “ಅಡ್ಡಯಿಲ್ಲ, ನಿನ್ನ ತಮ್ಮನನ್ನು ಒಳಗೆ ಕಳಿಸಿಕೊಡು” ಎಂದು ಹಿರಿಯ ವರನಿಗೆ ಹೇಳಿದನು. ಚಿಕ್ಕವನು ಶ್ರೀಮಂತನ ಬಳಿಗೆ ಬರಲು ಆತನಿಗೆ – “ಈ ಆಸ್ತಿಯನ್ನೆಲ್ಲ ನೀನೆಂತು ಕಾಪಾಡಿಕೊಂಡು ಹೋಗಬಲ್ಲೆ ? ಯಾವ ಯುಕ್ತಿಯನ್ನು ಅನುಸರಿಸುವಿ?” ಎಂದು ಕೇಳಿದನು.
ಆತನು ತನ್ನ ಜೀವನ ರೀತಿಯನ್ನು ಹೇಳುತ್ತಾನೆ – “ಒಂದು ದಾರದೆಳೆಗೆ ಒಂದು ರೊಟ್ಟಿ ಕಟ್ಟಿ ಅದನ್ನು ತೂಗಿಬಿಡುವುದು. ಹತ್ತಿರದಲ್ಲಿ ಒಂದು ತಂಬಿಗೆ ಕುಡಿಯುವ ನೀರನ್ನು ತುಂಬಿಟ್ಟುಕೊಳ್ಳುವದು. ಮೊದಲು ನೇತಾಡುವ ರೊಟ್ಟಿಯನ್ನು ಕಣ್ತುಂಬ ನೋಡಿ, ಆ ಬಳಿಕ ತಂಬಿಗೆಯೊಳಗಿನ ನೀರಿನ ಕಡೆಗೆ ಕಣ್ಣು ಹೊರಳಿಸಿದರೆ ತೀರಿತು ನನ್ನ ಊಟ. ತರುವಾಯ ಅಡಿಕೆಹೋಳು ಇದ್ದರೂ ಸರಿ, ಇರದಿದ್ದರೂ ಸರಿ. ಸಾಗಿತು ನಮ್ಮ ಗಾಡಿ.”
ಶ್ರೀಮಂತನು ಚಿಕ್ಕವನ ಅರ್ಹತೆಗೆ ಮೆಚ್ಚಿ, ಆತನನ್ನು ಅಳಿಯತನಕ್ಕೆ ಇಟ್ಟುಕೊಂಡು ಮಗಳನ್ನು ಕೊಟ್ಟು ಮದುವೆ ಮಾಡಿದನು.
ಅಳಿಯನೇ ಶ್ರೀಮಂತ ಆಸ್ತಿಗೆ ಒಡೆಯನಾಗಿ, ಆತನ ಸರಿಯಾದ ಸಂಪತ್ತನ್ನು ಉಪಭೋಗಿಸುತ್ತ ಸುಖದಿಂದ ಕಾಲಕಳೆಯಹತ್ತಿದನು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು